ಇಳಿ ಸಂಜೆ
ಶರಧಿಯ ಮಡಿಲಲಿ ಪವಡಿಸ ಹೊರಟಿಹನೇನು ನೇಸರ?
ಜೋಗುಳವ ಹಾಡಿ ಅಲೆಗಳ ತೊಟ್ಟಿಲ ತೂಗಿಹುದೇನು ಸಾಗರ?
ಬಿಸಿಲ ಕಳೆದು ತಂಪು ಹಾಸಿಗೆಯ ಹಾಸಿಹುದೆ ವಸುಂಧರ?
ಕಣ್ಣು ಕುಕ್ಕುವ ಬೆಳಕ ಕರಗಿಸಿ ಹೊಂಬಣ್ಣದ ಚಾದರ ಹೊದೆಸಿಹುದೆ ಅಂಬರ?
ಮರಳ ಮೇಲಿನ ಬರಹ ಕ್ಷಣಿಕವಲ್ಲವೇನು?
ಹಗಲು ರಾತ್ರಿಗಳ ಚಲನೆ ನಿರಂತರವಲ್ಲವೇನು?
ರವಿಯ ನಿರ್ಗಮನ ಚಂದಿರನ ಆಗಮನಕಲ್ಲವೇನು?
ನೋವ ಉಣದೆ ನಲಿವ ಬೆಲೆ ತಿಳಿಯುವುದೇನು?
ಹಕ್ಕಿಗಳಿಗೂ ತಿಳಿದಿಹುದು ಕೂಡಿ ಬಾಳುವ ಸುಖ ಅಲ್ಲವೆ?
ಮನುಜಗೆ ಸ್ವಾರ್ಥದಲಿ ಮಾನವೀಯತೆಯ ಮರೆವೆ?
ಪ್ರಕೃತಿಯ ಎದುರು ನಿಲ್ಲಲು ಯಾರಿಂದಲಾದರು ಸಾಧ್ಯವೆ?
ಜನನ ಮರಣಗಳು ವಿಧಿಯ ಬರಹವೆ?
ಯೌವನ ಮುಪ್ಪು ಮುಂಜಾವು ಮುಂಸ್ಸಜೆಗಳಂತೆಯೆ?
ಹೊಸ ಚಿಗುರ ಉದಯ ಹಣ್ಣೆಲೆಯ ಅವಸಾನದ ಮೇಲೆಯೆ?
ಬದುಕು ಭಾವಗಳ ಮೇಲೆಯು ಪರಿಣಾಮ ಯಾಂತ್ರಿಕತೆಯೆ?
ತಿಳಿ ಸಂಜೆಯ ಆಹ್ಲಾದತೆಯ ಸವಿಯಲು ಆಧುನಿಕತೆಯ ತಡೆಗೋಡೆಯೆ?
ಬದುಕ ಕಡಲಲಿ ಭೋರ್ಗರೆತ, ಶಾಂತತೆಯೆಲ್ಲ ಸಹಜವಾದುದೆ?
ಪರಿಸರದ ಒಡಲಲಿ ಮೇಲು ಕೀಳೆಂಬುದೆಲ್ಲಿದೆ?
ಕಳೆವ ನಾಲ್ಕು ದಿನಗಳಿಗೆ ನಾನೆಂಬ ಅಹಂ ಬೇಕಿಹುದೆ?
ಮನುಕುಲ ಬಾಳದೆ ಗಿಡ-ಮರ, ಪ್ರಾಣಿ-ಪಕ್ಷಿ, ನೆಲ-ಜಲದ ಸ್ವಚ್ಛಂದತೆಯ ಹೊಸಕದೆ?
– ಪ್ರತಿಭಾ ಪ್ರಶಾಂತ್
ಉತ್ತರ ಕನ್ನಡ ಜಿಲ್ಲೆ