ಮರೆಯಲಾಗದ “ಮಂಗಲಜೋಡಿ” ಪಕ್ಷಿ ತಾಣ
ಆಗಷ್ಟೆ ಭಾಸ್ಕರ ಉದಯಿಸುತ್ತಿದ್ದ, ಹಕ್ಕಿಗಳು ನಿದ್ದೆಯಿಂದ ಎದ್ದು ತಮ್ಮ ಚಟುವಟಿಕೆಗೆ ಅಣಿಯಾಗುತ್ತಾ ಚಿಲಿಪಿಲಿ ನಿನಾದದಿಂದ ಹಾರಾಡುತ್ತ ಅಲ್ಲಲ್ಲಿ ಗುಂಪು ಗುಂಪಾಗಿ ಕೂರಲು ಹಾತೊರೆಯುತ್ತಿದ್ದವು. ಹುಟ್ಟು ಹಾಕುವ ದೋಣಿ ನಿಧಾನವಾಗಿ ಚಲಿಸುತ್ತಿದ್ದರೆ ನೀರು ಜುಳುಜುಳು ಎಂದು ಹಿಂದೆ ಹೋಗುತ್ತಿತ್ತು. ದೋಣಿಯಲ್ಲಿ ಕುಳಿತ ನಾನು ಮತ್ತು ಫೋಟೋಗ್ರಫಿ ಗುರುಗಳಾದ ಬಿ.ಶ್ರೀನಿವಾಸರವರು ಕ್ಯಾಮರಾವನ್ನು ಸಿದ್ಧ ಮಾಡಿಕೊಂಡು ಹಕ್ಕಿಗಳ ಛಾಯಾಗ್ರಹಣಕ್ಕೆ ತಯಾರಾಗಿದ್ದೆವು. ಮೌನವಾಗಿ ಕುಳಿತು ಆ ಜೌಗು ಪ್ರದೇಶದತ್ತ ಕಣ್ಣು ಹಾಯಿಸಿದೆ. ಕೊನೆಗಾಣದ ಪ್ರದೇಶವದು, ಎಲ್ಲಿ ನೋಡಿದರೂ ಆ ಜೌಗಿನಲ್ಲಿ ಹುಲ್ಲು, ತಾವರೆ, ಅಂತರಗಂಗೆ, ಕೆಲ ಜಲಸಸ್ಯಗಳು ಬೆಳೆದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿತ್ತು. ನೇಸರ ನಿಧಾನವಾಗಿ ಭೂತಾಯಿಯ ಮಡಿಲು ಬಿಟ್ಟು ಮೇಲೆ ಬಂದಾಯಿತು.
ಪ್ರಶಾಂತತೆಯ ಮಧ್ಯೆ ಒಮ್ಮೆಲೆ “ಅಲ್ನೋಡಿ ‘ಕಾಮನ್ ಟೀಲ’ ಬಾತು ಕುಳಿತಿದೆ ಅದು ಕಾಣಸಿಗುವುದು ಅಪರೂಪ ಸರ್” ಎಂದ. ಹಾಗೆ ದೋಣಿ ಮುಂದೆ ಸಾಗುತ್ತಿತ್ತು. ಸರ್ ಅದು “ಬ್ಲಾಕ್ ಟೇಲ್ಡ್ ಗಾಡ್ವಿಟ್ ಗಳು” ಇಲ್ಲಿಗೆ ಲಕ್ಷಾನುಗಟ್ಟಲೆ ಚಳಿಗಾಲಕ್ಕೆ ವಲಸೆ ಬರುತ್ತವೆ ಎಂದು ನಮ್ಮ ಹಿಂದೆ ಕುಳಿತಿದ್ದ ಗೈಡ್ ನೀಲಮಣಿ, ದೂರದಲ್ಲಿ ಕುಳಿತ ಹಕ್ಕಿಗಳ ಹಿಂಡನ್ನು ತೋರಿಸಿ ಹೇಳಿದ. ಅದು ರಫ್, ಈ ಕಡೇ ನೋಡಿ “ವುಡ್ ಸ್ಯಾಂಡ್ ಪೈಪರ್”, ಅದೋ ಅಲ್ಲಿದೆಯಲ್ಲ ಅದು “ಗ್ರೇ ಹೆರಾನ್” ಹೀಗೆ ಹಕ್ಕಿಗಳ ಹೆಸರುಗಳನ್ನು ಪಟಪಟನೆ ಹೇಳುವುದರ ಜೊತೆ ಅವುಗಳ ಗುರುತು ಹೇಳುತ್ತಿದ್ದ. ಇದು ಒಡಿಶಾ ರಾಜ್ಯದ “ಮಂಗಳಜೋಡಿ” ಪಕ್ಷಿಗಳ ಆಶ್ರಯ ತಾಣದ ದೃಶ್ಯ.
ಬೇಟೆಗಾರರು ಸಂರಕ್ಷಕರಾದ ಕಥೆ:
“ಇಪ್ಪತ್ತು ವರ್ಷಗಳ ಹಿಂದೆ ಇದು ಹಕ್ಕಿಗಳಿಗೆ ಸುರಕ್ಷಿತ ಜಾಗವಾಗಿರಲಿಲ್ಲ” ಮಾರ್ಗದರ್ಶಿ ನೀಲಮಣಿ ಹೇಳಿದ್ದನ್ನು ಕೇಳಿ ನಾನು ಅಚ್ಚರಿಯಿಂದ “ಅಂದರೆ?’’ ಎಂದು ಕೇಳಿದೆ. ಅವನು ಮುಂದುವರೆಸಿ ಇಲ್ಲಿ ಹಕ್ಕಿಗಳ ಬೇಟೆ ನಡೆಯುತ್ತಿತ್ತು. ನಾವು ಅವನ್ನು ತಿಂದು, ಮಾರಾಟ ಮಾಡಿ ಜೀವನ ನಡೆಸುತ್ತಿದ್ದೆವು ಎಂದು ಹೇಳುವಾಗ ಅವನ ಮುಖದಲ್ಲಿ ಪಶ್ಚಾತಾಪದ ಭಾವ ಮಿನುಗಿ ಮಾಯವಾಗಿತ್ತು. ಇಲ್ಲಿಯ ಬೇಟೆಗಾರರು, ಪಕ್ಷಿ ಸಂರಕ್ಷಕರಾಗಿ ಮನ ಪರಿವರ್ತನೆಯಾದ ಹಿಂದೆ ಒಂದು ಕಥೆಯೇ ಇದೆ. 20 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಹಕ್ಕಿಗಳನ್ನು ಬೇಟೆಯಾಡುವ ಕಾರ್ಯ ನಿರಾತಂಕವಾಗಿ ನಡೆಯುತ್ತಿತ್ತು. ವಲಸೆ ಬರುವ ಹಾಗೂ ಸ್ಥಳೀಯ ಎಲ್ಲ ಪ್ರಭೇದದ ಹಕ್ಕಿಗಳನ್ನು ಬಲೆ ಹಾಕಿ ಹಿಡಿದು ಹಾಗೂ ನಾಡ ಕೋವಿಯಿಂದ ಬೇಟೆಯಾಡಿ ಕೊಂದು ತಿಂದು ಉಳಿದವನ್ನು ಮಾರಾಟ ಮಾಡಿ ಲಾಭದಾಯಕ ವ್ಯಾಪಾರ ಮಾಡಿಕೊಂಡು ತಿಂಗಳಿಗೆ 30 ರಿಂದ 40 ಸಾವಿರ ರೂಪಾಯಿಗಳಷ್ಟು ಹಣ ಸಂಪಾದನೆ ಮಾಡಿಕೊಂಡಿದ್ದೆವು.
ಈ ಅವಿರತ ಬೇಟೆಯನ್ನು ನೋಡುತ್ತಿದ್ದ ಅರಣ್ಯ ಅಧಿಕಾರಿಗಳು ಕಣ್ಣಿದ್ದರೂ ಕುರುಡರಾಗಿ ನಿಸ್ಸಹಾಯಕರಾಗಿದ್ದರು. ಆಗ 1996ರ ಇಸವಿ ಇರಬೇಕು, ಒಬ್ಬ ವ್ಯಕ್ತಿಯನ್ನು ಪ್ರತ್ಯಕ್ಷವಾಗಿ ನೋಡಿ ಇಡೀ ಚಿತ್ರಣವೇ ಬದಲಾಗಿಹೋಯಿತು. ಆ ಹಕ್ಕಿ ಮತ್ತು ನಮ್ಮ ಪಾಲಿನ ಹೀರೋ ನಂದಕಿಶೋರ ಭುಜಬಲ್. ಅವರ ನೇತೃತ್ವದಲ್ಲಿ ವೈಲ್ಡ್ ಒರಿಶಾ ಎಂಬ ಸ್ವಯಂಸೇವಾ ಸಂಸ್ಥೆಯು ಇಲ್ಲಿಯ ಹಳ್ಳಿಗರೊಂದಿಗೆ ಹಕ್ಕಿಗಳ ಸಂರಕ್ಷಣೆಗೆ ಕೈಹಾಕಿತು. ನಮಗೆ ಹಕ್ಕಿಗಳು ಹಾಗೂ ಅವುಗಳ ಪ್ರಾಮುಖ್ಯತೆಯ ಬಗ್ಗೆ ತಿಳಿಸುತ್ತಾ ಮನ ಗೆದ್ದು ಬೇಟೆಯಾಡುವುದನ್ನು ನಿಲ್ಲಿಸಲು ಪ್ರಯತ್ನಿಸಿದರು. ಅವರ ನಿರಂತರ ಪ್ರಯತ್ನದ ಫಲವಾಗಿ ಬೇಟೆಗಾರನಾದ “ರತ್ನಾಕರ”ನೆಂಬ ಬೇಡ, ನಾರದರ ಉಪದೇಶದಿಂದ ಜ್ಞಾನೋದಯವಾಗಿ “ವಾಲ್ಮೀಕಿ” ಮಹರ್ಷಿಗಳಂತೆ ಬೇಟೆಗಾರರೆಲ್ಲ ಸಂರಕ್ಷಕರಾದೆವು. ಬೇಟೆಯೂ ಸಂಪೂರ್ಣ ನಿಂತು ಹಕ್ಕಿಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿತು. ನಾವೆಲ್ಲ ಸೇರಿ 2000 ನೇ ಸಾಲಿನಲ್ಲಿ “ಶ್ರೀ ಶ್ರೀಮಹಾವೀರ್ ಪಕ್ಷಿ ಸುರಕ್ಷಾ ಸಮಿತಿ” ಯನ್ನು ಹುಟ್ಟು ಹಾಕಿಕೊಂಡೆವು. ಇಲ್ಲಿಯ ಹಕ್ಕಿಗಳ ಬೇಟೆಯನ್ನು ನಿಲ್ಲಿಸಿದ ಮಾಜಿ ಬೇಟೆಗಾರರಾದ ನಾವುಗಳೇ ಈಗ ಸಂರಕ್ಷಕರೂ ಹೌದು ಮಾರ್ಗದರ್ಶಕರೂ ಹೌದು.
ಬೇಟೆಗಾರರ ಮನ ಪರಿವರ್ತನೆ ಅಷ್ಟು ಸುಲಭದ ಮಾತಾಗಿರಲಿಲ್ಲ. ಅನಕ್ಷರಸ್ಥರಾದ ಇವರ ಮನ ಪರಿವರ್ತನೆ ಮಾಡಿದ್ದು ಒಂದು ಸವಾಲೇ ಸರಿ. ಸ್ವಯಂ ಸೇವಕರ ಭಗೀರಥ ಪ್ರಯತ್ನದಿಂದ ಎಲ್ಲರೂ ಬದಲಾದರು ಹಾಗೂ ಅಕ್ಷರ ಜ್ಞಾನವಿಲ್ಲದಿದ್ದರೂ ಹಕ್ಕಿಗಳನ್ನು ಗುರುತಿಸಿ ಇಂಗ್ಲೀಷಿನಲ್ಲಿ ಅವುಗಳ ಹೆಸರುಗಳನ್ನು ಅರಳು ಹುರಿದಂತೆ ಹೇಳುತ್ತಾರೆ. ಅವರಲ್ಲಿರುವ ಪಕ್ಷಿ ಪುಸ್ತಕದಲ್ಲಿ ಅವನ್ನು ತೋರಿಸುತ್ತಾರೆ. ಬದುಕು ಎಲ್ಲವನ್ನು ಕಲಿಸುತ್ತದೆ. ಅನಿವಾರ್ಯತೆ ಕಂಡು ಬಂದಾಗ ಜೀವನ ಪಾಠ ಕಲಿಸುತ್ತದೆ. ಈ ಕಲಿಕೆಯಿಂದ ಪಕ್ಷಿಗಳ ಸಂತತಿ ಉಳಿವಿನೆಡೆಗೆ ನಡೆದಿರುವುದು ಸಂತೋಷದ ವಿಷಯ.
ಮಾರ್ಗದರ್ಶಕರು ಇಲ್ಲಿಗೆ ಬರುವ ಪ್ರವಾಸಿ ಹಾಗೂ ಛಾಯಾಗ್ರಾಹಕರಿಗೆ ಅಪರೂಪದ ಹಕ್ಕಿಗಳನ್ನು ತೋರಿಸುತ್ತಾ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿವುದರೊಂದಿಗೆ ಹಕ್ಕಿಗಳ ಸಂರಕ್ಷಕರಾಗಿದ್ದಾರೆ. ಅವರ ಈ ಕಾರ್ಯವನ್ನು ಶ್ಲಾಘಿಸಿ ಒಡಿಶಾ ಸರ್ಕಾರವು 2007 ರಲ್ಲಿ ವನ್ಯಜೀವಿ ಸಂರಕ್ಷಣೆಗಾಗಿ ನೀಡುವ “ಬಿಜು ಪಟ್ನಾಯಕ್” ಪ್ರಶಸ್ತಿಯನ್ನು ಶ್ರೀ ಶ್ರೀಮಹಾವೀರ್ ಪಕ್ಷಿ ಸುರಕ್ಷಾ ಸಮಿತಿಗೆ ನೀಡಿ ಗೌರವಿಸಿದೆ.
ಶಿಸ್ತಿನ ಸಿಪಾಯಿಗಳು:
ಮಾರ್ಗದರ್ಶಕರು ದೂರದರ್ಶಕವನ್ನು ಹಿಡಿದುಕೊಂಡು ಸುತ್ತಲೂ ವೀಕ್ಷಿಸುತ್ತಿರುತ್ತಾರೆ. ಏನಾದರೂ ಅಪರೂಪವೆನಿಸುವುದು ಕಂಡ ತಕ್ಷಣ ದೋಣಿಯನ್ನು ಅವಸರದಿಂದ ಚಲಿಸಿ ಅಲ್ಲಿಗೆ ಕರೆದೊಯ್ದು ನಿಲ್ಲಿಸುತ್ತಾರೆ. ಆ ದಿನ ನಮ್ಮ ಮಾರ್ಗದರ್ಶಿ ಗಣೇಶ್ ಸಾಬ್ “ಐಬಿಸ್ ಸಾಫ್ ಪಕಡಾ” ಕ್ಯಾಮರಾ ರೆಡಿ ಕರೋ ಎಂದು ಮೆಲು ಧ್ವನಿಯಲ್ಲಿ ಒಂದೇ ಉಸಿರಿನಿಂದ ನುಡಿದ. ತಾನೂ ಹಾಗೂ ದೋಣಿ ಚಾಲಕ (ಬೋಟ್ಮನ್) ಇಬ್ಬರೂ ಸೇರಿ ದೋಣಿಯನ್ನು ವೇಗವಾಗಿ ನಡೆಸಿ “ಉದರ್ ದೇಕೋ ಸಾಬ್ ಐಬಿಸ್ ಸಾಫ್ ಪಕಡಾ…” ಫೋಟೋ ಕೀಚೋ ಸಾಬ್ ಎಂದ. ಅದು ಸುಮಾರು ದೂರದ ಹುಲ್ಲಿನ ಮಧ್ಯದಲ್ಲಿತ್ತು, ಅವನು ದೂರದರ್ಶಕದಲ್ಲಿ ನೋಡಿ ಹೇಳುತ್ತಿದ್ದ. ನಮಗೆ ಯಾವ ಕಡೆ ಎಂದು ಗೊತ್ತಾಗುತ್ತಿರಲ್ಲಿಲ್ಲ. ‘ಎಲ್ಲಿ’ ಎಂದೆ, ಅವನು ‘12 ಒ ಕ್ಲಾಕ್ ಮೆ ಗ್ರಾಸ್ ಕೀ ಅಂದರ್’ ಎಂದ. ಹೌದು ಪಕ್ಷಿ ವೀಕ್ಷಣೆ ವೇಳೆ ಫೀಲ್ಡಿನಲ್ಲಿ ಗಡಿಯಾರದ ಸಮಯ ಹೇಳಿ ಹಕ್ಕಿಗಳನ್ನು ತೋರಿಸುವ ತಂತ್ರವಿದೆ. ಇಲ್ಲಿ 8 ಒ ಕ್ಲಾಕ್, 10 ಒ ಕ್ಲಾಕ್, 6 ಒ ಕ್ಲಾಕ್….. ಹೀಗೆ, ಅಂದರೆ, ನಾವಿರುವ ಜಾಗದಿಂದ ಅವುಗಳ ಇರುವಿಕೆಯನ್ನು ಗುರುತಿಸಲು ಅನುಕೂಲವಾಗಿದೆ. ಅವರ ಈ ತಂತ್ರಗಾರಿಕೆ ಉಪಯೋಗಿಸಿ ಐಬಿಸ್ ನೋಡಿ ಇನ್ನೂ ಸ್ವಲ್ಪ ಮುಂದೆ ಚಲಿಸಿ ಬೆಳಕಿನ ಕೋನ ಸರಿಯಾಗಿ ಬಂದ ಮೇಲೆ ಐಬಿಸ್ ಹಕ್ಕಿಯು ಹಾವನ್ನು ಹಿಡಿದು ನುಂಗುತ್ತಿರುವ ದೃಶ್ಯಗಳನ್ನು ನಮ್ಮ ಕ್ಯಾಮರಾಗಳಲ್ಲಿ ಕ್ಲಿಕ್ಕಿಸಿ ದಾಖಲಿಸಿಕೊಂಡೆವು.
ಇಲ್ಲಿ 36 ಜನ ಮಾರ್ಗದರ್ಶಕರಿದ್ದಾರೆ. ಅವರ ಸಮಯ ಪ್ರಜ್ಞೆ, ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಕೆರೆಯ ತಟದಲ್ಲಿದ್ದು ಪ್ರವಾಸಿಗರು ಬಂದ ತಕ್ಷಣ ಅವರನ್ನು ದೋಣಿಯಲ್ಲಿ ಕುಳ್ಳರಿಸಿಕೊಂಡು ಪಕ್ಷಿಗಳನ್ನು ವೀಕ್ಷಿಸಲು ತೆರಳುತ್ತಾರೆ. ಎಲ್ಲರೂ ಶಿಸ್ತಿನಿಂದ ಸಾಂಘಿಕವಾಗಿ ಕೆಲಸ ನಿರ್ವಹಿಸುತ್ತಾರೆ. ಇವರದ್ದೇ ಆದ ಖಾಕಿ ಬಣ್ಣದ ಸಮವಸ್ತ್ರವಿದೆ. ಸರ್ಕಾರ ಮತ್ತು ಸೇವಾ ಸಂಸ್ಥೆಗಳು ನೀಡಿರುವ ದೂರದರ್ಶಕ (ಬೈನಾಕುಲರ್), ಪಕ್ಷಿ ಪುಸ್ತಕ ಮತ್ತು ಜೀವ ರಕ್ಷಕ ಜಾಕೇಟ್ ಗಳಿವೆ. ದೋಣಿಯನ್ನು ಉದ್ದನೆಯ ಬಿದಿರಿನ ಹುಟ್ಟು ಹಿಡಿದು ಮೀಟಿ ನಡೆಸುತ್ತಾರೆ. ‘ಕೈ ನೋವು ಬರುವುದಿಲ್ಲವೇ’ ಎಂದು ಕೇಳಿದರೆ ‘ಅಭ್ಯಾಸವಾಗಿದೆ ಸಾಬ್’ ಎನ್ನುತ್ತಾರೆ.
ವೈಲ್ಡ್ ಒಡಿಶಾ ಸಂಸ್ಥೆಯಿಂದ ಪಕ್ಷಿ ವೀಕ್ಷಣಾ ತರಬೇತಿ ಪಡೆದು ಬಹಳ ಶಿಸ್ತಿನಿಂದ ಮುಂಜಾನೆ ಆರರಿಂದ ಸಂಜೆ ಆರರವರೆಗೆ ನುರಿತ ಸಿಪಾಯಿಗಳಂತೆ ಕೆಲಸ ಮಾಡುತ್ತಾರೆ. ನಾಲ್ಕೈದು ತಿಂಗಳು ಮಾತ್ರ ಮಾರ್ಗದರ್ಶಿಗಳಾಗಿರುವ ಇವರು ಉಳಿದ ತಿಂಗಳು ತಮ್ಮ ಮೂಲ ಕಸುಬು (ವೃತ್ತಿ) ಮೀನು ಹಿಡಿಯುವ ಕಾಯಕದಲ್ಲಿ ತೊಡಗಿಕೊಳ್ಳುತ್ತಾರೆ. ಹಕ್ಕಿಗಳ ತಂಟೆಗೆ ಹೋಗುವುದಿಲ್ಲ ಬೇರೆಯವರನ್ನೂ ಹೋಗಲು ಬಿಡುವುದಿಲ್ಲ. ಈ ಸಿಪಾಯಿಗಳಿಂದ ಈಗ ಹಕ್ಕಿಗಳು ಸುರಕ್ಷಿತವಾಗಿವೆ.
ಆವಾಸ :
ಮಂಗಲಜೋಡಿ “ಜೌಗು ಪ್ರದೇಶವು” ಚಿಲ್ಕಾ ಸರೋವರದ ಹಿನ್ನೀರು ಪ್ರದೇಶವಾಗಿದೆ. ಇದೊಂದು ವಿಶೇಷ “ಲಗೂನ್” ಜಾಗೆಯಾಗಿ ತಗ್ಗಾದ ಮರಳು ದಿಬ್ಬದ ದಂಡೆ, ಸಮುದ್ರದಿಂದ ಬೇರ್ಪಟ್ಟ ಉಪ್ಪು ನೀರು, ಸಿಹಿ ನೀರಿನಲ್ಲಿ ಹುಲ್ಲು, ಅಂತರಗಂಗೆ, ವಾಟರ್ ಲ್ಲಿಲ್ಲಿ, ತಾವರೆ ಮುಂತಾದ ಜಲಸಸ್ಯ ಹಾಗೂ ಕೆಸರುಯುಕ್ತ ಪ್ರದೇಶವಾಗಿದೆ. ಚಿಲ್ಕಾ ಹಿನ್ನೀರಿನ ಜಾಗ 72 ಕಿ.ಮೀಟರ್ ನಷ್ಟಿದ್ದು, ಸುಮಾರು 3,500 ಚ.ಕಿ.ಮೀ ನೀರು ಸಂಗ್ರಹಣಾ ಪ್ರದೇಶದ ಜಲಾವೃತ ಭಾಗದಲ್ಲಿ 1,165 ಚ.ಕಿ.ಮೀ ಮಳೆಗಾಲದಲ್ಲಿ ಹಾಗೂ 906 ಚ.ಕಿ.ಮೀಟರ್ ನಲ್ಲಿ ಬೇಸಿಗೆಯಲ್ಲಿ ನೀರಿನ ಹರಡುವಿಕೆ ಇದೆ. ಹೀಗೆ ನಿಸರ್ಗ ನಿರ್ಮಿತ ಆವಾಸ ಸ್ಥಾನವಾಗಿ ಅನೇಕ ಸ್ಥಳೀಯ ಹಾಗೂ ವಲಸೆ ಹಕ್ಕಿಗಳಿಗೆ ಆಶ್ರಯ ತಾಣವಾಗಿದೆ.
ಪಕ್ಷಿ ಸಂಕುಲಗಳು :
ಮಂಗಲಜೋಡಿ ಜೌಗು ಪಕ್ಷಿ ತಾಣದಲ್ಲಿ ಸ್ಥಳೀಯ ಮತ್ತು ವಲಸೆ ಹಕ್ಕಿಗಳಲ್ಲಿ ನೆಲ ಪಕ್ಷಿಗಳು, ಜಲ ಪಕ್ಷಿಗಳು, ನೀರು ನಡಿಗೆ (ವೇಡರ್) ಹಕ್ಕಿಗಳು, ಹಿಂಸ್ರ ಪಕ್ಷಿಗಳನ್ನು ಒಳಗೊಂಡಂತೆ 228 ಜಾತಿಯ ಪಕ್ಷಿಗಳಲ್ಲಿ 97 ಪ್ರಭೇದದ ಹಕ್ಕಿಗಳು ಚಳಿಗಾಲದಲ್ಲಿ ಕ್ಯಾಸ್ಪಿಯನ್ ಸಮುದ್ರ, ಬೈಕಲ್ ಸರೋವರ, ಅರಬ್ ಸಮುದ್ರ, ಮಂಗೋಲಿಯಾ, ಮಧ್ಯ ಮತ್ತು ಆಗ್ನೇಯ ಏಷ್ಯಾ, ಯುರೋಪ್, ಲಡಾಕ್ ಹಾಗೂ ಹಿಮಾಲಯದಿಂದ ವಲಸೆ ಬರುತ್ತವೆ. ಚಳಿಗಾಲದಲ್ಲಿ ಇವುಗಳ ಸಂಖ್ಯೆ 4 ಲಕ್ಷಕ್ಕೂ ಅಧಿಕವಾಗಿರುತ್ತದೆ. 2006ರಲ್ಲಿ 102 ಪ್ರಭೇದಗಳ 7ಲಕ್ಷ ಹಕ್ಕಿಗಳು ವಲಸೆ ಬಂದು ದಾಖಲೆ ನಿರ್ಮಿಸಿವೆ.
ಸ್ಥಳೀಯ ಹಕ್ಕಿಗಳು:
ಲಿಟಲ್ ಗ್ರೀಬ್, ಗ್ರೇಟ್ ಕಾರ್ಮೋರೆಂಟ್, ಲಿಟಲ್ ಕಾರ್ಮೋರೆಂಟ್, ಇಂಡಿಯನ್ ಶಾಗ್, ಡಾರ್ಟರ್, ಲೀಸ್ಟ್ ಫ್ರೀ ಗೇಡ್ ಬರ್ಡ್, ಗೋಲಿಯಥ್ ಹೆರಾನ್, ಗ್ರೇ ಹೆರಾನ್, ಗ್ರೇಟ್ ಇಗ್ರೆಟ್, ಲಿಟಲ್ ಗ್ರೀನ್ ಹೆರಾನ್, ಇಂಡಿಯನ್ ಪಾಂಡ್ ಹೆರಾನ್, ಕ್ಯಾಟಲ್ ಈಗ್ರೆಟ್, ಲಿಟಲ್ ಈಗ್ರೆಟ್, ಮಿಡಿಯನ್ ಈಗ್ರೆಟ್, ಬ್ಲಾಕ್ ಕ್ರೌನ್ಡ್ ನೈಟ್ ಹೆರಾನ್, ಚೆಸ್ಟ್ ನಟ್ ಬಿಟ್ಟರ್ನ್, ಎಲ್ಲೊ ಬಿಟ್ಟರ್ನ್, ಏಷಿಯನ್ ಒಪನ್ ಬಿಲ್ ಸ್ಟಾರ್ಕ್, ಪೈಂಟೆಡ್ ಸ್ಟಾರ್ಕ್, ವೈಟ್ ನೆಕ್ಡ್ ಸ್ಟಾರ್ಕ್, ಕಾಟನ್ ಟೀಲ್, ಕಾಮನ್ ಮೂರ್ ಹೆನ್, ಪರ್ಪಲ್ ಮೂರ್ ಹೆನ್ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಸ್ಥಳೀಯ ವಲಸೆಗಾರ ಹಕ್ಕಿಗಳು :
ಗ್ರೇಟ್ ಕ್ರಸ್ಟೆಡ್ ಗ್ರೀಬ್, ಗ್ರೇ ಪೆಲಿಕನ್, ಡಾಲ್ಮೇಷಿಯನ್ ಪೆಲಿಕನ್, ಪರ್ಪಲ್ ಹೆರಾನ್, ಪಾಲಿಡ್ ಹ್ಯಾರಿಯರ್, ಪಾಲ್ಲಸ್ ಫಿಸ್ ಈಗಲ್, ಪೈಡ್ ಹ್ಯಾರಿಯರ್, ಕಾಮನ್ ಕ್ರೇನ್, ಕಾಮನ್ ಕೂಟ್, ಗ್ರೇ ಪ್ಲವರ್, ಇಂಡಿಯನ್ ಸ್ಕಿಮ್ಮರ್, ಸ್ಟಾಟ್ ಬಿಲ್ಡ್ ಡಕ್, ಬ್ರಾಹ್ಮಿನಿ ಸೆಲ್ಡಕ್, ಗಲ್ ಬಿಲ್ಡ್ ಟರ್ನ್, ಕ್ಯಾಸ್ಪಿಯನ್ ಟರ್ನ್, ಬ್ಯಾಕ್ ಬಿಲ್ಡ್ ಟರ್ನ್, ಟಿಟಲ್ ಟರ್ನ್, ಇಂಡಿಯನ್ ಲೆಸ್ಸರ್ ಕ್ರಸ್ಟಡ್ ಟರ್ನ್, ವಿಸ್ಕರ್ಡ ಟರ್ನ್ ಮುಂತಾದವುಗಳು.
ವಲಸೆಗಾರ ಹಕ್ಕಿಗಳು :
ಬ್ಲಾಕ್ ನೆಕ್ಡ್ ಸ್ಟಾರ್ಕ್, ಗ್ರೇಟರ್ ಅಡ್ಜೋಟಂಟ್, ಲೆಸ್ಸರ್ ಅಡ್ಜೋಟಂಟ್, ಕೊಂಬ್ ಡಕ್, ಕಾಮನ್ ಟೀಲ್, ಯುರೇಷಿಯನ್ ಸ್ಪೂನ್ ಬಿಲ್, ಬಾರ್ ಹೆಡೆಡ್ ಗೂಸ್, ಗ್ರೇ ಲೆಗ್ ಗೂಸ್, ಗ್ರೇಟರ್ ವೈಟ್ ಪ್ರೆಂಟೆಡ್ ಗೂಸ್, ಲೆಸ್ಸರ್ ವ್ಹಿಸ್ಲಿಂಗ್ ಡಕ್, ನಾರ್ತನ್ ಶೋವೆಲ್ಲರ್, ನಾರ್ತನ್ ಪಿನ್ಟೇಲ್ ಡಕ್, ಮೋಲಾರ್ಡ, ಗಾಗ್ರಿನಿ, ರೆಡ್ ಕ್ರಸ್ಟೆಡ್ ಪೋಚಾರ್ಡ, ಕಾಮನ್ ಪೋಚಾರ್ಡ, ಕಾಮನ್ ಸ್ಯಾಂಡ್ಪೈಪರ್, ಮಾರ್ಷ್ ಸ್ಯಾಂಡ್ಪೈಪರ್, ವುಡ್ ಸ್ಯಾಂಡ್ಪೈಪರ್, ಲಿಟಲ್ ಸ್ಟಿಂಟ್, ರಫ್, ಕರ್ಲಿವ್ ಸ್ಯಾಂಡ್ಪೈಪರ್, ಡುಂಲೀನ್, ಸ್ಪೂನ್ಬಿಲ್ ಸ್ಯಾಂಡ್ಪೈಪರ್, ಯುರೇಷಿಯನ್ ಕರ್ಲಿವ್, ರೆಡ್ ನೆಕ್ಡ್ ಸ್ಟಿಂಟ್, ಆಸ್ಪ್ರೇ, ಎಲೋ ಲೆಗ್ಡ್ ಗಲ್, ಲೆಸ್ಸರ್ ಬ್ಲಾಕ್ ಬ್ಯಾಕ್ಡ್ ಗಲ್, ಪಲ್ಲಾಸ್ ಗಲ್, ಬ್ರೌನ್ ಹೆಡೆಡ್ ಗಲ್, ಬ್ಲಾಕ್ ಹೆಡೆಡ್ ಗಲ್, ಗಡ್ವಾಲ್, ಬ್ಯಾಕ್ ಟೆಲ್ಡ್ ಗಾಡ್ವಿಟ್, ಇನ್ನೂ ಮುಂತಾದವುಗಳು.
ಅಪರೂಪದ ಹಾಗೂ ವಿನಾಶದ ಅಂಚಿನಲ್ಲಿರುವ ಹಕ್ಕಿ ಸಂಕುಲ:
ಗ್ರೇಟ್ ಕ್ನೋಟ್, ರೆಡ್ ಕ್ನೋಟ್, ರುಪಸ್ ನೆಕ್ಡ್ ಸ್ಟಿಂಟ್, ಕಾಮನ್ ಶೆಲ್ಡಕ್, ಕಾಮನ್ ಟೀಲ್, ಗಡ್ವಾಲ್ ಗಳು ಅಪರೂಪದ ಹಕ್ಕಿಗಳು ಇಲ್ಲಿ ಕಾಣ ಸಿಗುತ್ತವೆ. ಇನ್ನೂ ವಿನಾಶದ ಅಂಚಿನಲ್ಲಿರುವ ಹಕ್ಕಿಗಳಾದ ಡಾಲ್ಮೇಷನ್ ಪೆಲಿಕನ್, ಪಲ್ಲಸ್ ಫಿಸ್ ಈಗಲ್, ಸ್ಪೂನ್ಬಿಲ್ ಸ್ಯಾಂಡ್ಪೈಪರ್, ಗ್ರೇಟರ್ ಅಡ್ಜೋಟಂಟ್, ಲೆಸ್ಸರ್ ಅಡ್ಜೋಟಂಟ್, ಬೇರ್ಸ್ ಪೋಚಾರ್ಡ, ಲೆಸ್ಸರ್ ಪ್ಲೆಮಿಂಗೋ, ವುಡ್ ಸ್ನೈಪ್, ಏಷಿಯನ್ ಡಾವಿಂಚರ್, ಬ್ಲಾಕ್ ನೆಕ್ಡ್ ಸ್ಟಾರ್ಕ, ಬ್ಲಾಕ್ ಬಿಲ್ಡ್ ಟರ್ನ್ ಗಳು 2001 ರಿಂದ 2006 ಅವಧಿಯಲ್ಲಿ ಇದ್ದ ಬಗ್ಗೆ ದಾಖಲಿಸಲಾಗಿದೆ.
ಸ್ಥಳೀಯರಿಗೆ ಹಾಗೂ ಶಾಲಾ ಮಕ್ಕಳಿಗೆ ಪರಿಸರ ಪಾಠ :
ಹಕ್ಕಿ ಸುರಕ್ಷಾ ಸಮಿತಿಯಿಂದ ಆಗಾಗ ಸಭೆಗಳು ಜರುಗುತ್ತವೆ. ಅರಣ್ಯ ಇಲಾಖೆ, ನೀರಾವರಿ ಇಲಾಖೆ, ಚಿಲ್ಕಾ ಅಭಿವೃದ್ಧಿ ಪ್ರಾಧಿಕಾರ ಹಾಗೂ ವನ್ಯಜೀವಿ ಸಂರಕ್ಷಕರು, ಜೀವ ವಿಜ್ಞಾನಿಗಳ ಜೊತೆಗೂಡಿ ಇಲ್ಲಿಯ ಸ್ಥಳೀಯರಿಗೆ ಹಾಗೂ ಶಾಲಾ ಮಕ್ಕಳಿಗೆ ಹಕ್ಕಿಗಳು, ಅವುಗಳ ಆವಾಸ, ವಲಸೆ, ಸಂತಾನಾಭಿವೃದ್ಧಿ ಮತ್ತು ಪರಿಸರದಲ್ಲಿ ಅವುಗಳ ಪ್ರಾಮುಖ್ಯತೆ ಬಗ್ಗೆ ತಿಳಿಸುತ್ತಾ ಪರಿಸರ ಸಂರಕ್ಷಣೆ ಜಾಗೃತಿ, ಪ್ರವಾಸೋದ್ಯಮದಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ಬಗ್ಗೆ ಪಾಠ ಮಾಡುವುದರೊಂದಿಗೆ ಎಲ್ಲರಲ್ಲಿ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಕಾರ್ಯದಿಂದ ನವೆಂಬರ್ ನಿಂದ ಮಾರ್ಚ್ ನ ಅವಧಿಯಲ್ಲಿ ಲಕ್ಷಾಂತರ ಹಕ್ಕಿಗಳು ಇಲ್ಲಿಗೆ ನಿರಾತಂಕವಾಗಿ ವಲಸೆ ಬಂದು ಹೋಗುತ್ತವೆ. ಈ ಸಮಯದಲ್ಲಿ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ.
ಪಕ್ಷಿ ಪ್ರಿಯರಿಗೆ ಮತ್ತು ಹಕ್ಕಿ ಛಾಯಾಗ್ರಾಹಕರಿಗೆ ಸ್ವರ್ಗ :
ಹಕ್ಕಿ ಛಾಯಾಗ್ರಹಣದಲ್ಲಿ ತೊಡಗಿರುವವರಿಗೆ ಇದು ಸ್ವರ್ಗ, ಹಾವನ್ನು ಕಬಳಿಸಿ ಭಕ್ಷಿಸುವ ಬಿಳಿ ಐಬಿಸ್, ದೊಡ್ಡ ಬೆಳ್ಳಕ್ಕಿಗಳ ಕಾದಾಟ, ರೀವಾ ಹಕ್ಕಿಗಳ ಮೀನು ಬೇಟೆ, ಕಪ್ಪೆಯನ್ನು ಹಿಡಿದು ನುಂಗುತ್ತಿರುವ ಪರ್ಪಲ್ ಹೆರಾನ್ಗಳು…….. ಹೀಗೆ ಈ ದೃಶ್ಯ ಸರ್ವೇ ಸಾಮಾನ್ಯವಾದರೂ ತಾಳ್ಮೆಯಿಂದ ಕಾದು ಅವು ಬೇಟೆಯಾಡಿದಾಗ ನಿಧಾನವಾಗಿ ದೋಣಿಯನ್ನು ಚಲಿಸಿ ಹತ್ತಿರ ಹೋಗಿ ಅವಕ್ಕೆ ತೊಂದರೆಯಾಗದಂತೆ ಫೋಟೊ ಕ್ಲಿಕ್ಕಿಸಿ ನಿಸರ್ಗದ ಕೌತುಕಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಾಗ ಆಗುವ ಸಂತೋಷಕ್ಕೆ ಪಾರವೇ ಇಲ್ಲ. ಪಕ್ಷಿತಜ್ಞರು ಎಲ್ಲ ದೃಶ್ಯಗಳನ್ನ ಅಧ್ಯಯನ ಮಾಡಿ ಹೊಸ ಅನ್ವೇಷಣೆಗೆ ಕಾರಣೀಭೂತರಾದರೆ ಪಕ್ಷಿ ಪ್ರಿಯರು ಹಕ್ಕಿಗಳನ್ನು ವೀಕ್ಷಿಸಿ ಉಲ್ಲಾಸಗೊಳ್ಳುತ್ತಾರೆ.
ಮಂಗಲಜೋಡಿಗೆ ಹೋಗುವುದು ಹೇಗೆ?
ಮಂಗಲಜೋಡಿಯು ಒಡಿಶಾ ರಾಜ್ಯದ ಖುರ್ಡಾ ಜಿಲ್ಲೆಯ ಟ್ಯಾಂಗಿ ವಲಯಕ್ಕೆ ಸೇರಿದ ಪ್ರದೇಶ. ಇಲ್ಲಿಗೆ ರೈಲು, ವಿಮಾನಯಾನ, ರಸ್ತೆ ಮೂಲಕವಾಗಿ ಪ್ರಯಾಣಿಸಬಹುದು. ಭುವನೇಶ್ವರದಲ್ಲಿ ವಿಮಾನ ನಿಲ್ದಾಣವಿದ್ದು ಅಲ್ಲಿಂದ ರಸ್ತೆ ಮೂಲಕವಾಗಿ ಚೆನೈ-ಕೊಲ್ಕತ್ತಾ ರಾಷ್ಟ್ರೀಯ ಹೆದ್ದಾರಿ-5 ರಲ್ಲಿ ಸಾಗಿ ಚಂದಾಪುರ ಮಾರ್ಗವಾಗಿ 72 ಕಿ. ಮೀ ಪ್ರಯಾಣಿಸಿದರೆ ಮಂಗಲಜೋಡಿ ಸೇರಬಹುದು. “ಬಾಲುಗೋನ್” ರೈಲು ನಿಲ್ದಾಣದಿಂದ 2 ಕಿ. ಮೀ ಹತ್ತಿರದಲ್ಲಿದೆ. ವಾಸ್ತವ್ಯ ಹಾಗೂ ಊಟಕ್ಕೆ ಗಾಡ್ವಿಟ್ ರೆಸಾರ್ಟ್ ಮತ್ತು ಅರಣ್ಯ ಇಲಾಖೆಯ ವಸತಿ ಗೃಹಗಳಿವೆ.
ಮಂಗಲಜೋಡಿಯು ಹಕ್ಕಿಗಳ ರಮ್ಯ ತಾಣವಾಗಿ ಪ್ರವಾಸಿಗರನ್ನು, ಜೀವವಿಜ್ಞಾನಿಗಳನ್ನು, ಪಕ್ಷಿ ಛಾಯಾಗ್ರಹಕರನ್ನು, ಪಕ್ಷಿ ಪ್ರಿಯರನ್ನು ಕೈ ಬಿಸಿ ಕರೆದು ಮನಸ್ಸಿಗೆ ಮುದನೀಡುತ್ತದೆ.
– ಲೇಖನ ಮತ್ತು ಛಾಯಾಚಿತ್ರ: ಶಶಿಧರಸ್ವಾಮಿ ಆರ್ ಹಿರೇಮಠ
ಹಾವೇರಿ
–
ವನ್ಯಜೀವಿ ಛಾಯಾಗ್ರಹಣ, ಪಕ್ಷಿ, ಕೀಟ, ಸಸ್ಯವಿಕ್ಷಣೆ ಹಾಗೂ ಜೀವಿವೈವಿದ್ಯತೆಯಕುರಿತಾಗಿ ನಾಡಿನ ದಿನಪತ್ರಿಕೆ, ಮಾಸ ಪತ್ರಿಕೆಗಳಿಗೆ ಲೇಖನ ಬರೆಯುವುದು, ಹಾಗೂ ಪುಸ್ತಕ ಬರೆಯುವುದು.
ಶಾಲಾ-ಕಾಲೇಜುಗಳಿಗೆ ತೆರಳಿವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಹಾಗೂ ಜೀವವೈವಿದ್ಯದ ಬಗ್ಗೆ ಛಾಯಾಚಿತ್ರಗಳ ಸ್ಲೈಡ್ಶೋ ಮುಖಾಂತರ ವಿವರಣೆಯೊಂದಿಗೆ ತಿಳಿಹೇಳಿ ಜಾಗೃತಿ ಮೂಡಿಸುವುದು.