ಹುಲಿಗಳ ಅಂತ್ಯದಲ್ಲಿ ಮನುಷ್ಯ?

© ಪೃಥ್ವಿ. ಬಿ
ಯಾವುದೇ ಅರಣ್ಯ ಪ್ರದೇಶದಲ್ಲಿ ಹುಲಿಗಳು ಕಂಡು ಬಂದರೆ, ಆ ಕಾಡಿಗೆ ಕಾಡೇ ಸಮೃದ್ಧಿಯಿಂದ ಇದೆ ಎಂದು ಅರ್ಥ ಮತ್ತು ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತಗೊಂಡಿದೆ ಎಂದು ಅರ್ಥ. ಅದು ಹೇಗೆ ಹುಲಿಗಳಿಗೂ ಹಾಗೂ ನೈಸರ್ಗಿಕ ಸಂಪನ್ಮೂಲಗಳಿಗೂ ಸಂಬಂಧ ಎಂದು ನಿಮಗೆ ಆಶ್ಚರ್ಯವಾಗುತ್ತಿರಬೇಕು… ಮುಂದೆ ನೋಡೋಣ, ಏನಾದರು ಸಂಬಂಧವಿದೆಯ ಎಂದು?
ನಮಗೆ ತಿಳಿದಿರುವ ಹಾಗೆ ಹುಲಿಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಹುಲಿ ಎಂಬ ಧೀಮಂತ ಪ್ರಾಣಿ ಇತ್ತು ಎಂದು ಛಾಯಾಚಿತ್ರಗಳ ಮೂಲಕ ಮುಂದಿನ ಪೀಳಿಗೆಗೆ ತೋರಿಸಬೇಕಾದ ಸಂದರ್ಭ ಎದುರಾಗಲೂಬಹುದು. ಈ ದುರ್ದೈವ ನಮ್ಮ ದೇಶದಲ್ಲಿ ಎಂದೂ ಬರಬಾರದು ಎಂಬುದು ನಮ್ಮೆಲ್ಲರ ಆಸೆ ಅಲ್ಲವೇ? ಇದಕ್ಕೋಸ್ಕರ ನಮ್ಮ ಅರಣ್ಯ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ನಾವು ಮೆಚ್ಚಲೇಬೇಕು. ಇವರ ಶ್ರಮದಿಂದ ಪ್ರಪಂಚದ 70% ರಷ್ಟು ಹುಲಿಗಳ ಸಂಖ್ಯೆಯನ್ನು ಹೊಂದಿರುವ ಹೆಗ್ಗಳಿಕೆ ನಮ್ಮ ದೇಶದ್ದಾಗಿದೆ. ನಮ್ಮ ಭಾರತ ಸರ್ಕಾರ ಏಪ್ರಿಲ್ 1973 ರಲ್ಲಿ ಪ್ರಾಜೆಕ್ಟ್ ಟೈಗರ್ ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸಿತು.

ಇದರ ನೇತೃತ್ವದಲ್ಲಿ 50 ಅರಣ್ಯ ಪ್ರದೇಶಗಳನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿತು. ಇದರ ಪರಿಣಾಮದಿಂದ 2008 ರಲ್ಲಿ 1411 ರಷ್ಟಿದ್ದ ಹುಲಿಗಳ ಸಂಖ್ಯೆ 2010 ರಷ್ಟರಲ್ಲಿ 1706 ಕ್ಕೆ ಜಿಗಿಯಿತು. 2014 ರ ಹುಲಿಗಳ ಗಣತಿ ಪ್ರಕಾರ ಅಂದಾಜು 2226 ಹುಲಿಗಳು ನಮ್ಮ ದೇಶದಲ್ಲಿ ಇವೆ ಎಂದು ವರದಿಯಾಗಿದೆ. ಪ್ರಾಜೆಕ್ಟ್ ಟೈಗರ್ ಪ್ರಕಾರ, ಹುಲಿಗಳ ಸಂಖ್ಯೆ ಕಡಿಮೆಯಾಗಲು ಮುಖ್ಯ ಕಾರಣ ಅವುಗಳ ವಾಸಸ್ಥಾನ ಛಿದ್ರವಾಗುತ್ತಿರುವುದು ಹಾಗೂ ನಾಶವಾಗುತ್ತಿರುವುದು. ಯಾವುದೇ ಗಂಡು ಹುಲಿ ವಾಸಿಸಲು ಅದಕ್ಕೆ ಸುಮಾರು 60-100 ಚದರ ಕಿ. ಮೀ ರಷ್ಟು ಪ್ರದೇಶ ಹಾಗೂ ಹೆಣ್ಣು ಹುಲಿಗೆ 20 ಚದರ ಕಿ. ಮೀ ರಷ್ಟು ಪ್ರದೇಶ ಬೇಕಾಗುತ್ತದೆ. ಈ ಪ್ರದೇಶದಲ್ಲೇ ಹುಲಿಯು ಬೇಟೆಯಾಡಬೇಕು, ಜನ್ಮ ನೀಡಬೇಕು ಹಾಗು ಮರಿಗಳನ್ನು ಪೋಷಿಸಬೇಕು.
ಹಿಂದಿನ ಕಾಲದಲ್ಲಿ ನಮ್ಮ ದೇಶವನ್ನು ಸಾಮ್ರಾಜ್ಯಗಳಾಗಿ ವಿಂಗಡಿಸಿ, ಆ ಸಾಮ್ರಾಜ್ಯಗಳಲ್ಲಿ ರಾಜರು ಆಳ್ವಿಕೆ ನಡೆಸುತ್ತಿದ್ದರು. ರಾಜರು ಅವರ ಪರಾಕ್ರಮ ತೋರಿಸಲು ಹಾಗೂ ಅವರ ಸಾಮ್ರಾಜ್ಯವನ್ನು ವಿಸ್ತರಿಸಿಲು ಬೇರೆ ರಾಜರ ಮೇಲೆ ದಂಡೆತ್ತಿ ಹೋಗುತ್ತಿದ್ದರು ಮತ್ತೆ ಯುದ್ಧ ಮಾಡುತ್ತಿದ್ದರು. ಆ ಯುದ್ಧದಲ್ಲಿ ಇಬ್ಬರು ತಮ್ಮ ಪರಾಕ್ರಮಗಳನ್ನು ತೋರಿಸುತ್ತ, ಕಾದಾಡುತ್ತಿದ್ದರು. ಕೊನೆಯವರೆಗೂ ಯಾರು ಕಾದಾಡುತ್ತಿದ್ದರೋ, ಆ ಯುದ್ಧದಲ್ಲಿ ಅವರು ಜಯಶೀಲರಾಗುತ್ತಿದ್ದರು. ಪಾಪ ಸೋತ ರಾಜ ಗೆದ್ದ ರಾಜನಿಗೆ ತನ್ನ ರಾಜ್ಯವನ್ನು ಬಿಟ್ಟುಕೊಡಬೇಕಿತ್ತು. ಇನ್ನು ರಾಜಕುಮಾರಿಯ ಮದುವೆ ಎಂದರೆ ಹುಡುಗಾಟದ ವಿಷಯವೇನು? ರಾಜಕುಮಾರಿಯನ್ನು ವರಿಸಲು, ಹಲವು ರಾಜ್ಯಗಳಿಂದ ರಾಜಕುಮಾರರು ಬಂದು ತಮ್ಮ ಪರಾಕ್ರಮಗಳನ್ನು ಪ್ರದರ್ಶಿಸುತ್ತಿದ್ದರು. ರಾಜಕುಮಾರಿಗೆ ಯಾರ ಪರಾಕ್ರಮ ಇಷ್ಟವಾಗುತ್ತಿತ್ತೋ, ಆ ರಾಜಕುಮಾರನನ್ನು ಮದುವೆಯಾಗುತ್ತಿದ್ದಳು. ಇದೇನಪ್ಪ ಹುಲಿ ಬಗ್ಗೆ ಹೇಳ್ತ ಇದ್ದಾರಾ ಇವರು? ಎಂದು ಕೆಲವರಿಗೆ ಸಂಶಯ ಉಂಟಾಗಬಹುದು. ಇನ್ನೂ ಮುಂದೆ ಈ ಲೇಖನವನ್ನು ಓದಿದರೆ ನಿಮ್ಮ ಸಂಶಯ ದೂರವಾಗುತ್ತದೆ.
ಹುಲಿಗಳು ಯಾವಾಗಲೂ ಒಂಟಿಯಾಗಿ ಜೀವನ ಕಳೆಯುತ್ತವೆ. ರಾಜರಿಗೆ ಹೇಗೆ ಸಾಮ್ರಾಜ್ಯವಿರುತ್ತದೋ ಹಾಗೇ ಹುಲಿಗಳಿಗೆ ಅವುಗಳದ್ದೇ ಆದ ಸಾಮ್ರಾಜ್ಯವಿರುತ್ತದೆ, ಅದನ್ನು ನಾವು ಹುಲಿಗಳ ಪ್ರಾಂತ್ಯ (Territory) ಎಂದು ಕರೆಯುತ್ತೇವೆ. ಆ ಪ್ರದೇಶದ ವಿಸ್ತೀರ್ಣ ನಿಮಗೆ ಮೊದಲೇ ಹೇಳಿದ್ದೇನೆ. ಹೆಣ್ಣು ಹುಲಿ ಸಾಮಾನ್ಯವಾಗಿ ಯಾವ ಪ್ರದೇಶದಲ್ಲಿ ಹುಟ್ಟಿರುತ್ತದೋ, ಆ ಸ್ಥಳವನ್ನೇ ತನ್ನ ಪ್ರದೇಶವನ್ನಾಗಿ ಮಾಡಿಕೊಳ್ಳುತ್ತದೆ. ಆದರೆ ಗಂಡು ಹುಲಿ ಮಾತ್ರ ತಾನು ಬೆಳೆದ ಜಾಗವನ್ನು ತನ್ನ ಪ್ರದೇಶವನ್ನಾಗಿ ಮಾಡಿಕೊಳ್ಳಬಹುದು, ಅಥವಾ ಯಾವ ಹುಲಿಯೂ ಆವರಿಸಿಕೊಳ್ಳದ ಜಾಗವನ್ನು ಅಥವಾ ಇನ್ನೊಂದು ಗಂಡು ಹುಲಿಗೆ ಸವಾಲನ್ನು ಒಡ್ಡಿ, ಆ ಸವಾಲಿನಲ್ಲಿ ಗೆದ್ದು, ಅದರ ಜಾಗವನ್ನು ತನ್ನ ಪ್ರಾಂತ್ಯವನ್ನಾಗಿ ಮಾಡಿಕೊಳ್ಳಬಹುದು. ಹುಲಿಗಳು ತಮ್ಮ ಪ್ರಾಂತ್ಯವನ್ನು ವಾಸನೆಯಿಂದ ಗುರುತು ಮಾಡುತ್ತವೆ. ಈ ವಾಸನೆ ದೀರ್ಘಾವಧಿಕಾಲ ಹಾಗೇ ಉಳಿದಿರಬೇಕಲ್ಲ. ಅದಕ್ಕೆ ಈ ಹುಲಿಗಳು ಮರ, ಕಲ್ಲು ಮುಂತಾದವುಗಳ ಮೇಲೆ ಮೂತ್ರ ವಿಸರ್ಜನೆ ಮಾಡುವ ಮುಖಾಂತರ ಗುರುತು ಮಾಡುತ್ತವೆ ಹಾಗೂ ಮರಗಳ ಮೇಲೆ ಇದು ತನ್ನ ಪ್ರಾಂತ್ಯವೆಂದು ತನ್ನ ಉಗುರಿನಿಂದ ಗುರುತು ಮಾಡಿರುತ್ತವೆ. ಆ ಪ್ರಾಂತ್ಯದಲ್ಲಿಯೇ ಅದರ ಬೇಟೆ ಎಲ್ಲವೂ ಆಗಬೇಕಾಗುತ್ತದೆ. ಬೇರೆ ಹುಲಿ ತನ್ನ ಪ್ರಾಂತ್ಯಕ್ಕೆ ಬಂದಿದೆ ಎಂದು, ಆ ಪ್ರದೇಶದ ಹುಲಿಗೆ ವಾಸನೆಯಿಂದ ಸುಲಭವಾಗಿ ಗೊತ್ತಾಗುತ್ತದೆ.

ಯಾವಾಗ ಬೇರೆ ಹುಲಿ ತನ್ನ ಪ್ರಾಂತ್ಯಕ್ಕೆ ಬಂದಿದೆ ಎಂದು ತಿಳಿಯುತ್ತದೋ, ಕಾದಾಡಲು ಸಿದ್ಧವಾಗುತ್ತದೆ. ಆ ಪ್ರಾಂತ್ಯಕ್ಕೋಸ್ಕರ ಎರಡು ಹುಲಿಗಳು ಕಾದಾಡುತ್ತವೆ. ಆ ಕಾದಾಟ ಹೇಗಿರುತ್ತದೆ ಎಂದರೆ ಅದರಲ್ಲಿ ಒಂದು ಹುಲಿ ಸಾಯಲೂಬಹುದು. ಬದುಕಿರೋ ಹುಲಿ ಆ ಪ್ರಾಂತ್ಯದ ರಾಜನಾಗುತ್ತಾನೆ. ಇನ್ನೂ ಹೆಣ್ಣು ಹುಲಿ ಗಂಡು ಹುಲಿಯನ್ನು ವರಿಸಬೇಕಾದರೆ, ಅದರ ಪರಾಕ್ರಮವನ್ನು ನೋಡಿ ನಿಶ್ಚಯಿಸುತ್ತದೆ. ಯಾಕೆಂದರೆ ಯಾವಾಗ ಬೇಕಾದರು ಬೇರೆ ಹುಲಿಗಳ ಜೊತೆ ಘರ್ಷಣೆ ಉಂಟಾಗಬಹುದು. ಅದಕ್ಕೆ ಹೆಣ್ಣು ಹುಲಿ ತನ್ನ ಕಂದಮ್ಮಗಳ ಆಹಾರ ಹಾಗೂ ಸುರಕ್ಷತೆಯನ್ನು ಕುರಿತು ಯೋಚಿಸಿ ಗಂಡು ಹುಲಿಯನ್ನು ನಿಶ್ಚಯಿಸುತ್ತದೆ. ಹುಲಿಗಳ ಶೈಲಿ ಹಾಗೂ ಹಿಂದಿನ ರಾಜರ ಜೀವನ ಶೈಲಿ ಬಹುಮಟ್ಟಿಗೆ ಒಂದೇ ರೀತಿ ಇದ್ದುದ್ದರಿಂದ, ರಾಜರ ಜೀವನ ಶೈಲಿಯನ್ನು ಮೊದಲು ಹೇಳಬೇಕಿತ್ತು. ಮನುಷ್ಯ ಯಾವಾಗಲು ಪ್ರಕೃತಿಯನ್ನು ಅನುಕರಿಸುತ್ತಾನೆ ಎನ್ನುವ ಮಾತಿನಲ್ಲಿ ಸಂದೇಹವಿಲ್ಲ ನೋಡಿ.
ಹುಲಿಗಳು ತಮ್ಮ ಪ್ರಾಂತ್ಯವನ್ನು ಅಲ್ಲಿ ಸಿಗುವ ನೀರು ಹಾಗೂ ಬೇಟೆಯಾಡಲು ಸಿಗುವ ಪ್ರಾಣಿಗಳ ಮೇಲೆ ಆಯ್ಕೆ ಮಾಡಿಕೊಳ್ಳುತ್ತವೆ. ಯಾವುದೇ ಪ್ರಾಣಿ ಬದುಕಲು ಆ ಪ್ರದೇಶದಲ್ಲಿನ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಇರಬಾರದು. ಎಲ್ಲಿ ನೈಸರ್ಗಿಕ ಸಂಪನ್ಮೂಲಗಳು ಚೆನ್ನಾಗಿ ಸಿಗುತ್ತವೋ, ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಗಳು ಕಂಡು ಬರುತ್ತವೆ. ಹೆಚ್ಚಾಗಿ ಪ್ರಾಣಿಗಳು ಕಂಡು ಬಂದರೆ, ಹುಲಿಗೆ ಬೇಟೆಯಾಡಲು ಹೆಚ್ಚಾಗಿ ಆಯ್ಕೆಗಳು ದೊರೆಯುತ್ತವೆ. ಆ ಪ್ರದೇಶದಲ್ಲಿ ಸಸ್ಯಹಾರಿ ಪ್ರಾಣಿಗಳು ಹೆಚ್ಚಾಗಿ ಸಿಗುತ್ತಿವೆ ಎಂದರೆ, ಆ ಅರಣ್ಯ ಪ್ರದೇಶದಲ್ಲಿ ನೈಸರ್ಗಿಕ ಸಂಪನ್ಮೂಲಗಳಿಂದ ಕೂಡಿದೆ ಎಂದು ಅರ್ಥ. ಈಗ ಹುಲಿಗಳ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಮಧ್ಯೆ ಹೇಗೆ ಸಂಬಂಧ ಇದೆ ಎಂದು ನಿಮಗೆ ಅರ್ಥವಾಯಿತು ಎಂದುಕೊಂಡಿದ್ದೇನೆ.
ಆದರೆ ನಾವು ಈ ನೈಸರ್ಗಿಕ ಸಂಪನ್ಮೂಲಗಳನ್ನು ಹಾಗೂ ಹುಲಿಗಳ ಆವಾಸಗಳಾದ ಕಾಡುಗಳನ್ನು ಒತ್ತುವರಿ ಮಾಡುವುದರಿಂದ ಮತ್ತು ಇಂತಹ ಕಾಡುಗಳಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರಣ್ಯಗಳಿಗೆ ತೊಂದರೆಯಾಗುವ ಚಟುವಟಿಕೆಗಳನ್ನು ಮನುಷ್ಯ ಮಾಡಿದರೆ ಅಳಿವಿನಂಚಿನಲ್ಲಿರುವ ಹುಲಿ ಮತ್ತು ಇತರ ಪ್ರಾಣಿಗಳಿಗೆ ತೊಂದರೆಯಂತು ಕಟ್ಟಿಟ್ಟ ಬುತ್ತಿ. ಇಂತಹ ಪ್ರದೇಶಗಳಲ್ಲಿ ಯಾವಾಗ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಎದುರಾಗುತ್ತದೋ, ಸಸ್ಯಾಹಾರಿ ಪ್ರಾಣಿಗಳ ಸಂಕುಲ ಕಡಿಮೆಯಾಗುತ್ತದೆ. ಇದರಿಂದ ಹುಲಿಗಳಿಗೆ ಬೇಟೆಯಾಡಲು ಪ್ರಾಣಿಗಳು ದೊರಕದೆ, ಬೇರೆ ಹುಲಿಗಳ ಜೊತೆ ಪ್ರಾಂತ್ಯಕ್ಕಾಗಿ ಕಾದಾಟಕ್ಕೆ ನಿಲ್ಲುತ್ತವೆ. ಈ ಕಾದಾಟದ ಪರಿಣಾಮದಿಂದ ಒಂದು ಹುಲಿ ತನ್ನ ಆವಾಸವನ್ನು ಕಳೆದುಕೊಳ್ಳುತ್ತದೆ ಹಾಗು ಮತ್ತೊಂದು ಆವಾಸಕ್ಕಾಗಿ ಹುಡುಕಾಟ ನಡೆಸುತ್ತದೆ. ದೊರಕಿದರೆ ಸರಿ ಇಲ್ಲವಾದರೆ ಗಡಿಭಾಗದಲ್ಲಿರುವ ಹಳ್ಳಿಗಳಲ್ಲಿ ಸಿಗುವ ದನ ಕುರಿ ನಾಯಿಗಳು ಹುಲಿಗಳಿಗೆ ಸುಲಭ ತುತ್ತಾಗುತ್ತವೆ, ಅವುಗಳ ರಕ್ಷಣೆಗೆ ಮಾನವ ನಿಲ್ಲುತ್ತಾನೆ. ಆಕ್ರಮಣಕಾರಿಯಾದ ಹುಲಿಗಳಿಗೆ ಮಾನವ ನಿಸ್ಸಹಾಯಕ ಎಂದು ಬಲುಬೇಗ ತಿಳಿಯುತ್ತದೆ ಹಸಿವಿನಿಂದ ಅವು ನರಭಕ್ಷಕಗಳಾಗಿ ಮಾರ್ಪಡುತ್ತವೆ. ಮಾನವ ಅವುಗಳನ್ನು ನರಭಕ್ಷಕ ಎಂದು ಕೊಲ್ಲುತ್ತಾನೆ. ಇವುಗಳೆಲ್ಲದರ ಪರಿಣಾಮದಿಂದ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತವೆ.
ಒಂದು ಅರಣ್ಯ ಪ್ರದೇಶದ ನಾಶದಿಂದ, ಹುಲಿಗಳ ಸಂಖ್ಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಅರ್ಥವಾಗುತ್ತಿದೆ. ಎಲ್ಲ ಪ್ರಾಣಿಗಳು ಆಹಾರ ಸರಪಳಿಯಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಯಾವುದೇ ಪ್ರಾಣಿ ನಾಶವಾದರು ಆಹಾರ ಸರಪಳಿಯಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆ. ಆದ್ದರಿಂದ ನಾವು ಈಗಿರುವ ಅರಣ್ಯಪ್ರದೇಶಗಳನ್ನು ನಾಶಮಾಡದೇ ಎಲ್ಲ ಪ್ರಾಣಿ ಸಂಕುಲಗಳಿಗೂ ಬದುಕಲು ಬಿಡೋಣ…
ಲೇಖನ: ಅಶ್ವಿನಿ ಎಸ್.
ಬೆಂಗಳೂರು