ಸಸ್ಯಾಹಾರಿ ಮೊಸಳೆಗಳು

ಸಸ್ಯಾಹಾರಿ ಮೊಸಳೆಗಳು

ಹಳ್ಳೀ… ಚಂದಾ… ಕಾಣೋ…ತಮ್ಮಾ!
ಹಳ್ಳೀ… ಜನಾ ಆ…ಚಂದಾ ಕಾಣೊ ತಮ್ಮ, ಬಲು ಅಂದಾ ಕಾಣೋ ತಮ್ಮ!

ಅನ್ನೋ ಸುಂದರ ಜನಪದ ಗೀತೆಯ ಸಾಲುಗಳು ನನ್ನ ತಲೆಯಲ್ಲಿ ಆಗಾಗ ಬಂದು ಹಾಜರಾತಿ ಹಾಕಿ ಹೋಗುತ್ತಿರುತ್ತವೆ. ಹಾಗೆ ನಮ್ಮ ಹಳ್ಳಿ ಜೀವನದ ಹೆಮ್ಮೆಯ ಸಂಗತಿಗಳ ಮೆಲುಕು ಹಾಕಲು ಎಡೆ ಮಾಡಿಕೊಡುತ್ತವೆ. ಹಳ್ಳಿಯ ಮನೆಯೆಂದರೆ ಮನೆಗೊಂದು ಆಕಳು ಇರುವುದು ಸರ್ವೇ ಸಾಮಾನ್ಯ. ನಮ್ಮ ಮನೆಯಲ್ಲಿಯೂ ಸಹ 2-3 ಹಸುಗಳ ಕೊಟ್ಟಿಗೆ ಇದ್ದಿತು. ಹಸುವಿಗೆ ಕರು ಆಯಿತೆಂದರೆ ಚಿಕ್ಕವಯಸ್ಸಿನಲ್ಲಿ ನಮಗೆ ಎಲ್ಲಿಲ್ಲದ ಆನಂದ, ಬಹುಶಃ ಕರುವಿನ ತಾಯಿಗೆ ಆಗುವಷ್ಟೇ ಖುಷಿ ನಮಗೂ ಆಗುತ್ತಿತ್ತು. ಆದ್ದರಿಂದಲೇ ಏನೋ, ಬೆಳಿಗ್ಗೆ ಎದ್ದ ತಕ್ಷಣ ನಮ್ಮ ಮೊದಲ ಕೆಲಸ ಕುಟುಂಬದ ಆ ಹೊಸ ಸದಸ್ಯನನ್ನು ನೋಡುವುದೇ ಆಗಿತ್ತು. ಏಕೆಂದರೆ ಹಳ್ಳಿಯ ಎಷ್ಟೋ ಮನೆಗಳಲ್ಲಿ ಮಕ್ಕಳಿಗೆ ಹೇಳಿಕೊಡುವುದೇನೆಂದರೆ ಏಳುವಾಗಲೇ ಬಲಗಡೆಗೆ ಎದ್ದು, ಎದ್ದ ತಕ್ಷಣ ದೇವರ ಮುಖವೋ, ಹಸುವಿನ ಮುಖವೋ ನೋಡಿ ಎಂದು. ಎಂಥಾ ಒಳ್ಳೆಯ ಯೋಚನೆಯಲ್ಲವೇ, ಎದ್ದ ತಕ್ಷಣ ಮುಖದಲ್ಲಿ ಆ ನಗು ಮೂಡಿದರೆ ಸಾಕು. ಆ ದಿನವೆಲ್ಲಾ ಸುಂದರವಾಗಿ ಕಾಣದೇ ಇದ್ದೀತೆ. ಹೀಗೆ ಕೆಲವು ದಿನಗಳು ಕಳೆಯುತ್ತಿದ್ದಂತೆ ಕರು ಬೆಳೆಯುತ್ತದೆ, ತಾಯಿ ಹಾಲಿನಿಂದ ಹುಲ್ಲು ಸೊಪ್ಪಿನ ಕಡೆಗೆ ಅದರ ಆಹಾರ ಪದ್ಧತಿ ವಾಲುತ್ತದೆ. ಆಗ ನಿಜವಾದ ಮಜಾ. ಹೇಗೆನ್ನುವಿರಾ ಇಲ್ಲಿ ಕೇಳಿ, ನನಗಿನ್ನೂ ನೆನಪಿದೆ ಆ ಕರುವಿಗೆಂದೇ ಕುಡುಗೋಲು ಹಿಡಿದು ಆರಿಸಿ ಆರಿಸಿ ತಂದ ಹುಲ್ಲು, ಜೋಳದ ಕಡ್ಡಿಗಳನ್ನು ನಾವೇ ಖುದ್ದಾಗಿ ಕರುವಿಗೆ ತಿನ್ನಿಸುತ್ತಿದ್ದ ಆ ಕ್ಷಣಗಳು…. ನೆನೆಸಿಕೊಂಡರೆ ಸಾಕು ಮಂದಹಾಸ ಮುಖವೆಲ್ಲಾ ಆವರಿಸುತ್ತದೆ. ಕಡ್ಡಿ ಹಿಡಿದು ತಿನ್ನಿಸುತ್ತಾ ಹೋದಂತೆ ನಮ್ಮ ಕೈ ಬೆರಳುಗಳು ಕರುವಿನ ಬಾಯಿಯ ಒಳ ಹೋದಾಗ ಆ ಎಳೆ ಚಪ್ಪಟೆ ಹಲ್ಲುಗಳ, ಒರಟು ನಾಲಿಗೆಯಿಂದ ಆಗುವ ಕಚಗುಳಿಯ ಮಾತಿನಲ್ಲಿ ಹೇಳಲಾಗದು. ಅಂತಹುದನ್ನು ಅನುಭವಿಸಿಯೇ ತೀರಬೇಕು.

ಹೀಗೆ ಜೀವನಶೈಲಿಯಲ್ಲಿ ಇರುವ ಹಳ್ಳಿಗನಿಗೆ ವಿಜ್ಞಾನದ ಸಂಶೋಧನೆಯೊಂದು ಈ ಹಸುಗಳು ಹಿಂದಿನ ಕಾಲದಲ್ಲಿ ಮಾಂಸಾಹಾರಿಗಳಾಗಿದ್ದವು, ಎಂದರೆ ನಂಬಲಾದೀತೆ? ನೀವೆ ಹೇಳಿ?

ನಂಬಬೇಡಿ ಏಕೆಂದರೆ ಅದು ಸತ್ಯವೂ ಅಲ್ಲ. ನಾ ಹೇಳಲು ಹೊರಟಿರುವುದು ಬೇರೆ. ನಮಗೆ ತಿಳಿದಿರುವ ಹಾಗೆ ಮೊಸಳೆಗಳು ಸಸ್ಯಾಹಾರಿಯೋ? ಮಾಂಸಾಹಾರಿಯೋ? ಎಂದು ನಾನು ಕೇಳುತ್ತಲೇ, ಅದೆಂತಹ ಪ್ರಶ್ನೆ! ಮೊಸಳೆಗಳೆಲ್ಲಾ ಮಾಂಸಾಹಾರಿಗಳಲ್ಲವೆ? ಎಂಬ ಕೊಂಚ ಕೋಪದ ಉದ್ಗಾರ ನೀವು ಹೇಳಿದಂತೆ ನನಗೆ ಕೇಳುತ್ತಿದೆ. ಆದರೆ ಸಂಶೋಧನೆ ಹೇಳುತ್ತಿರುವುದು 100% ಮಾಂಸಾಹಾರಿಗಳಾಗಿರುವ ಈಗಿನ ಮೊಸಳೆಗಳ ಪೂರ್ವಜರಲ್ಲಿ ಎಷ್ಟೋ ಸಸ್ಯಾಹಾರಿಗಳಿದ್ದವಂತೆ! ಮಿಶ್ರಾಹಾರಿಗಳೂ ಕೂಡ. ಇದು ತಿಳಿದು ಬಂದುದು ವಿಜ್ಞಾನಿಗಳಿಗೆ ದೊರಕಿರುವ ಮೊಸಳೆಗಳ ಪೂರ್ವಜರ ಹಲ್ಲಿನ ಪಳೆಯುಳಿಕೆಗಳ ಅಧ್ಯಯನ ಮಾಡಿದ ನಂತರ.

ಮೊಸಳೆಗಳು 6.6 ರಿಂದ 22.5 ಕೋಟಿ ವರ್ಷಗಳ ಕಾಲ ಅಂತರದಲ್ಲಿ ಕನಿಷ್ಟ 3 ಬಾರಿ ವಿಕಾಸಗೊಂಡಿವೆ ಎನ್ನುತ್ತಾರೆ ವಿಜ್ಞಾನಿಗಳು. ನಮಗೆಲ್ಲಾ ಸಾಮಾನ್ಯವಾಗಿ ತಿಳಿದಿರುವ ಹಾಗೆ ಮೊಸಳೆಗಳು ಎಲ್ಲವೂ ಮಾಂಸಾಹಾರಿಗಳೇ, ಜೊತೆಗೆ ಅವುಗಳ ಹಲ್ಲುಗಳ ಗಮನಿಸುವುದಾದರೆ ಹೆಚ್ಚು ಕಡಿಮೆ ಎಲ್ಲಾ ಹಲ್ಲುಗಳೂ ಚೂಪಾದ ಉದ್ದನೆಯ ಕೋನಾಕರದಲ್ಲಿರುತ್ತವೆ. ಇದನ್ನು ನೋಡಿಯೇ ನಾವು ಸಹಜವಾಗಿಯೇ ಊಹಿಸಬಹುದು, ಈ ಹಲ್ಲುಗಳು ಮಾಂಸವನ್ನು ಸೀಳಿ ಎಳೆಯಲು ಪೂರಕವಾಗಿವೆ ಎಂದು. ಆದರೆ ಈಗಿನ ಮೊಸಳೆಗಳ ಪೂರ್ವಜರ ಹಲ್ಲುಗಳಲ್ಲಿ ಹಲವಾರು ವಿಧಗಳಿದ್ದವು ಎನ್ನುತ್ತಾರೆ ಪಳೆಯುಳಿಕೆ  ಶಾಸ್ತ್ರಜ್ಞ ಕೀಗನ್. ಇವರು ಹೀಗೆ ಹೇಳಲೂ ಸಹ ಕಾರಣವಿದೆ. ಕೀಗನ್ ಮತ್ತು ಅವರ ಸಹೋದ್ಯೋಗಿ ರಂಡಾಲ್ ರವರು ಈಗ ಅವಶೇಷವಾಗಿರುವ 16 ವಿವಿಧ ಬಗೆಯ ಮೊಸಳೆಗಳ 146 ಹಲ್ಲುಗಳ ಪಳೆಯುಳಿಕೆಯನ್ನು ಅಧ್ಯಯನ ಮಾಡಿ ಹೇಳುತ್ತಿದ್ದಾರೆ. ಇವರು ಹೇಳುವ ಹಾಗೆ ಮಾಂಸಾಹಾರಿಗಳ ಹಲ್ಲಿನ ರಚನೆಯು ಬಲು ಸಾಧಾರಣವಾಗಿದ್ದು, ಸಸ್ಯಾಹಾರಿ ಮತ್ತು ಮಿಶ್ರಾಹಾರಿಗಳ ಹಲ್ಲಿನ ಹಾಗೆ ಸಂಕೀರ್ಣವಾಗಿರುವುದಿಲ್ಲ ಎಂದು. ಏಕೆಂದರೆ ಸಸ್ಯಾಹಾರಿಗಳಿಗೆ ಹಲ್ಲುಗಳು ಹೆಚ್ಚಾಗಿ ಚಪ್ಪಟೆಯಾಗಿದ್ದು ಜೊತೆಗೆ ಹಲ್ಲಿನ ಮೇಲ್ಮೈ ಬೆಟ್ಟ ಗುಡ್ಡಗಳ ಹಾಗೆ ಹಳ್ಳ ಉಬ್ಬುಗಳಿರುತ್ತವೆ. ಈ ತರಹದ ಹಲ್ಲಿನ ರಚನೆ ಸಸ್ಯಾಹಾರಿ ಹಾಗೂ ಮಿಶ್ರಹಾರಿಗಳಿಗೆ  ಸಸ್ಯಗಳ ಜಗಿಯಲು ಉಪಯೋಗಕರವಾಗಿರುತ್ತವೆ.

 ಈ ವಿಜ್ಞಾನಿಗಳ ಆಶ್ಚರ್ಯಕ್ಕೆ ಅವರು ಗಮನಿಸಿದ ಆ ಹಲ್ಲುಗಳ ಪಳೆಯುಳಿಕೆಯಲ್ಲಿ ಆ ಮೊಸಳೆಗಳ ಹಲ್ಲುಗಳು ಈಗಿನ ಸಸ್ಯಾಹಾರಿಗಳ ಹಲ್ಲಿನ ಹಾಗೆ ಚಪ್ಪಟೆಯೊಂದಿಗೆ ಉಬ್ಬು ತಗ್ಗುಗಳಿದ್ದವು.

ಇದರಿಂದ ತಿಳಿದು ಬರುವ ವಿಷಯವನ್ನ ವಿವರಿಸಿ ಹೇಳಬೇಕಿಲ್ಲ ನೀವೆಲ್ಲಾ ಜಾಣರು ಅರ್ಥಮಾಡಿಕೊಂಡಿರುತ್ತೀರಿ. ಒಂದಂತೂ ನಿಜ, ಏನೆಂದರೆ ನಶಿಸಿ ಹೋಗಿರುವ ಮೊಸಳೆಗಳ ಆ ಪಳೆಯುಳಿಕೆ ಹಲ್ಲುಗಳಿಗೂ ಈಗಿನ ಮಾಂಸಾಹಾರಿ ಮೊಸಳೆಗಳ ಹಲ್ಲುಗಳಿಗೂ ಇರುವ ವ್ಯತ್ಯಾಸ ಅಜಗಜಾಂತರ. ಹಿಂದಿನ ಆ ಕಾಲದಲ್ಲಿ ಮೊಸಳೆಗಳು ನೆಲ, ಸಿಹಿ ನೀರು ಮತ್ತು ಉಪ್ಪು ನೀರಿನಲ್ಲೂ ಇದ್ದಿರಬಹುದು ಎಂದು ಈ ಸಂಶೋಧನೆಯಿಂದ ಅರಿಯಬಹುದಾಗಿದೆ.

ಅಷ್ಟೇ ಅಲ್ಲ ಇದರಿಂದಾಗಿ ಆಗಿನ ವಾತಾವರಣದ ಊಹೆಯೂ ಹೆಚ್ಚೆಚ್ಚು ನಿಖರವಾಗಿ ಚಿತ್ರಿಸಬಹುದು ಎಂದೆನಿಸುತ್ತದೆ. ಈ ಸಸ್ಯ ತಿನ್ನುತ್ತಿದ್ದ ಮೊಸಳೆಗಳು ಬಹುಶಃ ಅಲ್ಲಿನ ವಾತಾವರಣ ಹಾಗೂ ಆಹಾರ ಪೈಪೋಟಿಯ ಸಲುವಾಗಿ ಹೀಗಿದ್ದಿರಬಹುದು ಎಂಬುದೂ ಸಹ ಒಂದು ವೈಜ್ಞಾನಿಕ ಊಹೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ನಿಮ್ಮ ಊಹಾಪೋಹಗಳನ್ನು ನಮಗೆ ಬರೆದು ತಿಳಿಸಿ. ಸರಿಯಿದ್ದರೆ ನಾವು ಸುತ್ತಮುತ್ತಲವರಿಗೆ ಹಬ್ಬಿಸುತ್ತೇವೆ.

ನಿಮ್ಮ ಊಹೆಯ ಹಣೆಬರಹಗಳ ಬರೆದು ಕಳುಹಿಸಿ.

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
ಡಬ್ಲೂ.ಸಿ.ಜಿ, ಬೆಂಗಳೂರು

Print Friendly, PDF & Email
Spread the love
error: Content is protected.