ಅಡವಿಯಲ್ಲಿನ ಪಾತರಗಿತ್ತಿಯ ಪರಿಚಯ

ಅಡವಿಯಲ್ಲಿನ ಪಾತರಗಿತ್ತಿಯ ಪರಿಚಯ

ಕೀಟಗಳ ಲೋಕವೇ ಒಂದು ವಿಸ್ಮಯ ಪ್ರಪಂಚ. ಅವುಗಳ ಬಗ್ಗೆ ತಿಳಿಯುತ್ತಾ ಹೊರಟರೆ ಮುಗಿಸಲು ಇಡೀ ಜೀವಮಾನವೇ ಸಾಲದು. ಅವುಗಳ ಜೀವನ ಚಕ್ರ, ಬೇಟೆಯಾಡುವ ಕೌಶಲ್ಯ, ಶತ್ರುವಿನಿಂದ ರಕ್ಷಿಸಿಕೊಳ್ಳಲು ಅಳವಡಿಸಿಕೊಂಡಿರುವ ಚಾಣಾಕ್ಷತೆಗಳು ಅತಿ ಬುದ್ಧಿವಂತ ಜೀವಿ ಎನಿಸಿರುವ ಮಾನವನನ್ನು ಚಕಿತಗೊಳಿಸುತ್ತವೆ. ಪ್ರಪಂಚದಲ್ಲಿನ 50 ಭಾಗಕ್ಕಿಂತ ಹೆಚ್ಚು ಜೀವಿಗಳು ಈ ಕೀಟಗಳಾಗಿವೆ. ಭೂಮಿಯ ಮೇಲಿನ ಪ್ರತೀ  ಮೂಲೆಯಲ್ಲೂ ಕಾಣಸಿಗುವ ಇವು ಪರಿಸರದ ಸಮತೋಲನ ಕಾಪಾಡುವುದರಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ.

ಇನ್ನು ಕೀಟಗಳ ಒಂದು ಗುಂಪಾಗಿರುವ ಚಿಟ್ಟೆಗಳ ಬಗ್ಗೆ ಹೇಳುವುದಾದರೆ, ಇವು ತಮ್ಮ ಸೌಂದರ್ಯದಿಂದ  ಎಲ್ಲರನ್ನೂ  ಮನಸೂರೆಗೊಳಿಸಿವೆ. ಈ ವರ್ಣರಂಜಿತ ಚಿಟ್ಟೆಗಳೇ ಹುಟ್ಟುವಾಗ ನೋಡಲು ಸಹ ಭಯ ಹುಟ್ಟಿಸುವಂತಹ ಕಂಬಳಿ ಹುಳುಗಳಾಗಿರುತ್ತವೆ  ಎಂಬುದನ್ನು ಊಹಿಸಲು ಸಹ ಆಗುವುದಿಲ್ಲ. ಈ ಸುಂದರ, ಬಹು ಆಕರ್ಷಕ ಜೀವಿಗಳ ಬಗ್ಗೆ ಸಾಮಾನ್ಯ ಜನರಿಗೆ, ಶಾಲಾ ಮಕ್ಕಳಿಗೆ ತಿಳಿಸಿಕೊಡಬೇಕೆಂಬ ಉದ್ದೇಶದಿಂದ WCGಯು ತನ್ನ  ‘ಅಡವಿ ಫೀಲ್ಡ್ ಸ್ಟೇಷನ್ ‘ ನಲ್ಲಿ ಚಿಟ್ಟೆಗಳ ಬಗ್ಗೆ ಒಂದು ದಿನದ ಕಾರ್ಯಕ್ರಮವನ್ನು 28ನೇ ಜೂನ್ 2019 ರಂದು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲಿ ಹೆಬ್ಬಗೋಡಿ ಸರ್ಕಾರಿ  ಪ್ರೌಢಶಾಲೆಯ 35 ವಿದ್ಯಾರ್ಥಿಗಳು ಹಾಗು ಬೇರೆ ಬೇರೆ ಆಯಾಮದ 15 ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

ಸುಮಾರು ಬೆಳಗ್ಗೆ 10.00 ಘಂಟೆಗೆ ಕಾರ್ಯಕ್ರಮವು ಶುರುವಾಯಿತು. ಚಿಟ್ಟೆ ತಜ್ಞರು ಹಾಗು ಆ ದಿನದ ಸಂಪನ್ಮೂಲ ವ್ಯಕ್ತಿ, HRBSF ( Harish R Bhat Science Foundation) ನ ಸಂಸ್ಥಾಪಕರಾದ  ಚತುರ್ವೇದ್ ರವರು ಚಿಟ್ಟೆಗಳನ್ನು ಏಕೆ ಕೀಟಗಳ ಗುಂಪಿಗೆ ಸೇರಿಸುತ್ತಾರೆ, ಕೀಟಗಳೆಂದರೆ ಯಾವುವು? ಅವುಗಳ ದೇಹ ರಚನೆ ಹೇಗಿರುತ್ತದೆ? ಕೀಟಗಳಲ್ಲಿ ಎಷ್ಟು ಪ್ರಭೇದಗಳಿವೆ ಹಾಗೂ ಚಿಟ್ಟೆಗಳ ಜೀವನ ಚಕ್ರ, ಅವುಗಳ ಆಹಾರ, ವಲಸೆ ಹೋಗುವುದು, ಪರಿಸರದ  ಅರೋಗ್ಯ ಕಾಪಾಡುವಲ್ಲಿ ಇವುಗಳ ಪಾತ್ರವೇನು ಎಂಬುದನ್ನು ಸವಿಸ್ತಾರವಾಗಿ ಚಿತ್ರಗಳ ಸಹಾಯದಿಂದ ತಿಳಿಸಿಕೊಟ್ಟರು.

ನಿಸರ್ಗದ ಸೊಬಗು ತಿಳಿಯುವುದು ಅದನ್ನು ಕಣ್ಣಾರೆ ಕಂಡಾಗಲೇ. ಅದರ ಬದಲು ನಾವು ತರಗತಿಯಲ್ಲಿ ಎಷ್ಟೇ ಪರಿಣಾಮಕಾರಿಯಾಗಿ ತಿಳಿಸಲು ಯತ್ನಿಸಿದರೂ  ಅದರ ಪ್ರಯೋಜನ ಅತ್ಯಲ್ಪ ಎಂದು ತಿಳಿದಿರುವ ನಮ್ಮ ತಂಡವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳಿಗೆ ಆ ಸೌಂದರ್ಯದ ಸವಿಯನ್ನು ಪರಿಚಯಿಸಲು ಹಾಗು ತರಗತಿಯಲ್ಲಿ  ತಿಳಿಸಿದ್ದ ಚಿಟ್ಟೆಗಳನ್ನು ತೋರಿಸಲು ‘ಅಡವಿ ಫೀಲ್ಡ್ ಸ್ಟೇಷನ್’ ನ ಅಕ್ಕ ಪಕ್ಕ ‘ಚಿಟ್ಟೆ ವೀಕ್ಷಣೆ’ ಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ 45 ಅಭ್ಯರ್ಥಿಗಳನ್ನು ಮೂರು ತಂಡಗಳನ್ನಾಗಿ ವಿಂಗಡಿಸಿ ಸಂಪನ್ಮೂಲ ವ್ಯಕ್ತಿಗಳ ಜೊತೆ ಚಿಟ್ಟೆ ವೀಕ್ಷಣೆಗೆ ಅನುವುಮಾಡಿಕೊಡಲಾಯಿತು. ಪ್ರತಿ ತಂಡದವರು ಸರಿ ಸುಮಾರು ಹದಿನೈದು ವಿವಿಧ ಪ್ರಭೇದದ ಚಿಟ್ಟೆಗಳನ್ನು ದಾಖಲಿಸಿದರು.

2 ಘಂಟೆಗಳ ಕಾಲ ಚಿಟ್ಟೆಗಳನ್ನು ವೀಕ್ಷಿಸಿ ಬಂದ ಅಭ್ಯರ್ಥಿಗಳಿಗೆ ಮಧ್ಯಾಹ್ನದ ಉಪಹಾರವನ್ನು ನೀಡಿ ತಮ್ಮಲ್ಲಿರುವ ಚಿಟ್ಟೆಗಳ ಬಗೆಗಿನ ಪ್ರಶ್ನೆಗಳನ್ನು ತಜ್ಞರ ಜೊತೆ ಚರ್ಚಿಸಿ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಯಿತು. ಅಭ್ಯರ್ಥಿಗಳು ಪ್ರಶ್ನೆಗಳ ಮಳೆಗೈದು ತಮ್ಮಲ್ಲಿರುವ ಆಸಕ್ತಿಯನ್ನು ಅಭಿವ್ಯಕ್ತಪಡಿಸಿದರು. ಅವರ ಮುಖದಲ್ಲಿನ ಆನಂದವು ದಿನದ ಕಾರ್ಯಕ್ರಮದ ಸಾರವನ್ನು ಹೇಳುತ್ತಿತ್ತು .

ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಯುತ ಚತುರ್ವೇದ್ ಶೇಟ್, ಕುಮಾರಿ ಚತುರ ಮತ್ತು ಕುಮಾರಿ ಶ್ರದ್ಧಾ ರವರಿಗೆ WCG ತಂಡದ ವತಿಯಿಂದ ತುಂಬು ಹೃದಯದ ಧನ್ಯವಾದಗಳು. ಸುತ್ತಲಿನ ಪರಿಸರಕ್ಕೆ, ಜೀವ ವೈವಿಧ್ಯಕ್ಕೆ ಮಕ್ಕಳನ್ನು ಹಾಗು ಸಾಮಾನ್ಯ ಜನರನ್ನು ಪರಿಚಯಿಸಬೇಕೆಂಬ ಉದ್ದೇಶದಿಂದ WCG ಯು ಪ್ರತಿ ತಿಂಗಳು ‘ಅಡವಿ ಫಿಲ್ಡ್ ಸ್ಟೇಷನ್’ ನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಆಸಕ್ತರು ಭಾಗವಹಿಸಲು ಅಥವಾ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಲು ಇಚ್ಛಿಸುವವರು ಸಂಪರ್ಕಿಸಿ
ಅಶ್ವಥ್ ಕೆ ಎನ್ : 9740919832 ,
ನಾಗೇಶ್ ಓ ಎಸ್ : 9008261066
ಹಾಗು WCG ಬಗೆಗಿನ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು www.indiawcg.org ಗೆ ಭೇಟಿ ನೀಡಿ

– ನಾಗೇಶ್ ಓ ಎಸ್
ಡಬ್ಲ್ಯೂ ಸಿ ಜಿ ., ಬೆಂಗಳೂರು

Spread the love
error: Content is protected.