ಮಾಸ ವಿಶೇಷ – ಕವಳೆ
© ನಾಗೇಶ್ ಓ ಎಸ್, ಕವಳೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಇಂಗ್ಲೀಷ್ ಹೆಸರು : Wild guava
ವೈಜ್ಞಾನಿಕ ಹೆಸರು : Careya arborea
ಕವಳೆ ಸಾಮಾನ್ಯ ಗಾತ್ರದ ಮರ. ಸುಮಾರು ಇಪ್ಪತ್ತು ಮೀಟರ್ ಎತ್ತರಕ್ಕೆ ಬೆಳೆಯಬಲ್ಲ ಈ ಮರ ಭಾರತ, ಇಂಡೋನೇಷಿಯಾ ಮತ್ತು ಶ್ರೀಲಂಕಾ ದೇಶಗಳ ಎಲೆ ಉದುರುವ ಕಾಡುಗಳಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಒರಟಾದ ಬೂದು ಬಣ್ಣದ ತೊಗಟೆಯನ್ನ ಹೊಂದಿದ್ದು, ಸುಮಾರು 10-12 ಮಿಮಿ ದಪ್ಪವಿರುತ್ತದೆ. ತಿಳಿಹಸಿರು ಬಣ್ಣದ ಸಾಮಾನ್ಯ ಎಲೆಗಳನ್ನು ಹೊಂದಿದ್ದು, ಚಳಿಗಾಲದಲ್ಲಿ ಎಲೆಗಳು ಕೆಂಪಾಗುತ್ತವೆ. ಮರದ ಪ್ರತೀ ರೆಂಬೆಯ ತುದಿಯಲ್ಲಿ ಹಸಿರು ಬಿಳಿ ಮಿಶ್ರಿತ ಹೂಗಳು ಬೆಳೆಯುತ್ತವೆ. ಈ ಮರದ ತೊಗಟೆ ಮತ್ತು ಹೂಗಳನ್ನು ಭಾರತೀಯ ಆಯುರ್ವೇದದಲ್ಲಿ ಕೆಮ್ಮು ಮತ್ತು ನೆಗಡಿ ಮೊದಲಾದವುಗಳಿಗೆ ಔಷಧಿಯಾಗಿ ಬಳಸುತ್ತಾರೆ. ಈ ಗೌಜಲ ಹಣ್ಣಿನ ಸವಿಯನ್ನು ಸವಿಯಲು ಜಿಂಕೆ, ಮುಳ್ಳುಹಂದಿ, ಕಾಡುಹಂದಿ, ಆನೆಗಳು ಲಗ್ಗೆ ಇಡುತ್ತವೆ. ಈ ಮರದ ಹಣ್ಣುಗಳು ನಾರಿನಿಂದ ಕೂಡಿದ್ದು ತಿಂದರೆ ಸ್ವಲ್ಪ ನಶೆ ಏರುತ್ತದೆ. ಇವುಗಳನ್ನು ತಿಂದ ಪ್ರಾಣಿಗಳು ಈ ಹಣ್ಣುಗಳನ್ನು ಸಮಾರಾಧನೆ ಮಾಡಿ ನಶೆ ಏರಿ, ಕುಡುಕರನ್ನೂ ನಾಚಿಸುವಂತೆ ತೂರಾಡುತ್ತಾ ಸಾಗುತ್ತವೆ.