ಅಂತಃ ಕರಣ

ಭುವಿಯ ಒಡಲ ಬಗೆಯುತ
ಜಲಧಾರೆ ಹರಿಸಿ ನಲಿಯುತ
ನೋವನುಣಿಸಿ ಇಳೆಯ ಹಾಳುಗೆಡವುತ
ಸ್ವಾರ್ಥಿಯಾಗಿಹ ಭೂಮಾತೆಯ ನಗ್ನವಾಗಿಸುತ||
ತನ್ನನಾಶ್ರಯಿಸಿದವರ ಕಾಪಾಡುತ
ಸರ್ವಸ್ವವನೆ ಮುಡಿಪಾಗಿಸುತ
ಜೀವ ಜೀವನ ಕರುಣಿಸುತ
ನಿಂತಿಹಳು ಅಂತಃಕರಣ ಮೆರೆಯುತ||
ಪರಿಶುದ್ಧ ಮನಕೆ ಸಾಕ್ಷಿಯಾಗುತ
ಪರರಿಗಾಗಿ ಬದುಕೊ ಪರೋಪಕಾರ ತಿಳಿಸುತ
ಅಂತರ್ಜಲದಿ ನೀರನುಣಿಸಿ ಪೊರೆಯುತ
ಅಡಗಿಹುದು ನಿನ್ನೊಳದೆಷ್ಟು ಅದ್ಭುತ||
ಬೆರಳು ಮಾಡಿ ನಿಲುತ
ತನ್ನ ಹುಂಬತನವ ತೋರುತ
ನೀರ ಪಡೆದು ಕಣ್ಣೀರು ತರಿಸುತ
ಬದುಕಿಹ ಮಾನವ ಕರಿನೆರಳಾಗಿ ಕಾಡುತ||
ನೆಲ ಜಲವ ರಕ್ಷಿಸುತ
ಮೈಮನವ ಶುದ್ಧದೊಳಿರಿಸುತ
ಉಪಕಾರಕೆ ಪ್ರತ್ಯುಪಕಾರ ಮಾಡುತ
ಬಾಳುವ ನಿಷ್ಕಲ್ಮಶ ಅಂತಃಕರಣದೊಳಿರುತ||
– ಪ್ರತಿಭಾ ಪ್ರಶಾಂತ್
ಉತ್ತರ ಕನ್ನಡ ಜಿಲ್ಲೆ
