ಅಲೆಮಾರಿಯ ಅನುಭವಗಳು

ಅಲೆಮಾರಿಯ ಅನುಭವಗಳು

© ವಿಪಿನ್ ಬಾಳಿಗಾ

ಈ ಬದುಕು, ನಿಂತಲ್ಲಿ ನಿಲ್ಲದ ನವ್ಯ ತುಡಿತಗಳ ಸರಪಳಿಗೆ ಸಿಕ್ಕ ಹೊಸ ಇಕ್ಕೆಲಗಳ ಸುಖಸಂಕಟವನ್ನು ಸರಾಗವಾಗಿ ಸರಿದೂಗಿಸಿಕೊಂಡು, ಅನಂತ ಅನುಭವಗಳನ್ನು ತನ್ನದೆ ತೆಕ್ಕೆಗೆ ಎಳೆದುಕೊಳ್ಳುತ್ತಾ ಒಂದೊಂದೇ ಹೆಜ್ಜೆ ಗುರುತುಗಳನ್ನು ಕಿತ್ತಿಟ್ಟು, ಅಗಣಿತ ಅಂತರವನ್ನು ಬಿಟ್ಟ ಜಾಗದಿಂದ ವಾಪಸ್ಸಾಗದೆ ಅದಮ್ಯ ಚೇತನ ಸೆಲೆಯ ಗಮ್ಯದೆಡೆಗೆ ಅಖಂಡವಾಗಿ ಕ್ರಮಿಸುತ್ತ, ಬಯಲ ಬೆಳಕಿಗೆ ಮೈಮುರಿದು ಏಕತಾನತೆಯಲಿ ತನ್ನನೇ ತಾನು ತನ್ನೊಳಗೆ ಗುನುಗಿಕೊಳ್ಳುತ್ತಾ, ಶರಧಿ ಬದುವಿನಗುಂಟ ಅಲೆಗಳೊಟ್ಟಿಗೆ ಅಲೆಯುತ್ತಾ, ಹೊಸ ಜಗತ್ತಿನೊಂದಿಗೆ ಉಸಿರು ಚೆಲ್ಲಿ ನಡೆದು ಬಿಡುವ ಅಂದಾಜಿಗೂ ಸಿಗದ ಅಲೆಮಾರಿ.

ದಟ್ಟ ಕಾಡಿನ ವಾಸನೆ ಎಂಥವರನ್ನೂ ಸಹ ಧ್ಯಾನಸ್ಥ ಸ್ಥಿತಿಗೆ ಒಯ್ದುಬಿಡುತ್ತದೆ! ಸಣ್ಣಗೆ ಹಸಿರೊಳಗೆ ಹುರುಪು ಹೊತ್ತು ಹೊರಟರೆ ತಣ್ಣಗೆ ಬರಮಾಡಿಕೊಳ್ಳುತ್ತದೆ. ಈ ನಿರ್ಜನ ಕಾಡು, ದಖ್ಖನ್ ಪ್ರಸ್ಥಭೂಮಿಯ ಜೀವಗಳು, ಕಲ್ಲರಮನೆ ಘಾಟ್ ನ ತಿರುವುಗಳ ತಿರುವಿ ಒಳಹೊಕ್ಕರೆ ಮೈ ಮೆಲ್ಲಗೆ ಅರಳುತ್ತದೆ. ಎಡವಿಬಿದ್ದಷ್ಟು ಜಲಝರಿಗಳು ಎಡಬಲಕ್ಕೆ ಬಸಿದು ಕುಸಿದು ಕಾಲಿಗೆ ಒರಗಿ ತಣ್ಣಗೆ ಬೆರಳಿಗೆ ತಾಗಿ ಸಾಗುತ್ತವೆ!

ವೈಜ್ಞಾನಿಕವಾಗಿ ಇತಿಹಾಸದ ಪುಟಗಳನ್ನು ತಿರುವಿದಷ್ಟು ಮತ್ತು ಅದರ ಬಗ್ಗೆ ಇನ್ನಷ್ಟು ಮೊಗೆದಷ್ಟು, ಅರಿಯಲೆತ್ನಿಸಿದಷ್ಟು, ಮನುಷ್ಯ ಮಾತ್ರ ತನ್ನ ಜೀವದ ಜೀವನವನ್ನು ಇಂಥವೇ ನೀರಿನ ಮೂಲಗಳ ಆಕರಗಳನ್ನು ಅರಸಿ ಹೊರಟದ್ದು ದಾಖಲಾಗಿದೆ! ಅಲೆಯುತ್ತಲೆ ಈ ಜೀವಗಳು ನದಿಗಳ ತಟದಲ್ಲಿ ಬದುಕು ಪಳಗಿಸಿಕೊಳ್ಳುತ್ತಾ, ಬೀಡು ಬಿಟ್ಟು ಬದುಕುವುದು ಕಲಿತವು! ಆದರೆ ಆ ಅಲೆಮಾರಿತನದ ಸುಖ ಈಗೀಗ ಈ ಯುಗದ ಯುವಪೀಳಿಗೆಯೂ ಬಯಸುತ್ತಿದೆ!

© ಅರವಿಂದ ರಂಗನಾಥ

ಒಂದು ಧೀರ್ಘ ತುಂತುರು ಜಡಿ ಮಳೆಯೊಳಗೆ ಮೈಲುಗಟ್ಟಲೆ ನಡೆಯಬೇಕೆನಿಸುತ್ತದೆ. ಅದ್ಯಾವುದೋ ಕಾಡಿನ ಒಳಮೈ ಹೊಕ್ಕರೆ, ಈ ಮೈ ಸೊಕ್ಕು ಇಳಿಯುವಷ್ಟರಲ್ಲೆ ಆ ಕಾಡಿನ ನೆತ್ತಿಯ ಮುಟ್ಟಿ ಅಲ್ಲೊಂದು ಸಣ್ಣ ಟೆಂಟ್ ಹಾಕಿ, ಇಳಿ ಸಂಜೆ ಸೂರ್ಯ ಮಲೆಗಳ ತುತ್ತ ತುದಿಗೆ ಚುಂಬಿಸಿ ಶಿಖರಗಳ ಮೈಸವರಿ ಹಸಿರಿನೊಳಗೆ ಮೈ ಹುದುಗಿಸಿಕೊಂಡು ಮಲಗುವುದನ್ನು ನೋಡಬೇಕೆನಿಸುತ್ತದೆ!

ಬೆಳದಿಂಗಳ ಕಾಡು ಭಯಂಕರ ನಿಗೂಢತೆಯನ್ನು ಬಿಚ್ಚಿಕೊಳ್ಳುತ್ತಾ, ಒಂದೊಂದೆ ರಹಸ್ಯವನ್ನು ಪೂರ್ಣ ಚಂದ್ರನೆಡೆಗೆ ಎಸೆಯುತ್ತಾ ಧ್ವನಿಸುತ್ತದೆ! ಹರಿವ ನದಿಯ ನಾದದ ಝುಳು ಝುಳು ಪ್ರತಿಧ್ವನಿಸುತ್ತಾ ಕಾಡು ಹೊಕ್ಕು ಅನಂತ ತರಂಗಗಳ ತಬ್ಬಿ ಸುಖಿಸುತ್ತದೆ! ಮತ್ಯಾವುದೊ ಬೇರು ಇಡೀ ದಿನ ಬಸಿದಿಟ್ಟ ನೀರನ್ನು ಮಟ್ಟಸ ಭೂಮಿಗೆ ಮುಟ್ಟಿಸಿ ತಟ್ಟಿಸಿ ತಳ್ಳುತ್ತದೆ! ಭಯಂಕರ ಸೌಂದರ್ಯವೊಂದು ನೆತ್ತಿಯ ಬಯಲೊಳಗೆ ಬೆತ್ತಲೆ ಚಂದ್ರನ ರೂಪದಲ್ಲಿ ಗೋಚರಿಸುವಾಗ, ನಾನಾ ಬಗೆಯ ತಳಿಯ ಕಪ್ಪೆಗಳು, ಇನ್ನೇನು ತಮ್ಮ ಗಂಟಲು ಹರಿದೇ ಹೋಗಿಬಿಡುತ್ತದೆ ಅನ್ನುವಷ್ಟು ಜೋರಾಗಿ ಕೂಗುತ್ತವೆ! ಶರಂಪರ ಮಳೆಯೊಂದು ಇಂತಹ ಇರುಳುಗಳ ಜೊತೆಗೂಡಿದರೆ, ಬೆಚ್ಚಗೆ ಅಂತ ಜೊತೆಗಿರುವುದು ನಮ್ಮ ಈ ಉಸಿರೊಂದೆ ಅನ್ನಿಸಿಬಿಡುತ್ತದೆ! ಅವಿನಾಶಿನಿ ಈ ಪ್ರಕೃತಿಯೊಳಗೆ ನಾವು ಬಂದು ಹೋಗುವವರಷ್ಟೆ, ದಕ್ಕಿದಷ್ಟು ಅನುಭವವನ್ನು ಎದೆಯುಡಿಯೊಳಗೆ ಬಾಚಿಕೊಳ್ಳಬೇಕಿರುವುದು ಈ ಅಲೆಮಾರಿ ಬದುಕಿನ ತುರ್ತು!

ಮಳೆ ನೀರಿಂಗಿದ ಹೊಂಗೆಯ ಮರದ ಕೆಳಗೆ, ನೆಲದಂಗಳ ಹಸಿ ಮಣ್ಣ ಕೆಸರ ಕಣ, ಕಣದೊಳಗಿಂದ ಕಂಪಿನ ಕಡೆ ಹೊರಟ ಹೆಜ್ಜೆಯ ಜಾಡು ಅಳಿಸಲೆಂದೆ ಸಣ್ಣಗೆ ಸುರಿವ ಸೋನೆಮಳೆಗೆ ನಖಶಿಖಾಂತನೆಂದು ನಡೆಯುತಿರುವಾಗ, ಸಳಸಳ ಬೆವರು ಮೈಯೊಳಗಿಂದ ತಣ್ಣಗೆ ಮಳೆಹನಿಯೊಡಗೂಡಿ ಮಣ್ಣಿನ ಮಡಿಲಿಗೆ ಮುಟ್ಟುತ್ತಿತ್ತು!

© ಅರವಿಂದ ರಂಗನಾಥ

ಮಳೆಯೂರ ರಾಡಿಯೊಳಗರಳಿದ ಹೂಗಾಲ ಮಾಸಕೆ ಹಸಿ ಹಡೆದ ಹಡೆದವ್ವರು ಈ ಬಾಣಂತಿ ಮೋಡಗಳ ಮುಸುಕು ಸಾಲು ಸಾಲುಗಳು! ಎಲ್ಲಿಂದಲೊ ಏರಿ ಮತ್ತೆಲ್ಲೊ ಸೇರಿ ಅಲ್ಲಿಂದ ಆಚೀಚೆ ಜಾರಿ ಮೈಗೆ ಮೈ ತೀಡಿ ಬೆಳಕ ಕಿಡಿಯೊಂದು ಸಳಕ್ ಅಂತ ಮೈನಡು ಒಳಗಿಂದ ಹೊಳೆಸಿ, ನಡುಮೈ ಝಾಡಿಸಿ, ಹನಿ ಸ್ಖಲಿಸಿ, ಹಗುರಾಗಿ, ಮಣ್ಣ ಮೈ ಮೆತ್ತಗೆ ತಬ್ಬಿ ಹಸಿಗೊಳಿಸಿ ಹದ ಮಾಡಿ ಹೊಸ ತಳಿಗೆ ಕದ ತೆಗೆದು ಬರಮಾಡಿಕೊಳ್ಳುವಾಗ, ವಸಂತದ ಹೊಸ್ತಿಲಿಗೆ ಎಡವಿ ಬೀಳುವ ಖಯಾಲಿ ನನ್ನದು!

ಮೈ ಹರವಿದಷ್ಟು ನವಿರು ಬಟ್ಟೆಯೆ ನಿಮಿರಿಸಿ ನಿಲ್ಲುವಂತೆ, ಚೂಪು ಚಳಿಯಾಕೆ ಕಿವಿ ಕದ ಬಿಚ್ಚಿ, ಒಳಹೊಕ್ಕು, ನಡುಗಿಸಿ ಗುಡುಗುವಾಗ, ತುಂಡು ಬಿಸಿ ಗಾಳಿ ಎದೆಯ ಪುಪ್ಪುಸದಿಂದ ಕಾಲ್ಕಿತ್ತುತ್ತದೆ!

© ಅರವಿಂದ ರಂಗನಾಥ

ಕಡಲ ಸಾನಿಧ್ಯ ಸೆರಗಿನುದ್ದಕ್ಕೂ ಅಂಟಿದ ಕರಾವಳಿಯ ಒಳಮೈ ಸಹ್ಯಾದ್ರಿಗಳ ತಪ್ಪಲಿನ ಎಲೆಗಳೆದೆಗಳಿಗೆ ರಾಚುವ ಮಳೆಯ ಹನಿಗಳು ಹೊರಡಿಸುವ ಸದ್ದಿದೆಯಲ್ಲಾ, ಅದೊಂಥರಾ ಎಂದಿಗೂ ಬೇಸರವಾಗದ ಹೃದಯ ಬಡಿತದ ಸಂಗೀತವಿದ್ದಂತನಿಸಿ ಮತ್ತೆ ಮತ್ತೆ ಈ ಮನಸಿನೊಳಗೆ ಮಲೆಯೊಳಗಿನ ಮಳೆಯ ಧ್ವನಿಯೆ ಮಾರ್ಧನಿಸುತ್ತದೆ! ಅಲ್ಲೊಂದು ಸುಶ್ರಾವ್ಯ ನಾದವಿದೆ. ಏರಿಳಿತದ ಹಿಡಿತವಿದೆ. ಅಸಂಖ್ಯಾತ ವೃಷ್ಟಿಶರಗಳು ಒಟ್ಟಿಗೆ ಎಲೆ ಎದೆ ತಟ್ಟಿ ತೊಟ್ಟಿಕ್ಕುವ ಆತುರದ ವಾತಾವರಣವಿದೆ! ಕಪ್ಪು ಮೋಡಗಳೆಲ್ಲಾ ಮುಸುಕಿದಂತೆ, ಈ ಕಾಡು, ಕತ್ತಲೆಗೆ ಮೈಚೆಲ್ಲುತ್ತದೆ. ಆಗಷ್ಟೆ ತಾಸೆರಡು ತಾಸಿಗೊಮ್ಮೆ ಸುರಿವ ಸೋನೆಗೆ ನೀರುಂಡ ದಟ್ಟ ಕಾನನದ ಒಳ ನಟ್ಟನಡುವಿಂದ ಮೆಟ್ಟಿ ನಡೆವ ದಾರಿಗುಂಟ ತುಂಟ ಹಸಿತನದ ಸುಗಂಧ ಒಂದು ಜೊತೆಯಾಗುತ್ತದೆ!

ನಡೆದಷ್ಟು ಕಸುವು ದಕ್ಕಿಸುವಲ್ಲಿ ಈ ಸಾಂದ್ರತೆಯನ್ನೆಲ್ಲಾ ಬಸಿದಿಟ್ಟುಕೊಂಡ ಕಾನನ ಮುಖ್ಯ ಪಾತ್ರವಹಿಸುತ್ತದೆ. ಶೀತಲಗೊಂಡ ಮಟ್ಟಸ ಭೂಮಿಯ ಕಾಡು ಒಳಸೆಳೆದರೆ ಸಾಕು ಸಣ್ಣಗೆ ನಶೆ ಏರಿದಂತೆ ತನ್ನ ಮೈಗೇರಿಸಿಕೊಂಡು ತೇಲಾಡಿಸುತ್ತದೆ! ಕೊಳೆತ ಕಟ್ಟಿಗೆಯಲ್ಲೂ ಜಗತ್ತಿನ ಅತ್ಯುತ್ತಮ ಜೀವಂತ ಚಿತ್ರಗಳಲ್ಲೊಂದೆನ್ನುವಷ್ಟು ಮೈಮನಸಿಗಿಳಿದು ಅಚ್ಚಳಿಯದೆ ಎದೆಯಲುಳಿದುಬಿಡುತ್ತದೆ! ಸಣ್ಣಗೆ ಹರಿವ ಝರಿಗೆ ಸುಖಾಸುಮ್ಮನೆ ಎಡವಿ ಬೀಳಬೇಕೆನಿಸುವಷ್ಟು ನಾಜೂಕುತನ ಒಳಗೊಳಗೆ ಜಾಗೃತಗೊಳ್ಳುತ್ತದೆ. ಇಡೀ ಕಾಡ ನಡುಹೊಕ್ಕಷ್ಟು ಭಯಂಕರವಾಗಿ ಸೌಂದರ್ಯವನ್ನೆಲ್ಲಾ ಎದೆಗೆ ಬಸಿದು ಕೊಟ್ಟು ಹಿಗ್ಗಿಸಿ ಮುನ್ನುಗ್ಗಿಸುತ್ತದೆ! ಹಸಿಕಾಡ ತರೆಗೆಲೆಗಳ ಕೆಳ ಮೃದು ಮಣ್ಣೊಳಗಿನ ಜಿಗಣೆ ಕೈಕಾಲಿಗಂಟಿ ಗುಟುಕಿಸಿದಷ್ಟು ರಕುತ ಹೊಸದಾಗಿ ಸೃಷ್ಟಿಗೊಳ್ಳುತ್ತದೆ! ನಿಂತಲ್ಲಿ ನಿಲ್ಲಲು ಬಿಡದೆ ಮತ್ತೆಲ್ಲಿಗೊ ತಲುಪಲೂ ಸಹ ಹೆಣಗಾಡಿಸುವಂತೆ ಸುಖ ಸುರಿವ ಅತೀವ ಸುಖಸಂಕಟವನು ಈ ಹಸಿ ತಪ್ಪಲಿನ ಕಾಡುಗಳು ಕೊಡುತ್ತವೆ! ಅಲೆದಷ್ಟು ಅಲೆಮಾರಿತನವನ್ನೆ ಕೊಡುವ ಬದುಕಿಗೆ ಬದುಕುವುದು ಕಲಿಸುವ ಈ ಅಲೆದಾಟ ಅನಂತವಾದದ್ದು!

© ವಿಪಿನ್ ಬಾಳಿಗಾ
© ಅರವಿಂದ ರಂಗನಾಥ


ಲೇಖನ: ಮೌನೇಶ ಕನಸುಗಾರ
             ಕಲ್ಬುರ್ಗಿ ಜಿಲ್ಲೆ

Print Friendly, PDF & Email
Spread the love
error: Content is protected.