ಪ್ರಕೃತಿ ಬಿಂಬ
© ದೀಪಕ್ ಎಲ್. ಎಂ., ನೀಲಿಗಂಟಲ ಚಟಕ
ಯುರೋಪ್ ಹಾಗು ದಕ್ಷಿಣ ಅಲಾಸ್ಕಾದಲ್ಲಿ ನೆಲೆಸಿರುವ ಈ ಹಕ್ಕಿಗಳನ್ನು ಚಳಿಗಾಲದಲ್ಲಿ ಉತ್ತರ ಆಫ್ರಿಕಾ ಹಾಗು ಭಾರತದಲ್ಲಿ ಕಾಣಬಹುದು. ಇವು ಯುರೋಪಿನಿಂದ ಭಾರತಕ್ಕೆ ಬರುವ ಚಳಿಗಾಲದ ವಲಸೆಗಾರ ಹಕ್ಕಿ. ಈ ಹಕ್ಕಿಗಳು ಗಂಟಲಿನ ಬಣ್ಣ ಆಕರ್ಷಕವಾದ ನೀಲಿ ಬಣ್ಣವಾಗಿದೆ. ಆದ್ದರಿಂದಲೇ ಇದನ್ನು ʼನೀಲಿಗಂಟಲ ಚಟಕʼ ಎಂದು ಕರೆಯುತ್ತಾರೆ. ಈ ನೀಲಿಗಂಟಲ ಚಟಕ ಗಾತ್ರದಲ್ಲಿ ಯುರೋಪಿಯನ್ ರಾಬಿನ್ ಪಕ್ಷಿಯನ್ನು ಹೋಲುತ್ತದೆ. ಸಾದಾ ಕಂದು ಮೈಬಣ್ಣವನ್ನು ಹಾಗು ಬದಿಯಲ್ಲಿ ಕೆಂಪು ತೇಪೆಗಳನ್ನು ಮತ್ತು ವಿಶಿಷ್ಟವಾದ ಕಪ್ಪು ಬಾಲವನ್ನು ಹೊಂದಿದ್ದು, ಹೆಣ್ಣು ಹಕ್ಕಿಗಳು ಗಂಡು ಹಕ್ಕಿಗಳಿಗಿಂತ ಮಂಕಾದ ಮೈಬಣ್ಣವನ್ನು ಹೊಂದಿರುತ್ತವೆ. ಇದು ಹುಳ ಹುಪ್ಪಟೆಗಳನ್ನು ಹಿಡಿದು ತಿನ್ನುವ ಪಕ್ಷಿಯಾಗಿದೆ. ಗಂಡು ಹಕ್ಕಿ ವೈವಿಧ್ಯಮಯ ಮತ್ತು ಅನುಕರಿಸುವ ಹಾಡನ್ನು ಹೊಂದಿದೆ.
© ದೀಪಕ್ ಎಲ್. ಎಂ., ನೆಲಗುಬ್ಬಿ
ಗಂಡು ಗುಬ್ಬಚ್ಚಿಯನ್ನು ಹೋಲುವ ನೆಲಗುಬ್ಬಿಗಳು ದಕ್ಷಿಣ ಹಿಮಾಲಯದಿಂದ ಶ್ರೀಲಂಕಾದವರೆಗೆ ಹಾಗೂ ಪೂರ್ವದ ಅಸ್ಸಾಂಮ್ನಲ್ಲಿ ಕಂಡುಬರುತ್ತವೆ. ಇವನ್ನು ಹೆಚ್ಚಾಗಿ ಕಾಡು, ನದಿತೀರದ ಮರಳು ಪ್ರದೇಶಗಳಲ್ಲಿ ಕಾಣಬಹುದು. ನೆಲ ಗಂಡು ಗುಬ್ಬಿಗೆ ಗಂಡು ಗುಬ್ಬಚ್ಚಿಗಳಿಗಿರುವಂತೆ ಕಣ್ಣಿನ ಸುತ್ತ ಕಪ್ಪು ವೃತ್ತವಿದ್ದು, ಮೊಂಡು ಕೊಕ್ಕು, ಕುಳ್ಳ ಕಾಲು, ಬೂದು ಬಣ್ಣದ ತಲೆಯನ್ನು ಹೊಂದಿದೆ. ಹೆಣ್ಣು ನೆಲ ಗುಬ್ಬಿಗಳು ತಿಳಿ ಕಂದು ಬಣ್ಣವನ್ನು ಹೊಂದಿದ್ದು, ಕಣ್ಣಿನ ಸುತ್ತ ಕಪ್ಪು ಪಟ್ಟಿಯಿರುವುದಿಲ್ಲ. ಗಂಡು ನೆಲಗುಬ್ಬಿಗಳು ಒಂದು ವಿಶೇಷ ನಡವಳಿಕೆಯನ್ನು ತೋರುತ್ತವೆ. ಅದೇನೆಂದರೆ, ಇವು ಕೆಳಗಿನಿಂದ ರಾಕೇಟಿನಂತೆ ನೇರವಾಗಿ ಟ್ವೀ ಎಂದು ಸಿಳ್ಳೆ ಹಾಕುತ್ತಾ ಮೇಲೆ ಆಕಾಶಕ್ಕೇರಿ, ಇನ್ನೇನು ನೆಲಮುಟ್ಟುತ್ತದೆ ಎನ್ನುವಷ್ಟರಲ್ಲಿ ಮತ್ತೆ ನಭಕ್ಕೆ ಹಾರುತ್ತವೆ. ಆದ್ದರಿಂದ ಈ ಹಕ್ಕಿಗಳಿಗೆ ಸಿಳ್ಳೆಗುಬ್ಬಿ ಎಂತಲೂ ಕರೆಯುವುದುಂಟು.
ಕೀಟಗಳನ್ನು ಮತ್ತು ಹುಲ್ಲಿನ ಬೀಜಗಳನ್ನು ತಿನ್ನುವ ಈ ಹಕ್ಕಿಗಳು ಸಣ್ಣ ಗುಂಪುಗಳಲ್ಲಿ ಅಥವಾ ಜೋಡಿಯಾಗಿ ಕಂಡುಬರುತ್ತವೆ. ಚಳಿಗಾಲದಲ್ಲಿ ದೊಡ್ಡ ಹಿಂಡುಗಳನ್ನು ರೂಪಿಸಿಕೊಳ್ಳುತ್ತವೆ. ಈ ನೆಲಗುಬ್ಬಿಗಳು ಬೇಸಿಗೆಯಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಸಾಮಾನ್ಯವಾಗಿ ಎರಡರಿಂದ ಮೂರು ಮೊಟ್ಟೆಗಳನ್ನಿಡುವ ಈ ಹಕ್ಕಿಗಳು ನೆಲದಲ್ಲಿ ಗುಳಿ ಮಾಡಿ ಅದರ ಸುತ್ತಲೂ ಕಲ್ಲುಗಳನ್ನಿಟ್ಟು ಗೂಡು ಕಟ್ಟುತ್ತವೆ. ಗಂಡು ಹಾಗು ಹೆಣ್ಣು ಹಕ್ಕಿಗಳೆರಡೂ ಮೊಟ್ಟೆಗಳಿಗೆ ಕಾವು ಕೊಡುತ್ತವೆ. 13 ರಿಂದ 14 ದಿನಗಳಲ್ಲಿ ಮೊಟ್ಟೆಯೊಡೆದು ಮರಿಗಳು ಹೊರಬರುತ್ತವೆ. ಗಂಡು ಹಾಗು ಹೆಣ್ಣು ಪಕ್ಷಿಗಳೆರಡೂ ಪುಟ್ಟ ಹಕ್ಕಿಗಳ ಆರೈಕೆ ಮಾಡುತ್ತವೆ.
© ದೀಪಕ್ ಎಲ್. ಎಂ., ಗುಡುಗಾಡು ಹಕ್ಕಿ
ಭಾರತದ ನಿವಾಸಿಯಾಗಿರುವ ಈ ಹಕ್ಕಿಗಳು ಉಷ್ಣವಲಯದ ಏಷ್ಯಾದಿಂದ ದಕ್ಷಿಣ ಚೈನಾದಾದ್ಯಂತ ಮತ್ತು ಇಂಡೋನೇಷ್ಯಾ, ಫಿಲ್ಲಿಪೈನ್ಸ್ ದೇಶಗಳಲ್ಲಿ ಕಂಡುಬರುತ್ತವೆ. ಮೈಯ ಮೇಲ್ಭಾಗ ಗಾಢವಾದ ಕಂದು ಬಣ್ಣವನ್ನು, ಕೆಳಭಾಗ ತುಕ್ಕು ಕಂದು ಬಣ್ಣವನ್ನು, ಗಲ್ಲ, ಗಂಟಲು ಮತ್ತು ಎದೆಯ ಭಾಗದಲ್ಲಿ ಕಡುಕಪ್ಪು ಬಣ್ಣವನ್ನು ಹೊಂದಿದೆ. ಗಂಡು ಪಕ್ಷಿಗಳಿಗಿಂತ ಹೆಣ್ಣು ಪಕ್ಷಿಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಆಕರ್ಷಕವಾದ ಮೈಬಣ್ಣದಿಂದ ಕೂಡಿರುತ್ತವೆ. ಈ ಪಕ್ಷಿಯ ಕೂಗು ಮೋಟಾರು ಸೈಕಲ್ಲಿನಂತಹ ಡರ್-ರ್-ರ್-ರ್ ಎಂಬುವ ಶಬ್ದ ಅಥವಾ ಹೂನ್-ಹೂನ್ ಎಂಬುವ ದೊಡ್ಡ ಶಬ್ದದಂತೆ ಕೇಳುತ್ತದೆ.
ಗಂಡು ಹಕ್ಕಿಗಳಿಗಿಂತ ಹೆಣ್ಣು ಹಕ್ಕಿಗಳು ಹೆಚ್ಚು ಶಕ್ತಿಶಾಲಿ ಮತ್ತು ಅವುಗಳೇ ಗೂಡು ಕಟ್ಟುತ್ತವೆ. ವರ್ಷದಾದ್ಯಂತ ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಹೆಣ್ಣು ಹಕ್ಕಿಗಳು ಮೊಟ್ಟೆಗಳನ್ನಿಟ್ಟಾಗ ಗಂಡು ಪಕ್ಷಿಗಳು ಕಾವು ನೀಡುತ್ತವೆ ಹಾಗು ಹುಟ್ಟಿದ ತಕ್ಷಣವೇ ಓಡಾಡುವ ಸಾಮರ್ಥ್ಯವನ್ನು ಹೊಂದಿರುವ ಸಣ್ಣ ಮರಿ ಹಕ್ಕಿಗಳ ಆರೈಕೆಯನ್ನೂ ಮಾಡುತ್ತವೆ. ಮೂರರಿಂದ ನಾಲ್ಕು ಮೊಟ್ಟೆಗಳನ್ನಿಡುವ ಈ ಹಕ್ಕಿಗಳ ಮೊಟ್ಟೆಯ ಬಣ್ಣ ಬೂದಿ ಮಿಶ್ರಿತ ಬಿಳಿ ಬಣ್ಣವಾಗಿದ್ದು, ಕೆಂಪು ಮಿಶ್ರಿತ ಕಪ್ಪು ಅಥವಾ ಕಪ್ಪು ಮಿಶ್ರಿತ ನೇರಳೆ ಬಣ್ಣದ ಮಚ್ಚೆಗಳನ್ನು ಹೊಂದಿರುತ್ತವೆ.
© ದೀಪಕ್ ಎಲ್. ಎಂ., ಕೊಲ್ಲಾರ್ಡ್ ಪ್ರತಿಂಕೋಲ್
ಈ ಹಕ್ಕಿ ಸಾಮಾನ್ಯವಾಗಿ ಯುರೋಪಿನ ಬೆಚ್ಚಗಿನ ಭಾಗಗಳು, ನೈರುತ್ಯ ಏಷ್ಯಾ ಮತ್ತು ಆಫ್ರಿಕಾದಲ್ಲಿ ಕಂಡು ಬರುತ್ತವೆ. ಈ ಹಕ್ಕಿ ಭಾರತಕ್ಕೆ ಚಳಿಗಾಲದಲ್ಲಿ ಬರುತ್ತವೆ. ಇವುಗಳನ್ನು ಸಂಜೆಯ ಹೊತ್ತಿಗೆ ನೀರಿರುವ ಪ್ರದೇಶಗಳಲ್ಲಿ ಹುಳಗಳನ್ನು ಹುಡುಕುತ್ತಿರುವುದನ್ನು ಕಾಣಬಹುದು. ಈ ಪಕ್ಷಿಯ ಮೈಬಣ್ಣ ಬೂದಿ ಮಿಶ್ರಿತ ಕಂದು, ಹೊಟ್ಟೆಯ ಭಾಗ ಬಿಳಿ ಹಾಗು ರೆಕ್ಕೆಗಳು ಕಂದುಬಣ್ಣ. ಸಣ್ಣ ಕೊಕ್ಕಿನ ತಳಭಾಗದಲ್ಲಿ ಕೆಂಪು ಬಣ್ಣವನ್ನು ಹೊಂದಿದೆ. ಉದ್ದನೆಯ ಕವಲೊಡೆದ ಬಾಲ, ಸಣ್ಣ ಕಾಲುಗಳು, ಬಹಳ ಉದ್ದನೆಯ ಚೂಪಾದ ರೆಕ್ಕೆಯನ್ನು ಹೊಂದಿರುವ ಇವು ಹಾರುವಾಗಲೇ ತನ್ನ ಆಹಾರವನ್ನು ಸೇವಿಸುತ್ತವೆ. ಆಕಾಶದಲ್ಲಿ ಮುಂದಕ್ಕೆ ಹಿಂದಕ್ಕೆ ಹಾರುತ್ತ ಗಾಳಿಯಲ್ಲಿರುವ ಕೀಟಗಳನ್ನು ಹಿಡಿದು ಸೇವಿಸುತ್ತವೆ. ಇವು ನೆಲೆದ ಮೇಲೆ ಎರಡರಿಂದ ನಾಲ್ಕು ಮೊಟ್ಟೆಗಳನ್ನಿಡುತ್ತವೆ.
ಚಿತ್ರಗಳು: ದೀಪಕ್ ಎಲ್. ಎಂ.
ಲೇಖನ: ಶಾಂಭವಿ ಎನ್.