ಹಸಿರು ಹಾದಿಯಲಿ… ಕಾಡಂಚಿನ ಅನುಭವದ ಕಥನ – ಭಾಗ 2

ಹಸಿರು ಹಾದಿಯಲಿ… ಕಾಡಂಚಿನ ಅನುಭವದ ಕಥನ –  ಭಾಗ 2

© ಮಂಜುನಾಥ್ ಅಮಲಗೊಂದಿ

ಗ್ರಾಮ ಅರಣ್ಯ ಸಮಿತಿ, ಕಾರ್ಯವೈಖರಿ
ಬಸವನಕೊಪ್ಪ, ಮುಂಡಗೋಡು ತಾ. ಉತ್ತರ ಕನ್ನಡ ಜಿಲ್ಲೆ.

ಮುಂದುವರೆದ ಭಾಗ…..

ಮಧ್ಯಾಹ್ನದೊಳಗೆ ನಾವು ಮುಂಡಗೋಡು ಸಿಟಿಗೆ ಬಂದೆವು, ವೀರೇಶ್ ಸರ್ ಆಫೀಸ್ ಹತ್ತಿರ ಹೋಗಿ ಬರುತ್ತೇವೆಂದು ಹೊರಟು ಹೋದರು. ನಾವು ಮೂವರು ಬಸವನಕೊಪ್ಪ ಗ್ರಾಮಕ್ಕೆ ಟೆಂಪೋಗೆ ಹೋಗಲೆಂದು ಬಂದೆವು. ಅಲ್ಲಿಂದ ಮತ್ತೆ ಶುರುವಾಯಿತು ಜನರ ಬದುಕನ್ನು ಕುತೂಹಲಕಾರಿಯಾಗಿ ತಿಳಿಯಲು… ಟೆಂಪೋದಲ್ಲಿದ್ದವರೊಂದಿಗೆ ಅಲ್ಲಿನ ಕೃಷಿ ಪರಿಸ್ಥಿತಿ ಬಗ್ಗೆ ಮಾತನಾಡಿಸಿದೆ. ಅದರಲ್ಲಿ ಒಬ್ಬರು ಉತ್ತರಿಸುತ್ತಾ, “ಸುಡುಗಾಡು ಗೊಬ್ಬರ ಬಂದ್ ನಮ್ಮನ್ನು ಹಾಳ್ಮಾಡ್ತು ಸರ್ರ. ಇವಾಗ ಉಪ್ಪು ಗೊಬ್ರ ಹಾಕ್ದೆ ಇದ್ರೆ ಬೆಳೆನೇ ಬರಂಗಿಲ್ಲ ನೋಡ್ರಿ. ಗದ್ದೆಯಾಗ ಭತ್ತ ಬೆಳಿತಾವು, ಆದರೆ ರೇಟ್ ಇಲ್ರಿ, ಮಳ್ಗಾಲ್ದದಲ್ಲಿ ಭತ್ತ ಹಚ್ಚಿದ್ವಿ, ಗೋಜೋಳನೂ ಹಾಕ್ತಿವಿ. ಏನ್ಮಾಡಿರೇನ್ ಸರ್ ಭತ್ತ ರೇಟ್ ನೋಡಿದ್ರೆ ಕಿಂಟಾಲ್ಗೆ ಹದುಮೂರ್ನೂರ ಇಪ್ಪತ್ತೈತಿ… ಮಕ್ಳು ಮಳೆಗಾಲದಲ್ಲಿ ಗದ್ದೆ ಕೆಲ್ಸ ಮಾಡ್ತಾರಾ, ಬ್ಯಾಸ್ಗಿಗಾ ಗಾಡಿ ಚಾಲು ಮಾಡ್ಲಿಕೊಕ್ತರಾ!…. ಎಂದು ನಮ್ಮ ಕುತೂಹಲದ ಪ್ರಶ್ನೆಗಳಿಗೆ ಉತ್ತರವನ್ನಿಡುತ್ತಾ ಟೆಂಪೊ ಚಾಲೂ ಆಗ್ತಿದ್ಹಾಂಗೆ ನಿದ್ರೆಗೆ ಜಾರಿದ ಅಜ್ಜಮ್ಮ… ಪಕ್ಕದಲ್ಲಿದ್ದ ಇನ್ನೋರ್ವ ಅಂಗನವಾಡಿಯ ನಿವೃತ್ತರಾಗಿದ್ದ ಅಜ್ಜಿ ‘ಏ ಮಂಜಾ (ಡ್ರೈವರ್ ಹೆಸರು) ಬೊಮ್ಮಂಗೆ ಪೊನ್ ಮಾಡೋ, ಭತ್ತದ್ ಗೋಣಿ ಚೀಲ ಹಾಕೊಬೇಕು’ ಎನ್ನುತ್ತಾ ಟೆಂಪೊ ಮುಂದೆ ಮುಂದೆ ಸಾಗಿತು. ಅರ್ಧ ತಾಸಿನೊಳಗ ಬಸವನಕೊಪ್ಪವನ್ನು ತಲುಪಿದೆವು.

ನಮ್ಮನ್ನು ಟೆಂಪೊ ಹತ್ತಿಸಿದಾಗ ಅರಣ್ಯ ಇಲಾಖೆಯ ವೀರೇಶ್, ಸರ್ ಡ್ರೈವರ್ಗೆ ಹೇಳಿದ್ದ ಜಾಗಕ್ಕೆ ಬಿಟ್ರು. ಇಳಿದ್ ತಕ್ಷಣ ಪರಮೇಶ್ ಅವ್ರ ಮನೆ ಎಲ್ಲೈತ್ರಿ ಅಂತಾ ಮನೆ ಮುಂದಿನ ಜಗ್ಲಿ ಮೇಲೆ ಕೂತಿದ್ದ ವ್ಯಕ್ತಿಯನ್ನು ಕೇಳಿದೆವು. ಬರ್ರೀ ಸರ್ರಾ ಅವರ ಮನೆ ಆ ಕಡೆ ಐತ್ರಿ, ಬನ್ನಿ ಕೂಡ್ರಿ ಬರೊ ಹೇಳ್ತಿನಿ ಅವಂಗೆ ಎನ್ನುತ್ತ ಮನೆಯ ಮುಂದಿನ ಜಗ್ಲಿಯ ಮೇಲೆ ಚಾಪೆ ಹಾಸಿ, ನೀರ್ ಕುಡಿತಿರೇನು ಎನ್ನುತ್ತಾ ನೀರೂ ತಂದ್ ಕೊಟ್ರು… ನಮ್ಮನ್ನ ವಿಚಾರ ಮಾಡುತ್ತಾ ಯಾವ್ ಕಡೆವ್ರಾ ನೀವು ಎಂದು ಕೇಳುತ್ತಿದ್ದ ಸಮಯಕ್ಕೆ, ಚಪ್ಪರದ ಗಳಕ್ಕೆ ನೇತು ಹಾಕಿದ್ದ ಮೊಬೈಲ್ ರಿಂಗಣಿಸಿತು. ಇಪ್ಪತ್ತು ಸೆಕೆಂಡ್ನೊಳಗೆ ಫೋನ್ನಲ್ಲಿ ಮಾತಾಡಿ, ಮತ್ತೆ ನಮ್ಮೊಡನೆ ಮಾತಾಡಿದ್ರು… ಪಕ್ಕದಲ್ಲಿದ್ದ ಇನ್ನೋರ್ವ ವ್ಯಕ್ತಿ ನಮ್ ಊರು ಸಮೀಪೈತೆ… ನಾನ್ ಪೇಂಟಿಂಗ್ ಮಾಡ್ತಿನಿ ಅನ್ನುತ್ತಾ ಪರಿಚಯಿಸಿಕೊಂಡರು.

ನನ್ ಕಣ್ ಒಂದೆಡೆ ನೋಡದೆ ಪಕ್ಕಕ್ಕೆ ತಿರುಗಿಸಿದೆ. ಅಲ್ಲಿ ಮನೆಯ ಹೊರಗೆ ನೆಲದಲ್ಲಿ ಸಗಣಿ ಸಾರಿಸಿ ಅದರ ಮೇಲೆ ಅಟ್ಟ ಮಾಡಿ ಬಿದಿರಿನಿಂದ ಮಾಡಿದ ದೊಡ್ಡ ಬುಟ್ಟಿಗೆ (ಕಣಜ ಅಂದ್ರು ಅವರು) ಸಗಣಿ ಮೆತ್ತಿ ಅದರೊಳಗೆ ಭತ್ತ ಹಾಕಿದ್ದು ಕಣ್ಣಿಗೆ ಬಿತ್ತು. ಎದ್ದು ಹೋಗಿ ನನ್ ಜಂಗಮವಾಣಿಯಿಂದ ಫೋಟೋ ಕ್ಲಿಕ್ಕಿಸುತ್ತಾ, ಅದರ ಹತ್ತಿರ ಹೋದೆ. ಆ ಕಣಜದ ಮೇಲೆ ಒಂದು ಪೂರ್ಣ ಉಬ್ಬು, ಇನ್ನೊಂದು ಅರ್ಧ ಉಬ್ಬು, ಉಬ್ಬುಗಳ ಪಕ್ಕದಲ್ಲೆ ಐದು ಗೆರೆಗಳು ನನ್ನನ್ನು ಆಕರ್ಷಿಸುತ್ತಿದ್ದವು. ಯಾಕ್ ಅಣ್ಣಾವ್ರೆ ಈ ರೀತಿ ಕಣಜದ ಮೇಲೆ ಮಾಡಿದ್ದೀರಿ? ಎಂದು ನನ್ನ ಮನಸ್ಸಿನ ಪುಟದಿಂದ ಪ್ರಶ್ನೆ ಹೊರಬಿದ್ದಿತು. ಸರ್ರಾ ಅವುಗಳು ಸೂರ್ಯ-ಚಂದ್ರ, ಪಕ್ಕದಲ್ಲಿರೋ ಗೆರೆಗಳು ಐದು ಜನ ಪಾಂಡವರು! ಅಂದಿದ್ದೆ ತಡ ನನ್ನ ಮನಸ್ಸಿನಲ್ಲಿ ಅರೆ ಪಾಂಡವರಿಗೂ ಇದಕ್ಕೂ ಏನು ಸಂಬಂಧವೆಂದು ತಾಳೆ ಹಾಕಲು ಸುರು ಆಯ್ತು… ಇರಲಿ ಎಂದು ಕಣಜದ ರಚನೆಯ ಬಗ್ಗೆ ಕುತೂಹಲದಿಂದ ಕೇಳಿ ತಿಳಿದುಕೊಳ್ಳುತ್ತಾ ಮುಂದುವರೆದೆನು. ಇಂತಹ ತಾಂತ್ರಿಕ ಯುಗದಲ್ಲಿ ಯಾವುದೇ ಲೋಹವನ್ನು ತೆಗೆಯುವುದಕ್ಕೆ ಪ್ರೇರಣೆ ಕೊಡದೆ ಪರಿಸರಸ್ನೇಹಿ ಕಣಜವನ್ನೇ ಬಳಸುತ್ತಿರುವುದು ಉತ್ತಮವಾದ ಮಾರ್ಗವೆನಿಸಿತು.

ಆಡಂಬರದ ಜೀವನಕ್ಕೆ ಆಡಿಯಾಳಾಗದೆ ಇರುವುದರಲ್ಲೇ ಆನಂದವನ್ನು ಅನುಭವಿಸುವ ಜನರು ನಮಗೆ ಆತ್ಮೀಯರಾದದ್ದು ಸಂತಸದ ಸಂಗತಿ. ಇದೆಲ್ಲಾ ಆಗುವುದರ ಹೊತ್ತಿಗೆ ಸೂರ್ಯ ನೆತ್ತಿ ಮ್ಯಾಲಿಂದ ಪಶ್ಚಿಮ ಕಡೆ ವಾಲುತ್ತಿದ್ದದ್ದು ನೋಡಿ ಹೊಟ್ಟೆ ಚುರುಗುಟ್ಟಿತು. ಅಷ್ಟರೊಳಗೆ ಅರಣ್ಯ ಇಲಾಖೆಯ ವಿರೇಶ್ ಸರ್ ಕೂಡಾ ಅಲ್ಲಿಗೆ ಬಂದ್ರು, ಮತ್ತು ಅಲ್ಲಿನ ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷರಾದ, ನಮ್ಮ ಮನಸ್ಸಿನಲ್ಲಿ ಪರಿಸರ ಪ್ರೇಮಿ ಎಂದು ಕರೆಯಲೇಬೇಕಾದ ಪರಮೇಶ್ ಅಣ್ಣಾವ್ರು ಬಂದ್ರು, ವಿರೇಶ್ ಸರ್ ಪರಮೇಶ್ ರವರನ್ನು ಮಾತನಾಡಿಸುತ್ತಾ ಊಟ ಎಲ್ಲಿ ಮಾಡ್ಸಿದಿರಾ ಎಂದು ಕೇಳಿದರು. ಸರ್ ಭೀಮಬಾಯಿ ಮನೆಯಾಗ ಐತ್ರಿ, ಬನ್ನಿ ಅವರ ಮನೆ ಹತ್ರ ಹೋಗೋಣ ಎಂದು ಕರೆದುಕೊಂಡು ಹೋದರು.

ಹೋದ ಕೂಡಲೇ ಎಲ್ಲರಿಗೂ ಆ ಅನ್ನದಾತೆ ಚಿತ್ರಾನ್ನದ ಜೊತೆ ಉಪ್ಪಿನಕಾಯಿಯನ್ನು ಬಡಿಸಿದರು. ನಮಗೂ ಹೊಟ್ಟೆ ತಾಳ ಹಾಕುತ್ತಿತ್ತು. ಬ್ಯಾಟಿಂಗ್ ಶುರು ಮಾಡಿದೆವು. ಪರಸ್ಪರ ಅವರು ಇವರ ಮೇಲೆ, ಇವರು ಅವರ ಮೇಲೆ ಹೇಳುತ್ತಾ ಚಿತ್ರಾನ್ನವನ್ನು ಎರೆಡೆರೆಡು ಬಾರಿ ಹಾಕಿಸಿಕೊಂಡು ತಿನ್ನುತ್ತಿದ್ದೆವು. ಒಳಗಿಂದ ಅನ್ನದಾತೆ ಭೀಮಬಾಯಿ ಪ್ಲಾಸ್ಟಿಕ್ ಲೋಟದ ತುಂಬೆಲ್ಲಾ ಪಾಯಸವನ್ನು ತಂದು ಎಲ್ಲರಿಗೂ ಒಂದೊಂದು ಲೋಟ ಕೊಟ್ಟರು. ವಿರೇಶ್ ಸರ್ ಕೂಡಾ ನಮ್ಮ ಪಕ್ಕದಲ್ಲೇ ನೆಲದ ಮೇಲೆ ಕೂತು ಊಟ ಮಾಡುತ್ತಿದ್ರು. ತಕ್ಷಣ ಆ ತಾಯಿ ವಿರೇಶ್ ಸರ್ ಕಡೆ ನೋಡುತ್ತಾ, ಸರ್ ನೀವ್ ನೆಲದಾಗ ಕೂತಿರಲ್ರಿ… ನೀವು ಆಫೀಸಾರ್ರು, ನೀವು ನಮ್ಮನ್ಯಾಗ ಹೀಂಗಾ ನೆಲದಾಗ ಕುಂದರಬ್ಯಾಡ್ರಿ, ಚಾಪೆ ಹಾಕೊಂಡ್ ಕೂತ್ಕಾಬೇಕು ಎಂದು ನಮಗೆ ಕೂರಲು ಮೊದಲೇ ಕೊಟ್ಟಿದ್ದ ಚಾಪೆಯನ್ನು ನಾವು ಮೂಲೆಯಲ್ಲಿ ಇಟ್ಟಿದ್ದನ್ನು ನೋಡಿ ಹೇಳಿದರು. ನನಗೆ ತಕ್ಷಣ ಪಾಯಸ ತಂದ ಲೋಟದ ಕಡೆ ಕಣ್ಣು ಹಾಯಿತು. ಅವ್ವ ಊಟವನ್ನು ಸ್ಟೀಲ್ ತಟ್ಟೆಯಲ್ಲಿ ಕೊಟ್ಟಿದ್ದಿರಾ, ಪಾಯಸ ಮಾತ್ರ ಪ್ಲಾಸ್ಟಿಕ್ ಲೋಟದಲ್ಲಿ ಕೊಟ್ಟಿದ್ದಿರಾ? ಎಂದೆ. ಸರ್ರಾ ಅದು ಪ್ಯಾಟ್ಯಾಗ ಅವನ್ನು ತಂದಿದ್ವಿ ಎಂದರು. ನಾನು ಮುಂದುವರೆದು ಈ ಪ್ಲಾಸ್ಟಿಕ್ ಲೋಟದಾಗ ಬಿಸಿ ನೀರು, ಬಿಸಿ ಆಹಾರ ಹಾಕಿದರೆ ಅದರಲ್ಲಿ ವಿಷದ ಅಂಶ ಬಿಡಗಡೆಯಾಗಿ ದೇಹದೊಳಗೆ ಕೆಲ ಪ್ರಮಾಣದಲ್ಲಿ ನಮಗೆ ಗೊತ್ತಿಲ್ಲದೆ ಸೇರುತ್ತದೆ ಎಂದು ಹೇಳಿದೆನು. ಮುಂದಿನ ದಿನಗಳಲ್ಲಿ ಸ್ಟೀಲ್ ಲೋಟವನ್ನೆ ಬಳಸುತ್ತೇವೆಂದು ಅವರು ಭರವಸೆ ನೀಡಿದರು.

ಊಟಕ್ಕೂ ಮೊದಲು ವಿರೇಶ್ ಸರ್ ಗೆ ಸ್ವಲ್ಪ ನೆಗಡಿಯಾಗಿದ್ದರಿಂದ ಬಿಸಿ ನೀರನ್ನು ಕಾಯಿಸಿಕೊಂಡು ಕುಡಿಯಲು ಹೇಳಿದೆವು. ಅವರ ಮನೆಯಲ್ಲೇ ಊಟ ಮುಗಿಯುವುದರೊಳಗೆ ನೀರನ್ನು ಕಾಯಿಸಿ ತಂದುಕೊಟ್ಟರು. ಬ್ಯಾಗ್ ಗಳನ್ನು ಅನ್ನದಾತೆಯ ಮನೆಯಲ್ಲೇ ಇಟ್ಟು, ಬಸವನಕೊಪ್ಪದ ಗ್ರಾಮದ ಮಧ್ಯೆ ಇರುವ ಜಗಲಿಯ ಮೇಲೆ ಕುಳಿತೆವು. ಗ್ರಾಮ ಅರಣ್ಯ ಸಮಿತಿಯ ಸದಸ್ಯರೆಲ್ಲಾ ಬಂದು ಜಗಲಿಯ ಮೇಲೆ ಸೇರತೊಡಗಿದರು. ವಿರೇಶ್ ಸರ್ ಸ್ವಾಗತದೊಂದಿಗೆ ಪ್ರಾರಂಭಿಸಿದರು. ಕೃಷಿ, ಅರಣ್ಯ, ನೀರಿನ ಬಗ್ಗೆ ಅನೇಕ ಮಾಹಿತಿಗಳನ್ನು ಪರಸ್ಪರ ಹಂಚಿಕೊಳ್ಳಲಾಯಿತು. ಆಗಾಗ ಅವರು ಹಾಸ್ಯ ಚಟಾಕಿಗಳನ್ನು ಹಾರಿಸುತ್ತಿದ್ದರು. ಈ ಸಮಿತಿಯ ಸದಸ್ಯರೆಲ್ಲಾ ಸಕ್ರಿಯವಾಗಿ ಅರಣ್ಯ ಒತ್ತುವರಿಯನ್ನು ತಡೆಯುವುದು, ಅರಣ್ಯದ ಉತ್ಪನ್ನವನ್ನು ನಿರ್ವಹಿಸುವ ಕಾಯಕವನ್ನು ಸ್ವಯಂಸೇವೆಯಿಂದ ಮಾಡುತ್ತಿದ್ದರು.

ಸಂಜೆ ನಾಲ್ಕೂ ಮೂವತ್ತಕ್ಕೆ ಅಲ್ಲಿಂದ ಹೊರಟು ಅದೇ ಗ್ರಾಮದ ಹತ್ತಿರದಲ್ಲಿ ಔಷಧಿ ಸಸ್ಯಗಳನ್ನು ಹಾಕಲು ಹಸನು ಮಾಡಿದ್ದ ಕಾಡಿನ ಪಕ್ಕದ ಜಾಗಕ್ಕೆ ಭೇಟಿ ನೀಡಿ, ಅಲ್ಲಿನ ಹಳ್ಳದ ಹರಿವನ್ನು ನೋಡಿ ವಾಪಸ್ ಇನ್ನೊಂದು ಗ್ರಾಮವಾದ ಚಿಟಗೇರಿ ಹಳ್ಳಿಯ ಕಡೆ ಪಯಣ ಪ್ರಾರಂಭಿಸಿದೆವು. ಎರಡು ಬೈಕ್ನಲ್ಲಿ ಕಾಡಿನ ಮಧ್ಯೆಯ ಚಿಕ್ಕ ರಸ್ತೆಯಲ್ಲಿ ಸಾಗುತ್ತಿದ್ದೆವು. ಇಲ್ಲಿ ಆನೆಗಳು, ಕರಡಿಗಳು ಒಡಾಡುತ್ತವೆ ಎನ್ನುತ್ತಿದ್ದಂತೆಯೇ ನನಗೆ ಭಯ ಶುರುವಾಯಿತು. ಮಸುಕು ಕತ್ತಲಾಗುವ ವೇಳೆಗೆ ಚಿಟಗೇರಿ ತಲುಪಿದೆವು. ರಸ್ತೆಯಲ್ಲಿ ಹಸುಗಳದೇ ದರ್ಬಾರು, ರಸ್ತೆಯಲ್ಲಿ ನಾವೇ ಆ ಕಡೆ ಈ ಕಡೆ ಸರಿದು ಹೋದೆವು. ಅಲ್ಲೊಂದು ಊರ ಹೊರಗೆ ಶಿವನ ದೇವಸ್ಥಾನದಲ್ಲಿ ಸಭೆ ನಡೆಸುವುದಕ್ಕೆ, ವಿವೇಕಾನಂದರ ಜಯಂತಿಯನ್ನು ಮಾಡಲು ವಿರೇಶ್ ಸರ್ ಮೊದಲೇ ಯೋಜನೆ ಮಾಡಿಕೊಂಡಿದ್ದರು. ದೇವಸ್ಥಾನದ ಹತ್ತಿರ ನೋಡಿದರೆ ಯುವಜನರು, ಮಕ್ಕಳು, ರೈತರು ದೇವಸ್ಥಾನದ ಜಗಲಿಯ ಮೇಲೆ ಶ್ರದ್ಧೆಯಿಂದ ಕೂತಿದ್ದರು. ನಮ್ಮೊಂದಿಗೆ ಎಲ್ಲರೂ ಸೇರಿಕೊಂಡು ಪೂಜೆ ಮಾಡಿದರು.

© ಮಂಜುನಾಥ್ ಅಮಲಗೊಂದಿ

ಮೊದಲು ವಿರೇಶ್ ರವರು ಮಾತನಾಡಲು ಪ್ರಾರಂಭಿಸಿ, ನಾವು ಇಂದು ವಿವೇಕಾನಂದ ಜಯಂತಿಯನ್ನು ಮಾಡುತ್ತಿದ್ದೇವೆ ಮತ್ತು ಗ್ರಾಮ ಅರಣ್ಯ ಸಮಿತಿಯನ್ನು ನಿರ್ಮಿಸಲು ಪೂರ್ವಭಾವಿ ಸಭೆ ಮಾಡುತ್ತಿದ್ದೇವೆಂದು ಹೇಳಿದರು. ಕಾರ್ಯಕ್ರಮವನ್ನು ಒಬ್ಬ ವಿದ್ಯಾರ್ಥಿಯು ನಿರೂಪಣೆ ಮಾಡಲು ಪ್ರಾರಂಭಿಸಿದರು. ದುರದೃಷ್ಟವಶಾತ್ ಆ ಸಮಯದಲ್ಲಿ ಕರೆಂಟ್ ಬರಲೇ ಇಲ್ಲ. ಆ ಕಗ್ಗತ್ತಲಲ್ಲೆ ಎಲ್ಲರೂ ಮೌನವಾಗಿ ಕುಳಿತಿದ್ದರು. ಮೊದಲನೆಯದಾಗಿ ಪ್ರಾರ್ಥನೆಯನ್ನು ಶಾಲೆಗೆ ಹೋಗುವ ಆರು ಹೆಣ್ಮಕ್ಕಳು ಹಾಡಿದ್ದು ಬಹಳ ಆನಂದವನ್ನು ತಂದಿತು. ಯಾವುದೇ ತರಬೇತಿ ಇಲ್ಲದೆ ಒಂದು ಕೂದಲೆಳೆಯಷ್ಟು ತಪ್ಪಿಲ್ಲದೇ ಹೇಳಿದ್ದನ್ನು ನೋಡಿದರೆ ಅವರ ಕಲೆಯ ಮತ್ತು ಮಧುರಕಂಠದ ಶ್ರೀಮಂತಿಕೆಯನ್ನು ಯಾವುದಕ್ಕೆ ತಾನೇ ಸರಿ ಸಮನಾಗಿ ತೂಗಲಾಗುತ್ತದೆ. ಆದರೂ ಆ ಹಾಡಿನ ಗುಂಗಿನಲ್ಲೇ ಕಾರ್ಯಕ್ರಮದಲ್ಲಿ ತೇಲಿದೆನು. ಕೊನೆಗೂ ಮಾತನಾಡಲು ನನ್ನ ಸರದಿ ಬಂತು. ವಿರೇಶ್ ಸರ್ ಎದ್ದುನಿಂತು ಈಗ ಮಂಜುನಾಥ್ ಅಮಲಗೊಂದಿ ಯವರು “ಪರಿಸರ ರಕ್ಷಣೆ ಮತ್ತು ಯುವಜನರು” ಎಂಬ ವಿಷಯದ ಬಗ್ಗೆ ಮಾತನಾಡುತ್ತಾರೆಂದು ಹೇಳಿದರು… ನಾನು ಸಾಧ್ಯವಾದಷ್ಟು ಮಾತನಾಡುವುದಕ್ಕೆ ಎದ್ದು ನಿಂತೆ. ಆಗ ಒಂದು ಹಾಡು ಹೇಳಿ ಮಾತನಾಡುತ್ತೇನೆಂದು ಹೇಳಿ, ಪರಿಸರ ಸಂರಕ್ಷಣೆ ಕುರಿತು ಮಂಜು ಆಲದಮರ ಮತ್ತು ನಾನು ಸೇರಿಕೊಂಡು ಅರಿವಿನ ಗೀತೆಯನ್ನು ಹಾಡಿದೆವು.

ಈಗ ನಮ್ಮ ಪ್ರವಚನದ ಕಥೆ, ನನಗೆ ವ್ಯಥೆ! ಯಾರಿಗೆ ಹೇಳೋಣ. ಸುತ್ತಲೂ ಕತ್ತಲು ಒಂದೇ ಒಂದು ಚಿಕ್ಕ ದೀಪ. ಸುಮಾರು ನಲವತ್ತಕ್ಕೂ ಹೆಚ್ಚು ಜನರಿದ್ದಾರೆ. ಅವರೆಲ್ಲಾ ಕತ್ತಲೆಯಿಂದ ಕಣ್ಣನ್ನು ಪಿಳಿಪಿಳಿ ಬಿಡುತ್ತಿದ್ದನ್ನು ನೋಡಿದರೆ ನಾನು ಹೇಗೆ, ಯಾರನ್ನು ನೋಡಿಕೊಂಡು ಮಾತನಾಡಬೇಕೆಂಬ ಗೊಂದಲ ಶುರುವಾಯಿತು. ಮೂಲೆಯಿಂದ ಒಬ್ಬ ಮಧ್ಯ ವಯಸ್ಸಿನವರು ಮಾತನಾಡುತ್ತಾ, ಊರ್ನಾಗ ಕರೆಂಟ್ ಬಂದೈತೆ, ಇಲ್ಲಿ ಬರಲ್ರಿ ಸರ್, ಬಲ್ಫ್ ಸರಿಯಿಲ್ಲ ಎಂದು ವಿರೇಶ್ ಸರ್ ಗೆ ಹೇಳಿದರು. ನಾನು ಧೈರ್ಯ ಮಾಡಿ, ನೆಲದ ಮೇಲೆ ನಿಮ್ಮ ಹಾಗೆಯೇ ಕುಳಿತು ಮಾತನಾಡಬಹುದೆ ಎಂದು ಕೇಳುತ್ತಾ. ದೀಪದ ಪಕ್ಕಾ ಕೂತು ಮಾತನಾಡುತ್ತಾ, ನನ್ನ ಪರಿಸರ ಸಂರಕ್ಷಣೆಯಲ್ಲಿನ ಅನುಭವವನ್ನು ಹೇಳುತ್ತಾ, ಎಲ್ಲರೂ ಪರಿಸರ ರಕ್ಷಣೆಯಲ್ಲಿ ಪಾಲ್ಗೊಳ್ಳಬೇಕೆಂದು ಹೇಳುತ್ತಾ ಹತ್ತು ನಿಮಿಷಗಳಲ್ಲಿ ಮಾತಿಗೆ ವಿರಾಮ ಹೇಳಿದೆ.

ನಂತರ ಹಿಂದಿನ ವರ್ಷ ಅರಣ್ಯ ಇಲಾಖೆಯವರಿಗೆ ಬೆಂಕಿ ಆರಿಸಲು ಸಹಕರಿಸಿದ ಗ್ರಾಮದ ಇಬ್ಬರು ಯುವಜನರಿಗೆ ಶಾಲು, ಹಾರವನ್ನು ಹಾಕಿ ಸನ್ಮಾನವನ್ನು ಮಾಡಲಾಯಿತು. ಆರು ಮಕ್ಕಳೂ ಸಹ ಬೆಂಕಿ ಸೀಸನ್ ನಲ್ಲಿ ಅರಣ್ಯ ಸಿಬ್ಬಂದಿಗೆ ಸಹಾಯ ಮಾಡಿದ್ದರಿಂದ ಅವರನ್ನು ಅಭಿನಂದಿಸಲಾಯಿತು. ಮುಂದುವರೆದು ಮಂಜು ಆಲದಮರ ಅವರು ಮಕ್ಕಳಿಗೆ ಉತ್ತೇನಜಕಾರಿಯಾದ ಮಾತುಗಳನ್ನು ಹೇಳಿದರು. ಆ ಕತ್ತಲಲ್ಲೂ ವಿನಯ್ ಮೊಬೈಲ್ ನಲ್ಲಿ ಪಟ ಕ್ಲಿಕ್ಕಿಸಲು ಸೃಜನಾತ್ಮಕತೆಯನ್ನು ಹುಡುಕುತ್ತಿದ್ದರು. ನಂತರ ಇಲಾಖೆಯ ಅಧಿಕಾರಿಗಳು ಗ್ರಾಮ ಅರಣ್ಯ ಸಮಿತಿಯನ್ನು ರಚಿಸುವ ಬಗ್ಗೆ ಚರ್ಚಿಸಿ ಮಾಹಿತಿಯನ್ನು ನೀಡಿದರು. ಕಗ್ಗತ್ತಲು ಸುತ್ತಮುತ್ತ ಇನ್ನೂ ಹೆಚ್ಚಿತು. ಅಷ್ಟರಲ್ಲಿ ಕಾರ್ಯಕ್ರಮದ ಅಂತಿಮ ಘಟ್ಟ ತಲುಪಿ ಟೀ ಬಿಸ್ಕತ್ತು ನೀಡಿ ಎಲ್ಲರಿಗೂ ಧನ್ಯವಾದಗಳನ್ನು ಹೇಳಲಾಯಿತು. ನಮಗೆ ಆಶ್ಚರ್ಯಕರವಾದ ಸಂಗತಿ ಎನಿಸಿದ್ದು ಯಾವುದೇ ನಿರೀಕ್ಷೆಗಳಿಲ್ಲದೆ ಅಷ್ಟೊಂದು ಯುವಜನರು ಕೊನೆಯವರೆಗೂ ಕೂತು ಸೂಕ್ಷ್ಮವಾಗಿ ನಮ್ಮ ಮಾತನ್ನು ಕೇಳಿಸಿಕೊಂಡು ಮುಗಿಸಿದ ತಕ್ಷಣ ಚಪ್ಪಾಳೆ ಹೊಡೆದದ್ದು. ಆ ಯುವಜನರ ಶ್ರದ್ಧೆ, ಪರಿಸರದ ಬಗೆಗಿನ ಕಾಳಜಿಗೆ ನಾನೊಂದು ಸಲಾಂ ಅನ್ನು ಹೇಳಿಕೊಂಡೆನು. ಅಲ್ಲೇ ಆ ಯುವಜನರೊಂದಿಗೆ ಒಂದು ರಾತ್ರಿ ಇರುವ ಬಯಕೆ. ಆದರೆ ಬೇರೆ ಕೆಲಸದ ನಿಮಿತ್ತ ಮರಗಡಿದಡ್ಡಿ ಗ್ರಾಮಕ್ಕೆ ಹೋಗಬೇಕಾಗಿದ್ದರಿಂದ ಅಲ್ಲಿಂದ ಬೈಕ್ ಏರಿ ಹೊರಟೆವು.

ಹತ್ತು ಕಿ.ಮೀ ರಸ್ತೆಯನ್ನು ಹಿಂದಾಕಿ ಮರಗಡಿದಡ್ಡಿಯ ಸರಳ ಜೀವನ ಶೈಲಿಯ ಶಿಕ್ಷಕ ಹನುಮಂತಪ್ಪ ಚೊಟಣ್ಣನವರ್ ರವರ ಮನೆಗೆ ತಲುಪಿದೆವು. ಹೋದ ಕೊಡಲೇ ಕಟ್ಟಿಗೆಯ ಗೇಟ್ ತೆಗೆದು ಬಾ ಮಂಜು ಎನ್ನುತ್ತಾ ಆತ್ಮೀಯವಾಗಿ ಮನೆಯೊಳಗೆ ಕರೆದುಕೊಂಡು ಹೋಗಿ, ಎಲ್ಲರನ್ನೂ ಪರಿಚಯಿಸಿಕೊಂಡು ಊಟ ಮಾಡಿ ಮಲಗಲು ಪಕ್ಕದ ಶಾಲೆಗೆ ಹೋಗಲಾಯಿತು. ಶಿಕ್ಷಕರು ಶಾಲೆಗೆ ನಮ್ಮನ್ನು ಕರೆದುಕೊಂಡು ಹೋಗಿ ಬಿಟ್ಟು ಆರಾಮಾಗಿ ನಿದ್ದೆ ಮಾಡಿ ಎಂದು ಹೇಳಿದರು. ನಾನು ಬಾಗಿಲನ್ನು ಹಾಕಿದೆನು. ಆದರೆ ಭಯ ಶುರುವಾಯಿತು. ಬಾಗಿಲ ಬಳಿ ಹಾವುಗಳು ಬಂದರೆ! ಎಂದು ಕೊನೆಗೆ ಶಾಲೆಯಲ್ಲಿ ಗೋಣಿ ಚೀಲವನ್ನು ಹುಡುಕಿ ಆ ಸಂದಿಗೆ ಪ್ಯಾಕ್ ಮಾಡಿದೆನು. ಕೊನೆಗೆ ಬಂದು ಲೈಟ್ ಆಫ್ ಮಾಡಿ ಮಲಗಿದ್ದೆ ನೆನಪು ಬೆಳಿಗ್ಗೆ ಎದ್ದೇಳುವವರೆಗೂ ನಮ್ಮ ನಿದ್ದೆಗೆ ಪಾರವೇ ಇರಲಿಲ್ಲ.

© ಮಂಜುನಾಥ್ ಅಮಲಗೊಂದಿ

ಮಾದರಿ ಶಿಕ್ಷಕ ಹನುಮಂತಪ್ಪ ಚೊಟಣ್ಣನವರ್…

2ನೇ ದಿನ…

ಮರಗಡಿದಡ್ಡಿ ಶಾಲೆಯಲ್ಲಿ ಕುಂಭಕರ್ಣರಂತೆ ನಿದ್ದೆಯಲ್ಲಿ ತೇಲುತ್ತಿದ್ದೆವು. ಬೆಳಿಗ್ಗೆ 6:15 ಕ್ಕೆ ನಮ್ಮನ್ನು ಎಚ್ಚರಿಸಲು ಹನುಮಂತಪ್ಪ ಸರ್ ಪಕ್ಕದಲ್ಲೇ ಇರುವ ಮನೆಯಿಂದ ಕರೆ ಮಾಡಿದರು. ಸರ್ ಫ್ರೆಶ್ ಅಪ್ ಆಗಿ ಬನ್ನಿ ಟೀ ಕುಡಿಯೋಣ, ಬಿಸಿ ನೀರು ರೆಡಿ ಇದೆ ಎಲ್ಲರೂ ಸ್ನಾನ ಮಾಡ್ಕೊಳಿ, ಬೇಗ ಬನ್ನಿ, ಇಂದು ಗಣರಾಜ್ಯೋತ್ಸವ ಇರುವುದರಿಂದ ಮಕ್ಕಳು ಬೇಗ ಬರ್ತಾರೆ, ನಾವು ಅಷ್ಟರೊಳಗೆ ರೆಡಿಯಾಗಿ ಹೋಗೋಣ ಎಂದೇಳುತ್ತಾ ಕರೆಯನ್ನು ಬಂದ್ ಮಾಡಿದ್ರು. ಅವರು ಶಾಲೆಯ ಕಡೆ ಬಂದರಾಯಿತು, ಬಂದು ಗೋಣಿ ಚೀಲ ನೋಡಿದರೆ ನಮ್ಮ ಪುಕ್ಕಲುತನದ ಶೌರ್ಯ ಗೊತ್ತಾಗಬಾರದೆಂದು ನಾನು ಕೂಡಲೇ ಎದ್ದೋಗಿ ರಾತ್ರಿ ಹಾವುಗಳ ಭಯಕ್ಕೆ ಬಾಗಿಲಿನ ಕಿಂಡಿಗೆ ಮಡಚಿ ತುರುಕಿದ್ದ ಗೋಣಿ ಚೀಲವನ್ನು ತೆಗೆದು ಅವುಗಳಿದ್ದ ಜಾಗಕ್ಕೆ ಸೇರಿಸಿದೆ. ನಾನು ಸಂಡಾಸ್ ರೂಂ ಗೆ ಹೋಗಿ ಬಂದು ಮಂಜು ಆಲದಮರ, ವಿನಯ್ ರವರನ್ನು ಸಹ ಎಬ್ಬಿಸಿಕೊಂಡು ಮೇಷ್ಟ್ರು ಮನೆಯ ಕಡೆ ಹೊರಟೆವು. ಹೊರಬಂದು ನೋಡಿದರೆ ರಾತ್ರಿ ನಮಗೆ ಕತ್ತಲಲ್ಲಿ ಕಾಣದಿದ್ದ ಊರು ಪಾರದರ್ಶಕವಾಗಿ ಗೋಚರಿಸಿತು.

ಶಾಲೆಯ ಗೇಟ್ ನೋಡಿದರೆ ಕಟ್ಟಿಗೆಯಿಂದ ಮಾಡಿದ್ದು, ಇದನ್ನು ನೋಡಿ ಸುಸ್ಥಿರತೆಯ ಬಗ್ಗೆ ಮಾತನಾಡುವವರಿಗೆ ಮುಖಕ್ಕೆ ಹೊಡೆದಂತೆ ಪ್ರಾಕ್ಟಿಕಲ್ಲಾಗಿತ್ತು. ಕಟ್ಟಿಗೆಯ ಗೇಟ್ ತೆಗೆದು ಹೊರಬಂದೆವು. ಮೇಷ್ಟ್ರು ಮಗ ದೃತಿಯಂತ್ ಬಂದು ಸರ್ ಅಪ್ಪಾಜಿ ಹೇಳುದ್ರು ಬೇಗ ಬರಬೇಕೆಂದು ಶೀಘ್ರ ಆಹ್ವಾನವನ್ನಿತ್ತರು. ಇವನನ್ನು ನೋಡಿದರೆ ನನಗೆ ತುಂಬಾ ಖುಷಿಯಾಗುತ್ತಿತ್ತು. ಇವನ ನಗು, ನೋಟ ನಮ್ಮ ಮನದಲ್ಲಿ ವಸಂತವನ್ನೆ ಸೃಷ್ಟಿಸುತ್ತಿತ್ತು.

© ಮಂಜುನಾಥ್ ಅಮಲಗೊಂದಿ

ಅವನೊಂದಿಗೆ ಮನೆಯ ಹತ್ತಿರ ಬಂದರೆ ಇವರ ಮನೆಯ ಗೇಟ್, ಕಾಂಪೌಂಡ್ ಕೂಡಾ ಅನೇಕ ಸುಸ್ಥಿರ ಪಾಠವನ್ನು ಹೇಳುತ್ತಿದ್ದವು. ಎಲ್ಲವೂ ಒಣಗಿ ಕಾಡಲ್ಲಿ ಬಿದ್ದಿದ್ದ ಕಟ್ಟಿಗೆಗಳಿಂದ ಮಾಡಲಾಗಿತ್ತು. ಕಾಂಪೌಂಡ್ ಒಳಗೆ ಹೋದರೆ ಕೃಷಿಯ ವಿಶ್ವವಿದ್ಯಾಲಯದ ರೀತಿ ತರಕಾರಿ, ಸಾವಯವ ಗೊಬ್ಬರದ ಗುಂಡಿ, ಮರಗಳು, ಹೂ ಗಿಡಗಳು, ಬಾಳೆ, ಹೀಗೆ ಬೇರೆ ಬೇರೆ ವಿಭಾಗಗಳು ಕಣ್ಣೆದುರಿಗೆ ಬಂದಂತಾಯಿತು. ಅಷ್ಟರಲ್ಲಿ ಮೇಷ್ಟ್ರ ಪತ್ನಿಯಾದ ಮೀನಾರವರು ನಮ್ಮನ್ನು ನೋಡಿ ಬನ್ನಿ ಟೀ ಕುಡಿದು ಸ್ನಾನ ಮಾಡಿ, ಎನ್ನುತ್ತಾ ಅವರು ಶಾಲೆಗೆ ಹೋಗಲು ತಯಾರಾಗುತ್ತಿದ್ದರು. ನಾವು ಆಯ್ತು ಅಕ್ಕಾ ನೀವು ಶಾಲೆಗೆ ಹೋಗಿ ಬನ್ನಿ ನಾವು ನಿಧಾನವಾಗಿ ಹೊರಟು ಶಾಲೆಯ ಹತ್ತಿರ ಹೋಗುತ್ತೇವೆಂದು ಹೇಳಿ, ಮೇಷ್ಟ್ರು ಸ್ನಾನ ಮಾಡುವುದರೊಳಗೆ ಊರೊಳಗೆ ಒಮ್ಮೆ ಸುತ್ತಾಡಿಕೊಂಡು ಬರುತ್ತೇವೆಂದು ಹೊರಟೆವು. ಅಷ್ಟರಲ್ಲಿ ಸ್ನಾನಕ್ಕೆ ರೆಡಿಯಾಗುತ್ತಿದ್ದ ಮೇಷ್ಟ್ರ ಸ್ವರ ಕೇಳಿ ಬಂತು, ಬೇಗ ಹತ್ತು ನಿಮಿಷದಲ್ಲಿ ಬನ್ನಿ ಮಂಜು ಶಾಲೆಯ ಹತ್ತಿರ ಹೋಗಲು ತಡವಾಗುತ್ತದೆ ಎಂದರು. ನಾವು ಆಯ್ತು ಸರ್ ಎಂದು ಹೇಳಿ ಮೂವರು ಹೊರಟು ಊರಿನೊಳಗೆ ತಿರುಗಾಡುತ್ತಿದ್ದೆವು.

ರಾತ್ರಿ ನಮ್ಮನ್ನು ಚಿಟಗೇರಿಯಿಂದ ಬೈಕ್ನಲ್ಲಿ ಕರೆದುಕೊಂಡು ಬಂದ, ಗ್ರಾಮದ ಮೊದಲ ಪದವೀಧರ ಅಂಬು ಅವರ ಮನೆಯ ಹತ್ತಿರವೇ ದೊಡ್ಡಿ ಎಮ್ಮೆ ಹಸುಗಳ ಮಂದೆಯನ್ನು ನೋಡುತ್ತಿದ್ದೆವು. ಅಂಬು ನಮ್ಮನ್ನು ನೋಡಿ ಬನ್ನಿ ಸರ್ ಎಂದು ಕೈ ಮೇಲೆತ್ತಿ ನಮಸ್ಕಾರದಂತೆ ಮಾಡಿದ. ಇರಲಿ ಬನ್ನಿ ಅಂಬು ಎಂದು ಒಣ ಕಟ್ಟಿಗೆಗಳಿಂದ ನಿರ್ಮಿಸಿದ್ದ ದೊಡ್ಡಿ ನೋಡುತ್ತಿದ್ದೆವು. ಅಂಬು ನಾವಿರುವಲ್ಲಿಗೆ ಬಂದರು. ಅಂಬು ಈ ಎಮ್ಮೆಗಳಿಂದ ಎಷ್ಟು ಹಾಲು ಕರೆಯುತ್ತೀರಾ ಎಂದು ನಮ್ಮ ಪಶು ಉದ್ಯಮದ ಚಾಳಿಯಲ್ಲೇ ಕೇಳಿದೆನು. ಮೂರು ಲೀಟರ್ ಆಗಬಹುದು ಸರ್ ಎಂದರು. ನಾನು ಹುಬ್ಬೇರಿಸಿ ಅಷ್ಟೊಂದಾ? ಎಂದು ಕೇಳಿದೆ. ಆದರೆ ಅವರು ಹೇಳಿದ್ದು ಎಲ್ಲಾ ಎಮ್ಮೆಗಳಿಂದ ಸೇರಿ ಎಂದು… ನಾನು ಒಂದೊಂದು ಎಮ್ಮೆಯೇ ಮೂರು ಲೀಟರ್ ಕರೆಯುತ್ತವೆ ಎಂದು ಭಾವಿಸಿದ್ದೆ. ಹಾಗಾದರೆ ಇವುಗಳನ್ನು ಹಾಲಿಗಾಗಿ ಸಾಕುತ್ತಿಲ್ಲವಾ? ಎಂದು ಅಂಬುಗೆ ಮರು ಪ್ರಶ್ನೆ ಕೇಳಿದೆ. ಇಲ್ಲ ಸರ್ ಇವು ಹೆಚ್ಚು ಹಾಲು ಕರೆಯಲ್ಲ, ಕಾಡಿನಲ್ಲಿ ಮಾತ್ರ ಬಿಟ್ಟು ಮೇಯಿಸಿಕೊಂಡು ಬರುತ್ತಾರೆ. ಗೊಬ್ಬರಕ್ಕಾಗಿ ಸಾಕುತ್ತೇವೆಂದರು. ಹಾಗಾದ್ರೆ ಇಲ್ಲಿ ಗೊಬ್ಬರ ಟ್ರಾಕ್ಟರ್ ಲೋಡ್ ಎಷ್ಟಿದೆ? ಎಂದು ತಕ್ಷಣವೇ ಕೇಳಿದೆ. ಎರಡೂವರೆ ಸಾವಿರವಿದೆ ಸರ್ ಎಂದು ಅಂಬು ಪ್ರತಿಯುತ್ತರಿಸಿದರು. ಬರುವಾಗ ಮೇಷ್ಟ್ರು ಹೇಳಿದ ಹೇಳಿದ್ದ ಹತ್ತು ನಿಮಿಷಕ್ಕೂ ಹೆಚ್ಚಾಗಿ ಸಮಯವಾಗಿದ್ದನ್ನು ನೋಡಿ ಅಂಬು ನಾವು ಆಮೇಲೆ ಸಿಗೋಣ, ಶಾಲೆಯ ಹತ್ತಿರ ನಡೆಯುವ ಗಣರಾಜ್ಯೋತ್ಸವಕ್ಕೆ ಬನ್ನಿ ಎಂದು ಹೇಳಿ ಅಲ್ಲಿಂದ ಮೇಷ್ಟ್ರು ಮನೆ ಕಡೆ ಹೆಜ್ಜೆ ಹಾಕಿದೆವು. ಆ ಹಳ್ಳಿಯನ್ನು ನೋಡಿ ತಲೆಯಲ್ಲಿ ಏನೇನೋ ಆಲೋಚನೆಗಳು ಬರುತ್ತಿದ್ದವು.

ಇಂದು ಶಿಕ್ಷಣದ ಪ್ರಮಾಣ ಹೆಚ್ಚಾಗಲು ಶಿಕ್ಷಕರ ಪಾತ್ರವೂ ಸಹ ಬಹುಮುಖ್ಯ. ನಾವುಗಳು ಶಾಲೆಗೆ ಹೋಗುವಾಗ ನಮ್ಮ ಕೆಲ ಶಿಕ್ಷಕರು ಆ ಹಳ್ಳಿಯಲ್ಲೇ ಉಳಿಯುತ್ತಿದ್ದರು. ಕೆಲವರು ಅವರ ಹಳ್ಳಿಯಿಂದಲೇ ಶಾಲೆಗೆ ಬರುತ್ತಿದ್ದರು. ಇತ್ತೀಚಿಗೆ ಈ ರೀತಿಯ ಶಿಕ್ಷಕರನ್ನು ನೋಡಸಿಗುವುದೇ ಅಪರೂಪವಾಗಿದೆ. ಇಲ್ಲೋರ್ವ ಸರ್ಕಾರಿ ಶಾಲೆಯ ಶಿಕ್ಷಕ ಅಂಚಿಗೆ ತಳ್ಳಲ್ಪಟ್ಟ ಸಮುದಾಯದ ಮಕ್ಕಳಿಗೆ ಶಿಕ್ಷಣ ಕಲಿಸಲು, ಆ ಸಮುದಾಯದಲ್ಲಿ ಅರಿವು ಮೂಡಿಸಲು ತಮ್ಮ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯವೆನಿಸಿತು. ಉತ್ತರಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ಕಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ವಲಯದಲ್ಲಿರುವ ಗೌಳಿ ಬುಡಕಟ್ಟು ಸಮುದಾಯವಿರುವ ಮರಗಡಿದಡ್ಡಿ ಕುಗ್ರಾಮದ ಸ.ಕಿ.ಪ್ರಾ.ಪಾಠಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವರೆಂದು ಕೇಳಿದ್ದ ವಿಷಯವನ್ನು ಕಣ್ತುಂಬಿಕೊಂಡು ಸಂತೋಷವಾಯಿತು.

ಮೇಷ್ಟ್ರು ಗ್ರಾಮದಲ್ಲೇ ಅಲ್ಲಿನ ಸಮುದಾಯದವರ ರೀತಿ ಮನೆಗಳನ್ನು ಕಟ್ಟಿಕೊಂಡು ಅವರನ್ನು ಅರ್ಥಮಾಡಿಕೊಳ್ಳುತ್ತಾ, ಜನರನ್ನು ಮನವೊಲಿಸಲು ಹಲವಾರು ತಂತ್ರಗಳನ್ನು ಮಾಡಿಕೊಂಡು ಅಲ್ಲಿನ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕಲಿಸುತ್ತಿದ್ದಾರೆ. ಜೊತೆಗೆ ಇವರ ಇಬ್ಬರು ಮಕ್ಕಳನ್ನೂ ಸಹ ಅವರ ಸರ್ಕಾರಿ ಶಾಲೆಯಲ್ಲಿಯೇ ಎಲ್ಲಾ ಮಕ್ಕಳಂತೆ ಸಮಾನವಾಗಿ ನೋಡಿಕೊಂಡು ಶಿಕ್ಷಣ ನೀಡುತ್ತಿದ್ದಾರೆ. ಇವರು ಮರಗಡಿದಡ್ಡಿಗೆ ಬಂದ ನಂತರ ಮಕ್ಕಳು ಪ್ರೌಢಶಾಲೆಯ ಮೆಟ್ಟಿಲನ್ನು ತುಳಿಯುತ್ತಿದ್ದಾರೆ. ಆ ಮಕ್ಕಳಿಗೆ ನವೋದಯ, ಮುರಾರ್ಜಿಗಳಂತಹ ವಸತಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುವುದಕ್ಕೆ ದಾರಿ ತೋರುತ್ತಿದ್ದಾರೆ. ಇದಕ್ಕಿಂತ ಮುಖ್ಯವಾಗಿ ಇವರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಪರಿಸರ ಪ್ರೀತಿಯನ್ನು, ಆಹಾರದ ಸ್ವಾವಲಂಬನೆಯನ್ನು ಸಹ ಹೇಳಿಕೊಡುತ್ತಿದ್ದಾರೆ.

ಇವರ ಮನೆಯ ಮುಂದೆ ಕೃಷಿಕೇಂದ್ರಿತ ಪ್ರಯೋಗಗಳನ್ನು ಮಾಡುತ್ತಾ, ಮನೆಗೆ ಬೇಕಾದ ತರಕಾರಿಗಳನ್ನು ತಮ್ಮಲ್ಲೇ ಬೆಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಗ್ರಾಮದ ರಸ್ತೆಯ ಇಕ್ಕೆಲಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಮಕ್ಕಳಿಗೆ ಕಲೆ, ಸಾಹಿತ್ಯದಂತಹ ಕೌಶಲ್ಯಗಳನ್ನು ಸಹ ಕಲಿಸುತ್ತಾ ಮಕ್ಕಳ ಸರ್ವಾಂಗೀಣ ಕಲಿಕೆಗೆ ಸಹಕಾರಿಯಾಗುತ್ತಿದ್ದಾರೆ. ಈ ಶಿಕ್ಷಕರಿಗೆ ಈ ಪರಿ ಪ್ರಾಮಾಣಿಕ, ರಚನಾತ್ಮಕ ಕಾರ್ಯ ಮಾಡುವಲ್ಲಿ ಅವರ ಪತ್ನಿಯಾದ ಮೀನಾರವರ ಸಹಕಾರವೂ ಸಹ ಅಷ್ಟೇ ಮುಖ್ಯವಾಗಿದೆ.

ಈ ಹಳ್ಳಿಯಲ್ಲಿ ಗೌಳಿ ಸಮುದಾಯದ ಇಪ್ಪತೈದು ಮನೆಗಳಿವೆ. ಇವರು ಮಹಾರಾಷ್ಟ್ರದ ಸಾಂಗ್ಲಿಯ ಕಡೆಯಿಂದ ಸುಮಾರು ಐವತ್ತು ವರ್ಷಗಳ ಹಿಂದೆ ಬಂದವರೆಂದು ಗ್ರಾಮದ ಹಿರಿಯರೊಬ್ಬರು ಮೇಷ್ಟ್ರಿಗೆ ಹೇಳಿದ್ದರೆಂದು ನೆನಪಿಸಿಕೊಳ್ಳಲಾಯಿತು. ಈ ಸಮುದಾಯದವರಿಗೆ ಹಸು ಮತ್ತು ಎಮ್ಮೆಗಳನ್ನು ಕಾಡಿಗೆ ಹೊಡೆದುಕೊಂಡು ಹೋಗಿ ಮೇಯಿಸಿಕೊಂಡು ಬರುವುದೇ ಕಾಯಕ. ಸಮಯವಿದ್ದವರು ಬೇರೆ ಹಳ್ಳಿಗಳಿಗೆ, ಹತ್ತಿರದ ನಗರಗಳಿಗೆ ಹೋಗಿ ಕೂಲಿ ಮಾಡಿ ಬರುತ್ತಾರೆ. ಇಲ್ಲಿನ ಹಳ್ಳಿಯಲ್ಲಿ ಯಾವ ಮನೆಗೂ ಬೀಗವನ್ನು ಹಾಕುವುದೇ ಇಲ್ಲ. ಇವರು ಕಾಡಿನಲ್ಲಿ ಎಮ್ಮೆಗಳನ್ನು ಮೇಯಿಸಿಕೊಂಡು ಬರಲು ಹೋದಾಗ ಕರಡಿಗಳಿಂದ ಎಮ್ಮೆ-ಹಸುಗಳೇ ಇವರನ್ನು ಕಾಪಾಡುತ್ತವೆ. ಎಮ್ಮೆಗಳ ಮಧ್ಯೆ ಹೋಗಿ ನಿಂತರೆ ಯಾವ ಪ್ರಾಣಿಗಳೂ ತಮ್ಮ ಕಡೆ ಸುಳಿಯುವುದಿಲ್ಲವೆಂದು ಮೇಷ್ಟ್ರು ಹೇಳಿದ್ದು ನೆನಪಾಯಿತು.

ಇಲ್ಲಿ ಪ್ರತಿ ಮನೆಯವರೂ ಎಮ್ಮೆ ಹಸುಗಳನ್ನು ಹೊರಬಿಡುವಾಗ ಕ್ರಮಬದ್ಧವಾಗಿ ಬಿಡಬೇಕು. ಒಂದು ಮನೆಯವರು ಬಿಟ್ಟ ನಂತರ ಅವುಗಳ ಹಿಂದೆ ಆ ಮನೆಯವರು ಹಳ್ಳಿಯಿಂದ ಹೊರ ಹೋಗುವವರೆಗೂ ಹೋಗಿ ಅವುಗಳು ರಸ್ತೆಯಲ್ಲಿ ಇಟ್ಟ ಸಗಣಿಯನ್ನು ಎತ್ತಿಕೊಂಡು ಬರುವುದು. ನಂತರ ಇನ್ನೊಂದು ಮನೆಯವರು ಹಸು ಎಮ್ಮೆಗಳನ್ನು ಬಿಡುವುದು ಕೇಳಿ ಆಶ್ಚರ್ಯವೆನಿಸಿತು.

ಈ ದೊಡ್ಡಿಯಲ್ಲಿ ಒಂದು ಅಂಗಡಿಯೂ ಇಲ್ಲ. ಇಲ್ಲಿನ ಕುಟುಂಬಗಳಲ್ಲಿ ಒಂದೆರಡು ಕುಟುಂಬದವರು ಮಾತ್ರ ಜಮೀನನ್ನು ಹೊಂದಿದ್ದು ಭತ್ತವನ್ನು, ಗೋವಿನ ಜೋಳವನ್ನು ಬೆಳೆಯುತ್ತಿದ್ದಾರೆ. ಒಟ್ಟಾರೆ ನಮಗೆ ಯಾವುದೋ ಹೊರ ಪ್ರಪಂಚಕ್ಕೆ ಹೋಗಿದ್ದೇವೆಯೋ ಎಂಬಂತೆ ಭಾಸವಾಯಿತು. ಗ್ರಾಮದಲ್ಲಿನ ನಿಶ್ಯಬ್ಧತೆಗೆ ಯಾವುದೇ ಬಹುಮಾನ ಕೊಟ್ಟರೂ ಸಾಲದು. ಇಲ್ಲಿನ ಮನೆಗಳು ಪರಿಸರಸ್ನೇಹಿಯಾಗಿದ್ದು, ಮನೆಗೆ ಬೀಗವನ್ನೇ ಹಾಕುವುದಿಲ್ಲ. ಬಾಗಿಲೆದುರಿಗೆ ಒಂದು ಗಟ್ಟಿಯಾದ ಕಟ್ಟಿಗೆಯನ್ನು ಹಾಕಿರುತ್ತಾರೆ. ಕಾರಣ ಹಸು, ಎಮ್ಮೆಗಳು ಮನುಷ್ಯರಿರುವ ಮನೆಯೊಳಗೆ ಬರಬಾರದೆಂದು ಮೇಷ್ಟ್ರು ಹೇಳಿದ್ದನ್ನು ನೆನಪಿಸಿಕೊಂಡು ಆ ಬಾಗಿಲಿನ ಕಟ್ಟಿಗೆಯನ್ನು ನೋಡಿಕೊಂಡು ಮೇಷ್ಟ್ರು ಮನೆ ಕಡೆ ಹೊರಟೆವು. ಅಷ್ಟರಲ್ಲಾಗಲೆ ಮೇಷ್ಟ್ರು ಸ್ನಾನ ಮಾಡಿ ಶಾಲೆಗೆ ಹೊರಟು ಬಿಳಿ ಪಂಚೆಯನ್ನು ಸುತ್ತಿಕೊಳ್ಳುತ್ತಾ “ನೀವೆಲ್ಲರೂ ಸ್ನಾನ ಮಾಡಿ, ಮೀನ, ಪಲಾವ್ ಮಾಡಿದ್ದಾರೆ ತಿಂದು ಶಾಲೆಯ ಹತ್ತಿರ ಬನ್ನಿ, ಮೀನಾ ಅವರು ಕೆಲಸ ಮಾಡುವ ಒಂದು ಚಿಕ್ಕ ಖಾಸಗಿ ಶಾಲೆಯಲ್ಲಿ ಕಾರ್ಯಕ್ರಮಕ್ಕೆ ಹೋಗಿದ್ದಾರೆಂದು ಹೇಳಿ ಶಾಲೆಯ ಕಡೆ ಹೊರಟರು. ನಾವೆಲ್ಲರೂ ಅರ್ಧ ಗಂಟೆಯೊಳಗೆ ಸ್ನಾನ ಮಾಡಿ, ರುಚಿಕರವಾದ ತಿಂಡಿ ತಿಂದು ಶಾಲೆಯ ಹತ್ತಿರ ಹೋದೆವು. ಮೇಷ್ಟ್ರು ನಮ್ಮನ್ನು ಕಂಡು ಶಾಲೆಯ ಇನ್ನೋರ್ವ ಶಿಕ್ಷಕ ವೀರಯ್ಯ ಹೀರೇಮಠ್ ರವರನ್ನು ಪರಿಚಯ ಮಾಡಿಕೊಂಡರು.

ಗಣರಾಜ್ಯೋತ್ಸವಕ್ಕೆ ಶಾಲೆಯ ಮಕ್ಕಳು, ಅಂಗನವಾಡಿಯ ಮಕ್ಕಳು ಸಂಭ್ರಮದಿಂದ ಹಾಜರಿದ್ದರು. ಅಷ್ಟರಲ್ಲಿ ಮೇಷ್ಟ್ರು ಶಾಕಿಂಗ್ ನ್ಯೂಸ್ ತರ ಹೇಳುತ್ತಾ, ನಮ್ಮ ಕಡೆ ನೋಡುತ್ತಾ, ಸರ್ ಇವತ್ತು ನೀವು ನಮ್ಮ ಶಾಲೆಯ ಅತಿಥಿಗಳು ಆದ್ದರಿಂದ ನೀವೇ ಧ್ವಜಾರೋಹಣ ಮಾಡಬೇಕೆಂದು ಕೇಳಿಕೊಂಡರು. ಅದಕ್ಕೆ ನಾವೇನು ಪ್ರತಿಕ್ರಿಯೆ ನೀಡದೆ, ಆಯ್ತು ಸರ್ ಅಂತಾ ಹೇಳಿ ಅವರ ಇಚ್ಚೆಯಂತೆ ಧ್ವಜಾರೋಹಣ ಮಾಡಿದೆನು. ಅಷ್ಟರಲ್ಲಾಗಲೇ ಸೂರ್ಯನ ಬಿಸಿಲು ನಿಧಾನವಾಗಿ, ಝಳಪಿಸುತ್ತಿತ್ತು. ವೀರಯ್ಯ ಸರ್ ಗಣರಾಜ್ಯೋತ್ಸದ ಕುರಿತು ಮಾತನಾಡಿದರು. ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡಿದರು. ಮಕ್ಕಳ ಕೋಲಾಟವೂ ಬಹಳ ಮನರಂಜಕವಾಗಿತ್ತು. ಕೊನೆಗೆ ಮಾತನಾಡುವ ಸರದಿ ನನ್ನದು ಬಂತು.

ಆ ಚಿಕ್ಕ ಮಕ್ಕಳಿಗೆ ಸಂವಿಧಾನದ ಬಗ್ಗೆ ಹೇಗೆ ಅರ್ಥಮಾಡಿಸುವುದು ಎಂಬ ಮುಜುಗರದಲ್ಲೇ ನಾನು ನನ್ನ ಮಾತನ್ನು ಪ್ರಾರಂಭಿಸಿದೆ. ಮೈಕ್ ಬೇಡವೆಂದು ಹೇಳಿ ಮಕ್ಕಳ ಮುಂದೆ ನೆಲದ ಮೇಲೆ ಕೂತು ಮಕ್ಕಳ ಶಿಕ್ಷಣದ ಹಕ್ಕು ಮತ್ತು ಅದರಲ್ಲಿ ಮಕ್ಕಳ ಜವಬ್ದಾರಿಯ ಬಗ್ಗೆ ಮಾತನಾಡಿದೆ. ಶಾಲಾ ಮಕ್ಕಳು ಏಕಾಗ್ರತೆಯಿಂದ ಕೇಳುತ್ತಿದ್ದರು. ನಾನು ಕೊನೆಯ ಮಾತಿನಲ್ಲಿ ನಿಮ್ಮೊಂದಿಗೆ ನಾವು ನಿಮ್ಮನ್ನು ಮತ್ತೊಮ್ಮೆ ಭೇಟಿ ಆಗೋಣ ಎನ್ನುವ ಬದಲು ಬೇಟೆ ಆಡುತ್ತೇವೆಂದು ಹೇಳಿಬಿಟ್ಟೆ. ಮಕ್ಕಳು ಬೇಟೆನಾ ಎಂದು ಉದ್ಗರಿಸಿದರು. ನಾನು ಹಾಗೆ ಅದನ್ನು ಸಮರ್ಥಿಸಕೊಳ್ಳಲು ನೀವು ಶಾಲೆಗೆ ಬರದಿದ್ದರೆ ನಿಮ್ಮ ಮನೆಗೆ ಬಂದು ನಿಮ್ಮನ್ನು ಬೇಟೆಯಾಡಿ ಶಾಲೆಗೆ ಕರೆದುಕೊಂಡು ಬರುತ್ತೇವೆಂದು ಹೇಳಿ ಸಾವರಿಸಿದೆ. ಆ ತಕ್ಷಣಕ್ಕೆ ಕಡ್ಡಾಯ ಶಿಕ್ಷಣ ಹಕ್ಕನ್ನು ಮಕ್ಕಳಿಗೆ ತಿಳಿಸುವುದಕ್ಕೆ ಸೂಕ್ತವಾಯಿತು. ನಂತರ ಶಿಕ್ಷಕರು ಎಲ್ಲಾ ಮಕ್ಕಳಿಗೂ ಚಾಕೊಲೇಟ್, ಮಂಡಕ್ಕಿ ಕೊಟ್ಟು ಮನೆಗೆ ಕಳಿಸಿದರು.

ಅದೇ ಹೊತ್ತಿಗೆ ಶಾಲೆಯ ಹಜಾರದೊಳಗೆ ಮೇಷ್ಟ್ರು ಗೋಡೆಗೆ ಫಿಕ್ಸ್ ಮಾಡಿದ್ದ ಗುಬ್ಬಿ ಗೂಡು ನಮ್ಮನ್ನು ಸೆಳೆಯಿತು. ಅದನ್ನು ನೋಡುತ್ತಾ ಮೇಷ್ಟ್ರು ಹೇಳಿದರು “ಸರ್ ಸ್ವಲ್ಪ ದಿನದಿಂದ ಹೆಣ್ಣು ಗುಬ್ಬಿ ಬಂದಿಲ್ಲ, ಗಂಡು ಗುಬ್ಬಿಯೇ ಬಂದು ಮರಿಗಳಿಗೆ ಗುಟುಕನ್ನು ಕೊಡುತ್ತಿದೆ, ಆ ಹೆಣ್ಣು ಗುಬ್ಬಿಗೆ ಏನಾಗಿದೆಯೂ ಗೊತ್ತಿಲ್ಲ” ಎಂದು ಬೇಸರದಿಂದ ನುಡಿದರು. ಈ ಮಾತು ಕೇಳಿ ಏನಾಗಿರಬಹುದೆಂದು ನಮ್ಮನಮ್ಮ ಆಲೋಚನೆಗಳನ್ನು ಹೇಳುತ್ತಾ ಮೇಷ್ಟ್ರು ಮನೆಯ ಕಡೆ ನಡೆದೆವು. ಅಷ್ಟರಲ್ಲಿ ಮೀನಾ ಅಕ್ಕ ಶಾಲೆಯಿಂದ ಮನೆಗೆ ಬಂದಿದ್ದರು. ಮಧ್ಯಾಹ್ನ ಊಟಕ್ಕೆ ತಯಾರು ಮಾಡುತ್ತಿದ್ದರು. ನಮ್ಮ ಹರಟೆಯ ನಂತರ ರೊಟ್ಟಿ, ಪಲ್ಯ, ಅನ್ನ-ಸಾಂಬಾರು, ಪಾಯಸವನ್ನು ಗಡತ್ತಾಗಿ ತಿಂದು ಮತ್ತೆ ಮೇಷ್ಟ್ರು ಜೊತೆ ಊರು ಸುತ್ತಲು ರೆಡಿಯಾದೆವು.

ಹೀಗೆ ಹೋಗುತ್ತಾ ಕೆಲಕ್ಷಣದಲ್ಲೆ ಸೆಲ್ಕೊ ಸೋಲಾರ್ ಪ್ಯಾನಲ್ ನೋಡಿ ಸರ್ ಇಷ್ಟು ದೊಡ್ಡ ಪ್ಯಾನಲ್ ಹಾಕಿದ್ದಾರೆ ಈ ಮನೆ ಹತ್ತಿರ ಯಾಕೆ ಎಂದು ಕೇಳಿದೆ. ಮೇಷ್ಟ್ರು ಉತ್ತರಿಸುತ್ತಾ ಆ ಪ್ಯಾನಲ್ ಇದ್ದ ಮನೆಯೊಳಗೆ ಕರೆದುಕೊಂಡು ಹೋಗಿ ಸೋಲಾರ್ ಹಿಟ್ಟಿನ ಗಿರಣಿಯನ್ನು ತೋರಿಸಿದರು. ಈ ಮೇಷ್ಟ್ರು ಬಂದ ನಂತರ ಸೆಲ್ಕೋ ಸೋಲಾರ್ ಕಡೆಯಿಂದ ಎಲ್ಲಾ ಮನೆಗಳಿಗೆ ರಿಯಾಯಿತಿ ದರದಲ್ಲಿ ಸೋಲಾರ್ ಹಾಕಿಸಿದ್ದಾರೆ. ಸೆಲ್ಕೋ ಸೋಲಾರ್ ಕಂಪನಿಯಿಂದ ಶಾಲೆಗೆ ಸೋಲಾರ್ ಚಾಲಿತ ಟಿವಿ, ಅಂಗನವಾಡಿಗೆ ಟ್ಯಾಬ್ ಸಹ ನೀಡಿದ್ದಾರೆಂದು ತಿಳಿಸಿದರು. ಅಲ್ಲಿಂದ ಹೊರಟು ಪ್ರಾಯೋಗಿಕ ಗೋಬರ್ ಗ್ಯಾಸ್ ತೋರಿಸಿದರು. ಅಷ್ಟರಲ್ಲಿ ವಿರೇಶ್ ಸರ್ ನಮ್ಮ ಜೊತೆಯಾದರು.

ಬನ್ನಿ ಸರ್ ಊರ ಹೊರಗಿನ ದೇವಸ್ಥಾನದ ಹತ್ತಿರ ಹೋಗೋಣ ಎಂದು ಎಲ್ಲರನ್ನೂ ಕರೆದುಕೊಂಡು ಹೋದರು. ನಾವು ದೇವಸ್ಥಾನ ಎಂದರೆ ಬಹಳ ಕಲ್ಪನೆಯಿಂದ ಅವರೊಂದಿಗೆ ಸಾಗಿದೆವು. ಅಲ್ಲಿ ನೋಡಿದರೆ ಆಶ್ವರ್ಯವಾಯಿತು. ಒಂದು ಚಪ್ಪರದ ಕೆಳಗೆ ಒಂದು ಕಪ್ಪು ಕಲ್ಲನ್ನು ತೋರಿಸಿ, ಇದೇ ಸರ್ ಆ ದೇವಸ್ಥಾನ ಎಂದು ಹೇಳಿದರು. ಇದರ ಹೆಸರು ಕೇಶು ಅಂತಾ. ಅದನ್ನು ಎಲ್ಲರೂ ಕೇಶವ ಅಂತಾ ಭಾವಿಸುತ್ತಾರೆ. ಇದು ಕೇಶವ ಅಲ್ಲ ಕೇಶು. ಇದರ ಹಿಂದೆ ಒಂದು ಸತ್ಯವಿದೆ ಎಂದು ಹೇಳತೊಡಗಿದರು. ಈ ಗ್ರಾಮದ ಹಿರಿಯರೊಬ್ಬರ ಹೆಸರು ಕೇಶು ಅಂತಾ, ಅವರು ಈ ಕಲ್ಲನ್ನು ಕಾಡಿನಿಂದ ತಂದು ಇಟ್ಟಿದ್ದರು. ಅದಕ್ಕೆ ಎಲ್ಲರೂ ಪೂಜೆ ಮಾಡುತ್ತಿದ್ದಾರೆ. ಅದಕ್ಕೆ ಈ ದೇವರಿಗೆ ಕೇಶು ಎಂಬ ಹೆಸರು ಬಂದಿದೆ ಎಂದು ಹೇಳಿದರು. ಸರಳ ಸಂಸ್ಕೃತಿ ನೋಡಿ ನಮಗೆಲ್ಲಾ ಆಶ್ಚರ್ಯವಾಯಿತು. ಈ ದೇವಸ್ಥಾನದ ಹತ್ತಿರ ಎಲ್ಲರೂ ಸೇರಿ ವರ್ಷಕೊಮ್ಮೆ ಹಬ್ಬ ಮಾಡಿ ಸಾಮೂಹಿಕ ಭೋಜನ ಮಾಡುತ್ತಾರೆಂದು ಹೇಳಿದರು. ಈ ಕಥೆಗಳನ್ನು ಮೆಲುಕು ಹಾಕುತ್ತಾ ನಾವೆಲ್ಲ ಮನೆಯ ಕಡೆ ಹೊರಟೆವು.

ಸರಳ ಜೀವನ, ಸುಸ್ಥಿರ ಬದುಕಿನಲ್ಲಿ ಯುವಜನರು ಬಗ್ಗೆ ಚರ್ಚೆಗಿಳಿದು ಸಮಯ ಸಂಜೆಯಾಯಿತು. ಅಷ್ಟರೊಳಗೆ ನಾವು ನಮ್ಮೂರಿಗೆ ಹೊರಡಲು ಸಿದ್ಧರಾದೆವು. ಆತ್ಮೀಯವಾಗಿ ಸತ್ಕರಿಸಿದ ಮೀನಾ ಅಕ್ಕನಿಗೆ, ಅವರ ಇಬ್ಬರು ಮಕ್ಕಳಾದ, ಯಾವಾಗಲೂ ನಗುಮುಖದಿಂದ ಇರುತ್ತಿದ್ದ ದೃತಿಯಂತ್ ಮತ್ತು ದೃತಿಗೆ ಧನ್ಯವಾದಗಳನ್ನು ಹೇಳಿ ಹೊರಡಲಾಯಿತು. ಆಗ ವಿರೇಶ್ ಸರ್ ಮತ್ತು ಮೇಷ್ಟ್ರು ನಮ್ಮನ್ನು ಹಾನಗಲ್ ಕಡೆ ಹೋಗುವ ಬಸ್ ನಿಲ್ದಾಣಕ್ಕೆ ಬೈಕ್ನಲ್ಲಿ ಬಿಟ್ಟರು. ಅಲ್ಲಿಂದ ಹಾವೇರಿಗೆ ಬಂದು ಹಿಂದಿನ ದಿನ ತತ್ಕಾಲ್ ನಲ್ಲಿ ಬುಕ್ ಮಾಡಿದ್ದ ರಾಣಿ ಚೆನ್ನಮ್ಮ ಟ್ರೈನ್ ನಲ್ಲಿ ನಿದ್ರಿಸಿ ಬೆಳಿಗ್ಗೆ 5:30 ಕ್ಕೆ ತುಮಕೂರಿಗೆ ಬಂದಿಳಿಯಲಾಯಿತು.

ಒಟ್ಟಾರೆ ಈ ಪ್ರವಾಸ ನಿಜಕ್ಕೂ ನಮ್ಮ ಬದುಕಿನಲ್ಲಿ ಮರೆಯಲಾಗದ ಕ್ಷಣವಾಗಿತ್ತು. ಇದಕ್ಕೆ ಮನಃಪೂರ್ವಕವಾಗಿ ಸಹಕರಿಸಿದ ಮೇಷ್ಟ್ರು, ವಿರೇಶ್ ಸರ್ ಮತ್ತು ಮಹೇಶಣ್ಣನಿಗೆ ಅನಂತ ಅನಂತ ಧನ್ಯವಾದಗಳು.

ಚಿತ್ರ-ಲೇಖನ: ಮಂಜುನಾಥ್ ಅಮಲಗೊಂದಿ.
ತುಮಕೂರು ಜಿಲ್ಲೆ
.

Print Friendly, PDF & Email
Spread the love
error: Content is protected.