ನೀವೂ ಕಾನನಕ್ಕೆ ಬರೆಯಬಹುದು

      

ಭೂಮಿಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವರ್ಷದ ಎಲ್ಲಾ ಕಾಲದಲ್ಲೂ ತಂಪಾಗಿರುತ್ತಿದ್ದ ಬೆಂಗಳೂರಿನಲ್ಲೇ ಜನರು ಬೇಸಿಗೆಯ ಧಗೆಗೆ ಬಳಲುವಂತಹ ಪರಿಸ್ಥಿತಿ ಬಂದೊದಗಿದೆ. ಈ ತಾಪಮಾನದ ಹೆಚ್ಚುವಿಕೆಗೆ ಕಾರಣವೇನು? ಇದನ್ನು ಹೇಗೆ ತಡೆಗಟ್ಟಬಹುದು ಎಂದು ಎಲ್ಲರಿಗೂ ತಿಳಿದಿದ್ದರೂ ಕಾರ್ಯಪ್ರವೃತ್ತರಾಗಲು ಯಾಕೋ ಹಿಂಜರಿಯುತ್ತಿದ್ದಾರೆ. ಈ ಪರಿಸರ ಜಾಗೃತಿಯ ಕಿಚ್ಚನ್ನು ಜನರಲ್ಲಿ ಹಚ್ಚಬೇಕು  ಎಂಬ ಉದ್ದೇಶದಿಂದ ವಿಶ್ವ ಸಂಸ್ಥೆಯು 1974 ರಿಂದ ಪ್ರತೀ ವರ್ಷ ಜೂನ್ 5 ನೇ ತಾರೀಖನ್ನು ವಿಶ್ವ ಪರಿಸರ ದಿನವೆಂದು ಆಚರಿಸುತ್ತಾ ಬರುತ್ತಿದೆ.

ಪ್ರತೀ ವರ್ಷವು ವಿಶ್ವ ಪರಿಸರ ದಿನವನ್ನು ವಿಭಿನ್ನ ಶೀರ್ಷಿಕೆಯಡಿಯಲ್ಲಿ ಆಚರಿಸಲಾಗುತ್ತದೆ. ಅದೇ ರೀತಿ 2021ರ ವಿಶ್ವ ಪರಿಸರ ದಿನದ ಶೀರ್ಷಿಕೆ ’ಪರಿಸರ ವ್ಯವಸ್ಥೆಯ ಮರುಸ್ಥಾಪನೆ’ ಯಾಗಿದೆ. ’ಪರಿಸರ ವ್ಯವಸ್ಥೆಯ ಮರುಸ್ಥಾಪನೆ’ ಎಂದರೆ ಅವನತಿ ಹೊಂದಿರುವ ಅಥವಾ ನಾಶವಾದ ಪರಿಸರ ವ್ಯವಸ್ಥೆಗಳ ಚೇತರಿಕೆಗೆ ಸಹಾಯ ಮಾಡುವುದು. ಹಾಗೆಯೇ ಇನ್ನೂ ಅಸ್ಥಿತ್ವದಲ್ಲಿರುವ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವುದು. ಈ ಪರಿಸರ ವ್ಯವಸ್ಥೆಯ ಮರುಸ್ಥಾಪನೆಯನ್ನು ಹಲವಾರು ಬಗೆಗಳಲ್ಲಿ ಮಾಡಬಹುದು. ಅವುಗಳಲ್ಲಿ ಗಿಡನೆಡುವುದು ಬಹು ಮುಖ್ಯವಾದದ್ದು. ಹಾಳು ಮಾಡಿರುವ ಪರಿಸರ ವ್ಯವಸ್ಥೆಯನ್ನು ಮೊದಲಿನಂತೆಯೇ ಮಾಡುವುದು ಅಸಾಧ್ಯದ ಮಾತಾದರೂ, ನಶಿಸುತ್ತಿರುವ ವ್ಯವಸ್ಥೆಯನ್ನು ಸ್ವಲ್ಪವಾದರೂ ತಡೆಯಬಹುದು. ಹೇಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವುದು? ಈ ಪ್ರಶ್ನೆಗೆ ಇಲ್ಲಿದೆ ಉತ್ತರ. ಸರ್ಕಾರ ಅಥವಾ ಸರ್ಕಾರೇತರ ಸಂಸ್ಥೆಗಳು ಹಲವಾರು ಕಾರ್ಯಕ್ರಮಗಳನ್ನು ವಿಶ್ವ ಪರಿಸರ ದಿನದಂದು ಹಮ್ಮಿಕೊಳ್ಳುತ್ತವೆ. ಬಿಡುವು ಮಾಡಿಕೊಂಡು ಆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ. ನಿಮ್ಮ ಸುತ್ತಮುತ್ತಲಿನ ಯುವಕರನ್ನು, ಚಿಣ್ಣರನ್ನು ಜೊತೆಗೂಡಿಸಿಕೊಂಡು ಗಿಡನೆಡುವ ಕಾರ್ಯವನ್ನು ಮಾಡಿ ನಂತರ ಅದನ್ನು #GenerationRestoration ಎಂಬ ಕೊಂಡಿಯೊಂದಿಗೆ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ. ನಿಮ್ಮ ಈ ನಡೆಯು ಮತ್ತೊಬ್ಬರನ್ನು ಪ್ರೇರೇಪಿಸಲಿ. ಈ ನಮ್ಮ ಮನೆಯ ಮರುಸ್ಥಾಪನೆಗೆ ಎಲ್ಲರೂ ಕೈ ಜೋಡಿಸೋಣ.

ಈ ರೀತಿಯ ಪರಿಸರದ ಬಗೆಗಿನ ಮಾಹಿತಿಯನ್ನು ಒದಗಿಸಲು ಇರುವ ಕಾನನ ಇ-ಮಾಸಿಕಕ್ಕೆ ಮುಂದಿನ ತಿಂಗಳ ಪ್ರತಿಗೆ ಲೇಖನಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಪರಿಸರಕ್ಕೆ ಸಂಬಂಧಿಸಿದ ಕಥೆ, ಕವನ, ಛಾಯಾಚಿತ್ರ, ಚಿತ್ರಕಲೆ, ಪ್ರವಾಸ ಕಥನಗಳನ್ನು ಕಾನನ ಮಾಸಿಕದ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು.

ಕಾನನ ಪತ್ರಿಕೆಯ ಇ-ಮೇಲ್ ವಿಳಾಸ: [email protected]
ಅಂಚೆ ವಿಳಾಸ:
Study House,
ಕಾಳೇಶ್ವರಿ ಗ್ರಾಮ,
ಆನೇಕಲ್ ತಾಲ್ಲೂಕು,
ಬೆಂಗಳೂರು ನಗರ ಜಿಲ್ಲೆ,
ಪಿನ್ ಕೋಡ್ :560083. ಗೆ ಕಳಿಸಿಕೊಡಬಹುದು.

Print Friendly, PDF & Email
Spread the love
error: Content is protected.