ಪ್ರಕೃತಿ ಬಿಂಬ
© ಹಯಾತ್ ಮೊಹಮ್ಮದ್, ಕಾಮನ್ ಎಮಿಗ್ರೆಂಟ್
ಇದು ಕಾಮನ್ ಎಮಿಗ್ರೆಂಟ್ (Common Emigrant) ಎಂಬ ಚಿಟ್ಟೆಯೊಂದರ ಮೊಟ್ಟೆಯಾಗಿದೆ ನಿಮಗೆಲ್ಲಾ ತಿಳಿದಿರುವಂತೆ ಚಿಟ್ಟೆಗಳ ಜೀವನ ಚಕ್ರದಲ್ಲಿ ಮೊಟ್ಟೆ, ಕಂಬಳಿಹುಳು , ಪ್ಯೂಪ ಹಾಗೂ ಹಾರಾಡಬಲ್ಲ ಚಿಟ್ಟೆ ಎಂಬ ನಾಲ್ಕು ಘಟ್ಟಗಳಿವೆ. ಈ ಮೊಟ್ಟೆಯು 2 ಮಿ.ಮೀ ಉದ್ದ ಹಾಗೂ 1 ಮಿ.ಮೀ ಅಗಲವಿರುತ್ತದೆ. ಚಿಟ್ಟೆಯು ಮೊಟ್ಟೆ ಇಟ್ಟಾಗ ಬಿಳಿಬಣ್ಣದಿಂದ ಕೂಡಿರುವ ಇದು ಒಂದು ದಿನದ ನಂತರ ಕೆನೆ ಬಿಳಿಪಿನ ಬಣ್ಣಕ್ಕೆ ತಿರುಗುತ್ತದೆ ಹಾಗೂ ಮರಿ ಹೊರಬರುವ ಕಾಲದಲ್ಲಿ ಮೊಟ್ಟೆಯು ಕಡು ಬಿಳಿಗೆ ತಿರುಗುತ್ತದೆ.ಈ ಮೊಟ್ಟೆಯಿಂದ ಮರಿಯು ಹೊರಬರಲು ಆರರಿಂದ ಏಳು ದಿನ ತೆಗೆದುಕೊಳ್ಳುತ್ತದೆ.
©ಹಯಾತ್ ಮೊಹಮ್ಮದ್, ಜಿಯೊಮೆಟ್ರಡೈ ಕಂಬಳಿಹುಳು
ರಾತ್ರಿಯ ವೇಳೆ ಬಲು ಸುಂದರವಾಗಿ ಕಾಣಸಿಗುವ ಜಿಯೊಮೆಟ್ರಡೈ (Geometridae) ಗುಂಪಿಗೆ ಸೇರುವ ಒಂದು ಪತಂಗದ ಕಂಬಳಿಹುಳು ಇದು. ಉದ್ದನೆಯ ದೇಹವನ್ನು ಹೊಂದಿರುವ ಈ ಜಾತಿಯ ಕಂಬಳಿಹುಳುಗಳು ಬಣ್ಣ ಬಣ್ಣಗಳಿಂದ ಕೂಡಿರುತ್ತವೆ. ತಿನ್ನುವ ಯಂತ್ರಗಳಂತೆ ತಿಂದು ಕೋಶಾವಸ್ಥೆಗೆ ತಲುಪುವ ಇವುಗಳು ಸುಂದರವಾದ ಪತಂಗವಾಗಿ ಹೊರಬರುತ್ತದೆ.
©ಹಯಾತ್ ಮೊಹಮ್ಮದ್,ಲೇಡಿಬರ್ಡ್ ಪ್ಯುಪ
ಲೇಡಿ ಬರ್ಡ್ ಬೀಟಲ್ ಗಳ ಜೀವನ ಚಕ್ರವು ಚಿಟ್ಟೆಗಳ ಜೀವನಚಕ್ರದಂತೆ ನಾಲ್ಕು ಘಟ್ಟಗಳನ್ನು ಹೊಂದಿರುತ್ತದೆ ಚಿಟ್ಟೆಗಳ ಹಾಗೆಯೇ ಇವುಗಳೂ ಸಹ ಮೊಟ್ಟೆ, ಹುಳು, ಪ್ಯೂಪ ಹಾಗೂ ಬೆಳೆದ ಕೀಟಾವಸ್ಥೆಗಳನ್ನು ಹೊಂದಿವೆ, ಮೊಟ್ಟೆಯಿಂದ ಹೊಡೆದು ಬಂದ ಹುಳುವು ಒಂದೆರಡು ವಾರದವರೆಗೆ ತಿಂದು ದಪ್ಪವಾದ ಮೇಲೆ ದೇಹದ ಹೊರಪದರವನ್ನು ಗಟ್ಟಿಮಾಡಿಕೊಂಡು ಯಾವುದಾದರೂ ಎಲೆಗೆ ಅಂಟಿಕೊಳ್ಳುತ್ತದೆ.
©ಹಯಾತ್ ಮೊಹಮ್ಮದ್, ಲೀಫ್ ಬೀಟಲ್
ಕ್ರೈಸೋಮೆಲಿಡೆ (Chrysomelidae) ಕುಟುಂಬಕ್ಕೆ ಸೇರಿರುವ ಕೀಟಗಳನ್ನು ಸಾಮಾನ್ಯವಾಗಿ Leaf Beetle ಎಂದು ಕರೆಯುತ್ತಾರೆ. ಈ ಕುಟುಂಬದಲ್ಲಿ ಸರಿಸುಮಾರು 37,000 ಕ್ಕಿಂತ 50,000 ಪ್ರಭೇದಗಳಿವೆ, ಅದರಲ್ಲಿ ಇದು ಸಹ ಒಂದು. ಇವುಗಳೆಲ್ಲವೂ ಸಸ್ಯಹಾರಿಗಳಾಗಿದ್ದು ಬೆಳೆಗಳಿಗೂ ಸಹ ಕೆಲವು ಕೀಟಗಳು ಹಾನಿಕಾರಿಯಾಗಿವೆ. ಆದರೆ ಕಳೆಗಿಡಗಳನ್ನು ನಿಯಂತ್ರಿಸುವಲ್ಲಿಯೂ ಸಹ ಇವುಗಳ ಪಾತ್ರ ಬಹು ಮುಖ್ಯವಾಗಿದೆ.
ಚಿತ್ರಗಳು:ಹಯಾತ್ ಮೊಹಮ್ಮದ್
ವಿವರಣೆ: ನಾಗೇಶ್ ಓ ಎಸ್
ಹಯಾತ್ ಮೊಹಮ್ಮದ್ ರವರು ಒಬ್ಬ ಐಟಿ ಉದ್ಯೋಗಿ . ಪ್ರಕೃತಿಯ ನಡುವೆ ತಮ್ಮ ಬಿಡುವಿನ ಸಮಯವನ್ನು ಕಳೆಯುತ್ತಾ, ಪ್ರಕೃತಿಯನ್ನೇ ತಮ್ಮ ವಿವೇಕವನ್ನು ವೃದ್ಧಿಸಿಕೊಳ್ಳುವ ಸಾಧನವನ್ನಾಗಿಸಿಕೊಂಡಿದ್ದಾರೆ. ಇವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಬೆಳೆಯುತ್ತಿರುವ ಈ ಮಹಾನಗರಿಯ ಉದ್ಯಾನಗಳಲ್ಲಿ ಹಾಗೂ ಖಾಲಿ ಜಾಗಗಳಲ್ಲಿ ಕಾಣಸಿಕ್ಕ ಚಿಟ್ಟೆಗಳು ಮತ್ತು ಕೀಟಗಳು ಇವರ ಆಸಕ್ತಿಯನ್ನು ಕೆರಳಿಸಿದವು. ಇವರು ಮ್ಯಾಕ್ರೋ ಫೋಟೋಗ್ರಫಿ ವಿಧಾನವನ್ನ ಬಳಸಿ ಕೀಟ ಲೋಕದ ವಿಸ್ಮಯಗಳನ್ನು ಸೆರೆಹಿಡಿದು ಮಾನವ ಜಗತ್ತಿಗೆ ತೋರಿಸುತ್ತಿದ್ದಾರೆ.