ಬಹು ಉಪಯೋಗಿ ಸಸ್ಯ ಪರ್ಪಟ ಹುಲ್ಲು .

ಬಹು ಉಪಯೋಗಿ ಸಸ್ಯ ಪರ್ಪಟ ಹುಲ್ಲು .

©ಶಶಿಧರಸ್ವಾಮಿಆರ್. ಹಿರೇಮಠ

ಕುರುಚಲು ಕಾಡು ಹಾಗೂ ಗುಡ್ಡಗಾಡು ಪ್ರದೇಶಕ್ಕೆ ನಾನು ಚಿಟ್ಟೆಗಳ ವೀಕ್ಷಣೆಗೆ ಹೋದಾಗಲೆಲ್ಲಾ ಪದೇ ಪದೇ ಕಂಡು ಕಾಡುತ್ತಿದ್ದ ಸಸ್ಯವೇ ಈ ಪರ್ಪಟ ಹುಲ್ಲು. ಪರ್ಪಟ ಹುಲ್ಲನ್ನು ಆಂಗ್ಲ ಭಾಷೆಯಲ್ಲಿ ಡೈಮಂಡ್ ಫ್ಲವರ್ (Diamond Flower) ಎಂದು ಕರೆದು, ಸಂಸ್ಕೃತದಲ್ಲಿ ಪರ್ಪಟಃ ಅಥವಾ ಪರ್ಪಟಕಃ ಎಂದು ಕರೆಯಲಾಗುತ್ತದೆ. ಸಸ್ಯಶಾಸ್ತ್ರೀಯವಾಗಿ “ಓಲ್ಡೆನ್ಲ್ಯಾಂಡಿಯಾ ಕೋರಿಂಬೋಸಾ” (Oldenlandia corymbosa, Synonyms: Hedyotis corymbosa -ಹೆಡಿಯೋಟಿಸ್ ಕೋರಿಂಬೋಸಾ) ಎಂದು ಹೆಸರಿಸಿ, ರೂಬಿಯೇಸಿ (Rubiaceae) ಸಸ್ಯ ಕುಟುಂಬಕ್ಕೆ ಸೇರಿಸಲಾಗಿದೆ.

© ಶಶಿಧರಸ್ವಾಮಿ ಆರ್. ಹಿರೇಮಠ

ಪರ್ಪಟ ಹುಲ್ಲು ನೇರ ಕಾಂಡ ಹೊಂದಿರುವ ನೆಲದ ಮೇಲೆ ಹರಡಿಕೊಂಡು ಬೆಳೆಯುವ ಏಕವಾರ್ಷಿಕ (ಸಾಂವತ್ಸರಿಕ) ಕಳೆ ಸಸ್ಯವಾಗಿದೆ. ಬಹುತೇಕ ತೊಟ್ಟಿಲ್ಲದ ಆಯತಾಕಾರದ ಕಿರಿದಾಗಿರುವ ಅಂಡಾಕಾರದ ಎಲೆಗಳು 1 ರಿಂದ 3.5 ಸೆಂ. ಮೀ ಉದ್ದ, 1.5 ರಿಂದ 7 ಮಿ. ಮೀ ಅಗಲವಿದ್ದು, ಎಲೆಗಳ ಅಂಚು ಒರಟಾಗಿದ್ದು, ತುದಿಯಲ್ಲಿ ಚೂಪಾಗಿವೆ. ಎಲೆಯ ಅಕ್ಷಗಳಿಂದ 2 ರಿಂದ 8 ಹೂ ಹಾಗೂ ಮೊಗ್ಗುಗಳ ಗೊಂಚಲು ಮೊಳೆಯುತ್ತವೆ. ಹೂಗಳು ತಿಳಿಬಿಳಿ ಮಿಶ್ರಿತ ಮಸುಕಾದ ಗುಲಾಬಿ-ನೇರಳೆ ಬಣ್ಣದವಾಗಿದ್ದು, ತೇಳುವಾದ ಕಾಂಡಗಳ ಮೇಲೆ 4 ರಿಂದ 8 ಮೀ. ಮೀ ಉದ್ದವಿದ್ದು, ನಾಲ್ಕು ಪುಷ್ಪದಳಗಳಿಂದ ಕೂಡಿವೆ. ಕೇಸರಗಳು ಪುಷ್ಪದಳದ ತಳದಿಂದ ಮೇಲೆ ಸೇರಿಕೊಂಡಿವೆ. ಹೂವು ಚಿಕ್ಕದಾದ ನಳಿಕೆಯಂತೆ ಗೋಚರಿಸುತ್ತದೆ. ಕೀಟ ಹಾಗೂ ಚಿಟ್ಟೆಗಳಿಂದ ಪರಾಗಸ್ಪರ್ಶವಾಗಿ ನಂತರ ಪಾರ್ಶ್ವವಾಗಿ ಸಂಕುಚಿತಗೊಂಡ ತುದಿಯಲ್ಲಿ ಚಪ್ಪಟೆಯಾಗಿ ಗುಳುಗೆಯಂತಿರುವ ಬಹುಬೀಜಫಲ (ಕ್ಯಾಪ್ಸೋಲ್-Capsule) ಗಳಲ್ಲಿ ಬೀಜಕೋಶ ಮೂಡಿ ನಂತರ ಒಣಗಿ ಅಲ್ಲೇ ಉದುರಿ, ಇಲ್ಲವೇ ದೂರ ಹಾರಿ ಬಿದ್ದು ಮುಂದಿನ ವರ್ಷಕ್ಕೆ ವಂಶಾಭಿವೃದ್ಧಿಗೊಳ್ಳುತ್ತವೆ.

© ಶಶಿಧರಸ್ವಾಮಿ ಆರ್. ಹಿರೇಮಠ

ಈ ಕಳೆ ಸಸ್ಯವು ಸರ್ವವ್ಯಾಪಿಯಾಗಿದ್ದು, ಹುಲ್ಲುಗಾವಲು, ಮಲೆನಾಡು, ಕುರುಚಲು ಕಾಡು, ಬಂಡೇ ಪ್ರದೇಶದ ಮಣ್ಣಿರುವ ಜಾಗ, ಕೃಷಿ ಭೂಮಿಯ ಒಡ್ಡು, ನದಿ ಪಕ್ಕದ ಮರಳು ಮಿಶ್ರಿತ ಮಣ್ಣಿನ ತಟ, ಬರಡು ಭೂಮಿಯಂತಿರುವ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುತ್ತವೆ. ಪ್ರಪಂಚದಾದ್ಯಂತ ಉಷ್ಣವಲಯ ಪ್ರದೇಶಗಳಲ್ಲಿ ಅಲ್ಲದೇ ಹಿಮಾಲಯದ ತಪ್ಪಲಿನಲ್ಲಿಯೂ ಕಾಣಸಿಗುತ್ತವೆ. ಇದರಲ್ಲಿ ಅಧಿಕ ಪ್ರಮಾಣದಲ್ಲಿ “ಸಿ” ಜೀವಸತ್ವ ಆಸ್ಕೋರ್ಬಿಕ್ (Ascorbic acid) ಆಮ್ಲವಿದೆ. ಇದು 0.12% (ಅಲ್ಕಲೋಯ್ಡ್ Alkaloid) ಕ್ಷಾರಯುಕ್ತವಾಗಿರುವ ಔಷಧೀಯ ಸಸ್ಯವಾಗಿದ್ದು, ನಾಟೀ ಹಾಗೂ ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಕೆಲ ಪ್ರಾಂತ್ಯದಲ್ಲಿ ಇದರ ಎಲೆ ಹಾಗೂ ಕಾಂಡವನ್ನು ತರಕಾರಿ ಸೊಪ್ಪಿನಂತೆ ಆಹಾರವಾಗಿಯೂ ಬಳಸುತ್ತಾರೆ.

ಔಷಧೀಯ ಗುಣಗಳ ಭಂಡಾರ:

  • ಹಸಿ ಎಲೆಗಳನ್ನು ಕುಟ್ಟಿ ಕಣಕ (ಪೇಸ್ಟ್) ಮಾಡಿ ಅದನ್ನು ಕಣ್ಣುಗಳ ಮೇಲೆ ಪಟ್ಟು ಹಾಕುವುದರಿಂದ ಕಣ್ಣಿನ ದೋಷ ನಿವಾರಣೆಯಾಗುತ್ತದೆ.
  • ಸಮೂಲ (ಇಡೀ ಸಸ್ಯದ ಭಾಗ) ದಿಂದ ಕಷಾಯ ಮಾಡಿಕೊಂಡು ಕುಡಿಯುವುದರಿಂದ ಪಚನಕ್ರಿಯೆ ಹೆಚ್ಚಾಗುವುದು, ಮೂತ್ರವರ್ಧಕ, ಜ್ವರ ನಿವಾರಕ, ನರಗಳಿಗೆ ಬಲ ವರ್ಧಕ, ಹೊಟ್ಟೆಯಲ್ಲಿ ಅನಿಲ ಕೆರಳುವಿಕೆ ಸಮಸ್ಯೆ ನಿವಾರಣೆ, ಯಕೃತಿನ ಸಮಸ್ಯೆ, ಉರಿ ಮೂತ್ರ ಸಮಸ್ಯೆಯು ನಿವಾರಣೆಯಾಗುತ್ತದೆ.
  • ಬೇರನ್ನು ಒಣಗಿಸಿ ಪುಡಿ ಮಾಡಿಕೊಂಡು ಬಿಸಿ ನೀರಿನಲ್ಲಿ ಕುಡಿಯುವುದರಿಂದ ಹೊಟ್ಟೆಯಲ್ಲಿನ ಜಂತುಗಳ ನಿವಾರಣೆಯಾಗುವುದು.
  • ಜ್ವರ ಬಂದಾಗ ಕೈ-ಕಾಲುಗಳಿಗೆ ಎಲೆಗಳ ರಸವನ್ನು ಲೇಪಿಸುವುದರಿಂದ ದೇಹದ ತಾಪವು ಶಮನಮಾಡಲು ಕೆಲ ಪ್ರಾಂತ್ಯದಲ್ಲಿ ಉಪಯೋಗಿಸುತ್ತಾರೆ.
  • ಚೀನಿಯರು ಈ ಸಸ್ಯವನ್ನು ಜ್ವರ ನಿವಾರಕ, ಕ್ಯಾನ್ಸರ್, ಮೊಡವೆ, ಕಾಮಾಲೆ, ಕಣ್ಣಿನ ಸಮಸ್ಯೆ, ರಕ್ತ ಸ್ರಾವ, ವೈರಸ್ ಸೊಂಕುಗಳ ನಿವಾರಣೆಗಾಗಿ ಉಪಯೋಗಿಸುತ್ತಾರೆ.
  • ಆಫ್ರೀಕಾದಲ್ಲಿ ಹೆರಿಗೆಯ ಸಮಯದಲ್ಲಿ ಸುಲಲಿತವಾಗಿ ಪ್ರಸವವಾಗಲು ಈ ಸಸ್ಯವನ್ನು ಬಳಸುತ್ತಾರೆ.
© ಶಶಿಧರಸ್ವಾಮಿ ಆರ್. ಹಿರೇಮಠ

 ಚಿಟ್ಟೆಗಳಿಗೆ ಮಕರಂದದ ಆಹಾರವಾದ ಪರ್ಪಟ ಹುಲ್ಲಿನ ಹೂವುಗಳು: ಈ ಸಸ್ಯದ ಹೂವುಗಳು ಅನೇಕ ಕೀಟ ಹಾಗೂ ಚಿಟ್ಟೆಗಳಿಗೆ ಆಹಾರವಾಗಿ ಮಕರಂದವನ್ನು ನೀಡುತ್ತವೆ. ಚಿಟ್ಟೆ ಪ್ರಭೇದಗಳಾದ ನಾಲ್ಕು ಉಂಗುರ (Common Four Ring), ಐದು ಉಂಗುರ (Common Five Ring), ಸಣ್ಣ ಹುಲ್ಲು (Tiny Grass Blue), ಪೇಲವ ಹುಲ್ಲು (Pale Grass Blue), ಕಡು ಹುಲ್ಲು (Dark Grass Blue), ಮರೆ (Forget-Me-Not), ಸಣ್ಣ ಸುಂದರ (Small Cupid), ಸುಂದರ (Plains Cupid), ನಿಂಬೆ ಹುಲ್ಲು (Lime Blue), ಕಡು ನೀಲಿ (Dark Cerulean), ಆಗಸ ನೀಲಿ (Common Cerulean), ಒಡವೆ (Grass Jewel), ಕಿರು ಹಳದಿ (Small Grass Yellow) ಚಿಟ್ಟೆಗಳು ಈ ಸಸ್ಯದ ಹೂವಿನ ಮಕರಂದವನ್ನು ಸವಿಯುತ್ತ ಹೂಗಳ ಪರಾಗಸ್ಪರ್ಶ ನಡೆಸಿ ವಂಶಾಭಿವೃದ್ಧಿಗೆ ಕಾರಣವಾಗಿವೆ. ಕಳೆ ಸಸ್ಯವೆಂದು ಇದನ್ನು ನಾವು ಗಮನಿಸುವುದು ಕಡಿಮೆ. ಆದರೆ ಪ್ರಕೃತಿಯಲ್ಲಿರುವ ಇಂಥ ಅನೇಕ ಸಸ್ಯಗಳು ಅನೇಕ ಜೀವಿಗಳಿಗೆ ಆಹಾರವಾಗುತ್ತ ಮನುಜರ ಆರೋಗ್ಯ ರಕ್ಷಣೆಯಲ್ಲಿ ಪಾತ್ರವಹಿಸಿ ನಿಸರ್ಗದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ಇಂಥ ಸಸ್ಯಗಳನ್ನು ಸಂರಕ್ಷಿಸಬೇಕಾದುದು ನಮ್ಮ ಕರ್ತವ್ಯವಾಗಿದೆ.


ಲೇಖನ: ಶಶಿಧರಸ್ವಾಮಿ ಆರ್. ಹಿರೇಮಠ
     ಹಾವೇರಿ ಜಿಲ್ಲೆ
.

Print Friendly, PDF & Email
Spread the love
error: Content is protected.