ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

ರಾಮದಾಸ ಹದ್ದು ©ದೀಪಕ್ ಎಲ್. ಎಂ.

ರಾಮದಾಸ ಹದ್ದು ಎಂದು ಕರೆಯಲ್ಪಡುವ ಈ ಹದ್ದುಗಳು ಸಾಮಾನ್ಯವಾಗಿ ಆಫ್ರಿಕಾ ಹಾಗೂ ಏಷಿಯಾ ಖಂಡದ ಬಯಲು ಪ್ರದೇಶ ಹಾಗು ಅರೆ ಮರುಭೂಮಿ ಪ್ರದೇಶಗಳಲ್ಲಿ ಕಂಡುಬರುತ್ತವೆ. ವಿಶೇಷವಾಗಿ ಹುಲ್ಲುಗಾವಲು ಹಾಗೂ ತೆರೆದ ಪ್ರದೇಶದಲ್ಲಿ ಆಹಾರವನ್ನರಸುತ್ತಾ ಕೆಳಮಟ್ಟದಲ್ಲಿ ಹಾರಾಡುತ್ತವೆ. ಕಾಗೆ ಗಾತ್ರದ ಬೂದು ಪಕ್ಷಿ. ಮುಖ, ಕತ್ತು, ಎದೆ, ಹೊಟ್ಟೆ ಭಾಗಗಳಲ್ಲಿ ಬಿಳಿ. ಕಣ್ಣುಗಳು ಕೆಂಪು ಬಣ್ಣದಿಂದ ಕೂಡಿದ್ದು, ಭುಜ ಭಾಗದ ರೆಕ್ಕೆ ಮತ್ತು ರೆಕ್ಕೆಯ ತುದಿ ಕಪ್ಪು, ಮೊನಚಾದ ಕೊಕ್ಕೆಯಂತ ಕೊಕ್ಕು ಮತ್ತು ಕಾಲುಗಳು ಹಳದಿಯಾಗಿರುತ್ತವೆ ಇದರ ಗೂಡುಗಳು ರೆಂಬೆಗಳಿಂದ ಕೂಡಿದ ಸಡಿಲವಾದ ಜಗಲಿಯಂತಿರುತ್ತವೆ.  ಹೆಣ್ಣು ಹದ್ದು ಸಾಮಾನ್ಯವಾಗಿ 3-4 ಹಳದಿ ಮಿಶ್ರಿತ ಬಿಳಿ ಮೊಟ್ಟೆಗಳನ್ನಿಡುತ್ತದೆ. ಈ ಹದ್ದುಗಳು ಮಿಡತೆ, ಜೀರುಂಡೆ ಇತರೆ ಕೀಟಗಳನ್ನು ಹಾಗೂ ಹಲ್ಲಿ, ಹಕ್ಕಿ, ಸಣ್ಣ ಹಾವು, ಕಪ್ಪೆ ಮತ್ತು ಇಲಿ ಜಾತಿಗೆ ಸೇರಿದ ಪ್ರಾಣಿಗಳನ್ನು ಬೇಟೆಯಾಡುತ್ತದೆ.

ಬಿಳಿ ಗರುಡ ©ದೀಪಕ್ ಎಲ್. ಎಂ. 

ಬಿಳಿ ಗರುಡ ಮಧ್ಯಮ ಗಾತ್ರದ ಬೇಟೆ ಹಕ್ಕಿ. ಈ ಹಕ್ಕಿಯು ಎಸಿಪಿಟ್ರಿಡೇ (Accipitridae) ಕುಟುಂಬಕ್ಕೆ ಸೇರುತ್ತದೆ. ಬಿಳಿ ಗರುಡಗಳು ಸಾಮಾನ್ಯವಾಗಿ ಭಾರತ, ಆಗ್ನೇಯ ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ. ಇವುಗಳ ದೇಹ ಕೆಂಪು ಕಂದು ಬಣ್ಣದ್ದಾಗಿದ್ದು, ತಲೆ, ಕತ್ತು ಮತ್ತು ಎದೆಯ ಭಾಗದಲ್ಲಿ ಬಿಳಿ ಬಣ್ಣದಿಂದ ಕೂಡಿದ್ದು, ಮೊನಚಾದ ಬಲಿಷ್ಠ ಕೊಕ್ಕನ್ನು ಹೊಂದಿದೆ. ಕಾಲುಗಳು ಹಳದಿ ಬಣ್ಣ ಮತ್ತು ಕಂದು ಬಾಲದ ತುದಿ ಕವಲಾಗಿರುತ್ತದೆ. ಇವು ಕೆರೆ ಮತ್ತು ಕಡಲ ತೀರಗಳಲ್ಲಿ ಹಾಗು ಜೌಗು ಪ್ರದೇಶಗಳಲ್ಲಿ ಸತ್ತ ಮೀನು, ಏಡಿ, ಕಪ್ಪೆ ಮತ್ತು ಹಾವುಗಳನ್ನು ಸೇವಿಸುತ್ತದೆ. ಇವು ಸಣ್ಣ ಕೊಂಬೆಗಳನ್ನು ಬಳಸಿ ಬಟ್ಟಲಾಕಾರದ ಗೂಡುನ್ನು ಮರಗಳ ಮೇಲೆ ಕಟ್ಟುತ್ತದೆ ಹಾಗು ಸಾಮಾನ್ಯವಾಗಿ ಎರಡರಿಂದ ಮೂರು ಬೂದು ಮಿಶ್ರಿತ ಬಿಳಿಯ ಮೊಟ್ಟೆಗಳನ್ನು ಇಟ್ಟು ಸುಮಾರು 26 ದಿನಗಳವರಿಗೆ ಕಾವು ಕೊಟ್ಟು ಮರಿ ಮಾಡುತ್ತವೆ. ಹೆಣ್ಣು ಗರುಡ ಗಾತ್ರದಲ್ಲಿ ಗಂಡಿಗಿಂತ ದೊಡ್ಡದಾಗಿರುತ್ತದೆ.

ಪನ್ನಗಾರಿ                                                       ©ದೀಪಕ್ ಎಲ್. ಎಂ. 

ಪನ್ನಗಾರಿಯು ಮಧ್ಯಮ ಗಾತ್ರದ ಬೇಟೆ ಹಕ್ಕಿ. ಇವು ಎಸಿಪಿಟ್ರಿಡೆ (Accipitridae) ಕುಟುಂಬಕ್ಕೆ ಸೇರುತ್ತವೆ. ಇವು ಸಾಮಾನ್ಯವಾಗಿ ಭಾರತ, ಏಷ್ಯಾ, ಯೂರೋಪ್ ಮತ್ತು ಆಫ್ರಿಕಾದಲ್ಲಿ ಕಂಡುಬರುತ್ತವೆ. ಪನ್ನಾಗರಿಯು ಸುಮಾರು 60cm – 70cm ಉದ್ದವಿರುತ್ತದೆ. ಹದ್ದಿನ ಗಾತ್ರದ ಕಂದು-ಬಿಳಿ ಪಕ್ಷಿ. ಮೇಲ್ಭಾಗ ಕಂದು ಬಣ್ಣದಿಂದ ಕೂಡಿದ್ದು, ಕತ್ತು, ಎದೆ ಮತ್ತು ತಳಭಾಗದಲ್ಲಿ ಮಾಸಲು ಕಂದು-ಬಿಳಿ ಬಣ್ಣದಿಂದ ಕೂಡಿದೆ.  ರೆಕ್ಕೆ ಮತ್ತು ಬಾಲದ ಮೇಲೆ ಕಪ್ಪು ಪಟ್ಟಿಗಳಿದ್ದು, ಕೊಕ್ಕೆಯಂತಹ ಕೊಕ್ಕು ಮತ್ತು ಕಪ್ಪು ಕಾಲುಗಳನ್ನು ಹೊಂದಿದ್ದು, ಹಾರುವಾಗ ಬಿಳಿ ತಳಭಾಗ ಹಾಗೂ ರೆಕ್ಕೆಯಲ್ಲಿ ಕಪ್ಪು ಪಟ್ಟಿಗಳು ಎದ್ದು ಕಾಣುತ್ತವೆ. ಪನ್ನಾಗರಿಯು ಮುಖ್ಯವಾಗಿ ಇಲಿ, ಹಾವು ಮತ್ತು ಹಲ್ಲಿಗಳನ್ನು ಬೇಟೆಯಾಡುತ್ತದೆ. ಇದರ ಸಂತಾನೋತ್ಪತ್ತಿಯು ಡಿಸೆಂಬರ್ – ಫೆಬ್ರವರಿ ತಿಂಗಳುಗಳಲ್ಲಿ ನಡೆಯುತ್ತದೆ. ಇವು ಮರಗಳ ಮೇಲೆ ಕಡ್ಡಿ, ಹುಲ್ಲು, ನಾರುಗಳಿಂದ ಕೂಡಿದ ವೃತ್ತಾಕಾರದ ಗೂಡನ್ನು ಕಟ್ಟಿ ಸಾಮಾನ್ಯವಾಗಿ ಒಂದು ಬಿಳಿ ಬಣ್ಣದ ಮೊಟ್ಟೆಗೆ 45-47 ದಿನಗಳವರೆಗೆ ಕಾವು ಕೊಟ್ಟು ಮರಿಮಾಡುತ್ತವೆ. ಪನ್ನಾಗರಿಯ ಕೂಗು ಇಂಪಾದ ಶಿಳ್ಳೆಯಂತಿರುತ್ತದೆ.

ಕಂದು ಗಿಡುಗ                                                                               ©  ದೀಪಕ್ ಎಲ್. ಎಂ.

ಕಂದು ಗಿಡುಗವು, ಮಧ್ಯಮ ಗಾತ್ರದ ದೊಡ್ಡ ಬೇಟೆಯ ಹದ್ದು. ಇವು ಆಕ್ಸಿಪಿಟ್ರಿಡೆ (Accipitridae) ಕುಟುಂಬಕ್ಕೆ ಸೇರುತ್ತವೆ. ಕಂದು ಬಣ್ಣದ ಮೇಲ್ಬಾಗ ಹಾಗು ತಿಳಿ ಬಣ್ಣದ ಕೆಳಭಾಗವನ್ನು ಹೊಂದಿರುತ್ತವೆ. ರೆಕ್ಕೆಗಳು ಹಾಗು ಬಾಲವು ಕಪ್ಪಾಗಿರುತ್ತದೆ. ಕಂದು ಗಿಡುಗವು ಸುಮಾರು 65cm – 72cm ನಷ್ಟು ಉದ್ದವಿರುತ್ತದೆ. ಇವು ಸಾಮಾನ್ಯವಾಗಿ ಆಫ್ರಿಕಾ ಖಂಡದಲ್ಲಿ ಕಂಡುಬರುತ್ತವೆ. ಕಂದು ಗಿಡುಗಗಳ ದೃಷ್ಟಿ ಹಾಗು ಶ್ರವಣ ಗ್ರಹಿಕೆ ಬಹಳ ತೀಕ್ಷ್ಣವಾಗಿರುತ್ತದೆ. ಇವು ಸಾಮಾನ್ಯವಾಗಿ ತೆರೆದ ಒಣ ಆವಾಸಸ್ಥಾನಗಳಲ್ಲಿ ಕಂಡುಬರುತ್ತವೆ. ಕೊಳೆತ ಪ್ರಾಣಿಗಳ ಮಾಂಸವು ಇದರ ಆಹಾರವಾಗಿದೆ, ಹಾಗೆಯೇ ಸಣ್ಣ-ಪುಟ್ಟ ಹಕ್ಕಿ, ಮೊಲ, ಹಲ್ಲಿ ಮತ್ತು ಹಾವುಗಳನ್ನೂ ಸಹ ಇದು ಬೇಟೆಯಾಡುತ್ತದೆ. ಇವು ಕಡ್ಡಿ, ಕೋಲು ಮತ್ತು ಕೆಲ ಸಂದರ್ಭಗಳಲ್ಲಿ ಪ್ರಾಣಿಗಳ ಮೂಳೆಗಳನ್ನು ಸೇರಿಸಿ ಗೂಡನ್ನು ಆಕಾಶಕ್ಕೆ ತೆರೆದಿರುವಂತೆ ಸಮತಟ್ಟಾದ, ತೆರೆದ ಅಥವಾ ಗುಡ್ಡಗಾಡು ಪ್ರದೇಶಗಳಲ್ಲಿ ಗೂಡು ಕಟ್ಟುತ್ತವೆ. ಹೆಣ್ಣು ಕಂದು ಗಿಡುಗವು ಸುಮಾರು ಒಂದರಿಂದ ಮೂರು ಮೊಟ್ಟೆಗಳನ್ನು ಇಟ್ಟು 39 ರಿಂದ 44 ದಿನಗಳವರೆಗೆ ಕಾವುಕೊಟ್ಟು ಮರಿ ಮಾಡುತ್ತವೆ.

ಚಿತ್ರಗಳು:  ದೀಪಕ್ ಎಲ್. ಎಂ.
          ಲೇಖನ: ದೀಪ್ತಿ ಎನ್.

Print Friendly, PDF & Email
Spread the love
error: Content is protected.