ಅಂಕೋಲದ ಅಂಕೋಲೆ

ಅಂಕೋಲದ ಅಂಕೋಲೆ

ಅಂಕೋಲೆ… ವೈಜ್ಞಾನಿಕವಾಗಿ ಅಲಾಂಗಿಯಮ್ ಸಾಲ್ವಿಫೋಯಮ್ ಎಂದು ಪರಿಚಿತವಾಗಿದೆ. ಸಸ್ಯ ಶಾಸ್ತ್ರೀಯ ಪ್ರಕಾರ ಭಾರತದಲ್ಲಿ ಅತಿ ಪೂಜ್ಯ ಮತ್ತು ಮಂಗಳಕರ ಮರ. ಈ ಅಂಕೋಲ ಮರವನ್ನು ಬಹಳ ಮಂಗಳಕರವೆಂದು ಪರಿಗಣಿಸಿ ಪವಿತ್ರ ವನಗಳ ಬಳಿ ಮರವನ್ನು ನೆಡಲಾಗುತ್ತದೆ ಮತ್ತು ಈ ಮರದ ಕಾಂಡದ ತುಣುಕುಗಳನ್ನು ಮನೆಗಳ ಪ್ರವೇಶದ್ವಾರದಲ್ಲಿ ಇಡಲಾಗುತ್ತದೆ.

ಈ ಮರವನ್ನು ಕನ್ನಡದಲ್ಲಿ ಅಂಕೋಲೆ ಮರ, ಅಂಕಾಲಿಗೆ, ಅಂಕೋಲೆ, ಅಂಕೋಥ ಮರ ಎಂಥಲೂ ಮತ್ತು ಅಂಕೋಲಕ, ಗೊಢಪತ್ರ, ಗುಪ್ತಸ್ನೇಹ, ಪೀತನಾರ, ಮದನ, ಗೂಢಮಲ್ಲಿಕಾ, ಪೀತ, ತಾಮ್ರಫಲ, ದೀರ್ಘಕೀಲ್ರ, ಗುಣಾಡ್ಯ, ಕೋಲಕ, ಲಂಬಕರ್ಣ, ಗಂಧಪುಷ್ಪ, ರೋಚನ, ವಿಶಾಲ ತೈಲಗರ್ಭ ಮುಂತಾದ ಹೆಸರುಗಳಿಂದ ಗುರುತಿಸುತ್ತಾರೆ.

ಅಂಕೋಲೆ ಎಲಾಂಜಿಯೇಸಿ (Alangiaceae) ಕುಟುಂಬಕ್ಕೆ ಸೇರಿದೆ. ಇದರ ವರ್ಣತಂತುಗಳು ಸಂಖ್ಯೆ 2n-16 ಬೀಜಗಳಿಂದಾಗಲಿ, ರೆಂಬೆಗಳಿಂದಾಗಲಿ ಈ ಮರಗಳನ್ನು ಸುಲಭವಾಗಿ ಬೆಳೆಸಿಕೊಳ್ಳಬಹುದು. ಬುಡದಲ್ಲಿ ಮುಳ್ಳುಗಳಿಂದ ಕೂಡಿದೆ, ಸಣ್ಣರೆಂಬೆಗಳ ಮೇಲೆ ತುಪ್ಪಳವಿದ್ದು, ಎಲೆಗಳು ಪರ್ಯಾಯ ಜೋಡಣೆ ಪಡೆದಿರುತ್ತವೆ, ಚೂಪಾದ ತುದಿಗಳಿಂದ ಕೂಡಿದ್ದು ಎಲೆಗಳು ಸ್ವಲ್ಪ ಒರಟಾಗಿರುತ್ತವೆ, ಕೆಳಗಿನಿಂದ ಮೂರು ನಾಳಗಳಿಂದ ಕೂಡಿದ್ದು ಮಧ್ಯದಿಂದ ಮೂರರಿಂದ ನಾಲ್ಕು ಜೊತೆ ನಾಳಗಳಿರುತ್ತವೆ. ಎಲೆ ತೊಟ್ಟುಗಳು ಸುಮಾರು 1cm ಉದ್ದವಿರುತ್ತವೆ. ದಪ್ಪತುಪ್ಪಳ ಇರುತ್ತದೆ. ಎಲೆಗಳು ಸಾಮಾನ್ಯವಾಗಿ ಅಸಮಾನವಾಗಿರುತ್ತವೆ ಸಾಮಾನ್ಯವಾಗಿ 3-5 ತಳದಿಂದ ಬೇರ್ಪಡುತ್ತವೆ.

ಹೂವುಗಳು ಬಿಳಿ ಅಥವಾ ಹಳದಿ ಮಿಶ್ರಿತ ಬಿಳಿ ಬಣ್ಣವಿದ್ದು ಪರಿಮಳಯುಕ್ತವಾಗಿರುತ್ತವೆ. ಹೂವುಗಳು ಗೊಂಚಲುಗಳಿಂದ ಕೂಡಿದ್ದು, ಹೂತೊಟ್ಟು ಸುಮಾರು ಒಂದು ಸೆಂಟಿಮೀಟರ್ ಗಳಿಷ್ಟಿರುತ್ತವೆ. ಪುಷ್ಪಪಾತ್ರೆಯೂ ತುಪ್ಪಳ ಪಡೆದಿರುತ್ತದೆ. ಪುಷ್ಪದಳಗಳು 5-10 (ಸಾಮಾನ್ಯವಾಗಿ-6) ಇರುತ್ತವೆ. ಕೇಸರಗಳು (ಸಾಮಾನ್ಯವಾಗಿ-20) ಪುಷ್ಪದಳಗಳಷ್ಟೇ ದೊಡ್ದವು. ಶಲಾಕೇ ಕೇಸರಗಳಷ್ಟೇ ಉದ್ದನಾಗಿರುತ್ತದೆ. ಕೇಸರ ದಂಡುಗಳು ತಳಭಾಗದಲ್ಲಿ ರೋಮ ಸಹಿತವಾಗಿರುತ್ತವೆ. ಶಲಾಕಾಗ್ರ ಬಹುದೊಡ್ಡದಾಗಿರುತ್ತದೆ. ಕಾಯಿ ಎಳೆಯದಿರುವಾಗ ಅಂಡಾಕೃತಿಯಾಗಿರುತ್ತದೆ. ಬಲಿತಾಗ 1.5-2x.1.2.cm ಗಳಷ್ಟು ದಪ್ಪನಾಗಿರುತ್ತದೆ. ಹಣ್ಣಾಗಿ ಮಾಗಿದ ನಂತರ ಕೇಸರಿ-ಕೆಂಪು ಬಣ್ಣದಲ್ಲಿರುತ್ತವೆ. ಹಣ್ಣಿನ ರುಚಿ ಸಿಹಿ ಮಿಶ್ರಿತ ಹುಳಿ ಹಣ್ಣನ್ನು ತಿನ್ನಬಹುದು. ಪುಷ್ಪಪಾತ್ರೆ ಫಲದ ಜೊತೆಗೆ ಉಳಿದುಕೊಂಡಿರುತ್ತದೆ. ಪ್ರತಿ ಹಣ್ಣಿನಲ್ಲಿ ಒಂದು ಬೀಜವನ್ನು ಪಡೆಯುತ್ತೇವೆ. ಅದು ಕೆಂಪು ಮಸುಕಾದ ಹಣ್ಣಿನ ತಿರುಳು ಸುತ್ತುವರೆದಿರುತ್ತದೆ. ಬೀಜಪತ್ರಗಳು ಎಲೆಗಳಂತೆ ಚಪ್ಪಟೆಯಾಗಿರುತ್ತವೆ.

ಫೆಬ್ರವರಿಯಿಂದ ಮಾರ್ಚ್ ವರೆಗು ಮರದಲ್ಲಿ ಹೂವು ಬಿಟ್ಟು, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಹಣ್ಣುಗಳಿಂದ ಕೂಡಿರುತ್ತದೆ. ಈ ಮರವು ಭಾರತದ ಉಷ್ಣವಲಯದ ಕಾಡುಗಳು, ಶುಷ್ಕ ಎಲೆ ಉದುರುವ ಕಾಡುಗಳಲ್ಲಿ ಮತ್ತು ಕುರುಚಲು ಕಾಡುಗಳಲ್ಲಿ ಸಾಮಾನ್ಯವಾಗಿ ನೀರಿನ ಮೂಲಗಳು ಇರುವಲ್ಲಿ ಇರುತ್ತವೆ.

ಭಾರತದ ಎಲ್ಲಾ ರಾಜ್ಯಗಳಲ್ಲೂ ದಕ್ಷಿಣ ಚೈನಾ,  ಶ್ರೀಲಂಕಾ, ಫಿಲಿಫೈನ್ಸ್ ಗಳಲ್ಲಿಯೂ ಕಂಡುಬರುತ್ತದೆ. ಕರ್ನಾಟಕದಲ್ಲಿ ಪಶ್ಟಿಮ ಘಟ್ಟಗಳು, ಶಿವಮೊಗ್ಗ ಜಿಲ್ಲೆಯಲ್ಲಿ ಚಕ್ರ, ಮಾಸ್ತಿಕಟ್ಟೆ ಮತ್ತು ನಿಟ್ಟೂರುಗಳಲ್ಲಿ ಹಾಗೂ ಕೊಡಗು, ದಕ್ಷಿಣ ಮತ್ತು ಉತ್ತರ ಕನ್ನಡ, ಧಾರವಾಡ,  ರಾಮನಗರ ಜಿಲ್ಲೆಗಳಲ್ಲಿ ಇವುಗಳು ಸಾಮಾನ್ಯವಾಗಿ ಕಾಣುತ್ತವೆ. ಇದು ಆಳವಿಲ್ಲದ ಬಿರುಕುಗಳನ್ನು ಹೊಂದಿರುವ ತೆಳು ಕಂದು ತೊಗಟಿಯಿಂದ ಸಣ್ಣ ಶುಷ್ಕ ಎಲೆ ಉದುರುವ ಕಾಡಿನ ಮರವಾಗಿದೆ. ಮರದ ಸುರಕ್ಷತೆಯನ್ನು ಒದಗಿಸುವ ಮುಳ್ಳು ಇರುವ ಕೊಂಬೆಗಳನ್ನು ಹೊಂದಿದೆ ಮತ್ತು ಇದರಿಂದಾಗಿ ಪಕ್ಷಿಗಳನ್ನು ಗೂಡು ಮಾಡಲು ಆಕರ್ಷಿಸುತ್ತದೆ. ಹಕ್ಕಿಗಳ ಪ್ರೇಮಿ ಎಂದು ಕರೆಯುವ ಯಾರಾದರೂ ಈ ಮರವನ್ನು ತೋಟದಲ್ಲಿ ಇರಿಸಬಹುದು.

ಉಪಯೋಗಗಳು

ಅಂಕೋಲೆಗೆ ಕಟು ಹಾಗೊ ಸ್ನಿಗ್ಥತ್ವವಿರುತ್ತದೆ. ವಿಷದೋಷ ನಿವಾರಣೆಗಾಗಿ ಇವನ್ನ ಉಪಯೋಗಿಸುತ್ತಾರೆ. (ಜೇಡ, ಜರಿ, ಚೇಳುಕಡಿತ) ನಾಯಿ ಹಾಗೂ ಇಲಿಗಳ ವಿಷಕ್ಕೆ ವಿರುದ್ಧವಾಗಿಯೂ ಬಳಸಬಹುದು. ಕಫ ಮತ್ತು ವಾಯುದೋಷಗಳನ್ನು ನಿವಾರಿಸುತ್ತದೆ. ಪಾದರಸವನ್ನು ಶುದ್ಧ ಮಾಡಲು ಹಿಂದೆ ಇದರ ರಸವನ್ನು ಉಪಯೋಗಿಸುತ್ತಿದ್ದರು ಎಂಬ ಬಗ್ಗೆ ಉಲ್ಲೇಖವಿದೆ.

ಹಣ್ಣು ಸಿಹಿ, ತಂಪು, ಶ್ಲೇರ್ಷನಾಶಕ, ಧಾತುಪೋಷಕ (ಸಪ್ತ ಧಾತುಗಳು ಮೂಳೆ, ರಕ್ತ, ಮೇಧಸ್ಸು, ನಾಡಿ, ಅಂಗಾಂಶಗಳು ಇತ್ಯಾದಿ) ಧನ್ವಂತರಿ ನಿಘಂಟುವಿನ ಪ್ರಕಾರ ಗಂಟಲಿನ ತೊಂದರೆಗಳ ಚಿಕಿತ್ಸೆಗೂ ಅಂಕೋಲೆ ಬಳಸಲ್ಪಡುತ್ತದೆ. ಬೇರು, ಬೇರಿನ ತೊಗಟೆ, ಬೀಜಗಳು ಮತ್ತು ಎಲೆಗಳಲ್ಲಿ ಎಲ್ಯಾಂಜಿನ (Aiangin) ಎಂಬ ರಾಸಾಯನಿಕವಿರುತ್ತದೆ.

ಕುಷ್ಠ, ಸಿಫಿಲಿಸ್, ಮತ್ತಿತರ ಚರ್ಮದ ಕಾಯಿಲೆಗಳನ್ನು ಗುಣಪಡಿಸಲೂ ಅಂಕೋಲೆ ಉಪಯೋಗಕ್ಕೆ ಬರುತ್ತದೆ. ಹುಚ್ಚು ನಾಯಿ ಕಡಿತದಿಂದ ಬರುವ ಜಲದ್ವೇಷಿ ಕಾಯಿಲೆ (Hydrophobia)ಗೆ ಇದರ ತೊಗಟೆಯ ಪುಡಿ ಅಥವಾ ಕಷಾಯವನ್ನು ಕೊಡುತ್ತಾರೆ. ಹುಚ್ಚನ್ನು ನಿವಾರಿಸರು ಮಾಡಲು ಇದರ ಕಷಾಯ ಉಪಯುಕ್ತ. ಮಾಗಿದ ಹಣ್ಣು ಹೊಸ ಚೇತನ ಮೂಡುವಂತೆ ಮಾಡುತ್ತದೆ. ಕ್ಷಯರೋಗವನ್ನು ಸಹ ಗುಣಪಡಿಸಬಲ್ಲದು (ನಾಯರ್ ಮತ್ತು ಮೊಹನನ್ 1998) ಕ್ಷಯ ರೋಗ ತರುವ ಬ್ಯಾಸಿಲ್ಲೈಗಳು ಅನೇಕ ಆಂಟಿಬಯಾಟಿಕ್ ಗಳಿಗೆ ನಿರೋಧಕ ಶಕ್ತಿ ಬೆಳೆಸಿಕೊಂಡಿರುವುದರಿಂದ ಈಗ ಈ ಔಷಧಗಳ ಬಗ್ಗೆ ಸಾಕಷ್ಟು ಸಂಶೋಧನೆಗಳನ್ನು ನಡೆಸಿ ಉಪಯೋಗ ಮಾಡಿಕೊಳ್ಳಬಹುದಾಗಿದೆ.

ರಾಮಾಯಾಣದ ಅಯೋಧ್ಯಾಕಾಂಡದಲ್ಲಿ ಚಿತ್ರಕೂಟದ ಸಾಂಫ಼ರ್ಯವನ್ನು ಶ್ರೀರಾಮ ಸೀತಾದೇವಿಗೆ ವರ್ಣಿಸುವಾಗ ಫಲ, ಪುಷ್ಪಗಳಿರುವ ಮರಗಳ ಹೆಸರುಗಳನ್ನು ಹೇಳುತ್ತಾ ಅಂಕೋಲ ವೃಕ್ಷದ ಹೆಸರನ್ನು ಹೇಳಿದ್ದಾನೆ. ಕಿಷ್ಕಿಂದಾ ಕಾಂಡದಲ್ಲಿ ಮತ್ತೆ ಲಕ್ಷ್ಮಣನಿಗೆ ವಸಂತ ಮಾಸದ ಹೂಗಳನ್ನು ಹೊತ್ತಿರುವ ಮರಗಳವರ್ಣನೆ ಮಾಡುವಾಗ ಅಂಕೋಲದ ಉಲ್ಲೇಖವಿದೆ. ಯುದ್ಥಕಾಂಡದಲ್ಲೂ ರಾಮ ಸಮುದ್ರತೀರಕ್ಕೆ ಬಂದ ನಂತರ ಮಲಯ ಪರ್ವತಗಳ ಕಾಡುಗಳನ್ನು ವಿವರಿಸುವಾಗ ವಿವಿಧ ವೃಕ್ಷ ಹೆಸರುಗಳ ಜೊತೆಗೆ ಅಂಕೋಲವನ್ನು ಉಲ್ಲೇಖಿಸಿದ್ದಾನೆ. ಮತ್ಸ್ಯಪುರಾಣ ಮತ್ತು ಮಹಾಭಾರತದಲ್ಲೂ ಅಂಕೋಲದ ಪ್ರಸ್ತಾಪವಿದೆ. ಬೃಹತ್ಸಂಹಿತೆಯಲ್ಲಿ (Llll 50)ಇದರ ಉಲ್ಲೇಖವಿದೆ.

ಕನ್ನಡ ಕಾವ್ಯಗಳು ಹಾಗೂ ಶಾಸನಗಳಲ್ಲೂ ಅಂಕೋಲೆ ಮರದ  ಉಲ್ಲೇಖಗಳಿವೆ. ”ಅಂತ ಬರೆ ಅಂಕೋಲೆಯ ಪೆರ್ಮ್ಮಳೆ” (ಅರಿವಾಳ್ತಂದರ ರಗಳೆ)’ ‘ಗಂಗ್ವಾಡೀಕೆರೆಗೆ ಬೀಳ ನೀರಗಾಲ್ವೆ ಅಂಕೋಲೆ ಬಡಗ ಮತ್ತು ತೆವರ ಮೇಲೆ (ಎಪಿಗ್ರಾಪಿಯ ಕರ್ನಾಟಕ ತಿರುಮ 63-485-1748).

ಸ್ಥಳನಾವ: ಅಂಕೋಲಾ

ಕೆಲವು ಮೂಢನಂಬಿಕೆಗಳಿಂದಾಗಿ ಸಾಕಷ್ಟು ಅಂಕೋಲೆ ಮರಗಳು ನಾಶವಾಗುತ್ತಿವೆ. ತಿಥಿ, ಪೂರ್ಣಿಮೆಯಾಗಿದ್ದು, ವಾರ ಭಾನುವಾರವಾಗಿದ್ದು, ಮಧ್ಯರಾತ್ರಿಯಲ್ಲಿ ಈ ಮರವನ್ನು ಕೆಡವಿ ಮನೆಗೆ ತಂದರೆ ಮನೆಯಲ್ಲೇನಾದರು ಭೂತಸಂಚಾರವಿದ್ದರೆ ಅದು ತಪ್ಪುತ್ತದೆ ಎಂದು ಮಲೆನಾಡಿನ ಕೆಲವು ಪ್ರದೇಶದಲ್ಲಿ ಜನ ನಂಬುತ್ತಾರೆ. ಇದರಿಂದಾಗಿ ಅಂಕೋಲೆ ಮರದ ತುಂಡೊಂದನ್ನು ಮನೆಯ ಹೊಸಲಿನ ಮೇಲೆ ನೇತು ಹಾಕುವ ಜನಪದ ಪದ್ಧತಿಯೂ ಇದೆ.

ಲೇಖನ: ಅಲೋಕ ಬಲ್ಲಾಳಾ
ಚಿತ್ರದುರ್ಗ ಜಿಲ್ಲೆ.

Print Friendly, PDF & Email
Spread the love
error: Content is protected.