ಮಾಸ ವಿಶೇಷ – ಬೆಪ್ಪಾಲೆ
©ಅಶ್ವಥ ಕೆ ಎನ್, ಬೆಪ್ಪಾಲೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಇಂಗ್ಲೀಷ್ ಹೆಸರು :Dyers’s oleander
ವೈಜ್ಞಾನಿಕ ಹೆಸರು : Wrightia tinctoria
ಬೆಪ್ಪಾಲೆ ಭಾರತ ಮತ್ತು ಬರ್ಮಾ ದೇಶದಲ್ಲಿ ಬೆಳೆಯುವ ಸ್ಥಳೀಯ ಮರ. ಇದು ಶುಷ್ಕ ಎಲೆ ಉದುರುವ ಕಾಡುಗಳಲ್ಲಿ ಕಲ್ಲುಬಂಡೆಗಳ ನಡುವೆ ಬೆಳೆಯುವ ಮರ. ಬೆಪ್ಪಾಲೆ ಮರ ಮೂರರಿಂದ ಹದಿನೈದು ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ತಿಳಿಹಸಿರು ಎಲೆಗಳ ಜೊತೆಯಲ್ಲಿ ಮುತ್ತಿನಂತಹ ಬಿಳಿಯ ಹೂವುಗಳು ಮರದ ತುಂಬ ಬಿಡುತ್ತವೆ. ತೊಗಟೆಯು ಹಳದಿ-ಕಂದು ಬಣ್ಣದಿಂದ ಕೂಡಿದ್ದು, ಸೀಳಿದಾಗ ಹಾಲಿನಂತಹ ದ್ರವ ಧಾರಾಕಾರವಾಗಿ ಸುರಿಯುತ್ತದೆ. ಎಳೆಯ ಕಾಂಡ ಹಳದಿ ಬಣ್ಣಕ್ಕಿರುತ್ತದೆ. ಈ ಮರದ ಹಣ್ಣು ಕಪ್ಪು ಮಿಶ್ರಿತ ಹಸಿರು, ಹಣ್ಣಿನ ಮೇಲೆ ಬಿಳಿಮಚ್ಚೆಗಳಿದ್ದು ಉದ್ದಕ್ಕೆ ಕೊಂಬಿನಂತಿದ್ದು ತುದಿಯಲ್ಲಿ ಕೂಡಿಕೊಂಡಿರುತ್ತವೆ. ಚಪಟ್ಟೆಯಾಗಿರುವ ಕಂದು ಬಣ್ಣದ ಬೀಜಗಳು ಬಿಳಿಯ ಕೂದಲಿನ ಗೊಂಚಲನ್ನು ಹೊಂದಿರುತ್ತವೆ. ಹಣ್ಣು ಆಲಿಪ್ಪೆ (ಹೊಲ್ಹರೇನ ಪ್ಯೂಬಿಸೆನ್ಸ್) ಹಣ್ಣನ್ನು ಹೋಲುತ್ತದೆ, ಆದರೆ ತುದಿಯಲ್ಲಿ ಕೂಡಿಕೊಂಡಿರುತ್ತದೆ. ತುದಿ ಕೊಂಬೆಯಲ್ಲಿ ಎಲೆಗಳು ಎದುರುಬದರಾಗಿ ವ್ಯವಸ್ಥಿತವಾಗಿರುತ್ತದೆ. ಸುಮಾರು 18 cm ಉದ್ದದ ಕೊಂಬೆಗಳಿಲ್ಲದ ನೇರವಾದ ರೆಂಬೆಯಾಗಿರುತ್ತದೆ. ವಿಶೇಷವಾಗಿ ಎಲೆಗಳು ಚಿಕ್ಕದಾಗಿದ್ದಾಗ ಸ್ವಲ್ಪ ನೀಲಿ-ಹಸಿರು ಬಣ್ಣದಿಂದ ಕೂಡಿದ್ದು, ನಯವಾಗಿರುತ್ತವೆ. ಆಯುರ್ವೇದದಲ್ಲಿ ಒಂದು ವಿಶೇಷವಾದ ಔಷಧೀಯ ಸಸ್ಯವಾಗಿದೆ. ಆಯುರ್ವೇದದ ಪ್ರಕಾರ ಇದರ ತೊಗಟೆಗಳು ಅತಿಸಾರ, ರಾಶಿಗಳು ಮತ್ತು ಜಂತುಹುಳ ಚಿಕಿತ್ಸೆ ಇನ್ನಿತರ ಚರ್ಮ ರೋಗಗಳ ಚಿಕಿತ್ಸೆಯಲ್ಲಿ ಉಪಯುಕ್ತವಾಗಿದೆ. ಇದರ ಬೀಜಗಳು ಅತಿಸಾರ ನಿಷೇಧಕ ಗುಣಲಕ್ಷಣಗಳನ್ನು ಹೊಂದಿವೆ ಮತ್ತು ಅವುಗಳನ್ನು astringents, antihelminthics, ಕಾಮೋತ್ತೇಜಕಗಳು ಮತ್ತು ಜ್ವರವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ. ತೊಗಟೆ ಮತ್ತು ಬೀಜಗಳನ್ನು ವಾಯುಪರಿಚಲನಾ ಚಿಕಿತ್ಸೆಗೆ ಬಳಸಲಾಗುತ್ತದೆ. ತೊಗಟೆಯಿಂದ ತೆಗೆದ ಸಾರವು ಹಾವಿನ ಕಡಿತಕ್ಕೆ ಪ್ರತಿವಿಷವಾಗಿ ಬಳಸಲಾಗುತ್ತದೆ. ಮೂತ್ರಪಿಂಡ ಕಲ್ಲುಗಳ ಚಿಕಿತ್ಸೆಯಲ್ಲಿ ತೊಗಟೆಯ ಪುಡಿಯನ್ನು ಬಳಸುತ್ತಾರೆ.