ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

©  ವಿನೋದ್ ಕುಮಾರ್ ವಿ. ಕೆ., ನೀಲಿ ಬಾಲದ ಕಳ್ಳಿಪೀರ

ಭಾರತದಾದ್ಯಂತ ಕಂಡುಬರುವ ಈ ಹಕ್ಕಿ ದಟ್ಟ ಕಾಡುಗಳ ಗಿಡಗಂಟೆಗಳಲ್ಲಿ  ವಾಸಿಸುತ್ತವೆ. ಅಲ್ಲಿ ಅವು ಕೀಟಗಳನ್ನು ಹಿಡಿಯಲು ವೈಮಾನಿಕ ಹಾದಿಗಳನ್ನು ಮಾಡಿರುತ್ತವೆ. ಗಂಡು ಹಕ್ಕಿ ನೇರಳೆ ನೀಲಿ ಬಣ್ಣ ಹೊಂದಿದ್ದು, ಹೊಟ್ಟೆಯ ಮೇಲೆ ಬಿಳಿ ಬಣ್ಣ ಹೊಂದಿರುತ್ತವೆ. ನೀಲಿ ಮತ್ತು ಬಿಳಿ ಬಣ್ಣಗಳ ನಡುವಲ್ಲಿ ಬೂದು ಬಣ್ಣದ ಗೆರೆಯ ಹಾಗೆ ಲೇಪನ ಇರುತ್ತದೆ. ಹೆಣ್ಣು ಕಂದು ಬಣ್ಣದಲ್ಲಿದ್ದು, ಹೊಟ್ಟೆಯೂ ಕೊಂಚ ಮಸುಕಾದ ಬಿಳಿ ಬಣ್ಣ ಹೊಂದಿರುತ್ತದೆ. ಮಳೆಗಾಲದಲ್ಲಿ ಬಟ್ಟಲಿನಾಕರದ ಗೂಡುಗಳನ್ನು ಮರಗಳ ಅಥವಾ ಕಲ್ಲು ಬಂಡೆಗಳ ನಡುವಲ್ಲಿ ಮಾಡಿ, ಸಾಮಾನ್ಯವಾಗಿ ನಾಲ್ಕು ಹಸಿರು ಬಣ್ಣಕ್ಕೆ ಅಲ್ಲಲಿ ಕಂದು ಬಣ್ಣದ ಚುಕ್ಕಿಗಳಿರುವ ಮೊಟ್ಟೆ ಇಟ್ಟು ಮರಿ ಮಾಡುತ್ತವೆ.

©  ವಿನೋದ್ ಕುಮಾರ್ ವಿ. ಕೆ., ಚಿಟ್ಟು ಮಡಿವಾಳ

ಚಿಟ್ಟು ಮಡಿವಾಳವು ಒಂದು ಗುಬ್ಬಚ್ಚಿ ಗಾತ್ರದ ಹಕ್ಕಿ. ಗಂಡು ಮತ್ತು ಹೆಣ್ಣು ಹಕ್ಕಿಗಳ ಬಣ್ಣದಲ್ಲಿ ವ್ಯತ್ಯಾಸವಿದೆ, ಗಂಡು ಚಿಟ್ಟು ಮಡಿವಾಳವು  ಗಾಢ ನೀಲಿಗಪ್ಪು ಬಣ್ಣದಲ್ಲಿದ್ದು, ರೆಕ್ಕೆಯ ಮೇಲೆ ಬಿಳಿಯ ಪಟ್ಟೆ ಇರುತ್ತದೆ. ರೆಕ್ಕೆ ಬಿಚ್ಚಿ ಹಾರುವಾಗ ಇದು ಸ್ಪಷ್ಟವಾಗಿ ಕಾಣುತ್ತದೆ. ರೆಕ್ಕೆಯ ಅಂಚಿನ ಪುಕ್ಕಗಳು ಚಾಕಲೇಟ್ ಬಣ್ಣದಲ್ಲಿದ್ದು, ಬಾಲದ ತಳ ಭಾಗದಲ್ಲಿ ಕೆಂಪು ಮಿಶ್ರಿತ ಕಂದು ಬಣ್ಣವಿರುತ್ತದೆ ಹಾಗೂ ಕುಪ್ಪಳಿಸುತ್ತ ಕೂತಾಗ, ಬಾಲವನ್ನು ಆಗಾಗ ಮೀಟುತ್ತಿರುವಾಗ ಇದು ಎದ್ದು ಕಾಣುತ್ತದೆ. ಹೆಣ್ಣು ಹಕ್ಕಿ ಬಣ್ಣದಲ್ಲಿ ಸಂಪೂರ್ಣ ವಿಭಿನ್ನವಾಗಿರುತ್ತದೆ. ರೆಕ್ಕೆ, ಬೆನ್ನು, ತಲೆ ಬಿಸ್ಕತ್ ಕಂದು ಬಣ್ಣ. ಎದೆ, ಹೊಟ್ಟೆ ಬಿಳಿ ಬಣ್ಣ. ಗಂಡಿಗಿರುವ ರೆಕ್ಕೆ ಮೇಲಿನ ಬಿಳಿ ಪಟ್ಟೆ ಇರುವುದಿಲ್ಲ. ಇವುಗಳ ಮರಿಗಳ ಬಣ್ಣವು ಹೆಣ್ಣು ಹಕ್ಕಿಯನ್ನೆ ಹೋಲುತ್ತವೆ. ಏಷ್ಯಾದ್ಯಂತ ಕಂಡುಬರುವ ಇವು ಬಯಲುಸೀಮೆ ಮತ್ತು ಮಲೆನಾಡಿನ ಹಕ್ಕಿ. ಬಣ್ಣ ಮತ್ತು ಬಾಲದ ಪುಕ್ಕಗಳ ಉದ್ದಳತೆಯ ಮೇಲೆ ಐದು ಉಪ ಪ್ರಭೇದಗಳನ್ನು ವರ್ಗೀಕರಿಸಲಾಗಿದೆ. ಇವು ತುಂಬಾ ನಿರ್ಭೀತ ಹಕ್ಕಿಗಳು. ಕಲ್ಲು ರಾಶಿಗಳ ಬಿರುಕಿನಲ್ಲಿ ಹುಲ್ಲು ಮತ್ತು ಒಣಗಿದ ತರಗೆಲೆಗಳಿಂದ ಗೂಡು ಮಾಡಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ.

©  ವಿನೋದ್ ಕುಮಾರ್ ವಿ. ಕೆ.,  ನೀಲಕಂಠ

          ಏಷ್ಯಾದ್ಯಂತ ಕಂಡುಬರುವ ಈ ಹಕ್ಕಿಯು ನಮ್ಮ ಕರ್ನಾಟಕದ ರಾಜ್ಯ ಪಕ್ಷಿ. ಇದು ಪಾರಿವಾಳ ಗಾತ್ರದ ನೇರಳೆ, ನೀಲಿ, ಕೆಂಪು ಬಣ್ಣಗಳ ಹಕ್ಕಿ, ಬಲವಾದ ಕಪ್ಪು ಕೊಕ್ಕು, ಹಾರುವಾಗ ನೀಲಿ ಬಣ್ಣ ಎದ್ದು ಕಾಣುತ್ತದೆ. ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸವಿರುವುದಿಲ್ಲ. ಬಯಲು ಸೀಮೆಯ ಉತ್ತ ಹೊಲಗಳ ಬಳಿ ತಂತಿಗಳ ಮೇಲೆ ಹೆಚ್ಚಾಗಿ ಕಾಣಸಿಗುತ್ತವೆ.  ತೆಳು ಕುರುಚಲು ಕಾಡುಗಳಲ್ಲಿ ಹಾಗೂ ಸಾಗುವಳಿ ಭೂಮಿಗಳಲ್ಲಿ ಎತ್ತರದ ತಂತಿಗಳ ಮೇಲೋ, ಮರಗಳ ಕೊಂಬೆಗಳ ತುತ್ತ ತುದಿಯಲ್ಲಿ ಕುಳಿತು ದೊಡ್ಡ ದೊಡ್ಡ ಹುಳಗಳು, ಕಪ್ಪೆ, ಹಾವುರಾಣಿಗಳನ್ನು ಕಂಡೊಡನೆ ಅಲ್ಲಿಂದ ಎಗರಿ ಹಿಡಿಯುತ್ತವೆ. ಸಾಧಾರಣವಾಗಿ ಕುಳಿತಲ್ಲಿಗೆ ಹಿಂತಿರುಗಿ ಕೊಕ್ಕಿನಲ್ಲಿ ಕಚ್ಚಿಕೊಂಡ ಕೀಟಗಳನ್ನು ಕೊಂಬೆಗೆ ಬಡಿದುಕೊಂಡು ತಿನ್ನುತ್ತವೆ. ರೆಕ್ಕೆಗಳನ್ನು ಬಹಳ ನಿಧಾನವಾಗಿ ಬಡಿಯುತ್ತ ಹಾರುತ್ತವೆ. ಇವು ಅಪಾರ ಪ್ರಮಾಣದ ಕೀಟಗಳನ್ನು ತಿನ್ನುವುದರಿಂದ ರೈತರಿಗೆ ತುಂಬಾ ಉಪಕಾರಿ. ಮರದ ಪೊಟರೆಗಳಲ್ಲಿ ಅಥವಾ ಪಾಳು ಬಿದ್ದ ಕಟ್ಟಡಗಳಲ್ಲಿ ಹುಲ್ಲು, ಹತ್ತಿಯನ್ನು ಬಳಸಿ ಗೂಡು ಮಾಡಿ, ಮೊಟ್ಟೆ ಇಟ್ಟು ಮರಿ ಮಾಡುತ್ತವೆ.

©  ವಿನೋದ್ ಕುಮಾರ್ ವಿ. ಕೆ., ನೀಲಿ ಬಾಲದ ಗಣಿಗಾರಲು ಹಕ್ಕಿ

ನೀಲಿ ಬಾಲದ ಗಣಿಗಾರಲು ಹಕ್ಕಿಯು ಏಷ್ಯಾ ಖಂಡದಾದ್ಯಂತ ಕಂಡುಬರುತ್ತದೆ. ಹಸಿರು ಬಣ್ಣ ಪ್ರಧಾನವಾಗಿರುವ ಈ ಗುಬ್ಬಚ್ಚಿ ಗಾತ್ರದ ಹಕ್ಕಿ, ತಲೆಯ ಮೇಲೆ ಕಿತ್ತಳೆ ಬಣ್ಣವೂ, ಬೆನ್ನಮೇಲೆ ತೆಳು ನೀಲಿ ಬಣ್ಣವು ಪ್ರಧಾನವಾಗಿರುತ್ತದೆ. . ಪುಕ್ಕದ 2 ಗರಿಗಳು ನೀಳವಾಗಿ ಚೂಪಾಗಿರುತ್ತದೆ. ಗುಂಪಾಗಿ ಅಥವಾ ಜೋಡಿಗಳಲ್ಲಿ ಬಯಲು ಜಾಗಗಳಲ್ಲಿ ವಿದ್ಯುತ್ ತಂತಿಗಳ ಮೇಲೆ ಇಲ್ಲವೇ ಮರದಿಂದ ಚಾಚಿಕೊಂಡ ಬೋಳು ಕಡ್ಡಿಗಳ ಮೇಲೆ ಕುಳಿತಿರುತ್ತವೆ. ದಟ್ಟಕಾಡುಗಳಲ್ಲಿ ಅಪರೂಪವಾದ ಇವು ಹಳ್ಳಿಗಳ ಹೊರವಲಯದಲ್ಲಿ, ಉದ್ಯಾನವನಗಳಲ್ಲಿ, ಪಾಳುಬಿದ್ದ ಜಾಗಗಳಲ್ಲಿ ಇರುತ್ತವೆ. ಹಾರಾಡುವ ಜೇನುಗಳನ್ನು ಇಲ್ಲವೇ ಇತರ ಕೀಟಗಳನ್ನು ಹಿಡಿಯಲು ಆಗಾಗ ಹಾರಿ ಕೂರುತ್ತವೆ. ಹಾರಿದವು ಸುತ್ತು ಹೊಡೆದು ತೇಲುತ್ತಾ ಕುಳಿತಲ್ಲಿಗೇ ಬಂದು ಕೂರುತ್ತವೆ. ಇವು ನೆಲದಲ್ಲಿ ಇಲ್ಲವೇ ಕೊರಕಲು ಗೋಡೆಗಳಲ್ಲಿ ಬಿಲ ಕೊರೆದು ಗೂಡು ಮಾಡಿ, ಮೊಟ್ಟೆ ಇಟ್ಟು ಮರಿ ಮಾಡುತ್ತವೆ.

ಚಿತ್ರಗಳು :   ವಿನೋದ್ ಕುಮಾರ್ ವಿ. ಕೆ.
          ಲೇಖನ:  ಹೇಮಂತ್ ನಿಖಿಲ್

Print Friendly, PDF & Email
Spread the love
error: Content is protected.