ಮಾಸ ವಿಶೇಷ – ಅರಳಿ ಮರ
© ಅಶ್ವಥ ಕೆ ಎನ್., ಅರಳಿ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಸಾಮಾನ್ಯ ಹೆಸರು: Peepal tree
ವೈಜ್ಞಾನಿಕ ಹೆಸರು : Ficus religiosa
ಅರಳಿಮರವು ಭಾರತದ ಹಿಂದೂ ಸಂಪ್ರದಾಯದಲ್ಲಿ ಶ್ರೇಷ್ಠ ಸ್ಥಾನವನ್ನು ಹೊಂದಿದೆ. ಸಾಮಾನ್ಯವಾಗಿ ಭಾರತ, ಶ್ರೀಲಂಕಾ ಮೊದಲಾದ ದೇಶಗಳಲ್ಲಿ ಕಂಡುಬರುವ ಮರವು ಸರಿಸುಮಾರು 900 ರಿಂದ 1500ವರ್ಷ ಬದುಕುತ್ತದೆ. ಮೊರೇಸಿ (Moraceae) ಕುಟುಂಬಕ್ಕೆ ಸೇರಿದ ಈ ಮರದ ವೈಜ್ಞಾನಿಕ ಹೆಸರು ಫೈಕಸ್ ರಿಲಿಜಿಯೋಸ (Ficus religiosa). ಭಾರತದಲ್ಲಿ ಅರಳಿ ಮರವನ್ನು ಅಶ್ವತ್ಥ ವೃಕ್ಷ ಎಂದೂ ಸಹ ಕರೆಯುತ್ತಾರೆ. ಸುಮಾರು 30 ಮೀಟರ್ ಎತ್ತರಕ್ಕೆ ಬೆಳೆಯುವ ಈ ಮರವು, ಬಾಲ್ಯದಲ್ಲಿ ಅಪ್ಪುಸಸ್ಯ (epiphyte) ವಾಗಿರುತ್ತದೆ. ಕ್ರಮೇಣ ತನ್ನ ಬೇರುಗಳನ್ನು ಭೂಮಿಯೊಳಗೆ ಭದ್ರಗೊಳಿಸಿ ಸ್ವತಂತ್ರ ಮರವಾಗಿ ಬೆಳೆಯುತ್ತದೆ. ಮರದ ತೊಗಟೆಯು ನಯವಾದ ಬೂದು ಬಣ್ಣದಿಂದ ಕೂಡಿರುತ್ತದೆ. ಅರಳಿ ಮರದ ಎಲೆಗಳು ಸರಳ ವಿನ್ಯಾಸವನ್ನು ಹೊಂದಿದ್ದು, ಗಾಢ ಹಸಿರು ಬಣ್ಣದಿಂದ ಕೂಡಿರುತ್ತವೆ. ಈ ಎಲೆಗಳು ಸುಮಾರು 10-20 ಸೆಂಟೀಮೀಟರ್ ನಷ್ಟು ಉದ್ದ, 7-15 ಸೆಂಟಿಮೀಟರ್ ನಷ್ಟು ಅಗಲವಿರುತ್ತದೆ. ಬಹುತೇಕ ಫೈಕಸ್ ಪ್ರಭೇದದ ಮರಗಳಲ್ಲಿ ಹೂಗಳು ಹಣ್ಣಿನ ಒಳಭಾಗದಲ್ಲಿ ಅಡಗಿ ಕುಳಿತಿರುತ್ತವೆ. ಇಂತಹ ರಚನೆಗೆ ಸೈಕೋನಿಯಂ (syconium) ಎನ್ನುತ್ತಾರೆ.
ಧಾರ್ಮಿಕವಾಗಿ ಹಿಂದೂ ಧರ್ಮದಲ್ಲಿ ಈ ಮರವನ್ನು ಪೂಜಿಸುತ್ತಾರೆ. ಆಯುರ್ವೇದದಲ್ಲಿ ಈ ಮರದ ಬಹುತೇಕ ಭಾಗಗಳನ್ನು ಉಪಯೋಗಿಸುತ್ತಾರೆ. ಮರದ ತೊಗಟೆಯನ್ನು ಬಾಯಿಹುಣ್ಣು, ಆಮಶಂಕೆ ಮೊದಲಾದ ಕಾಯಿಲೆಗಳಿಗೆ ಔಷಧಿಯಾಗಿ ಉಪಯೋಗಿಸಿದರೆ. ಎಲೆಯನ್ನು ಸುಟ್ಟಗಾಯಗಳಿಗೆ ಔಷಧವಾಗಿ ಉಪಯೋಗಿಸುತ್ತಾರೆ. ಹಿಂದಿನ ಕಾಲದಿಂದಲೂ ಈ ಅರಳಿ ಮರವನ್ನು ದೇವಸ್ಥಾನಗಳ ಬಳಿ, ಹೆದ್ದಾರಿಗಳಲ್ಲಿ ನೆರಳಿಗಾಗಿ ಬೆಳೆಸುವ ಪ್ರತೀತಿ ಇದೆ. ಹಾಗೂ ಹಳ್ಳಿಯ ಜನರು ಈ ಮರದ ಸೊಪ್ಪನ್ನು ಮೇಕೆ, ಕುರಿಗಳಿಗೆ ಮೇವಾಗಿಯೂ ಸಹ ಬಳಸುತ್ತಾರೆ…