ಪ್ರಕೃತಿ ಬಿಂಬ
© ವಿನೋದ್ ಕುಮಾರ್ ವಿ. ಕೆ. , ಕೆಮ್ಮುನಿಯ ಹಕ್ಕಿ
ಕೆಮ್ಮುನಿಯ ಹಕ್ಕಿಯು ಗುಬ್ಬಚ್ಚಿ ಗಾತ್ರದ ಹಕ್ಕಿಯಾಗಿದ್ದು. ಭಾರತದ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಇವು ಚದುರಿದಂತೆ ಎಲ್ಲೆಡೆ ಕಾಣಸಿಗುತ್ತದೆ. ಜೌಗು ಪ್ರದೇಶದ ಜೊಂಡು, ಚಾಪೆ ಹುಲ್ಲು ಇರುವಲ್ಲಿ ಚಿಕ್ಕ ಚಿಕ್ಕ ಗುಂಪುಗಳಲ್ಲಿ ಇರುತ್ತವೆ. ಕೀಟಗಳು, ಹುಲ್ಲಿನ ಬೀಜಗಳು ಹಾಗೂ ಧಾನ್ಯ ಇವುಗಳ ಆಹಾರ. ಗಟ್ಟಿ ಕಾಳುಗಳನ್ನು ಅಗಿಯಲು ಅಗತ್ಯವಾದ ಬಲವಾದ ಕೊಕ್ಕುಗಳಿವೆ. ಪೊದೆಗಳಲ್ಲಿ ಹುಲ್ಲು ಅಡಕಿ ಫುಟ್ಬಾಲ್ನಷ್ಟು ದೊಡ್ಡದಾದ ಗುಂಡಗಿನ ಗೂಡು ಮಾಡಿ ಪಕ್ಕದಿಂದ ಒಳದಾರಿ ಮಾಡುತ್ತದೆ. ರಾತ್ರಿವೇಳೆ ಸಾಮೂಹಿಕವಾಗಿ ಮಲಗಲೂ ಬಳಸುತ್ತವೆ. ಹಲವಾರು ಹಕ್ಕಿಗಳು ಒಂದೇ ಗೂಡಿನಲ್ಲಿ ಮೊಟ್ಟೆ ಇಟ್ಟು ಸಾಮೂಹಿಕವಾಗಿ ಕಾವು ಕೊಟ್ಟು ಮರಿಮಾಡುತ್ತವೆ.
© ವಿನೋದ್ ಕುಮಾರ್ ವಿ. ಕೆ., ಎಲೆಹಕ್ಕಿ
ಎಲೆಹಕ್ಕಿ, ಹೆಸರೇ ಹೇಳುವಂತೆ ಇದರ ಬಣ್ಣ ಎಲೆಯಂತಹ ತಿಳಿ ಹಸಿರು. ಗಂಡು ಮತ್ತು ಹೆಣ್ಣು ಹಕ್ಕಿಗಳ ಪುಕ್ಕಗಳ ಬಣ್ಣದಲ್ಲಿ ವ್ಯತ್ಯಾಸ ಇಲ್ಲವಾದರೂ ತಲೆಯ ಸುತ್ತಲಿನ ಬಣ್ಣಗಳಲ್ಲಿ ವ್ಯತ್ಯಾಸ ಗುರುತಿಸಬಹುದು. ಗಂಡು ಹಕ್ಕಿಯ ಗಂಟಲಿನ ಭಾಗ ನೀಲಿ ಅಥವಾ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಹಕ್ಕಿಗೆ ಈ ಬಣ್ಣ ತುಂಬಾ ತೆಳುವಾಗಿ ಇರುತ್ತದೆ ಅಥವಾ ಇರುವುದಿಲ್ಲ ಎನ್ನಬಹುದು. ಮರಿಗಳ ಬಣ್ಣವು, ಹೆಣ್ಣು ಹಕ್ಕಿಯ ಮಾಸಲು ಬಣ್ಣದಂತೆ ಕಾಣುತ್ತದೆ. ಏಷ್ಯಾದ್ಯಂತ ಕಂಡುಬರುವ ಇವು, ಹುಳುಗಳನ್ನು ಮತ್ತು ಹಣ್ಣುಗಳನ್ನು ತಿನ್ನುತ್ತವೆ. ಕುರುಚಲು ಕಾಡುಗಳಲ್ಲಿ ಹೆಚ್ಚಾಗಿ ಇರುವ ಇವು, ಮರಗಳ ಮೇಲೆ ಗೂಡು ಕಟ್ಟಿ 2 ರಿಂದ 3 ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ.
© ವಿನೋದ್ ಕುಮಾರ್ ವಿ. ಕೆ., ಚಂದ್ರ ಮುಕುಟ
ಚಂದ್ರಮುಕುಟವು ಮೈನಾಹಕ್ಕಿ ಗಾತ್ರದ, ಮೈಮೇಲೆಲ್ಲಾ ಜೀಬ್ರಾ ಪಟ್ಟೆಗಳಂತೆ ಕಪ್ಪು ಬಿಳಿ ಪಟ್ಟೆಗಳಿರುವ ಹಕ್ಕಿ. ಕುತ್ತಿಗೆ ಮತ್ತು ಎದೆಯ ಭಾಗ ಕಿತ್ತಲೆ ಬಣ್ಣ. ತಲೆಯ ಮೇಲೆ ನವಿಲಿಗಿರುವಂತೆ ಬೀಸಣಿಗೆ ಚೊಟ್ಟಿ ಇದೆ. ಚೊಟ್ಟಿ ತುದಿಯಲ್ಲಿ ಕಪ್ಪು ಮಚ್ಚೆಗಳಿವೆ. ಚೊಟ್ಟಿಯನ್ನು ಇದು ಮಡಚಿಕೊಂಡಾಗ ಹಿಮ್ಮುಖನಾಗಿರುವ ಇನ್ನೊಂದು ಕೊಕ್ಕಿನಂತೆ ಕಾಣುತ್ತದೆ. ಒಂಟಿಯಾಗಿ ಅಥವಾ ಜೋಡಿಗಳಲ್ಲಿ ನೆಲ ಕೆದಕುತ್ತಾ ಹುಳುಗಳನ್ನು ಹಿಡಿದು ತಿನ್ನುತ್ತವೆ. ಇವುಗಳ ತಲೆಯಲ್ಲಿರುವ ಅತಿ ಶಕ್ತಿಯುತವಾದ ಸ್ನಾಯುಗಳು ಕೊಕ್ಕುಗಳನ್ನು ಮಣ್ಣಿನ ಒಳಗೆ ಇರುವಾಗಲೂ ತೆರೆಯಲು ಸಹಕರಿಸುತ್ತವೆ. ವಿಶ್ವದ ಎಲ್ಲೆಡೆ ಕಂಡುಬರುವ ಇವು ಹುಲ್ಲು ಮೈದಾನಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹೆಣ್ಣು ಹಕ್ಕಿಯನ್ನು ಒಲಿಸಲು ಅಥವಾ ಇತರ ಹಕ್ಕಿಗಳನ್ನು ಎದುರಿಸಲು ಬೀಸಣಿಗೆಯಂತ ಚೊಟ್ಟಿಯನ್ನು ಬಿಚ್ಚಿ ಮಡಚುತ್ತದೆ. ಹೂಪ್… ಹು. ಎಂದು ಮೇಲುಧ್ವನಿಯಲ್ಲಿ ಕೂಗುತ್ತವೆ. ಕಟ್ಟಡಗಳ ಸಂದುಗಳಲ್ಲಿ, ಇಲ್ಲವೇ ಮರದ ಪೊಟರೆಗಳಲ್ಲಿ ಹುಲ್ಲಿನಿಂದ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿ ಮಾಡುತ್ತವೆ.
© ವಿನೋದ್ ಕುಮಾರ್ ವಿ. ಕೆ., ಗದ್ದೆ ಮಿಂಚುಳ್ಳಿ
ಈ ಮಿಂಚುಳ್ಳಿಯ ಹೊಟ್ಟೆ, ತಲೆ ಚಾಕಲೇಟ್ ಕೆಂಪು ಬಣ್ಣ. ಇದರ ಎದೆ ಮೇಲಿನ ಅಗಲವಾದ ಬಿಳಿ ಪಟ್ಟೆಯಿಂದ ಇದನ್ನು ಗುರುತಿಸುವುದು ಸುಲಭ. ಬಲವಾದ ರಕ್ತವರ್ಣದ ಕೊಕ್ಕು ಮತ್ತು ಕಾಲುಗಳು. ಇದು ಹಾರುವಾಗ ರೆಕ್ಕೆಯ ಮೇಲಿನ ಬಿಳಿ ಪಟ್ಟೆ ಪ್ರಧಾನವಾಗಿ ಎದ್ದು ಕಾಣುತ್ತದೆ. ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸ ಇರುವುದಿಲ್ಲ. ಹೆಚ್ಚಾಗಿ ಕಾಡುಗಳಲ್ಲಿ, ಬಯಲುಗಳಲ್ಲಿ, ಗದ್ದೆ ಬಳಿ ಇರುವುದೇ ಹೆಚ್ಚು. ಏಷ್ಯಾದ್ಯಂತ ಕಂಡುಬರುತ್ತವೆ. ಮಿಡತೆ, ಓತಿಕ್ಯಾತ, ಕಪ್ಪೆ, ಇವುಗಳ ಆಹಾರ. ಏಡಿ, ಮೀನುಗಳನ್ನು ಹಿಡಿಯುತ್ತದಾದರೂ ಇತರ ಮಿಂಚುಳ್ಳಿಗಳಂತೆ ಇದು ನೀರಿಗೆ ಧುಮುಕುವುದು ಅಪೂರ್ವ. ಮಣ್ಣಿನ ಪ್ರಪಾತಗಳ ದಿಬ್ಬಗಳಲ್ಲಿ ಬಿಲ ಕೊರೆದು ಗೂಡು ಮಾಡುತ್ತವೆ.
ಚಿತ್ರಗಳು : ವಿನೋದ್ ಕುಮಾರ್ ವಿ. ಕೆ.
ಲೇಖನ: ಹೇಮಂತ್ ನಿಖಿಲ್