ಮಾಸ ವಿಶೇಷ – ಕಗ್ಗಲಿ

ಮಾಸ ವಿಶೇಷ – ಕಗ್ಗಲಿ

©ನಾಗೇಶ್ ಓ ಎಸ್, ಕಗ್ಗಲಿ ಹೂ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಇಂಗ್ಲೀಷ್ ಹೆಸರು : Black Cutch tree
ವೈಜ್ಞಾನಿಕ ಹೆಸರು : Acacia catechu

ಕಗ್ಗಲಿ ಮರ ಹಿಮಾಲಯದ ಬುಡದಿಂದ ದಕ್ಷಿಣ ಭಾರತದಾದ್ಯಂತ ಬೆಳೆಯುತ್ತದೆ. ಈ ಮರವು ಎಲೆ ಉದುರುವ ಶುಷ್ಕ ಕಾಡುಗಳಂತಹ ಗಿರ್ ವನ್ಯಜೀವಿ ಅಭಯಾರಣ್ಯ, ಕಾರ್ಬೆಟ್ ರಾಷ್ಟ್ರೀಯ ಉದ್ಯಾನ, ಭಾರತದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ವ್ಯಾಪಕವಾಗಿ ಬೆಳೆದಿರುವುದು ಕಾಣುತ್ತದೆ. ಮ್ಯಾನ್ಮಾರ್, ಥೈಲ್ಯಾಂಡ್ ಮತ್ತು ದಕ್ಷಿಣ ಚೀನಾಗಳಲ್ಲಿ ಹೆಚ್ಚಾಗಿ ಕಂಡು ಬೆಳೆಯುತ್ತದೆ. ಈ ಮರವು ಸುಮಾರು 15 ಮೀಟರ್ ಎತ್ತರದವರೆಗೂ ಬೆಳೆಯುತ್ತದೆ. ಇದರ ತೊಗಟೆ ಗಾಢ ಬೂದುಬಣ್ಣ ಹೊಂದಿದ್ದು, ತೊಗಟೆಯ ಮೇಲಿನ ಪದರವು ಉದ್ದಕ್ಕೆ ಪಟ್ಟೆಯಂತೆ ಕಳಚಿಕೊಳ್ಳುತ್ತದೆ. ಚಿಗುರಿದ ಕೊಂಬೆಗಳ ಮೇಲೆ ಬಾಗಿದ ಮುಳ್ಳುಗಳ್ಳನ್ನು ಹೊಂದಿದ್ದು, ಪ್ರತಿಯೊಂದು ಎಲೆಗಳ ಗುಚ್ಚದಲ್ಲೂ 30-50 ಜೋಡಿಯ ಸಣ್ಣ ಹಸಿರು ಎಲೆಗಳನ್ನು ಕಾಣಬಹುದು, ಎಲೆಯ ಮೊಂಡಾದ ತುದಿ; ಎಲೆಗಳ ಅಂಚಿನಲ್ಲಿ ನಯವಾದ ಕೂದಲಿರುತ್ತವೆ.

            ಜುಲೈ-ಆಗಸ್ಟ್ ತಿಂಗಳುಗಳಲ್ಲಿ ಸಣ್ಣ, ಕೆನೆ ಬಿಳಿಯ ಬಣ್ಣದ ಸಿಲಿಂಡರಾಕಾರದ ಉದ್ದನೆಯ ಹೂ ಗುಚ್ಚ ರೂಪುಗೊಂಡಿರುತ್ತವೆ. ಬ್ರಷ್ ತರಹದ ಹೂಗಳ ತುದಿಯಲ್ಲಿ ಸಣ್ಣ ಸಣ್ಣ ತಿಳು ಹಳದಿಯ ಕೇಸರಗಳು ಮೂಡಿರುತ್ತವೆ. ಇದರ ಕಾಯಿಗಳು ಸುಮಾರು 10 ಸೆಂ.ಮೀ  ಉದ್ದವಾಗಿದ್ದು, ತೆಳು ಹಾಗು ಚಪ್ಪಟೆಯಾಗಿದೆ. ಇದರ ಕಾಯಿಗಳು  ಕೊಳೆತಾಗ ಕಂದು ಬಣ್ಣಕ್ಕೆ ತಿರುಗುತ್ತವೆ. ಒಳಗೆ ಬೀಜಗಳು ಚಪ್ಪಟೆಯಾದ ತಿಳಿ ಪಾಚಿ ಬಣ್ಣದಲ್ಲಿರುತ್ತವೆ. ಈ ಮರವು ಒಂದು ಮೂಲಿಕೆಯ ಮರ, ಅದರ ಎಲೆ, ಚಿಗುರು ಮತ್ತು ಕಾಂಡಗಳನ್ನು ಔಷಧಿಯಲ್ಲಿ ಬಳಸಲಾಗುತ್ತದೆ.

Print Friendly, PDF & Email
Spread the love
error: Content is protected.