ಮಳೆಗಾಲದ ಸೈರನ್ – ಜಿರ್ರೆನ್ನುವ ಜೀರುಂಡೆ

ಪಶ್ಚಿಮಘಟ್ಟ ಪ್ರದೇಶದ ಮಲೆನಾಡಿನ ಜೀವ ವೈವಿಧ್ಯವೇ ಒಂಥರಾ ವಿಭಿನ್ನ. ಇಲ್ಲಿ ಸುಮ್ಮನೆ ಮನೆಯಂಗಳ ಮತ್ತು ತೋಟದಲ್ಲಿ ಸುತ್ತಾಡಿಕೊಂಡು ಬಂದರೆ ಅನೇಕ ವಿಸ್ಮಯಗಳು ಕಾಣಿಸುತ್ತವೆ ಮತ್ತು ವಿಷಯಗಳು ಕಿವಿಗೆ ಬೀಳುತ್ತವೆ. ಮಲೆನಾಡಿನ ಮಳೆಗಾಲವೇ ವಿಭಿನ್ನವಾಗಿದ್ದು, ಜಿಟಿ ಜಿಟಿ ಮಳೆ ಬೀಳುವ ಸಂದರ್ಭದಲ್ಲಿ ಊರಿಗೆ ಹೋದಾಗ ಹೀಗೇ ಆಯಿತು. ಸಂಜೆಯ ವೇಳೆಗೆ ಮನೆಯಂಗಳದಲ್ಲಿ ಅಮ್ಮ ಬೆಳೆಸಿದ್ದ ವಿವಿಧ ರೀತಿಯ ಹೂವಿನ ಗಿಡಗಳನ್ನು ಮತ್ತು ಅದರಲ್ಲಿ ಅರಳಿದ್ದ ಹೂವುಗಳನ್ನು ನೋಡುತ್ತಾ ಮೊಬೈಲ್ ಕ್ಯಾಮರಾದಲ್ಲಿ ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಧೋ ಎಂದು ಸುರಿಯುವ ಜಡಿ ಮಳೆಯಲ್ಲಿ ಮನುಷ್ಯ, ಪಕ್ಷಿ, ಪ್ರಾಣಿಗಳೆಲ್ಲವೂ ಆದಷ್ಟು ಬೇಗನೇ ತಮ್ಮ ತಮ್ಮ ಬೆಚ್ಚನೆಯ ಗೂಡನ್ನು ಸೇರಿಕೊಂಡು ಬಿಡುತ್ತವೆ. ಹುಳು ಹುಪ್ಪಟೆಗಳು, ಸರೀಸೃಪಗಳಿಗೆ, ಪಾಚಿ ಮತ್ತು ಕಳೆ ಗಿಡಗಳಿಗೆ ಮತ್ತು ಕೀಟಗಳಿಗೆ ವರ್ಷದ ಅಜ್ಞಾತವಾಸವನ್ನು ಮುಗಿಸಿ ಹೊರಬಂದು ತಮ್ಮ ಹೊಸ ಬಾಳ ಸಂಗಾತಿಯೊಂದಿಗೆ ಸಂತಾನೋತ್ಪತ್ತಿಯ ಕಾಲ.

ಹೀಗೇ ಗಿಡಗಳನ್ನೆಲ್ಲಾ ನೋಡುತ್ತಾ ತೋಟದ ದಾರಿಯಲ್ಲಿ ಸಾಗುತ್ತಿದ್ದೆ, ಮಂದಾರ ಗಿಡದ ಕಾಂಡದಲ್ಲಿ ಗಂಟು ಬೆಳೆದಂತೆ ಕಾಣಿಸಿತು. ಏನಿರಬಹುದೆಂದು ಹತ್ತಿರ ಹೋಗಿ ನೋಡಿದಾಗ ಈ ಗಿಡದಲ್ಲಿ ಹತ್ತಾರು ಕಡೆಗಳಲ್ಲಿ ಹುಳುಗಳು ಕಂಡು ಬಂದವು. ಮುಟ್ಟಿ ನೋಡಿದರೆ ಇವುಗಳಿಗೆ ಜೀವವಿದ್ದಂತೆ ಕಂಡುಬರಲಿಲ್ಲ. ಎಲ್ಲೋ ಈ ಕೀಟಗಳನ್ನು ದೊಡ್ಡ ಕೀಟ ಅಥವಾ ಜೇಡ ಒಳಭಾಗವನ್ನೆಲ್ಲ ತಿಂದು ಹೊರ ಚರ್ಮವನ್ನು ಉಳಿಸಿರಬಹುದು ಅಥವಾ ಯಾವುದೋ ಕೀಟವು ತನ್ನ ಒಂದು ಹಂತದಿಂದ ರೂಪಾಂತರಗೊಳ್ಳುವಾಗ ಉಳಿದ ಹೊರ ಚರ್ಮ ಇರಬಹುದೇನೋ ಅಂದುಕೊಂಡೆ. ಅಮ್ಮನನ್ನು ಕರೆದು ತೋರಿಸಿ ಕೇಳಿದೆ ಇದೇನಮ್ಮಾ ಗಿಡದ ತುಂಬಾ ಅಲ್ಲಲ್ಲಿ ಕೀಟಗಳ ಹೊರಮೈ ಎಂದು. ಅದಕ್ಕೆ ಅಮ್ಮ ಅದು ನಡೆಯುವ ಕಡ್ಡಿ, ಸ್ಥಳೀಯವಾಗಿ ಹಾರುವ ಎಲೆ, ವೈಜ್ಞಾನಿಕವಾಗಿ ಸಿಕಾಡ ಎನ್ನುತ್ತಾರೆ ಎಂದರು.

ಸಿಕಾಡ ಅಥವಾ ಸ್ಥಳೀಯವಾಗಿ ಕರೆಯಲಾಗುವ ಜೀರುಂಡೆಗಳದು ಅತ್ಯಂತ ಕೌತುಕದ ಜೀವನ ಚಕ್ರ. ಗಿಡ ಮರಗಳಲ್ಲೇ ಬಹುವಾಗಿ ವಾಸಿಸುವ ಇವುಗಳು ಸಸ್ಯಗಳ ಕಾಂಡದಲ್ಲಿ ಕುಳಿತು ಕಾಂಡದ ರಸವನ್ನು ಹೀರುತ್ತವೆ. ಗಂಡು ಕೀಟವು ತನ್ನ ಹಿಂಭಾಗದಲ್ಲಿರುವ ‘ಟಿಂಬಲ್ಸ್’ ಎಂಬ ಅಂಗದಿಂದ ವಿಶಿಷ್ಠವಾದ ಹಾಗೂ ಕಿವಿ ಕೋರೈಸುವ ವಿಚಿತ್ರ ಶಬ್ಧವನ್ನು ಹೊರಡಿಸುತ್ತವೆ. ಇದರ ಈ ಅಂಗವು ತಬಲಾ, ಮೃದಂಗ ಮೊದಲಾದ ಚರ್ಮವಾದ್ಯಗಳಂತೆ ಕೆಲಸ ಮಾಡುತ್ತದೆ. ಇದು ತನ್ನ ‘ಟಿಂಬಲ್ಸ್’ನ್ನು ವೇಗವಾಗಿ ಕಂಪಿಸುವಾಗ ವಿಚಿತ್ರವಾದ ಶಬ್ಧವು ಹೊರಹೊಮ್ಮುತ್ತದೆ. ಈ ಶಬ್ದವು ಕೇಳುವಾಗ ಹಕ್ಕಿಗಳ ಹಾಡಿನಂತೆ ಅನಿಸುತ್ತದೆ. ಸಿಕಾಡಗಳ ಕೂಗಿನ ಮುಖ್ಯ ಉದ್ದೇಶ ಸಂಗಾತಿಯನ್ನು ಆಕರ್ಷಿಸುವುದು. ಹೆಣ್ಣು ಸಿಕಾಡವು ಮರಗಳ ತೊಗಟೆಯ ಸಂದಿಯಲ್ಲಿ ಮೊಟ್ಟೆಗಳನ್ನಿಡುತ್ತದೆ. ಸಂತಾನೋತ್ಪತ್ತಿ ಆದೊಡನೆ ತಾಯಿ ಸಿಕಾಡವು ಸಾಯುತ್ತದೆ.
ಮೊಟ್ಟೆಯು ಒಡೆದು ಹೊರಬರುವ ಮರಿ ಜೀರುಂಡೆಗೆ ರೆಕ್ಕೆಗಳಿರುವುದಿಲ್ಲ. ಅದು ಮರವನ್ನಿಳಿದು ನಿಧಾನವಾಗಿ ಮಣ್ಣಿನಲ್ಲಿರುವ ಮರದ ಬೇರನ್ನು ತಲುಪುತ್ತವೆ. ಅಲ್ಲಿ ಬೇರಿನ ರಸವನ್ನು ಕುಡಿಯುತ್ತಾ ಬೆಳೆಯುತ್ತವೆ. ಸುಮಾರು ಎರಡು-ಮೂರು ವರ್ಷಗಳ ಕಾಲ ಅಲ್ಲೇ ಉಳಿಯುತ್ತವೆ. ಉತ್ತರ ಅಮೇರಿಕಾದ ಕೆಲ ಸಿಕಾಡಗಳು ಹದಿಮೂರರಿಂದ ಹದಿನೇಳು ವರ್ಷಗಳಷ್ಟು ದೀರ್ಘಾವಧಿಯವರೆಗೆ ಮರಿಗಳಾಗಿ ನೆಲದೊಳಗೇ ಇರುತ್ತವೆಂದು ಅಧ್ಯಯನಗಳು ಹೇಳಿವೆ.

ಬೆಳೆದ ಮರಿಗಳು ಮತ್ತೆ ಮಣ್ಣಿನಿಂದ ಹೊರಬಂದು ಮರಗಳನ್ನೇರುತ್ತವೆ. ಯಾವುದಾದರೊಂದು ರೆಂಬೆಯನ್ನೋ ಎಲೆಯನ್ನೋ ಮುಂಗಾಲುಗಳಿಂದ ಗಟ್ಟಿಯಾಗಿ ಹಿಡಿದು ಕುಳಿತುಕೊಳ್ಳುತ್ತವೆ. ಆಗ ಆ ಮರಿಯ ಬೆನ್ನಿನ ಚರ್ಮ ನಿಧಾನವಾಗಿ ಬಿರಿಯುತ್ತದೆ. ಬಿರಿದು ಬಾಯಿಬಿಟ್ಟ ಚರ್ಮದೊಳಗಿಂದ ರೆಕ್ಕೆಯುಳ್ಳ ಜೀರುಂಡೆ ಹೊರಬರುತ್ತದೆ. ಆಗ ಆ ಜೀರುಂಡೆಯ ಹೊರ ಚರ್ಮವು ಹೀಗೆ ಗಿಡಮರಗಳಿಗೆ ಅಂಟಿಕೊಂಡಂತೆ ಉಳಿಯುತ್ತದೆ.

ಪ್ರಪಂಚದಲ್ಲಿ ಸರಿಸುಮಾರು ಎರಡೂವರೆ ಸಾವಿರ ಜಾತಿಯ ಸಿಕಾಡಗಳಿವೆ ಎಂದು ಜೀವಶಾಸ್ತ್ರಜ್ಞರು ಹೇಳುತ್ತಾರೆ. ಇವುಗಳನ್ನು ಭಕ್ಷಿಸುವ ಪ್ರಿಡೇಟರ್ ಕೀಟಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಇವುಗಳು ಇಷ್ಟು ದೀರ್ಘಕಾಲ ಮಣ್ಣಿನಲ್ಲಿ ಅಡಗಿರುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಜೀರುಂಡೆಗಳ ರೊಂಯ್ ರೊಂಯ್ ರೊಂಯ್ ಶಬ್ದವು ಮಲೆನಾಡಿನಲ್ಲಿ ಮಳೆಗಾಲ ಪ್ರಾರಂಭದ ಸೈರನ್ ಎಂದೇ ಪರಿಗಣಿಸಲಾಗುತ್ತದೆ.
ಚಿತ್ರ-ಲೇಖನ: ಸಂತೋಷ್ ರಾವ್ ಪೆರ್ಮುಡ
ದಕ್ಷಿಣ ಕನ್ನಡ ಜಿಲ್ಲೆ

ಉದ್ಯೋಗ: ಖಾಸಗಿ ತರಬೇತಿ ಸಂಸ್ಥೆಯಲ್ಲಿ ಪ್ರಾಂಶುಪಾಲರು ಮತ್ತು ವ್ಯಕ್ತಿತ್ವ ವಿಕಸನ ತರಬೇತುದಾರರು.
ಹವ್ಯಾಸಗಳು: ಚಾರಣ, ಬರವಣಿಗೆ, ಗಾರ್ಡನಿಂಗ್, ಹಾಡು ಮತ್ತು ಚಿತ್ರಕಲೆ, ವೀಡಿಯೋಗ್ರಫಿ ಮತ್ತು ಫೋಟೋಗ್ರಫಿ.
ಬರಹಗಳು: ರಾಜ್ಯಮಟ್ಟದ ದಿನಪತ್ರಿಕೆಗಳು, ವಾರಪತ್ರಿಕೆಗಳು, ಮಾಸಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಸುಮಾರು 350ಕ್ಕೂ ಹೆಚ್ಚು ಬರವಣಿಗೆಗಳು ಪ್ರಕಟಗೊಂಡಿವೆ.
ಪ್ರಕಟಣೆಗಳು: ಪರ್ಯಟನೆ. ದಿಕ್ಸೂಚಿ ಮತ್ತು ಪರಿಭ್ರಮಣ ಪುಸ್ತಕಗಳ ಪ್ರಕಟಣೆ, ಪರಿವರ್ತನಾ ಎಂಬ ಸ್ವಂತ ಜಾಲತಾಣಪುಟದಲ್ಲಿ 350ಕ್ಕೂ ಮಿಕ್ಕಿದ ಸಂಚಿಕೆಗಳ ಪ್ರಕಟಣೆ.