ವಿ.ವಿ. ಅಂಕಣ – ಇಲಿಯ ಮುಖವಾ ನೋಡ…

ವಿ.ವಿ. ಅಂಕಣ – ಇಲಿಯ ಮುಖವಾ ನೋಡ…

“ಎದೆ ತುಂಬಿ ಹಾಡಿದೆನು… ಅಂದು ನಾನು…” ಎಂಬ ಭಾವಗೀತೆ ಯಾರಿಗೆ ತಿಳಿಯದು ಹೇಳಿ, ಕವಿಯ ಆ ಶಬ್ದಗಳ ಅರ್ಥ ಭಾವಿಸಿ ಹಾಡಿಬಿಟ್ಟರಂತೂ, ನಾವೂ ಅದರ ಭಾವದೊಳಗೆ ಮುಳುಗಿ ತೇಲುವುದಂತೂ ನಿಜ. ಮಾನವನ ಭಾವನೆಗಳಿಗೆ ಆದಿ ಮನಸ್ಸೇ ಆದರೂ ಅದು ಅಭಿವ್ಯಕ್ತವಾಗುವ ರೂಪಗಳು ಸಂಗೀತ, ಚಹರೆ, ಕುಣಿತ ಹೀಗೆ ಹಲವಾರು. ಪ್ರಪಂಚದಲೆಲ್ಲಾ ಇಷ್ಟು ಬಗೆಯಲ್ಲಿ ಭಾವನೆಗಳ ಹೊರ ಹಾಕುವ ಏಕೈಕ ಜೀವಿ ಮನುಷ್ಯನೇ ಇರಬೇಕು. ಹೀಗೆನಿಸುವುದಲ್ಲಿ ತಪ್ಪೇನಿಲ್ಲ ಬಿಡಿ. ಹಾಗೆಂದು ಭಾವನೆಗಳು ಕೇವಲ ನಮಗೇ ಮೀಸಲಲ್ಲ ಅಲ್ಲವೇ…! ಅಲ್ಲವೇ ಅಲ್ಲ! ಎಲ್ಲಾ ಜೀವಿಗಳಿಗೂ ತಮ್ಮದೇ ಆದ ಭಾವನೆಗಳಿವೆ. ಅವುಗಳನ್ನು ವಿವಿಧ ರೀತಿಯಲ್ಲಿ ಹೊರ ಹಾಕುತ್ತವೆ. ಯಾವುದೋ ಏಕೆ ನಮ್ಮ ನಿಮ್ಮೆಲ್ಲರ ಚಿರಪರಿಚಿತ ಉಪದ್ರವಿ ಇಲಿಯನ್ನೇ ತೆಗೆದುಕೊಳ್ಳಿ, ಅವುಗಳೂ ಸಹ ತಮ್ಮ ಖುಷಿ, ಭಯ ಮತ್ತು ನೋವಿನಂತಹ ಭಾವನೆಗಳನ್ನು ತಮ್ಮ ಮುಖದಲ್ಲಿ ಎದ್ದು ಕಾಣುವ ಹಾಗೆ ತೋರುತ್ತವೆ, ಗಮನಿಸಿದ್ದೀರೇನು? ಎನ್ನುತ್ತಿದ್ದಾರೆ ಕೆಲವೇ ದಿನಗಳ ಹಿಂದೆ ತಮ್ಮ ಸಂಶೋಧನೆಯನ್ನು ಮುಗಿಸಿದ ವಿಜ್ಞಾನಿಗಳು. 

ಹೌದು. ನಾವು ಬೇಕಾದಲ್ಲಿ ನಮ್ಮ ಭಾವನೆಗಳನ್ನು ಮುಖವಾಡದ ಹಿಂದೆ ಬಚ್ಚಿಡಬಹುದು. ಆದರೆ ಪ್ರಾಣಿಗಳು ಹಾಗಲ್ಲ. ‘ಅಯ್ಯೋ… ಮತ್ತೆ ಕಾಣಬೇಕಲ್ಲಾ… ನಾವೆಂದೂ ನೋಡೇ ಇಲ್ಲ’ ಎನಿಸುವುದು ಸಹಜ. ಹಾಗೆಯೇ ನಾವು ಎಷ್ಟೋ ವಿಷಯಗಳನ್ನು ಕೇವಲ ನೋಡುತ್ತೇವೆ, ಅವುಗಳನ್ನು ಗಮನಿಸುವುದಿಲ್ಲ ಎನ್ನುವುದೂ ಅಷ್ಟೇ ನಿಜ. ಆದರೆ ವಿಜ್ಞಾನಿಗಳದು ಅದೇ ಕೆಲಸ ಅಲ್ಲವೇ, ಸಧ್ಯಕ್ಕೆ ಅವರು ಮಾಡಿದ ಸಂಶೋಧನೆಯನ್ನೇ ತಿಳಿದುಬಿಡೋಣ ಬನ್ನಿ.

ನಿಜ ಹೇಳಬೇಕೆಂದರೆ ಅಷ್ಟು ಚಟುವಟಿಕೆಯಿಂದ ಓಡಾಡುವ ಇಲಿಗಳನ್ನು ಹಿಡಿದು ಗಮನಿಸುವುದಕ್ಕೆ ವಿಜ್ಞಾನಿಗಳಿಗೂ ಸಾಧ್ಯವಿಲ್ಲ. ಹಾಗೊಂದು ವೇಳೆ ಇಲಿ ಹಿಡಿದರೂ ಅದರ ಭಾವನೆಯ ಅಧ್ಯಯನ ಅಷ್ಟು ಸುಲಭವಲ್ಲ ಬಿಡಿ. ಅದಕ್ಕೆಂದೇ ಜರ್ಮನಿಯ ಒಂದು ಸಂಶೋಧನಾ ತಂಡ ಕಂಪ್ಯೂಟರ್ ಪ್ರೋಗ್ರಾಮ್ ಅನ್ನು ತಯಾರಿಸಿದರು. ಜೊತೆಗೆ ಇಲಿಯ ಚಹರೆಯ ಅಧ್ಯಯನಕ್ಕಾಗಿ ಹೈ ಸ್ಪೀಡ್ ಕ್ಯಾಮೆರಾಗಳನ್ನು ಬಳಸಲಾಯಿತು.

ಇಲಿಯಲ್ಲಿ ವಿವಿಧ ಭಾವನೆಗಳನ್ನು ಮೂಡಿಸಲು ಹೀಗೆ ಮಾಡಲಾಯಿತು. ಸಂತಸ ಭಾವನೆಗಾಗಿ ಸಕ್ಕರೆ ನೀರನ್ನು ನೀಡಲಾಯಿತು. ನೋವಿನ ಅನುಭವಕ್ಕಾಗಿ ಅದರ ಬಾಲಕ್ಕೆ ಶಾಕ್ ಕೊಡಲಾಯಿತು. ಲಿಥಿಯಮ್ ಕ್ಲೋರೈಡ್ ನೀಡಿ, ನ್ಕ್ವಿನೈನ್ ನ ಕಹಿ ನೀರಿನಿಂದ ಅಸಹ್ಯ ಭಾವನೆ ಹುಟ್ಟಿಸಿ, ಸಾಲದೆಂಬಂತೆ ಒಂದು ಕೋಣೆಯಲ್ಲಿ ಕೂಡಿಹಾಕಿ ಭಯ ಪಡಿಸಲಾಯಿತು. ಕೇಳುವಾಗ ಸ್ವಲ್ಪ ಮುಜುಗರ ಹಾಗೂ ಕಷ್ಟಭಾವನೆಗಳು ನಮ್ಮಲ್ಲಿ ಮೂಡಿದರೂ ಅಧ್ಯಯನಕ್ಕಾಗಿ ಇವುಗಳು ಅವಶ್ಯಕವೆಂದು ನಾವು ಅರಿಯಬೇಕು. ಇವೆಲ್ಲವನ್ನೂ ಗಮನಿಸುತ್ತಿದ್ದ ನಮ್ಮ ಹೈ ಸ್ಪೀಡ್ ಕ್ಯಾಮೆರಾಗಳ ಡಾಟಾವನ್ನು ಇದಕ್ಕೆಂದೇ ತಯಾರಿಸಿದ ಕಂಪ್ಯೂಟರ್ ಪ್ರೋಗ್ರಾಮ್ ನಲ್ಲಿ ತುರುಕಲಾಯಿತು. ಈ ವಿಶೇಷ ಪ್ರೋಗ್ರಾಮ್ ಕ್ಯಾಮೆರಾ ತೆಗೆದಿದ್ದ ಸಾವಿರಾರು ಫೋಟೋ ಮತ್ತು ವೀಡಿಯೋಗಳನ್ನು ಅಭ್ಯಸಿಸಿ ನಮಗೆ ಬೇಕಾದ ವಿಷಯ ಹೊರ ತೆಗೆಯಿತು. ಅದರಲ್ಲಿ ಗಮನಿಸಿದ ಹಾಗೆ, ಇಲಿಗಳು ಒಂದೊಂದು ಭಾವನೆಗೆ ಮುಖದಲ್ಲಿ ಒಂದೊಂದು ರೀತಿಯ ಬದಲಾವಣೆ ತೋರುತ್ತಿತ್ತು. ಹೀಗೆಂದರೆ ಏನು ಅರ್ಥವಾದೀತು, ಒಂದು ಉದಾಹರಣೆ ನೀಡುತ್ತೇನೆ ನೋಡಿ.

ಈಗ ಇಲಿಯು ಸಂತಸ ಭಾವನೆ ಹೊಂದಿತ್ತು ಎಂದುಕೊಳ್ಳೋಣ. ಆಗ ಅದರ ಮುಖದಲ್ಲಿ ಈ ಬದಲಾವಣೆಗಳನ್ನು ಗಮನಿಸಬಹುದು, ಇಲಿಯ ಕಿವಿಗಳು ಮುಂದಕ್ಕೆ ಬಂದು ದೇಹದ ಕಡೆ ಮಡಚಿಕೊಳ್ಳುತ್ತವೆ. ಜೊತೆಗೆ ಮೂಗು ಕೆಳಗೆ ಅಂದರೆ ಮೂತಿಯ ಕಡೆಗೆ ಬಾಗುತ್ತದೆ. ಹೀಗೆ ಬೇರೆ ಬೇರೆ ಭಾವನೆಗಳನ್ನು ಮುಖಚಹರೆಯ ಬದಲಿಸಿ ತೋರುತ್ತದೆ. ಇದಕ್ಕೆಲ್ಲಾ ಮೂಲ ಕಾರಣ ನಮಗೆ ತಿಳಿದ ಹಾಗೆ ಇಲಿಯ ಮೆದುಳೇ ಅಲ್ಲವೇ. ಮೆದುಳಿನಲ್ಲೂ ಇನ್ಸುಲಾರ್ ಕಾರ್ಟೆಕ್ಸ್ ಎಂಬ ಮೆದುಳಿನ ಭಾಗದಲ್ಲಿ. ಮನುಷ್ಯರಲ್ಲೂ ಇದೇ ಭಾಗದಲ್ಲಿ ಭಾವನೆಗಳ ನಿಯಂತ್ರಣ ಇರುವುದರಿಂದ ನಮ್ಮ ಭಾವನೆಗಳಲ್ಲಾಗುವ ಬದಲಾವಣೆಯನ್ನು ಗಮನಿಸಬಹುದು, ಎಂಬುದು ವಿಜ್ಞಾನಿಗಳ ಮಾತು!

ಈ ಸಂಶೋಧನೆಯ ನಿಖರ ಉದ್ದೇಶ ಮತ್ತು ಉಪಯೋಗ ಸರಿಯಾಗಿ ಹೇಳಲಿಲ್ಲವಾದರೂ, ನನಗಂತೂ ತಲೆಗೆ ಒಂದು ವಿಷಯ ಬಲವಾಗಿ ಬಂದು ಬಡಿಯಿತು. ಅದೇನೆಂದರೆ ನಮ್ಮ ಭಾವನೆಗಳೇ ಎಲ್ಲಾ, ಅವೇ ಮುಖ್ಯ ಎಂದು ತಿಳಿದು ಎಷ್ಟೋ ಎಡವಟ್ಟು ಈಗಾಗಲೇ ಮಾಡಿರುತ್ತೇವೆ. ಮನುಷ್ಯರಲ್ಲೇ ಆಗಲಿ ಪ್ರಾಣಿಗಳಲ್ಲೇ ಆಗಲಿ ಅವುಗಳ ಭಾವನೆಗಳ ಅರಿತು, ಯೋಚಿಸಿ ಕೆಲವು ನಿರ್ಣಯಗಳನ್ನು ತೆಗೆದುಕೊಂಡರೆ ನಮ್ಮ ದೈನಂದಿನ ಬದುಕು ಇನ್ನಷ್ಟು ನೆಮ್ಮದಿಯಿಂದ ಇರಲು ಸಾಧ್ಯವೆಂದು ಇಂಡೈರೆಕ್ಟ್ ಆಗಿ ಹೇಳಿದಂತಿದೆ.

ಲೇಖನ: ಜೈಕುಮಾರ್ ಆರ್.
ಡಬ್ಲೂ. ಸಿ. ಜಿ., ಬೆಂಗಳೂರು

Print Friendly, PDF & Email
Spread the love
error: Content is protected.