ಪರಿಸರ ಶಿಬಿರ ಮತ್ತು ಓದುವ ಕಟ್ಟೆ
ಕಾನನ, ಜ್ಞಾನದ ನಿಧಿ, ಶಕ್ತಿಯ ಮೂಲ, ಸೌಂದರ್ಯದ ಗಣಿ, ಸ್ಫೂರ್ತಿಯ ಆಗರ, ಈ ಸವಿಯನ್ನು ಈ ಕಾನನದ ಸುತ್ತಲೂ ವಾಸವಾಗಿರುವ ಚಿಣ್ಣರಿಗೂ ಪರಿಚಯಿಸಬೇಕೆಂಬ ಆಶಯದಿಂದ WCG ಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಾಗೆಯೇ 2019 ರ ಜೂನ್ ನಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ‘ಪರಿಸರ ಶಿಬಿರ’ ವನ್ನು ಅಡವಿ ಫಿಲ್ಡ್ ಸ್ಟೇಷನ್ ನಲ್ಲಿ ಆಯೋಜಿಸಲಾಗಿತ್ತು.
ರಾಗಿಹಳ್ಳಿ ಪಂಚಾಯ್ತಿಯಲ್ಲಿರುವ ನಾಲ್ಕು ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಗುರುತಿಸಿ ಅಲ್ಲಿನ ವಿದ್ಯಾರ್ಥಿಗಳನ್ನು ಈ ಶಿಬಿರಕ್ಕೆ ಸರಿ ಸುಮಾರು ಬೆಳಗ್ಗೆ 9.00 ಗಂಟೆಗೆ ಕರೆತರಲಾಯಿತು. ಮಕ್ಕಳಿಗೆ ಮುಂಜಾವಿನ ಉಪಹಾರವನ್ನು ನೀಡಿ ಪರಸ್ಪರ ಪರಿಚಯಿಸಿಕೊಂಡು ಇದ್ದ ಒಟ್ಟು 32 ವಿದ್ಯಾರ್ಥಿಗಳನ್ನು 3 ತಂಡಗಳಾಗಿ ವಿಂಗಡಿಸಿ WCG ಯ ಸದಸ್ಯರು ಪ್ರತಿ ತಂಡವನ್ನು ಪಕ್ಷಿ ವೀಕ್ಷಣೆಗೆ ಕರೆದೊಯ್ಯಲಾಯಿತು.
ನಾಲ್ಕು ಗೋಡೆಗಳ ಮಧ್ಯೆ ಕುಳಿತು ಪಾಠ ಹೇಳುವುದಕ್ಕಿಂತ ನಿಸರ್ಗದೊಡನೆ ಬೆರೆತು ಅಲ್ಲಿನ ಜೀವ ಸಂಕುಲವನ್ನು ವೀಕ್ಷಿಸಿ, ಗಮನಿಸಿ, ಪ್ರಶ್ನಿಸಿ ಮಕ್ಕಳು ಕಲಿಯಬೇಕೆಂದು ನಮ್ಮ ತಂಡದ ಗುರಿಯಾಗಿರುವುದರಿಂದ ಮಕ್ಕಳಿಗೆ ನಿಸರ್ಗದ ಮಡಿಲಿಗೆ ಕರೆದೊಯ್ದು ಕಾಣಸಿಗುವ ಸಕಲ ಜೀವಿಗಳ ಬಗೆಗೂ ತಿಳಿಸಲಾಯಿತು. ಪಕ್ಷಿ, ಕೀಟ, ಮರ- ಗಿಡ, ಸರೀಸೃಪ, ಮುಂತಾದ ಜೀವಿಗಳ ಬಗ್ಗೆ ಕುತೂಹಲದಿಂದ ಕಲಿತ ಮಕ್ಕಳು 12.30 ರ ಹೊತ್ತಿಗೆ ಅಡವಿ ಫಿಲ್ಡ್ ಸ್ಟೇಷನ್ ಗೆ ಹಿಂತಿರುಗಿದರು. ಹಿಂತಿರುಗಿದ ಶಿಬಿರಾರ್ಥಿಗಳು ತಾವು ಕಂಡ ಜೀವ ಸಂಕುಲದ ಹಾಗು ಪ್ರಕೃತಿಯ ಬಗ್ಗೆ ಎಲ್ಲರ ಜೊತೆ ಹಂಚಿಕೊಂಡರು.
ಓದುವ ಕಟ್ಟೆ
ನಮ್ಮ ಕನ್ನಡ ಸಾಹಿತ್ಯ ಬಲು ಶ್ರೀಮಂತವಾಗಿದೆ ಎಂದರೆ ಅತಿಶಯೋಕ್ತಿಯಾಗದು. “ಬಲ್ಲವನೇ ಬಲ್ಲ ಬೆಲ್ಲದ ರುಚಿಯ” ಎಂಬಂತೆ ಈ ಸಾಹಿತ್ಯದ ಸಿರಿತನವನ್ನು ಆಸ್ವಾದಿಸಿರುವವನಿಗೆ ಗೊತ್ತು ಇದರ ರುಚಿ. ಈ ಸವಿಯನ್ನು ಅನುಭವಿಸಿರುವ ಸಮಾನ ಮನಸ್ಕರ ಜೊತೆ ಕನ್ನಡ ಸಾಹಿತ್ಯದ ಬಗೆಗಿನ ವಿಚಾರವನ್ನು ಚರ್ಚಿಸಿ ಜ್ಞಾನವನ್ನು, ವಿಚಾರಧಾರೆಯನ್ನು ಇನ್ನು ವೃದ್ಧಿಸಿಕೊಳ್ಳಬೇಕು ಎಂಬ ಕಾರಣದಿಂದ ಅಡವಿ ಫಿಲ್ಡ್ ಸ್ಟೇಷನ್ ನಲ್ಲಿ ಕನ್ನಡ ಮೇರು ಕೃತಿಗಳನ್ನು ಓದುವ ‘ಓದುವ ಕಟ್ಟೆ’ ಎಂಬ ಕಾರ್ಯಕ್ರಮವನ್ನು ಪ್ರತಿ ಭಾನುವಾರ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ 23 ನೇ ಜೂನ್ 2019 ರಂದು ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕಾಡಿನ ಕಥೆ ಪುಸ್ತಕ ಓದುವುದರ ಮುಖಾಂತರ ಚಾಲನೆ ನೀಡಲಾಗಿತ್ತು. ಮಕ್ಕಳ ಪ್ರಕೃತಿ ಶಿಬಿರವು ಸಹ ಭಾನುವಾರ ನಡೆಯುತ್ತಿದ್ದುದರಿಂದ ಅವರಿಗೂ ‘ಓದುವ ಕಟ್ಟೆ’ ಯ ಬಗ್ಗೆ ತಿಳಿಸಿ ಒಂದು ಸಣ್ಣ ಕಥೆಯನ್ನು ಓದಿ ಅದರ ಸವಿಯನ್ನು ಅವರಿಗೂ ಉಣಬಡಿಸಲಾಯಿತು.
‘ಓದುವ ಕಟ್ಟೆ’ ಯ ನಂತರ ಮಕ್ಕಳಿಗೆ ಮಧ್ಯಾºÀßದ ಊಟವನ್ನು ನೀಡಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ‘ಆನೆ ಮತ್ತು ಮಾನವ’ ಎಂಬ ಸಣ್ಣ ನಾಟಕವನ್ನು ಅವರೇ ರಚಿಸಿ ಅದನ್ನು ಎಲ್ಲರ ಮುಂದೆ ಪ್ರದರ್ಶಿಸುವಂತೆ ಹೇಳಲಾಯಿತು. ಇನ್ನು ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಪ್ರಕೃತಿಯ ಚಿತ್ರಕ್ಕೆ ಬಣ್ಣ ಹಚ್ಚಲು ವಿವಿಧ ಪ್ರಕೃತಿಯ ಚಿತ್ರಗಳನ್ನು ನೀಡಲಾಯಿತು. ನಾಟಕ ಪ್ರದರ್ಶನದ ನಂತರ ಮಕ್ಕಳಿಗೆ ‘ಇಲಿ-ಹಾವು’ ಎಂಬ ಸಣ್ಣ ಗುಂಪು ಆಟವನ್ನು ಆಡಿಸಿ ಸುರಕ್ಷಿತವಾಗಿ ತಂತಮ್ಮ ಊರುಗಳಿಗೆ ಬಿಡಲಾಯಿತು.
ಓದುವ ಕಟ್ಟೆ ಕಾರ್ಯಕ್ರಮವು ಪ್ರತಿ ಭಾನುವಾರ ನಡೆಯಲಿದ್ದು ಆಸಕ್ತರು ತಾವು ಸಹ ಇದರಲ್ಲಿ ಭಾಗವಹಿಸಬಹುದು. ಹಾಗು ಈ ರೀತಿಯ ಪ್ರಕೃತಿ ಶಿಬಿರ ಮತ್ತು ವಿವಿಧ WCG ಯ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಲು ಇಚ್ಛಿಸುವವರು ಈ ಕೆಳಗಿನ ವ್ಯಕ್ತಿಗಳನ್ನು ಸಂಪರ್ಕಿಸಿ
ಅಶ್ವಥ್ ಕೆ ಎನ್ : 9740919832 ,
ನಾಗೇಶ್ ಓ ಎಸ್ : 9008261066
ಹಾಗು WCG ಬಗೆಗಿನ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು www.indiawcg.org ಗೆ ಭೇಟಿ ನೀಡಿ
– ನಾಗೇಶ್ ಓ ಎಸ್
ಡಬ್ಲ್ಯೂ ಸಿ ಜಿ ., ಬೆಂಗಳೂರು