ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

ಕಾಟಿ (Gaur)

ಕಾಟಿಗಳು, ಸಂಘ ಜೀವಿಗಳು. ಕಾಟಿಗಳು ಕೂಡಾ ಬಲಶಾಲಿಗಳೆ ಒಂದೊಂದು ಕಾಟಿ ಒಂದು ಟನ್ ಗಿಂತ ಹೆಚ್ಚು ತೂಕ ಇರುವ ಉದಾಹರಣೆಗಳು ಇವೆ. ಹಗಲಿನಲ್ಲಿ ಕಾಡಿನಲ್ಲಿ ಕಾಲಕಳೆವ ಇವುಗಳು ಸಂಜೆ ಸೂರ್ಯ ಸರಿಯುವ ಹೊತ್ತಿಗೆ ಅರಣ್ಯದ ಅಂಚು, ರಸ್ತೆಗಳ ಬದಿ ಅರಣ್ಯ ಅಂಚಿನಲ್ಲಿರುವ ಗದ್ದೆ ಬಯಲುಗಳಲ್ಲಿ ತನ್ನ ಆಹಾರಕ್ಕಾಗಿ ಕಾರ್ಯ ನಿರತವಾಗಿರುತ್ತವೆ. ಇಷ್ಟು ತೂಕ ತೂಗುವ ಕಾಟಿಯನ್ನು ಕಾಡಿನ‌ ರಾಜ ಹುಲಿ ಕೊಂದು ತಿನ್ನುತ್ತದೆ. ಹುಲಿಯು ಗರಿಷ್ಠ ಎಂದರೆ 230 ಕೆ.ಜಿ. ತೂಗಬಹುದು. ಮನಸ್ಸಿನಲ್ಲೆ ಊಹಿಸಬಹುದು ಹುಲಿ ಅದೆಷ್ಟು ಬಲಶಾಲಿ ಅಂತ. ಆದರೆ ಕಾಟಿಯು ಕೆಲವುಸಲ ಕಾಲು ಕೆರೆದು ಗುಟುರು ಹಾಕಿ ನಿಂತರೆ ಹುಲಿರಾಯನಿಗೂ ಬೇಟೆ ಕಷ್ಟವೇ.

ಮರನಾಯಿ (Nilgiri marten)

ಹೆಸರೇ ಹೇಳುವ ಹಾಗೆ ಇದರ ಊಟ, ವಾಸ, ಆಟ ಎಲ್ಲಾ ಮರದ ಮೇಲೆಯೇ. ಅಪರೂಪವಾಗಿ ನೆಲದ ಮೇಲೆ ಓಡಾಡುತ್ತವೆ. ಇವುಗಳು ಅತ್ಯಂತ ರಹಸ್ಯಮಯ ಜೀವಿಗಳು, ಕೇವಲ ದಕ್ಷಿಣ ಭಾರತದ ನೀಲಗಿರಿ ಕಾಡು, ಪಶ್ಚಿಮ ಘಟ್ಟದ ಕೆಲವು ಭಾಗಗಳಲ್ಲಿ ಮಾತ್ರ ಕಾಣಲು ಸಿಗುತ್ತವೆ, ಇವುಗಳ ರಹಸ್ಯ ಜೀವನ ಹಾಗೂ ಅತಿ ವಿರಳವಾಗಿ ಕಾಣುವುದರಿಂದ ಪೂರ್ಣ ಅಧ್ಯಯನ ಸಾಧ್ಯವಾಗಿಲ್ಲ. ಮರನಾಯಿಗಳು ಉತ್ತರ ಭಾರತದ ಹಿಮಾಲಯದ ತಪ್ಪಲಲ್ಲಿ ಇರುವ ಕಾಡಿನ ಹಳದಿ ಕುತ್ತಿಗೆಯ ಮಾರ್ಟಿನ್ ಗಳ ಜಾತಿಗೆ ಸೇರಿರುತ್ತವೆ. ಮರನಾಯಿಗಳು ಸದಾ ಜೋಡಿಯೊಂದಿಗೆ ಅಥವಾ ಗುಂಪಿನೊಂದಿಗೆ ವಾಸ ಮಾಡುತ್ತವೆ. ಬೆಳಕಿನ ಹೊತ್ತಿನಲ್ಲಿ ಶಾಶ್ವತವಲ್ಲದ ತಮ್ಮ ಸೀಮೆಯಲ್ಲಿ ಓಡಾಡುತ್ತಾ ಹಕ್ಕಿ, ಹುಳ-ಹುಪ್ಪಟೆಗಳು, ಮಳೆ ಕಾಡಿನ ಸಿಕಾಡ, ಜೇನು ಇವೆಲ್ಲವೂ ಇವುಗಳ ಆಹಾರ. ಯಾವುದೇ ಪ್ರಾಣಿಗೂ(ಮನುಷ್ಯನಿಗೂ) ಹೆದರದೆ ಇರುವ ಧೈರ್ಯವಂತ ಪ್ರಾಣಿ ಇವು. ಕಾಡಿನ‌ ನಾಶ ಹಾಗೂ ಚರ್ಮದ ಬೇಟೆಯ ಹೊಡೆತಕ್ಕೆ ಸಿಲುಕಿ ಅವನತಿಯ ಅಂಚಿನಲ್ಲಿ ಬದುಕುಳಿದಿವೆ.

ಕಾಡು ಹಂದಿ‌ ಮರಿ (Indian boar)

ಕಾಡುಹಂದಿಯ ಮೈ ಬೂದುಗಪ್ಪಿನ ಒರಟಾದ ಮೋಟು ಕೂದಲಿನಿಂದ ಆವೃತ್ತವಾಗಿರುತ್ತದೆ. ಗಂಡು ಹಂದಿಗೆ ವೈರಿಗಳೊಡನೆ ಕಾದಾಡಲು ಕೆಳದವಡೆಯಲ್ಲಿ ಎರಡು ಕೋರೆ ಹಲ್ಲುಗಳು ಇರುತ್ತವೆ‌. ಹೆಣ್ಣು ಹಂದಿಗೆ ಸಣ್ಣದಾಗಿ ಇರುತ್ತದೆ. ಕಾಡುಹಂದಿಗಳು ದಟ್ಟವಾದ ಪೊದೆಗಳಲ್ಲಿ ಜೀವಿಸುತ್ತವೆ. ಬೇಸಿಗೆಯ ತಾಪದಿಂದ ಕಾಪಾಡಿಕೊಳ್ಳಲು ಕೆಸರಲ್ಲಿ ಹೊರಳಾಡುತ್ತವೆ. ಗಂಡುಹಂದಿಗಳು ಸಾಮಾನ್ಯವಾಗಿ ಒಂಟಿಯಾಗಿರುತ್ತವೆ. ಹೆಣ್ಣುಹಂದಿಗಳು ಗುಂಪಾಗಿರುತ್ತವೆ. ಒಂದು ಗುಂಪಿನಲ್ಲಿ 2-3 ಹೆಣ್ಣುಹಂದಿಗಳು, ಇಪ್ಪತ್ತು-ಮೂವತ್ತು ಮರಿಗಳಿರುತ್ತವೆ. ಒಂದು ಹೆಣ್ಣುಹಂದಿ ನಾಯಕತ್ವವನ್ನು ವಹಿಸಿರುತ್ತದೆ. ಕಾಡುಹಂದಿಗಳು ಬಲಶಾಲಿಯಾಗಿರುವವಲ್ಲದೆ, ಉಗ್ರವಾಗಿಯೂ ಇರುತ್ತವೆ. ಇವು ಬಹಳ ವೇಗವಾಗಿ ಓಡುತ್ತವೆ. ಆತುರ ಹೆಚ್ಚು. ಅಪಾಯದ ಸುಳಿವು ಸಿಕ್ಕ ಕೂಡಲೇ ಅಪಾಯದ ವಿರುದ್ಧ ದಿಕ್ಕಿನಲ್ಲಿ ಓಡುತ್ತವೆ. ಗಡಿಬಿಡಿಯಲ್ಲಿ ಹಲವೊಮ್ಮೆ ಹಿಂದುಮುಂದು ನೋಡದೆ ಯಾವ ಕಡೆಗಾದರೂ ಸರಿಯೇ ಧಾವಿಸುತ್ತವೆ.

ನರಿ (Indian jackal)

ಅರಣ್ಯಗಳು, ಕುರುಚಲು ಪೊದೆಗಳು ಹಾಗೂ ಬಯಲು ಪ್ರದೇಶಗಳಲ್ಲಿಯೂ ಕಾಣಬಹುದು. ಎಂಟರಿಂದ ಹತ್ತು ಕೆ.ಜಿ.ಗಳಷ್ಟು ತೂಕವಿರುವ ಇವುಗಳು ಬಿಳಿ, ಕಪ್ಪು, ಕಂದು ಬಣ್ಣಗಳನ್ನು ಹೊಂದಿರುತ್ತವೆ. ಇವುಗಳು ಬೆಳಗಿನ ಜಾವ ಮತ್ತು ಸಂಜೆಗತ್ತಲಿನ ಸಮಯ ಆಹಾರಕ್ಕಾಗಿ ಹೊರಡುವುದು. ಕೋಳಿ, ಕುರಿಮರಿ, ಮೇಕೆ ಹಾಗೂ ದೊಡ್ಡ ಪ್ರಾಣಿಗಳು(ಹುಲಿ, ಚಿರತೆ) ತಿಂದು ಉಳಿದ ಮಾಂಸ ಇದರ ಆಹಾರ. ಕಲ್ಲಂಗಡಿ ಹಣ್ಣು, ಎಲಚಿ ಹಣ್ಣು, ಕಬ್ಬು, ಕಡಲೆ‌ ಕಾಯಿ ಮುಂತಾದವುಗಳನ್ನು ತಿನ್ನುತ್ತವೆ.





ಛಾಯಾಚಿತ್ರಗಳು ಮತ್ತು ಲೇಖನ
ನಾಗೇಶ್ ಕೆ.ಜಿ

Spread the love

2 thoughts on “ಪ್ರಕೃತಿ ಬಿಂಬ

  1. ಅತ್ಯುತ್ತಮ ಛಾಯಾಚಿತ್ರಗಳೊಂದಿಗೆ ಉತ್ತಮವಾದ ಮಾಹಿತಿಯಿದೆ.

  2. ಅದ್ಭುತವಾದ ಮಾಹಿತಿ ನೀಡಿದ್ದೀರ. ಧನ್ಯವಾದಗಳು!!

Comments are closed.

error: Content is protected.