ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

©  ನಾಗೇಶ್ ಕೆ. ಜಿ , ಚಂದ್ರ ಮುಕುಟ

ಮರಕುಟುಕ ಮತ್ತು ನೆಲಕುಟುಕ ಇವುಗಳ ಮಧ್ಯೆ ಬಹಳ ಜನ ಗೊಂದಲಕ್ಕೆ ಒಳಗಾಗುತ್ತಾರೆ. ಮರಕುಟುಕಗಳು ಸಾಮಾನ್ಯವಾಗಿ ಮರದ ತೊಗಟೆಯನ್ನು ಕುಟುಕುತ್ತ ಆಹಾರ ಹುಡುಕುತ್ತವೆ. ಆದರೆ ಈ ಚಂದ್ರ ಮುಕುಟಗಳು ಸಾಮಾನ್ಯವಾಗಿ ನೆಲವನ್ನು ಕೆದಕುತ್ತಾ ಅದರ ಮೇಲೆ ಸಿಗುವ ಕ್ರಿಮಿ-ಕೀಟಗಳನ್ನು ಹುಡುಕಿ ತಿನ್ನುತ್ತವೆ. ಇವುಗಳಿಗೆ ನೆಲದ ಮೇಲೆ ಸಿಗುವ ಕ್ರಿಮಿಕೀಟಗಳೇ ಆಹಾರ. ಅಲ್ಲದೆ ಕೀಟಗಳೊಂದಿಗೆ ಗೂಡುಗಳೊಳಗಿರುವ ಅವುಗಳ ಮರಿಹುಳುಗಳು ಇವಕ್ಕೆ ಅತಿಪ್ರಿಯ. ಅದಕ್ಕಾಗಿ ಇದನ್ನು ರೈತ ಮಿತ್ರ ಎನ್ನಬಹುದು. ಆಹಾರ ನೆಲದ ಮೇಲೆ ಹುಡುಕುತ್ತಾ ಅತ್ತಿತ್ತ ತಿರುಗುವಾಗ ತನ್ನ ಚೆಂದದ ಕಿರೀಟವನ್ನು ತೆಗೆದು ಮುಚ್ಚುತ್ತಿರುತ್ತದೆ. ಇದರ ಹಾರಾಟವು ಕೊಂಚ ಭಿನ್ನ, ಸಮುದ್ರದ ಅಲೆಗಳಂತಿರುತ್ತದೆ.

©  ನಾಗೇಶ್ ಕೆ. ಜಿ, ಕಾಜಾಣ

ಸಾಮಾನ್ಯವಾಗಿ ಕಾಡಿಗೆ ಬೆಂಕಿ ಬಿದ್ದಾಗ ನಾವೇ ಹತ್ತಿರ ಹೋಗೋದು ಕಷ್ಟ ಆದರೆ ಈ ಕಾಜಾಣ, ನೀಲಕಂಠ ಹಾಗೂ ಬಿಳಿಗಣ್ಣಿನ ಗಿಡುಗಗಳು ಹಾಜರಾಗಿ ಬೆಂಕಿಗೆ ಮೇಲೆ ಏಳುವ ಹುಳು-ಹುಪ್ಪಟೆ, ಚಿಟ್ಟೆ ಮುಂತಾದವುಗಳನ್ನು ಹಿಡಿದು ತಿನ್ನುತ್ತವೆ. ಈ ಕಾಜಾಣಗಳು ರೈತ ಮಿತ್ರರೂ ಹೌದು. ರೈತರ ಹೊಲಗಳಲ್ಲಿ ಕಾಣುವ ಮಿಡತೆ, ಮರಕೊರಕ, ಪತಂಗಗಳನ್ನು ಹಿಡಿದು ತಿಂದು ರೈತರಿಗೆ ಉಪಕಾರಿ ಪಕ್ಷಿ ಆಗಿದೆ. ಇದನ್ನೆಲ್ಲ ಬದಿಗಿಟ್ಟು ನೋಡಿದರೆ ಈ ಕಾಜಾಣಗಳು ಧೈರ್ಯವಂತ ಪಕ್ಷಿಗಳು. ತನಗಿಂತ ದೊಡ್ಡ ಪಕ್ಷಿಗಳನ್ನೇ ಹೆದರಿಸಿ‌ ಓಡಿಸುತ್ತವೆ. ಇವುಗಳು ಗೂಡು ಕಟ್ಟಿ ವಾಸಮಾಡುವ ಜಾಗದಲ್ಲಿ ಸುಮಾರು‌ ಪಕ್ಷಿಗಳು‌ ಕೂಡ ಗೂಡು ಕಟ್ಟುತ್ತವೆ. ಕಾರಣ ಇಷ್ಟೇ, ಅದರ ಗೂಡಿನ ಹತ್ತಿರ ಯಾವುದೇ ಭಕ್ಷಕ ಪ್ರಾಣಿಗಳನ್ನು ಹತ್ತಿರ ಸುಳಿಯಲು ಬಿಡುವುದಿಲ್ಲ. ಆದ್ದರಿಂದ ಉಳಿದ ಪಕ್ಷಿಗಳು ಕಾಜಾಣ ಇರುವ ಜಾಗದಲ್ಲಿ ಧೈರ್ಯದಿಂದ ಗೂಡು ಕಟ್ಟಿ ಮರಿ ಮಾಡುತ್ತವೆ.

©  ನಾಗೇಶ್ ಕೆ. ಜಿ,  ಕಂದು ಬಾಲದ ನೊಣಹಿಡುಕ

ಹಿಮಾಲಯದಲ್ಲಿ ವಾಸಿಸುವ ಈ ಪಕ್ಷಿಗಳು ನೋಡಲು ಬಲು ಸೊಗಸು. ಬಾಲದ ಕೆಳಗೆ ಕಂದು ಬಣ್ಣದಿಂದ ಕೂಡಿರುತ್ತದೆ. ಇಂಪಾದ ಹಾಡು ಹಾಡುತ್ತವೆ. ಚಳಿಗಾಲದ ಸಮಯದಲ್ಲಿ ಹಿಮಾಲಯ ಪ್ರದೇಶವೆಲ್ಲಾ ಚಳಿಗೆ ಎಲ್ಲಾ ಮಂಜುಗಡ್ಡೆಯಾಗಿ ಪರಿವರ್ತನೆಗೊಳ್ಳುತ್ತದೆ. ಆಗಿನ‌ ಸಮಯದಲ್ಲಿ ಆಹಾರ ಮತ್ತು ಸಂತಾನೋತ್ಪತ್ತಿ ಮಾಡುವುದು ಕಷ್ಟ ಸಾಧ್ಯ. ಆದ ಕಾರಣ ಈ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಬಿಸಿ ಇರುವ ಬೇರೆ ಬೇರೆ ಪ್ರದೇಶಗಳಿಗೆ ವಲಸೆಯಾಗುತ್ತವೆ. ಸಂತಾನೋತ್ಪತ್ತಿ ಮುಗಿಸಿಕೊಂಡು ಚಳಿಗಾಲ ಕಳೆದ ನಂತರ ವಾಪಾಸ್ ಮತ್ತೆ ಹಿಮಾಲಯಕ್ಕೆ ತೆರಳುತ್ತವೆ.

©  ನಾಗೇಶ್ ಕೆ. ಜಿ, ಬಿಜ್ಜು

ಬಿಜ್ಜು ಪಕ್ಷಿಯನ್ನು ಸಾಮಾನ್ಯವಾಗಿ ನಮ್ಮಲ್ಲಿ ಮೊಲ‌ ಬಿಜ್ಜು ಅಂತಲೂ ಕರೆಯುವ ವಾಡಿಕೆ ಇದೆ. ಇದು ಮೊಲಗಳ‌ ಮೇಲೆ ಎರಗಿ ಬೇಟೆಯಾಡಿ ತಿನ್ನುವುದರಿಂದ ಇದಕ್ಕೆ ಈ ಹೆಸರು ಬಂದಿರಬಹುದು. ಇವುಗಳನ್ನು ನಾವು ಸಾಮಾನ್ಯವಾಗಿ ಎಲ್ಲಾ ಪ್ರದೇಶಗಳಲ್ಲೂ ಕಾಣಬಹುದು. ಗಂಡು ಮತ್ತು ಹೆಣ್ಣು ನೋಡಲು ವಿಭಿನ್ನ ಬಣ್ಣವನ್ನು ಹೊಂದಿರುತ್ತವೆ. ಇವುಗಳು ಸಾಮಾನ್ಯವಾಗಿ ಕಣ್ಣೆದುರೇ ಸರ್ರನೆ ಬೇಟೆಯ ಮೇಲೆ ಎರಗಿ ಕ್ಷಣಾರ್ಧದಲ್ಲಿ ಬೇಟೆಯನ್ನು ಹೊತ್ತೊಯ್ಯುತ್ತವೆ. ಒಂದು ದಿನ ನನ್ನ ಕಾಡಿನ‌ ಪಯಣ ನಡೆಯುತ್ತಾ ಸಾಗಿತ್ತು. ಒಂದು ಸುಂದರ ಉದ್ದದ ಬಾಲದ ಬಿಳಿ ಬಣ್ಣದ ಪಕ್ಷಿ ಸರ್ರನೆ ಹಾರಿ ಹಾರಿ ಕೂರುತ್ತಿತ್ತು. ಅಯ್ಯೋ ರಾಜಹಕ್ಕಿ (Indian paradise Flycatcher) ಅಂತಾ ಬ್ಯಾಗಿನಲ್ಲಿದ್ದ ಕ್ಯಾಮೆರಾವನ್ನು ತೆಗೆದು ಅದರ ಹಿಂದೆ ಬಿದ್ದೆ. ಆದರೆ ಅಲ್ಲಿ ಆಶ್ಚರ್ಯವೇ ಕಾದಿತ್ತು. ಒಂದು ಬಿಜ್ಜು (Sub Adult) ಬೆಳಗಿನ ಚಳಿಗೆ ಸುಮ್ಮನೇ ಕೂತಿತ್ತು. ಆದರೆ ಈ ರಾಜಹಕ್ಕಿ ಮಾತ್ರ ಅದರ ಮೇಲೆ ಎರಗಿ ಕುಕ್ಕುತ್ತಿತ್ತು. ನಾನು ಅಬ್ಬಾ! ಎಂತಾ ಸನ್ನಿವೇಶ ಅಂತಾ ಪಟ ತೆಗೆಯಲು ಯತ್ನಿಸುತ್ತಿದ್ದರೆ ಕ್ಷಣಾರ್ಧದಲ್ಲಿ ಪಕ್ಷಿ ಮಾಯಾ. ನನ್ನ ಕ್ಯಾಮರಾದಿಂದ ಅಷ್ಟು  ವೇಗದಲ್ಲಿ ಪಟ ತೆಗೆಯಲು ಕಷ್ಟ. ಸುಮಾರು ಸಲ ಪ್ರಯತ್ನದಿಂದ ಆ ಬಿಜ್ಜುವನ್ನು ರಾಜಹಕ್ಕಿ ಅಲ್ಲಿಂದ ಓಡಿಸಲು ಯಶಸ್ವಿಯಾಯಿತು. ಸಾಮಾನ್ಯವಾಗಿ ರಾಜಹಕ್ಕಿ ಗೂಡು ಕಟ್ಟಿ ಮರಿ ಮಾಡುವ ಸಮಯದಲ್ಲಿ ಯಾವುದೇ ಬೇಟೆಗಾರ ಹಕ್ಕಿಗಳು ಹತ್ತಿರ ಬಂದರೆ ಅವನ್ನು ಬೆನ್ನತ್ತಿ ಓಡಿಸುತ್ತವೆ‌‌. ಪ್ರಕೃತಿ ಇಂತಹ ವಿಸ್ಮಯಗಳಿಗೆ ಸಾಕ್ಷಿ. ಇಂತಹ ಸನ್ನಿವೇಶಗಳನ್ನು ಕಣ್ಣುತುಂಬಿಕೊಳ್ಳಲು ನಿಸರ್ಗದ ಮಡಿಲಲ್ಲಿ ಇರುವ ನಾವೇ ಪುಣ್ಯವಂತರು.

ಚಿತ್ರಗಳು – ವಿವರಣೆ : ನಾಗೇಶ್ ಕೆ. ಜಿ.
               ರಾಮನಗರ ಜಿಲ್ಲೆ

Spread the love

2 thoughts on “ಪ್ರಕೃತಿ ಬಿಂಬ

Comments are closed.

error: Content is protected.