ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

© ಮೊಹಮ್ಮದ್ ಮನ್ಸೂರ್, ಚಿತ್ರ ಪಕ್ಷಿ

ಚಿತ್ರ ಪಕ್ಷಿಗಳು ದಕ್ಷಿಣ ಏಷ್ಯಾದ ಭಾರತ ಹಾಗು ಇಂಡೋನೇಷ್ಯಾದವರೆಗು ಕಂಡುಬರುತ್ತದೆ. ಸಣ್ಣ ಚಿತ್ರ ಪಕ್ಷಿಗಳು ಗಾಢ ಕಪ್ಪು ಬಣ್ಣದ ಕೊಕ್ಕಿನೊಂದಿಗೆ ಉದ್ದನೆಯ ಕಪ್ಪು ರೆಕ್ಕೆಯನ್ನು ಹೊಂದಿದೆ. ಗಂಡು ಪಕ್ಷಿಯ ಮೇಲ್ಭಾಗವು ಕಪ್ಪು ಮಿಶ್ರಿತ ಬೂದು ಬಣ್ಣದಿಂದ ಕೂಡಿದ್ದು ಕುತ್ತಿಗೆಯ ಭಾಗವು ಕಿತ್ತಳೆ ಬಣ್ಣ ಹೊಂದಿದೆ ಹಾಗೂ ಹೊಟ್ಟೆಯಿಂದ ಕೆಳ ಭಾಗಕ್ಕೆ ತೆಳು ಹಳದಿ ಬಣ್ಣ ಕಂಡುಬರುತ್ತದೆ. ಹೆಣ್ಣು ಪಕ್ಷಿಗಳು ಸಂಪೂರ್ಣ ಬೂದು ಬಣ್ಣದಿಂದ ಕೂಡಿದ್ದು ಬಾಲದ ಅಂಚು ತೆಳು ಹಳದಿ ಇರುತ್ತದೆ. ಇವುಗಳು ಸಣ್ಣ ಕಾಡುಗಳ ಪೊದೆಗಳಲ್ಲಿ ಒಂದು ಬಟ್ಟಲಿನಂತಹ ಗೂಡನ್ನು ನಿರ್ಮಿಸಿ ಮಚ್ಚೆಇರುವ 2-4 ಮೊಟ್ಟೆಗಳನ್ನಿಟ್ಟು ಹೆಣ್ಣು ಮಾತ್ರ ಕಾವು ಕೊಟ್ಟು ಮರಿಮಾಡುತ್ತದೆ. ಆಹಾರವನ್ನಾಗಿ ಮರಗಳಲ್ಲಿ ಕೀಟಗಳನ್ನು ಹಾಗು ಹಾರಾಡುವ ಕೀಟಗಳನ್ನು ಹಾರುತ್ತಲೆ ಹಿಡಿದು ತಿನ್ನುತ್ತವೆ. ಚಿತ್ರ ಪಕ್ಷಿಗಳ ಕರೆಯು ಸ್ವೀ.. ಸ್ವೀ.. ಸ್ವೀ.. ಸ್ವೀ.. ಎಂಬಂತಿರುತ್ತದೆ.

©ಮೊಹಮ್ಮದ್ ಮನ್ಸೂರ್,ಉದ್ದ-ಬಾಲದ ಶ್ರೈಕ್

ಏಷ್ಯಾದಾದ್ಯಂತ ವ್ಯಾಪಕವಾಗಿ ವಿತರಿಸಲ್ಪಟ್ಟಿರುವ ಉದ್ದನೆಯ ಬಾಲದ ಶ್ರೈಕ್-ಗಳನ್ನು ರೂಫಸ್-ಬ್ಯಾಕ್ಡ್ ಶ್ರೈಕ್ ಎಂದೂ ಸಹ ಕರೆಯಲಾಗುತ್ತದೆ. ಉದ್ದನೆಯ ಬಾಲದ ಶ್ರೈಕ್ ಒಂದು ವಿಶಿಷ್ಟವಾದ ಶ್ರೈಕ್ ಆಗಿದೆ. ಇದು ಒಣ, ತೆರೆದ ಆವಾಸಸ್ಥಾನಗಳಿಗೆ ಅನುಕೂಲಕರವಾಗಿದೆ ಮತ್ತು ಪೊದೆಯ ಮೇಲೆ ಅಥವಾ ತಂತಿಯ ಮೇಲೆ ಪ್ರಮುಖವಾಗಿ ಕಾಣಸಿಗುತ್ತವೆ. ಇದರ ಕಣ್ಣಿನ ಸುತ್ತ ಇರುವ ಕಪ್ಪು ಮಚ್ಚೆಯು ನೋಡಲು ಆಕರ್ಷವಾಗಿದೆ. ಇವುಗಳ ಉಪ ಜಾತಿಗಳಲ್ಲಿ ಕಪ್ಪು ಬಣ್ಣವು  ಕೆಲವು ಪಕ್ಷಿಗಳಿಗೆ ಹಣೆಯಮೇಲಿದ್ದರೆ ಇನ್ನು ಕೆಲವು ಸಂಪೂರ್ಣ ಕಪ್ಪು ತಲೆಯನ್ನು ಹೊಂದಿರುತ್ತವೆ. ಆಹಾರವನ್ನಾಗಿ ಹಲ್ಲಿಗಳು, ದೊಡ್ಡ ಕೀಟಗಳು, ಸಣ್ಣ ಪಕ್ಷಿಗಳು ಮತ್ತು ಇಲಿಗಳಂಥವುಗಳನ್ನು ತಿನ್ನುತ್ತವೆ. ಸಾಮಾನ್ಯವಾಗಿ ಒಂಟಿಯಾಗಿ ಅಥವ ಜೋಡಿಯಾಗಿ ಕಂಡು ಬರುವ ಇವುಗಳು ಗುಂಪಿನಲ್ಲಿರುವುದನ್ನು ಬಯಸುವುದಿಲ್ಲ. ಇದರ ಸಂತಾನೋತ್ಪತ್ತಿ ಕಾಲವು ಸಮಶೀತೋಷ್ಣ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿರುತ್ತದೆ. ಗೂಡು ಆಳವಾದ ಮತ್ತು ಸಡಿಲವಾದ ಬಟ್ಟಲಿನಾಕಾರದಲ್ಲಿದ್ದು, ಇದು ಮುಳ್ಳಿನ ಕೊಂಬೆಗಳು, ಚಿಂದಿ ಮತ್ತು ಕೂದಲಿನಿಂದ ಕೂಡಿದೆ. ಸುಮಾರು ಮೂರರಿಂದ ಆರು ಮೊಟ್ಟೆಗಳನ್ನಿಟ್ಟು, ಎರಡೂ ಲಿಂಗಗಳಿಂದ ಕಾವುಕೊಡುತ್ತದೆ. ಮರಿಗಳು ಸುಮಾರು ಹದಿಮೂರರಿಂದ ಹದಿನಾರು ದಿನಗಳ ನಂತರ ಮೊಟ್ಟೆಯಿಂದ ಹೊರಬರುತ್ತವೆ. ಎಳೆಯ ಮರಿಗಳಿಗೆ ಹೆಚ್ಚಾಗಿ  ಸೆರೆಹಿಡಿದ ಸಣ್ಣ ಪಕ್ಷಿಗಳ ತುಂಡುಗಳನ್ನು ನೀಡಲಾಗುತ್ತದೆ.

©ಮೊಹಮ್ಮದ್ ಮನ್ಸೂರ್,ಸಿರ್ಕಿರ್ ಮಲ್ಕೊಹ   

ಸಿರ್ಕಿರ್ ಮಲ್ಕೊಹವು ಅಥವಾ ಸಿರ್ಕಿರ್ ಕೋಗಿಲೆ ಈ ಪಕ್ಷಿಯು ನಮ್ಮ ಭಾರತದ ಒಣ ಕಾಡುಗಳಲ್ಲಿ ಕಂಡುಬರುತ್ತದೆ. ಕಂದುಬಣ್ಣದ ದೇಹದೊಂದಿಗೆ ಆಕರ್ಷಿತ ಕೆಂಪುಬಣ್ಣದ ಕೊಕ್ಕಿನ ತುದಿಯಲ್ಲಿ ಹಳದಿಬಣ್ಣವನ್ನು ಹೊಂದಿದೆ. ಮಲ್ಕೊಹಗಳು ಕಲ್ಲು ಬಂಡೆಗಳು, ಪೊದೆಗಳ ನಡುವೆ  ಮತ್ತು ನೆಲದ ಮೇಲೆ ಕಾಣಸಿಗುತ್ತವೆ. ಇವುಗಳು ಆಹಾರವನ್ನಾಗಿ ಸಣ್ಣ ಹಲ್ಲಿಗಳು, ಕೀಟಗಳು, ಕೆಲವೊಮ್ಮೆ ಹಣ್ಣುಗಳು ಮತ್ತು ಬೀಜಗಳನ್ನೂ ಸಹ ಸೇವಿಸುತ್ತವೆ. ಹೆಚ್ಚಾಗಿ ಮೌನವಾಗಿರುವ ಇವುಗಳಲ್ಲಿ ಗಂಡು ಮತ್ತು ಹೆಣ್ಣು ಒಂದೇ ಬಗೆಯ ಬಣ್ಣವನ್ನು ಹೊಂದಿರುತ್ತವೆ. ಸಿರ್ಕಿರ್ ಕೋಗಿಲೆಗಳು ಇತರ ಕೋಗಿಲೆಗಳಂತೆ ಪರಾವಲಂಬಿ ಅಲ್ಲ, ತೆಳು ಹಳದಿ ಮಿಶ್ರಿತ ಕಂದು ಬಣ್ಣದ 2-3 ಮೊಟ್ಟೆಗಳನ್ನು ಮಾರ್ಚ್ ನಿಂದ ಆಗಸ್ಟ್ ವರೆಗಿನ ತನ್ನ ಸಂತಾನೋತ್ಪತ್ತಿ ಸಮಯದಲ್ಲಿಟ್ಟು, ಗಂಡು ಮತ್ತು ಹೆಣ್ಣು ಎರಡೂ ಸಹ ಕಾವುಕೊಡುತ್ತವೆ. ಇವುಗಳು ಭಾರತವನ್ನು ಹೊರತುಪಡಿಸಿ ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿಯೂ ಸಹ ಕಂಡುಬರುತ್ತವೆ.

©ಮೊಹಮ್ಮದ್ ಮನ್ಸೂರ್, ಕಿರು ಮಿಂಚುಳ್ಳಿ   

ಗುಬ್ಬಚ್ಚಿ ಗಾತ್ರದ ಕಿರು ಮಿಂಚುಳ್ಳಿಯು ವಿಶಿಷ್ಟವಾದ ಸಣ್ಣ-ಬಾಲ, ದೊಡ್ಡ-ತಲೆಯನ್ನು ಹೊಂದಿದೆ. ಇದರ ಮೇಲ್ಭಾಗವು ನೀಲಿ ಬಣ್ಣದಿಂದಿದ್ದು, ಕೆಳಭಾಗವು ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ ಮತ್ತು ಉದ್ದವಾದ ಕಪ್ಪು ಕೊಕ್ಕನ್ನು ಹೊಂದಿದೆ. ಇದು ಮುಖ್ಯವಾಗಿ ಆಹಾರವನ್ನಾಗಿ ಮೀನನ್ನು ಅವಲಂಬಿಸಿದೆ, ಡೈವಿಂಗ್‌ ನಿಂದ ನೀರಿನ ಅಡಿಯಲ್ಲಿ ಬೇಟೆಯನ್ನು ನೋಡಲು ಸಾಧ್ಯವಾಗುವಂತಹ ವಿಶೇಷ ದೃಶ್ಯದ ರೂಪಾಂತರಗಳನ್ನು ಹೊಂದಿದೆ. ಹೊಳೆಯುವಂತಹ 4-10 ಬಿಳಿ ಮೊಟ್ಟೆಗಳನ್ನು ನದಿಯ ದಂಡೆಯ ಮಣ್ಣಿನ ಗೋಡೆಯಲ್ಲಿ ಸಣ್ಣ ರಂಧ್ರಮಾಡಿ ಇಡುತ್ತವೆ. ಸುಮಾರು ಇಪ್ಪತ್ತು ದಿನಗಳ ಕಾಲದ ಕಾವಿನಿಂದ ಮೊಟ್ಟೆಯಿಂದ ಹೊರಬರುವ ಮರಿಗಳು, ಮುಂದಿನ ಇಪ್ಪತ್ನಾಲ್ಕು ದಿನಗಳ ಕಾಲ ಗೂಡಿನಲ್ಲೆ ಆಶ್ರಯ ಪಡೆದಿರುತ್ತವೆ. ನೀರಿನಿಂದ ಒಂದೆರಡು ಮೀಟರ್ ಎತ್ತರದಲ್ಲೇ ಬೇಟೆಗಾಗಿ ಕಾಯುವ ಇವುಗಳು ಕ್ಷಣ ಮಾತ್ರದಲ್ಲೆ ಮೀನನ್ನು ಅಪಹರಿಸುತ್ತವೆ.

ಚಿತ್ರಗಳು:ಮೊಹಮ್ಮದ್ ಮನ್ಸೂರ್
ವಿವರಣೆ: ಧನರಾಜ್ ಎಂ

Spread the love
error: Content is protected.