ಹಸಿರ ಸಿರಿ

ಹಸಿರ ಸಿರಿ

ನಾವೆಲ್ಲರು ಒಂದಲ್ಲ ಒಂದು ರೀತಿಯಲ್ಲಿ ಪ್ರಕೃತಿಯ ಹಾನಿಗೆ ಕಾರಣವಾಗಿರುತ್ತೇವೆ. ಹಾಗೆ ಅದರ ವ್ಯತಿರಿಕ್ತಪರಿಣಾಮದ ಫಲಾನುಭವಿಗಳೂ ಆಗಿರುತ್ತೇವೆ. ಹೌದು ಪ್ರಕೃತಿಯ ಮೇಲೆ ದೌರ್ಜನ್ಯವೆಸಗಿ, ಭೂಮಿಯನ್ನೇ ಅಳಿವಿನಂಚಿಗೆ ತಳ್ಳುತ್ತಿರುವ ಮಾನವನ ದುರಾಸೆಯು ಭೂಮಿಯ ಮೇಲಿನ ಸಕಲ ಜೀವರಾಶಿಗಳ ಉಳಿವಿಗೂ ಸಂಚಕಾರ ತಂದೊಡ್ಡಿದೆ. ಭೂಮಿಯ ಅಳಿವಿಗೆ ಕಾರಣವಾಗುತ್ತಿರುವ ನಾವೇ ಭೂಮಿಯ ಉಳಿವಿಗೆ ಕೈ ಜೋಡಿಸಬೇಕಾಗಿದೆ. ಜಾಗೃತರಾಗಿ  ಜವಾಬ್ದಾರಿ ನಿರ್ವಹಿಸುವ ಕಾಲ  ಬಂದಾಗಿದೆ. ಬರೀ ಮನುಜಕುಲದ ಬಗ್ಗೆ ಚಿಂತಿಸುತ್ತಿರುವ ನಾವು ಪ್ರಾಣಿ-ಪಕ್ಷಿಗಳ, ಗಿಡ-ಮರಗಳ ಉಳಿವಿನಲ್ಲೇ ನಮ್ಮ ಉಳಿವಿರುವುದು ಎಂಬ ಸತ್ಯ ಮನದಟ್ಟು ಮಾಡಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ದೂರದೃಷ್ಟಿ ಇರುವ ಜಗತ್ತಿನ ಹಲವಾರು ಜನರು  ಪ್ರಕೃತಿಯ ಜೊತೆಗೆ  ಜೀವಿಸುತ್ತಿದ್ದಾರೆ. ಪ್ರಕೃತಿಯ ರಕ್ಷಣೆಗೆ ಹೋರಾಡುತ್ತಿದ್ದಾರೆ. ಹಲವಾರು ಸಂಘ ಸಂಸ್ಥೆಗಳ ಮೂಲಕ ಪರಿಸರದ ಉಳಿವಿಗೆ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಆದರೆ ಈ ಸಂಖ್ಯೆ ಹೆಚ್ಚಾಗಬೇಕಿದೆ. ಪ್ರತಿಯೊಬ್ಬ ಮನುಷ್ಯನೂ ಪ್ರಕೃತಿಯ ರಕ್ಷಣೆಯ ಹೊಣೆ ಹೊರಬೇಕಾದ ಅನಿವಾರ್ಯತೆ ಇದೆ.

WCG (Wildife Conservation Group) ಪ್ರಕೃತಿಯ ರಕ್ಷಣೆಯ ಹಾದಿಯಲ್ಲಿ   ಸತತ ಹತ್ತು ವರ್ಷಗಳಿಂದ ನಡೆದು ಬರುತ್ತಿದ್ದು, ಈ ಹಾದಿಯಲ್ಲಿ ವಿದ್ಯಾರ್ಥಿಗಳ ಅದರಲ್ಲೂ ಕಾಡಂಚಿನಲ್ಲಿರುವ ಮಕ್ಕಳಲ್ಲಿ ಪರಿಸರದ ಪ್ರಾಮುಖ್ಯತೆ ಮತ್ತು ರಕ್ಷಣೆಯ ಬಗ್ಗೆ ಅರಿವನ್ನು ಮೂಡಿಸುವ ಕಾರ್ಯವನ್ನು ಮುಖ್ಯವಾಗಿಸಿಕೊಂಡು ಹಲವಾರು ಬಗೆಯ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ‘ಹಸಿರ ಸಿರಿ’ ಇದು ನಮ್ಮ ಸುತ್ತಲಿನ ಪರಿಸರದಲ್ಲಿ ಗಿಡಗಳನ್ನು ನೆಟ್ಟು ಹಸಿರನ್ನು ಹೆಚ್ಚಿಸುವ ಯೋಜನೆ. ಈಗಿನ ಮಿತಿಮೀರಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ, ನಗರೀಕರಣ, ರಸ್ತೆನಿರ್ಮಾಣ, ಹಾಗೂ ಹಲವು ಯೋಜನೆಗಳ ಹೆಸರಲ್ಲಿ ಮರಗಳ ಕಗ್ಗೊಲೆ ನಡೆಯುತ್ತಲೇ ಇದೆ. ಇದಕ್ಕೆ ಕಡಿವಾಣ ಹಾಕಿ ನಿಯಂತ್ರಿಸುವುದರಲ್ಲಿ ನಾವು ಸೋಲುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ನಾವು ಸಂಪಾದಿಸಬೇಕಿರುವುದು ಹಸಿರನ್ನೇ ಹೊರತು ಹಣವನ್ನಲ್ಲ. ಇದೇ ಕಾರಣಕ್ಕಾಗಿ ನಮ್ಮ ಸುತ್ತಮುತ್ತಲು  ಗಿಡಗಳನ್ನು ನೆಟ್ಟು ಬೆಳೆಸುವ ಉದ್ದೇಶ ‘ಹಸಿರ ಸಿರಿ’ ಯೋಜನೆಯದು.

ಮೊದಲಿಗೆ ಸರಿಸುಮಾರು 300 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸುವ ಗುರಿಯನ್ನಿಟ್ಟುಕೊಂಡು ಅಡಿಯಿಟ್ಟಿತು. 300 ಗಿಡನೆಡುವ ಕಾರ್ಯ ಸುಲಭವೇನಲ್ಲ ಇದಕ್ಕೆ ಪ್ರೊತ್ಸಾಹ, ಜನ ಸಹಾಯ ಮತ್ತೆ ಹಣದ ಸಹಾಯ ಅವಶ್ಯಕವಾಗಿತ್ತು. ಈ ಸಮಯಕ್ಕೆ ಪ್ರೊತ್ಸಾಹಿಸಿ ಬನ್ನೇರುಘಟ್ಟದ ವಲಯಾರಣ್ಯಾಧಿಕಾರಿಯಾದ ಶ್ರೀ ಗಣೇಶ್ ರವರು ಮತ್ತು ಹಣಕಾಸಿನ ನೆರವಾಗಿ ಶ್ರೀ ಸದಾನಂದ್  ತೆಗ್ಗಿ  ಮತ್ತೆ ಅವರ ಸಹೃದಯಿ ಗೆಳೆಯರು ಬಂದದ್ದು ಬಲು ಉಪಯೋಗವಾಯಿತು. 300 ಗಿಡಗಳನ್ನು ನೆಟ್ಟು ಕನಿಷ್ಠ 2 ವರ್ಷಗಳ ಕಾಲ ಪೋಷಿಸಲು ತಗಲುವ ಖರ್ಚು ವೆಚ್ಚಗಳನ್ನು ಅಂದಾಜಿಸಿ ತಿಳಿಸಿದ್ದೆವು. ಇದಕ್ಕೆ ಅವರು ಒಪ್ಪಿ ನೆರವಾದರು, ಅದರೊಂದಿಗೆ ಸಸಿ ನೆಡಲು ಶ್ರಮದಾನಕ್ಕೂ ಸಹ ಮುಂದಾಗಿದ್ದರು. ಇವರಲ್ಲದೆ ದಯಾನಂದ್ ಸಾಗರ ಇಂಜಿನಿಯರ್ ಕಾಲೇಜಿನ ವಿದ್ಯಾರ್ಥಿಗಳು ಸಹ ನೆರವಿನ ಹಸ್ತ ನೀಡಲು ಬಂದರು. ಕೆಲವು ಆಸಕ್ತರೂ ಸಹ ಸ್ವತಃ ಮುಂದೆ ಬಂದದ್ದು ವಿಶೇಷವಾಗಿ ಹಸಿರ ಸಿರಿ ಯೋಜನೆ ಸುಲಭವಾಗಲು ಕಾರಣವಾಯಿತು. ಹಸಿರ ಸಿರಿ ಗಿಡ ನೆಡುವ ಕಾರ್ಯಕ್ರಮವನ್ನು ದಿನಾಂಕ 21/09/2019 ಶನಿವಾರದಂದು ನಿಗದಿಪಡಿಸಿಕೊಂಡಿದ್ದರು. ಈ ದಿನಕ್ಕೆ ಬೇಕಾದ ಸಸಿಗಳನ್ನು WCG ಸದಸ್ಯರು ವಿವಿಧ ಪ್ರಭೇದದ ಕಾಡು ಜಾತಿಯ ದೊಡ್ಡ ಮರಗಳಾಗುವ ಸಸಿಗಳನ್ನು ಆರಿಸಿ ರಾಮನಗರದ ಸಸ್ಯಕ್ಷೇತ್ರದಿಂದ ತರಲಾಗಿತ್ತು. ತಂದಿದ್ದ ಸಸಿಗಳ ಸಂಖ್ಯೆಗನುಗುಣವಾಗಿ ಬೇಕಾದ ಗುಂಡಿಗಳನ್ನು ಜೆಸಿಬಿ ಮೂಲಕ ತೋಡಿಸಿ ವಾರದ ಮುಂಚೆಯೆ ಸಿದ್ಧಪಡಿಸಿಕೊಳ್ಳಲಾಗಿತ್ತು. ಇಷ್ಟೆಲ್ಲಾ ತಯಾರಿದ್ದರಿಂದಲೇ ಕಾರ್ಯಕ್ರಮದ ದಿನದಂದು ಆಗಮಿಸಿದ್ದ ಎಲ್ಲಾ ಸ್ವಯಂ ಸೇವಕರು, ಇಂಜಿನೇರಿಂಗ್ ವಿದ್ಯಾರ್ಥಿಗಳು, ಹಾಗು ನಮ್ಮ ಸದಸ್ಯರೂ ಸೇರಿ ಅರವತ್ತು ಜನಬಲದಿಂದ ಕಾರ್ಯಕ್ರಮ ಶುರುವಾಯಿತು. ಸಸಿ ನೆಡುವ ಮುಂಚೆ ಸಣ್ಣ ಪರಿಚಯ ಹಾಗೂ ಈ ಕಾರ್ಯಕ್ರಮದ ಉದ್ದೇಶವನ್ನು ನಾಗೇಶ್ ರವರು ತಿಳಿಸಿದರು. ಕೆಲವರ ಅನಿಸಿಕೆಗಳ ಆಲಿಸಿದ ನಂತರ ಅಶ್ವಥ್ ರವರ ಮಾರ್ಗದರ್ಶನದಂತೆ ಸಸಿ ನೆಡಲು ಬೆಳಿಗ್ಗೆ ಸುಮಾರು 9.30ಕ್ಕೆ ಪ್ರಾರಂಭಿಸಿದೆವು.

ಮಾನವ ಸರಪಳಿ ರಚಿಸಿ ಒಂದೆಡೆ ಇದ್ದ ಸಸಿಗಳನ್ನು ನೆಡುವಲ್ಲಿಗೆ ಸಾಗಿಸಲಾಯಿತು. ಗಿಡ ನೆಡುವ ಕೆಲಸ ಬಹು ಉತ್ಸುಕತೆಯಲ್ಲಿಯೇ ಶುರುವಾಗಿಬಿಟ್ಟಿತು. ಕೆಲಸ ಆರಂಭಿಸಿದ ಎರಡು ಘಂಟೆಗಳಲ್ಲೇ ದಣಿದೆವು. ತುಂಬಾ ಬಿಸಿಲಿದ್ದ ಪರಿಣಾಮ ಮತ್ತು ನಾವು ಹೊಸದಾಗಿ ತಂದಿದ್ದ ಚನೆಕೆಗಳಿಂದ ಮಣ್ಣು ಸುಲಭವಾಗಿ ತೆಗೆಯಲು ಆಗದೆ ತುಂಬಾ ಕಷ್ಟಪಡಬೇಕಾಯಿತು. ಊಟದ ಸಮಯಕ್ಕೆ ಎಲ್ಲಾ ಗಿಡಗಳನ್ನು ನೆಟ್ಟು ಪೂರೈಸಬೇಕೆಂದುಕೊಂಡಿದ್ದ ನಮಗೆ ಸಾಧ್ಯವಾಗಿದ್ದು ಶೇಕಡಾ 70 ಮಾತ್ರ. ಒಂದೆಡೆ ಬಿಸಿಲಿನ ತಾಪಕ್ಕೆ ದೇಹ ವೇಗವಾಗಿ ನಿರ್ಜಲೀಕರಣವಾಗಿ ನಿತ್ರಾಣವಾಗುತ್ತಿದ್ದರೆ, ಮತ್ತೊಂದೆಡೆ ಗಟ್ಟಿಯಾದ ಮಣ್ಣು ಚನೆಕೆಗೆ ಸಹಕರಿಸದೇ ಕಷ್ಟಪಡಬೇಕಾಯಿತು. ಎಂದೂ ಈ ತರಹದ ಕೆಲಸ ಮಾಡದವರು ಪಾಪ 2-3 ಗಿಡ ನೆಡುವಷ್ಟರಲ್ಲಿ ಸುಸ್ತಾಗಿ ಮರದ ನೆರಳಿನಾಶ್ರಯ ಪಡೆಯಲು ಓಡುತ್ತಿದ್ದರು. ತಮ್ಮ ಬೆವರಿನ ನೀರನ್ನೇ ಗಿಡಗಳಿಗೆ ಹಾಯಿಸುತ್ತಿದ್ದವರಿಗೆ ನೀರು ಮತ್ತು ಜ್ಯೂಸ್ ಗಳನ್ನು ಕೊಟ್ಟು, ಮತ್ತೆ ಪುನಶ್ಚೇತನಗೊಳಿಸುವ ಕಾರ್ಯ ನಡೆದೇ ಇತ್ತು. ಅಂತೂ ಊಟದ ಸಮಯಕ್ಕೆ ಸುಮಾರು 70 ಭಾಗದ ಕೆಲಸ ಮುಗಿದು ಊಟದ ವಿರಾಮಕ್ಕೆ ಹೊರಟೆವು. ಹಸಿದ ಹೊಟ್ಟೆಗೆ ಬಿಸಿ ಬಿಸಿ ಪಲಾವ್ ಮತ್ತು ಚಟ್ನಿ  ಸರಿಯಾಗಿ ಬಾರಿಸಿ ಸ್ವಲ್ಪ ಕಾಲ ವಿಶ್ರಮಿಸಿದೆವು.

ಇದರ ನಡುವೆ ಮೋಡಗಳ ಸುಳಿವಿಲ್ಲದೆ ಬಿಸಿಲಿನ ತಾಪದಲ್ಲಿ ಯಾವುದೇ ಇಳಿಕೆ ಇರಲಿಲ್ಲ. ಕೆಲವರು ತಮ್ಮ ಅನಿವಾರ್ಯ ಕಾರ್ಯಗಳಿಗೆಂದು ಹಿಂದಿರುಗಿದರು. ಉಳಿದ ಸುಮಾರು 40 ಮಂದಿ ಊಟದ ನಂತರ ದೇಹ ಒಲ್ಲೆ ಎಂದರೂ  ಹಿಡಿದ ಕಾರ್ಯ ಮುಗಿಸಲೇಬೇಕು ಎಂಬ ಛಲದ ಮನಸ್ಸಿನಿಂದ ಕೆಲಸಕ್ಕೆ ಹಿಂದಿರುಗಿದರು. ಶಕ್ತಿ ಸಾಮರ್ಥ್ಯಗಳನ್ನೆಲ್ಲಾ ಬಳಸಿ ಕೆಲಸ ಮಾಡುತ್ತಿದ್ದರೂ ಸೂರ್ಯನ ಮಧ್ಯಸ್ಥಿಕೆಯಿಂದ ಕೆಲಸ ಮಂದ ಗತಿಯಲ್ಲೇ ಸಾಗಿತು. ಅಂತೂ ಬಿಡದೇ ಎಲ್ಲಾ ಗುಂಡಿಗಳಲ್ಲೂ ಸಸಿಗಳನ್ನು ನೆಟ್ಟು ಪೂರ್ಣವಾಗಿಸಿದೆವು. ಗಿಡ ನೆಟ್ಟ ಮೇಲೆ ಜೀವದ ನೀರು ಹಾಯಿಸುವುದು ತುಂಬಾ ಸೂಕ್ತ. ಅದಕ್ಕೆಂದೇ ಒಂದು ಟ್ಯಾಂಕರ್ ನೀರು ಸಿದ್ಧವಾಗಿತ್ತು. ಎಲ್ಲರ ಒಗ್ಗಟ್ಟಿನ ಪರಿಣಾಮ ನೀರು ಹಾಯಿಸುವ ಕೆಲಸವೂ ಯಶಸ್ವಿಯಾಗಿ ಮುಗಿಯಿತು. ತುಂಬಾ ದಣಿದಿದ್ದ ಎಲ್ಲರಿಗೂ ಕೊನೆಯದಾಗಿ ಬೀಳ್ಕೊಡುವಾಗ ಸಂಜೆ ಐದಾಗಿತ್ತು. ಅಂತೂ ಆ ದಿನ ದಣಿದ ದೇಹಕ್ಕೆ ರಾತ್ರಿಯ ಒಳ್ಳೆ ನಿದ್ರೆ ಬಾರದಿರುವುದರಲ್ಲಿ ಸಂಶಯವಿರದಿದ್ದರೂ ಮಾರನೆ ದಿನದ ಮೈ-ಕೈ ನೋವುಗಳ ರಾಗಗಳು ಅವರವರಿಗೇ ತಿಳಿದಿರುತ್ತದೆ.

ಅಂತೂ ಹಸಿರ ಸಿರಿ ಯೋಜನೆಯಲ್ಲಿ ಮೊದಲ ಹಂತದ ಕಾರ್ಯವು ಯಶಸ್ವಿಯಾಗಿದೆ. ಗಿಡಗಳಿಗೆ ಗೊಬ್ಬರ ಹಾಕಿ ಬೇಸಿಗೆಯಲ್ಲಿ ನೀರು ಒದಗಿಸಿ ಕೆಲವು ವರುಷಗಳವರೆಗೆ ಸಲಹುವ ಜವಾಬ್ದಾರಿ ನಮ್ಮದೇ ಆಗಿರುತ್ತದೆ. ಈ ಜವಾಬ್ದಾರಿಯಲ್ಲಿ ಭಾವಗಹಿಸಲು ಇಚ್ಛಿಸುವ ಎಲ್ಲರಿಗೂ ಸ್ವಾಗತವಿದೆ. ನಾವು ನೆಟ್ಟ ಗಿಡಗಳಲ್ಲಿ ಶೇಖಡಾ 50ರಷ್ಟಾದರೂ ಬೆಳೆದು ದೊಡ್ಡವಾದರೆ ಗುರಿ ಸಾಧಿಸಿದಂತೆಯೇ ಸರಿ. ಹಾಗೇ ಹಸಿರ ಸಿರಿ ವ್ಯಾಪ್ತಿಯು ವಿಸ್ತರಿಸುವ ಆಶಯವನ್ನು ಸಾಕಾರಗೊಳಿಸಲು ಪುಷ್ಟಿ ನೀಡಿದಂತಾಗುತ್ತದೆ. ಜೀವ ಸಂಕುಲದ ಉಳಿವಿನ ಪ್ರಶ್ನೆಗಳಿಗೆ ಇಂತಹ ಕಾರ್ಯಗಳೇ ಉತ್ತರವಾಗಿದೆ. ನಾವು ಇದರಲ್ಲಿ ಭಾಗಿಯಾಗಬೇಕಿದೆಯಷ್ಟೇ.

-ರಾಕೇಶ್ ಆರ್. ವಿ.
ಬೆಂಗಳೂರು


Spread the love
error: Content is protected.