ರೋಜಿ ಮತ್ತು ಹಾವುಗಳು.

ರೋಜಿ ಮತ್ತು ಹಾವುಗಳು.

© ನಾಗೇಶ್ ಓ ಎಸ್

ಈ ವರ್ಷ ನಿಜವಾಗಿಯೂ ಮುಂಗಾರು ಮಳೆ ತಡವಾಗಿದೆ. ಅಲ್ಲಲ್ಲಿ ಚದುರಿದ ಮೋಡಗಳು ಆಕಾಶದಲ್ಲಿ ರೊಯ್ಯನೆ ಚಲಿಸುತ್ತಿವೆಯಾದರೂ, ಮಳೆ ಮಾತ್ರ ಬರುತ್ತಿಲ್ಲ. ಕಳೆದ ವರ್ಷ ಇಷ್ಟೊತ್ತಿಗೆ ಒಳ್ಳೆ ಮಳೆಯಾಗಿ ಬಿತ್ತನೆ ಕಾರ್ಯಕ್ಕೆ ತಯಾರಾಗಿದ್ದೆ. ಬಿತ್ತಿದ ಮೇಲೆ ರಾಗಿಯ ಫಸಲೂ ಚೆನ್ನಾಗಿ ಬಂದಿತ್ತು. ಹಾಗಿದ್ದ ರಾಗಿಯನ್ನೆಲ್ಲಾ ಚೀಲಗಳಿಗೆ ತುಂಬಿಸಿ ಮೂಟೆ ಮಾಡಿ ಒಂದರ ಮೇಲೆ ಒಂದರಂತೆ ಸ್ಟೋರ್ ರೂಮಿನಲ್ಲಿ ಜೋಡಿಸಿ ಬಂದೋಬಸ್ತ್  ಮಾಡಿ ಮಡಗಿದ್ದೆ.

ಮನೆಯ ಸುತ್ತಲೂ ಇರುವ ಬಯಲು ಇಲಿಗಳಿಗೆ ನಮ್ಮ ರಾಗಿ ಮೂಟೆಗಳ ಸುಳಿವು ಸಿಕ್ಕು, ಸ್ಟೋರ್ ರೂಮಿನ ಗೋಡೆಗೆ ತೂತು ಕೊರೆದು ದಾಳಿ ಇಟ್ಟಿದ್ದವು. ರಾತ್ರಿ ವೇಳೆ ರಾಗಿ ಮೂಟೆಗಳನ್ನೆಲ್ಲಾ ತೂತು ಕೊರೆದು ಚಂದಾಗಿ ತಿಂದು ಅಲ್ಲೇ ಹಿಕ್ಕೆ ಹಾಕಿ ಹೋಗಿದ್ದವು. ‘ರೈತರಿಗೆ ಇರುವಷ್ಟು ಚಿಂತೆ ದೇಶವಾಳುವ ದೊರೆಗೂ ಇರದು’. ಮಳೆ ಬಂದರೆ ಬೀಜ-ಗೊಬ್ಬರ ಹೊಂದಿಸುವ ಚಿಂತೆ, ಬೆಳೆ ಬಂದರೆ ಅದಕ್ಕೆ ಒಳ್ಳೆ ಬೆಲೆ ಇಲ್ಲ  ಎಂಬ ಚಿಂತೆ. ನನಗೆ ದಿನ ರಾತ್ರಿ ರಾಗಿ ಮೂಟೆಗೆ ಕನ್ನ ಹಾಕುತ್ತಿದ್ದ  ಇಲಿಗಳ ಚಿಂತೆ. ಇವುಗಳಿಗೆ ಸರಿಯಾಗಿ ಬುದ್ಧಿ ಕಲಿಸಬೇಕೆಂದು ಗುಡ್ಡಯ್ಯನ ದೊಡ್ಡಿಯಿಂದ ಒಂದು ಬೆಕ್ಕಿನ ಮರಿ ತರಿಸಿದೆ. ಬೆಳ್ಳಗೆ ಕೆಂಚಗೆ ಇದ್ದ ಈ ಮುದ್ದು ಬೆಕ್ಕಿಗೆ ರೋಜಿ ಎಂದು ನಾಮಕರಣ ಮಾಡಿದೆ. ಬಟ್ಟಲಲ್ಲಿ ಹಾಲಿಟ್ಟು ಸ್ಟೋರ್ ರೂಮಿನಲ್ಲಿ ಬಿಟ್ಟೆ. ಈ ಸಣ್ಣ ಬೆಕ್ಕಿಗೆ ಆ ಇಲಿಗಳು ಕ್ಯಾರೇ ಎನ್ನದೆ ತಮ್ಮ ಕೆಲಸವನ್ನು ಮುಂದುವರಿಸಿದ್ದವು. ಈ ಬೆಕ್ಕುಮರಿ ಮಾತ್ರ ಹಾಲು-ಅನ್ನ ತಿಂದು ರಾಗಿಯ ಚೀಲದ ಮೇಲೆ ಮಲಗಿ ಗಡದ್ದು ನಿದ್ದೆ ಮಾಡುತ್ತಿತ್ತು.

© ನಾಗೇಶ್ ಓ ಎಸ್

ಈ ಬೆಕ್ಕಿಗೆ ಹಾಲು-ಅನ್ನ ಹಾಕದೆ ಉಪವಾಸ ಕೆಡವಿದರೆ, ಹೊಟ್ಟೆ ಹಸಿವಿಗೆ ಇಲಿ ಹಿಡಿದು ತಿನ್ನುತ್ತದೆ ಎಂದೆಣಿಸಿ  ಹಾಲು-ಅನ್ನ ಹಾಕುವುದನ್ನು ನಿಲ್ಲಿಸಿದೆ. ಹಸಿದ ರೋಸಿ ಮಿಯಾಂವ್… ಮಿಯಾಂವ್… ಎಂದು ಮನೆಯೆಲ್ಲ ಓಡಾಡಿತು.

 ನೀವು ಪಕ್ಷಿ ಪ್ರೇಮಿಗಳಾಗಿದ್ದರೆ ಬೆಕ್ಕನ್ನು ಮಾತ್ರ ಸಾಕಬೇಡಿ. ನಮ್ಮ ಮನೆಯ ಪಡಸಾಲೆಯ ಜಂತಿಯಲ್ಲಿ ಹಲವು ವರ್ಷದಿಂದ ಗುಬ್ಬಚ್ಚಿಗಳು ಗೂಡುಕಟ್ಟಿ ವಾಸವಿದ್ದವು. ಅವು ಮುಂಜಾನೆ ಮನೆಯಂಗಳದಲ್ಲಿ ಚೆಲ್ಲಿದ್ದ ಕಾಳು ತಿನ್ನುತ್ತಿದ್ದವು. ಹಸಿದ ರೋಜಿ ಒಂದೇ ನೆಗೆತಕ್ಕೆ ಹಾರಿ ಕಾಳು ತಿನ್ನುತ್ತಿದ ಗುಬ್ಬಚ್ಚಿಯ ರೆಕ್ಕೆಹಿಡಿದು ಕ್ಷಣಾರ್ಧದಲ್ಲಿ ಹಕ್ಕಿಯ ಪುಕ್ಕ ತರಿದು ತಿಂದುಬಿಟ್ಟಳು. ಈಗ ನಮ್ಮ ಮನೆಯ ಬಳಿ ಹಕ್ಕಿಗಳ ಕಲರವ ಕೇಳಿ ಬಹಳ ದಿನವಾಗಿದೆ.ಮನೆಯಲ್ಲಿದ್ದ ಗುಬ್ಬಚ್ಚಿಗಳನ್ನೆಲ್ಲಾ ಗುಳುಂ ಮಾಡಿದ ಮೇಲೆ ಇಲಿಗಳ ಮೇಲೆ ದಾಳಿ ಇಟ್ಟಿತು. ಮೊದಲೆಲ್ಲಾ ಸಣ್ಣ ಸಣ್ಣ ಇಲಿಗಳನ್ನು ಹಿಡಿದು ಮುಕ್ಕಿತು. ಮನೆಯಲ್ಲಿ ಇದ್ದ ಇಲಿಗಳೆಲ್ಲಾ ಖಾಲಿಯಾದ ಮೇಲೆ ಬಯಲಿನ ಹೆಗ್ಗಣಗಳನ್ನು ಕೊಂದು ತಂದು ರೂಮಿನ ಮಂಚದ ಅಡಿಯಲ್ಲಿ ಹಾಕಿಕೊಂಡು ತಿಂದು, ಉಳಿದ ಇಲಿಯ ಕಳೆಬರ ಅಲ್ಲೇ ಬಿಟ್ಟು ಕೊಠಡಿಯನ್ನೆಲ್ಲಾ  ಗಲೀಜು ಮಾಡಿ ಕೊಳೆತ ವಾಸನೆ ಬರುವಂತೆ ಮಾಡಿತು. ಇಲಿಗಳಿಗೆ ಹೆದರಿ  ರೋಜಿಯ ಈ ಎಲ್ಲಾ ತಂಟೆಗಳನ್ನು ಸಹಿಸಿಕೊಳ್ಳುಷ್ಟರಲ್ಲಿ ನನಗೆ ಸಾಕುಸಾಕಾಗಿ ಹೋಯ್ತು. ಹೀಗೆ ರೋಜಿ ಬೆಳೆದು ದೊಡ್ಡವಳಾದಳು.

ನಾವು ಓದಿರುವ ಆಹಾರ ಸರಪಳಿಯ ಪ್ರಕಾರ, ಮನೆಯ ಸುತ್ತ-ಮುತ್ತ ಇಲಿಗಳು ಕಡಿಮೆಯಾದರೆ ಅವನ್ನು ತಿಂದು ಬದುಕುವ ಹಾವುಗಳಿಗೆ ಊಟವಿಲ್ಲದೆ ಸತ್ತು, ಅಥವಾ  ಆಹಾರವನ್ನು ಅರಸಿ ಬೇರೆಡೆ ವಲಸೆ ಹೋಗಿ, ಹಾವುಗಳ ಸಂಖ್ಯೆಯೂ ಕಡಿಮೆಯಾಗಬೇಕಲ್ಲವೇ?  ಆದರೇ ಕಳೆದ ಒಂದೇ ವಾರದಲ್ಲಿ ನಾಲ್ಕು ತರಾವರಿ ಹಾವುಗಳು ಮನೆಯ ಒಳಗೆ, ಬಾಗಿಲಲ್ಲಿ ಕಾಣಿಸಿಕೊಂಡು ದಿಗಿಲಿಕ್ಕಿಸಿವೆ ಎಂದರೆ ನೀವೇ ಊಹಿಸಿಕೊಳ್ಳಿ ನಮ್ಮ ಪಾಡು!.

©ವಿಪಿನ್ ಬಾಳಿಗಾ

ಹಿತ್ತಲುಮನೆಯ ಬಚ್ಚಲಿನ ಬಳಿ ನಾಗರ ಹಾವನ್ನು ಕಂಡ ರೋಜಿ ಅದರ ಜೊತೆ ಸರಸವಾಡಿದಳೆಂದೂ, ರೋಜಿ ಹಾವನ್ನು ಹೆದರಿಸಿ ಓಡಿಸಿದಳೆಂದೂ, ಬೆಕ್ಕಿಗೆ ಬೆದರಿ ಹಾವು ಹೆಡೆಮುದುರಿ ಓಟಕಿತ್ತಿತೆಂದೂ, ಮಂಗಳವಾರ ಸಂತೆ ವ್ಯಾಪಾರ ಮುಗಿಸಿ ಬಂದಿದ್ದ ನನಗೆ ಮನೆಯಲ್ಲಿದ್ದವರೆಲ್ಲಾ ತರಾವರಿ  ವರದಿಯನ್ನು ಒಪ್ಪಿಸಿದರು. ನಾಗರ ಹಾವಿನಂತಹ ವಿಷಕಾರಿ ಹಾವನ್ನೇ ಎದುರಿಸಿದ ಧೈರ್ಯವಂತ ಬೆಕ್ಕು ನಮ್ಮ ಮನೆಯಲ್ಲಿ ಇರುವುದು ಎಷ್ಟು ಒಳ್ಳೆಯದು ಎಂದು ಮನೆಯವರೆಲ್ಲರೂ ಅದಕ್ಕೆ ಹಾಲು – ಅನ್ನವನ್ನು ಸ್ವಲ್ಪ ಹೆಚ್ಚಿಗೆ ಕೊಡಲಾರಂಭಿಸಿದರು. ಅನ್ನ ತಿಂದು ಹಾಲು ಕುಡಿದು ಬಚ್ಚಲ ಒಲೆಯ ಬಳಿ ಮುದುಡಿ ಬೆಚ್ಚಗೆ ಮಲಗಿ ಹಾಯಾಗಿ ನಿದ್ರಿಸುವುದೇ ರೋಜಿಯ ದಿನಚರಿಯಾಯ್ತು.

ಇಲಿಗಳು ಮನೆಯಲ್ಲಿ ಕಡಿಮೆಯಾಗಿದ್ದಕ್ಕೆ ಅವುಗಳನ್ನು ಹುಡುಕಿಕೊಂಡೇನಾದರೂ ಹಾವುಗಳು ಬಂದವಾ? ಎಂದು ನನಗೇನೋ ಅನುಮಾನ!.  ಬೆಳಿಗ್ಗೆ ಬಾಗಿಲಿಗೆ ನೀರು ಹಾಕಿ ರಂಗೋಲಿ ಇಡಲು ಬಾಗಿಲು ತೆಗೆದಾಗ ನಿಲುವಿನ ಬಳಿ ಹಾವನ್ನು ಕಂಡು “ಅಯ್ಯಪ್ಪಾ…  ಹಾವು ಹಾವು… ಎಂದು  ಚೀರಿದಳು ಹೆಂಡತಿ! ಬಂದು ನೋಡಿದರೆ ಹಸಿರು ಬೆನ್ನೇಣು ಹಾವು (ಗ್ರೀನ್ ಕೀಲ್ ಬ್ಯಾಕ್ )! ಚಕ್ಕುಲಿಯಂತೆ ತೆಕ್ಕೆ ಹಾಕಿ ಮಲಗಿತ್ತು.

ಗೆಳೆಯ ಪವನ್ ಜೊತೆ ಅಲೆಮಾರಿಯ ತರಹ  ಕಾಡು-ಮೇಡು ತಿರುಗುವ ಕಾಲದಲ್ಲಿ  ನನಗೆ ಯಾವ ಹಾವು ವಿಷಕಾರಿ ಹಾಗೂ ಯಾವ ಹಾವು ವಿಷಕಾರಿಯಲ್ಲ ಎಂದು ಗುರುತಿಸುವುದನ್ನು ತಿಳಿಸಿದ್ದ. ಭಾರಿ ವಿಷವೇನೂ ಇಲ್ಲದ, ಬರೀ ಕಪ್ಪೆಯನ್ನು  ಮಾತ್ರ ತಿನ್ನುವ ಹಸಿರು ಬೆನ್ನೇಣು ಹಾವು ಮನೆ ಬಾಗಿಲಿಗೆ ಏಕೆ ಬಂತು? ನನ್ನ ಸಣ್ಣ ಮಗಳು ಬೇರೆ ಈ ಬಾಗಿಲ ಬಳಿಯೇ ಆಟವಾಡುತ್ತಾಳೆ. ನಾವು ಇಲ್ಲೇ ಓಡಾಡುತ್ತೇವೆ ಎಂದು ಆತಂಕಗೊಂಡೆ. ಅಲ್ಲೇ ದೂರದಲ್ಲಿ  ರೋಜಿ ಕುಳಿತಿದ್ದಳು.

ಭಾರತದ ದಖನ್ ಪ್ರಸ್ಥಭೂಮಿ ಮತ್ತು ಶ್ರೀಲಂಕಾದಲ್ಲಿ ಕಾಣಸಿಗುವ ಈ ಹಸಿರು ಬೆನ್ನೇಣು ಹಾವು, ಹಸಿರು ಬಣ್ಣದ ಸುಂದರ ಹಾವು. ಇದು ಮರಿಯಾಗಿದ್ದಾಗ ಗಾಢ ಎಲೆಹಸಿರು ಬಣ್ಣದಿಂದ  ಕೂಡಿದ್ದು ಈ ಜಾತಿಯ ಮರಿ ಹಾವುಗಳ ತಲೆಯ ಮೇಲೆ “A” ಆಕಾರದ ಕಪ್ಪು ಪಟ್ಟೆಗಳ ನಡುವೆ ಹಳದಿ ಬಣ್ಣವಿರುತ್ತದೆ. ಹಾವು ದೊಡ್ಡದಾದ ಮೇಲೆ ಈ ಪಟ್ಟೆಗಳು ಮಾಯವಾಗುತ್ತವೆ. ಎಲೆ ಉದುರುವ ಕಾಡು, ತೆರೆದ ಬಯಲಿನಲ್ಲಿ, ತೋಟಗಳಲ್ಲಿ ಮತ್ತು ಜೌಗು ಪ್ರದೇಶದಲ್ಲಿನ ಪೊದೆಗಳಲ್ಲಿ ಕಂಡು ಬರುವ ಇದು ಸುಮಾರು ಒಂದು ಮೊಳ ಉದ್ದ ಇರುತ್ತದೆ.

© ನಾಗೇಶ್ ಓ ಎಸ್

ರಾತ್ರಿ ವೇಳೆ ಹೆಚ್ಚು ಕ್ರಿಯಾಶೀಲ ವಾಗಿರುವ ಹಾವು ಮನೆ ಬಾಗಿಲಿಗೆ ಏಕೆ ಬಂತು ಎಂದು ಯೋಚಿಸುತ್ತಾ ಒಂದು ಉದ್ದ ಕಡ್ಡಿ ತೆಗೆದು ಕೊಂಡು  ಹಾವನ್ನು  ಎತ್ತಿ ದೂರದ ಬೇಲಿಗೆ ಬಿಸಾಕಿ ಬಂದೆ. ನನ್ನ ಹಿಂದೆಯೇ ರೋಜಿಯೂ ಬಂದಿದ್ದಳು. ಆ ದಿನಪೂರ್ತಿ ಬಾಗಿಲ ಬಳಿ ಬಂದಾಗಲೆಲ್ಲಾ ಹಾವಿನ ನೆನಪಾಗಿ ಏನೋ ಒಂದು ಸಣ್ಣಭಯ ಮನೆಮಂದಿಗೆಲ್ಲರಿಗೂ ಜಾಗೃತವಾಗುತ್ತಿತ್ತು.  ಮಾರನೇ ರಾತ್ರಿ ಮನೆಯಲ್ಲಿ  ಮಲಗಿದ್ದೆ, ಒಂದು ಹೊತ್ತಿನಲ್ಲಿ ಬಾಯಾರಿಕೆ ಯಾಯಿತು. ಎದ್ದು ಅಡುಗೆ ಕೋಣೆಯ ಲೈಟಾಕಿ ನೀರು ಕುಡಿಯುತ್ತಿರಬೇಕಾದರೆ ಗ್ಯಾಸ್ ಸಿಲಿಂಡರಿನ ಬಳಿಯಿಂದ ಏನೋ ಒಂದು ಸಣ್ಣ ಶಬ್ದವಾಯಿತು. ನಾನು ಅದು ಯಾವುದೋ ಇಲಿಯೋ ಜಿರಳೆಯೋ ಇರಬೇಕೆಂದುಕೊಂಡರೂ ಬೆಳಿಗ್ಗೆಯಿಂದ ಕಂಡ ಹಾವುಗಳೇ ತಲೆಯಲ್ಲಿ ಇದ್ದುದ್ದರಿಂದ ಹಾವೇನಾದರೂ ಅಡುಗೇ ಮನೆಗೂ ಬಂತಾ! ಎಂದು ನೋಡಿದರೆ, ಗ್ಯಾಸ್ ಸಿಲಿಂಡರಿನ ತಳಭಾಗದಲ್ಲಿ ಇರುವ ರಿಂಗಿನಲ್ಲಿನ ಸಣ್ಣ ರಂಧ್ರದಲ್ಲಿ  ತಲೆ ಹೊರಗಾಕಿ ದೇಹವನ್ನೆಲ್ಲ ರಿಂಗಿನ ಒಳಗೆ ತೆಕ್ಕೆ ಹಾಕಿ ಕುಳಿತಿದೆ ಹೆಬ್ಬೆಟ್ಟು ಗಾತ್ರದ ಹಾವು. ಸರಿರಾತ್ರಿಯಲ್ಲಿ ಏನು ಮಾಡಲಿ? ಇನ್ನು ಮನೆಯವರನ್ನು ಎಚ್ಚರಿಸಿದರೆ  ಅಡುಗೆ ಮನೆಯಲ್ಲಿ ಹಾವನ್ನು ಕಂಡು ಇನ್ನೂ ದೊಡ್ಡ ಅನಾಹುತವಾದೀತೆಂದು ನಿಧಾನವಾಗಿ ಗ್ಯಾಸ್ ಸ್ಟೋವ್ ನ ರೆಗ್ಯುಲೇಟರ್ ಬಿಚ್ಚಿ ಸಿಲಿಂಡರ್ ಅನ್ನು ನಿಧಾನವಾಗಿ ಮನೆಯಾಚೆಯ ವರಾಂಡಕ್ಕೆ ಸಾಗಿಸಿದೆ.

 ನಾನು ಸಿಲಿಂಡರ್ ಅನ್ನು ಎತ್ತಿ ಸಾಗಿಸುವಾಗ ತಳದಲ್ಲಿ ತೆಕ್ಕೆಯಾಕಿ ಮಲಗಿದ್ದ ಹಾವು ಕೆಳಗೆ ಬೀಳುವುದೇನೋ ಎಂದು ಹೆದರಿದ್ದೆ. ಆದರೆ ಹಾಗೇನೂ ಆಗಲಿಲ್ಲ. ಈಗ ಮನೆಯವರನ್ನೆಲ್ಲಾ ಎಚ್ಚರಿಸಿದೆ. ಹಾವನ್ನು ತೋರಿಸಿದೆ. ಅಡುಗೆ ಮನೆಯ ಸಿಲಿಂಡರ್ ಕೆಳಗೆ ಹಾವು ಬಂದಿದೆ ಇಲ್ಲೇ ದಿನಾ ಅಡುಗೆ ಮಾಡಿ, ಗುಡಿಸಿ ಸಾರಿಸಿ ಎಲ್ಲಾ ಮಾಡಿದ್ದಿರಾ. ಇಷ್ಟು ದೊಡ್ಡ  ಹಾವು ನಿಮ್ಮ ಕಣ್ಣಿಗೆ ಕಾಣಲಿಲ್ಲವೇ? ಎಂದು ಜಬರ್ದಸ್ತ್ ಮಾಡಿದೆ. ಪಾಪ ಮೊದಲೇ ಹಾವಿಗೆ ಹೆದರಿದ್ದರಿಂದ ಅವರು ಮರುಮಾತಾಡಲಿಲ್ಲ. ನಿದ್ದೆ ಕಣ್ಣಲ್ಲೇ ಕಣ್ಣುಜ್ಜುತ್ತಾ ಹಾವನ್ನು ನೋಡುತ್ತಾ ನಿಂತರು. ಹರಸಾಹಸ ಮಾಡಿ ಸಿಲಿಂಡರ್ ನ ತಳದಿಂದ ಹಾವನ್ನು ಕಡ್ಡಿಯಿಂದ ಹೊರತೆಗೆದು ನೋಡಿದರೆ ಹೆಬ್ಬೆರಳು ಗಾತ್ರದ ಒಂದು ಅಡಿ ಉದ್ದವಿದ್ದ ಅತ್ಯಂತ ವಿಷಕಾರಿ ಗರಗಸ ಮಂಡಲ ಹಾವು. ಇದು ಕೊಳಕು ಮಂಡಲ ಹಾವಿಗಿಂತ ವಿಷಕಾರಿ. ತ್ರಿಭುಜಾಕಾರದ ತಲೆ ಮತ್ತು ದೊಡ್ಡಕಣ್ಣುಳ್ಳ ಒಣ ಎಲೆಯ ಬಣ್ಣದ ತಿಳಿ ಕಂದು ಬಣ್ಣದ ಹಾವು. ಅದನ್ನು ನೋಡಿ ನನಗೆ ಭಯವಾಯಿತು. ನಾನು ಇದನ್ನು ಹಲವುಬಾರಿ ಬೆಟ್ಟಗಳ ಬಳಿ, ಕಾಡಿನಲ್ಲಿ ಸಂಜೆಯ ವೇಳೆ ನೋಡಿದ್ದೆ. ಇದು ಭಾರತದ ಹಿಮಾಲಯ ಮತ್ತು ನೈಋತ್ಯ ಭಾರತದಲ್ಲಿ ಬಿಟ್ಟು ಎಲ್ಲಾ ಕಡೆ ಕಾಣಸಿಗುತ್ತದೆ.

ಬಂಡೆಗಳ ಮೇಲೆ ಎಲೆಗಳ ನಡುವೆ ಅಡಗಿ ಕುಳಿತರೆ ಇದು ಕಾಣುವುದೇ ಇಲ್ಲ. ಸಂಜೆಯ ವೇಳೆ ಹೆಚ್ಚು ಕ್ರಿಯಾಶೀಲವಾಗಿರುವ ಆಕ್ರಮಣಕಾರಿ ಹಾವು. ಭಯಗೊಂಡಾಗ ಚಕ್ಕುಲಿಯಾಕಾರಕ್ಕೆ ತೆಕ್ಕೆಹಾಕಿ ಗರಗಸ ಕುಯ್ಯುವಾಗ ಬರುವ ಸದ್ದಿನಂತೆ ಸದ್ದು ಮಾಡುತ್ತದೆ. ಇಲಿ, ಕಪ್ಪೆ, ಓತಿ, ಕೀಟಗಳನ್ನು ಹಿಡಿದು ತಿನ್ನುವ ಈ ಹಾವು ನಮ್ಮ ಮನೆಯ ಅಡುಗೆ ಮನೆಗೆ ಹೇಗೆ ಬಂತು ಎಂಬುದೇ ನನಗೆ ತಿಳಿಯಲಿಲ್ಲ. ಸಿಲಿಂಡರಿನ ತಳದಿಂದ ನಿಧಾನಕ್ಕೆ ಹೊರಬಂದ ಹಾವನ್ನು ಕಡ್ಡಿಯಿಂದ ಎತ್ತಿ ದೂರ ಹಾಕಿ ಬಂದೆ. ಈ ಪ್ರಭೇದದ ಹಾವುಗಳು ರಸ್ತೆ ದಾಟುವಾಗ ಗಾಡಿಗಳ ಚಕ್ರಕ್ಕೆ ಸಿಕ್ಕಿ ಸತ್ತು  ಬಿದ್ದದ್ದನ್ನು ಹಲವು ಬಾರಿ ನೋಡಿದ್ದೇನೆ.

        ಮಾರನೆ ದಿನ ಸಂಜೆ ಆರರ ಹೊತ್ತಿಗೆ ಮನೆಯ ಬಾಗಿಲಿನಲ್ಲೇ ಇನ್ನೊಂದು ಮೊಳ ಉದ್ದದ ನಸುಗೆಂಪು ಬಣ್ಣದ ಹಾವು ಕಾಣಿಸಿಕೊಳ್ಳುವುದೇ? ಅದು ಒಂದು ಮಣ್ಣಾವು ಎಂದು ನನಗೆ ಗೊತ್ತಿದ್ದರಿಂದ ಒಂದು ಬಕೆಟ್ ತಂದು ಕಡ್ಡಿಯಿಂದ ಹಾವನ್ನು ಎತ್ತಿ ಬಕೆಟ್ ಒಳಗಾಕಿ ಗೆಳೆಯ ಅಶ್ವತ್ ರವರಿಗೆ ಕರೆ ಮಾಡಿ, ಅವರಿಗೆ ಅದನ್ನು ಎಲ್ಲಾದರೂ ದೂರಬಿಡಿ ಎಂದು ಕೊಟ್ಟು ಕಳುಹಿಸಿದೆ. ಅಲ್ಲೆ ನನ್ನ ಕಾಲ ಬಳಿ ರೋಜಿ ಕುಳಿತಿತ್ತು.  ಕಪ್ಪು ಗಟ್ಟಿದ್ದ ಆಕಾಶದ ಮೋಡ ಕರಗಿ, ಧೋ… ಎಂದು ಮಳೆ ಸುರಿಯತೊಡಗಿತು. ಮನೆ ಮುಂದೆ ರಸ್ತೆಯಲ್ಲಿ ನೀರು ಹರಿಯಿತು. ಜೋರಾಗಿ ಚಲಿಸುವ ಕಾರು ಬೈಕುಗಳ ಬೆಳಕು ಮಳೆಯಲ್ಲಿ ಕತ್ತಲನ್ನು ಸೀಳಿ ಸಾಗುತ್ತಿದ್ದವು. ಮಳೆಯಲ್ಲಿ ಬೇಟೆಗೆ ಹೊರ ಹೋಗಿದ್ದ ರೋಜಿ ರಸ್ತೆ ದಾಟುವಾಗ ಮಳೆಯಲ್ಲಿ ಹೆಡ್ ಲೈಟಿನ ಬೆಳಕಲ್ಲೆ ಯಾವುದೋ ಗಾಡಿ ಗುದ್ದಿ ನಡು ರಸ್ತೆಯಲ್ಲಿ  ಬಿದ್ದಿತ್ತು! ಪ್ರೀತಿಯಿಂದ ಸಾಕಿದ ರೋಜಿ ಸತ್ತು ಬಿದ್ದಿದ್ದಳು. ಅವಳ ಕಳೆಬರವನ್ನ ರಸ್ತೆ ಬದಿಯಲ್ಲೇ ಗುಂಡಿ ತೋಡಿ ಮಣ್ಣು ಮಾಡಿದೆ. ಅವಳ ಸಮಾಧಿಯ ಮೇಲೆ ಒಂದು ಗುಲ್ಮೊಹರ್ ಸಸಿ ನೆಟ್ಟಿದ್ದೇನೆ. ಗಿಡ ಬೆಳೆಯುತ್ತಿದೆ. ಈಗ ನನ್ನ ಮನೆಯಲ್ಲಿ ಹಾವುಗಳು ಕಾಣುತ್ತಿಲ್ಲ.

ಲೇಖನ: ಶಂಕರಪ್ಪ ಕೆ. ಪಿ.
ಬೆಂಗಳೂರು

Print Friendly, PDF & Email
Spread the love
error: Content is protected.