ಮರಣೋತ್ತರಂ ದಶತಾಸು ಮೃತ್ಯುಂಜಯಃ
ಇಷ್ಟು ದಿನ ನಾನು ಹೇಳಿದ್ದು, ನೀವು ಕೇಳಿದ್ದು. ಈಗ ನಿಮ್ಮ ಮೆದುಳಿಗೆ ಸ್ವಲ್ಪ ಕೆಲಸವನ್ನು ನೀಡಬೇಕೆನ್ನಿಸಿದೆ. ಈ ಕೆಳಗಿನ ಚಿತ್ರಗಳು ಏನನ್ನು ಹೇಳುತ್ತಿವೆ…
= ?
ನಿಮ್ಮ ಉತ್ತರಗಳನ್ನು ನಮಗೆ ಕಳುಹಿಸಿ ([email protected] ಅಥವಾ 9066640808 whatsapp number).
ನೋಡಿದಿರಾ ಪ್ರಶ್ನೆ ಕೇಳಿದ ಒಡನೆಯೇ ನಮ್ಮ ಮೆದುಳು ಎಷ್ಟು ಚುರುಕಾಗಿ ಯೋಚಿಸುತ್ತಿದೆ. ಅಷ್ಟೇ ಅಲ್ಲದೆ ಈ ಮೆದುಳು ನಮ್ಮ ದೇಹದ ಎಲ್ಲ ಅಂಗಗಳನ್ನು ಹಿಡಿತದಲ್ಲಿ ಇಟ್ಟುಕೊಂಡು ಕಾಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುತ್ತದೆ. ಆದರೆ ಇಷ್ಟೆಲ್ಲಾ ಮಾಡುವ ಮೆದುಳಿಗೆ ಕೇವಲ 6 ನಿಮಿಷಗಳ ಕಾಲ ಆಮ್ಲಜನಕ ನೀಡದಿದ್ದರೆ ಸತ್ತುಹೋಗುತ್ತದೆ. ಅಂದರೆ ಮನುಷ್ಯ ಅಥವಾ ಯಾವುದೇ ಪ್ರಾಣಿಯ ಅಗಲಿಕೆಯ ನಂತರದ ಆರು ನಿಮಿಷಗಳಲ್ಲಿ ಮೆದುಳೂ ಸಾಯುತ್ತದೆ. ಎಂಥಾ ವಿಪರ್ಯಾಸ. ದೇಹದ ಎಲ್ಲವನ್ನೂ ಆಳುವ ಮೆದುಳಿಗೂ ಸಾವು ಕಟ್ಟಿಟ್ಟ ಬುತ್ತಿ. ಯಾವುದೂ ಶಾಶ್ವತವಲ್ಲ!
ಅರೇ ಇದೇನಿದು, ಮೆಲ್ಲಗೆ ಮಾತುಗಳು ಆಧ್ಯಾತ್ಮದ ಕಡೆಗೆ ಉರುಳುತ್ತಿವೆ. ನಮ್ಮ ವಿಷಯ ವಿಜ್ಞಾನವಲ್ಲವೇ? ಬನ್ನಿ ಅಲ್ಲಿಗೆ ಹೋಗೋಣ. ಸರಿ ಹಾಗಾದರೆ ಕೇವಲ ಬೆರಳೆಣಿಕೆಯ ನಿಮಿಷಗಳ ಕಾಲದಲ್ಲಿ ಸಾಯುವ ಮೆದುಳನ್ನು ಸಾಯದ ಹಾಗೆ ಎಷ್ಟು ಸಮಯ ಕಾಪಾಡಬಹುದು? ನನಗೆ ತಿಳಿದ ಹಾಗೆ ಜೀವಕೋಶಗಳು ಸಾಯದ ಹಾಗೆ ಇಟ್ಟುಕೊಳ್ಳುವುದು ಅಸಾಧ್ಯಕ್ಕೆ ಹತ್ತಿರದ ಮಾತು. ಹೀಗಿರುವಾಗ, ಮೆದುಳನ್ನು 10 ಘಂಟೆಗಳ ಕಾಲ ಉಳಿಯುವಂತೆ ಮಾಡಬಹುದು ಎಂದರೆ ನಂಬುವಿರಾ? ನಂಬಲೆ ಬೇಕು. ಏಕೆಂದರೆ ಇತ್ತೀಚೆಗಿನ ಸಂಶೋಧನೆ ಇದನ್ನೇ ಹೇಳಿದೆ. ಅದಕ್ಕೆಂದೆ ನಮ್ಮ ಈ ಮಾಸದ ವಿವಿಅಂಕಣದ ಶೀರ್ಷಿಕೆ ಸ್ವಲ್ಪ ವಿಚಿತ್ರ ಎನಿಸಿದರೂ ಇದನ್ನೇ ಹೇಳುತ್ತಿದೆ. ದಶ=ಹತ್ತು; ತಾಸು=ಘಂಟೆಗಳು; ಮೃತ್ಯುಂಜಯ=ಸಾಯದ; ಮೆದುಳು.
ವಿಜ್ಞಾನಿಗಳು ಇತ್ತೀಚೆಗೆ ಕಂಡು ಹಿಡಿದ ಒಂದು ಹೊಸ ದ್ರಾವಣದಲ್ಲಿ ದೇಹದಿಂದ ಬೇರ್ಪಡಿಸಿದ ಮೆದುಳನ್ನು ಇರಿಸಿದಾಗ, ಅದು ಸುಮಾರು ಘಂಟೆಗಳ ಕಾಲ ಬದುಕಿದ್ದುದು ತಿಳಿದು ಬಂತು. ಇದೊಂದು “ಬಹುದೊಡ್ಡ ಆವಿಷ್ಕಾರ” ಎನ್ನುತ್ತಾರೆ ಡ್ಯೂಕ್ವಿಶ್ವವಿದ್ಯಾಲಯದ, ನೀತಾಫ್ಯಾರನಿ. ಏಕೆಂದರೆ, ಹಲವಾರು ಕಾರಣಗಳಿಂದ ನಿಷ್ಕ್ರಿಯವಾದ ಮೆದುಳಿನ ಭಾಗಗಳನ್ನು ಹಿಂದಿನ ಸ್ಥಿತಿಗೆ ತರುವುದು ಅಸಾಧ್ಯ ಎಂಬುದಕ್ಕೆ ಎದುರು ನಿಲ್ಲುವಂತಿದೆ ಈ ಆವಿಷ್ಕಾರ. ಮುಂದಿನ ದಿನಗಳಲ್ಲಿ, “ಸರಿಪಡಿಸಲಾಗದು!” ಎಂದು ನಾವು ಇಲ್ಲಿಯವರೆಗೆ ತಿಳಿದಿದ್ದ ಮೆದುಳಿನ ಕೆಲವು ಗಾಯಗಳನ್ನು ಸರಿ ಮಾಡಬಹುದು ಎಂಬ ಆಶೆ ಮೂಡಿಸುತ್ತದೆ.
ವಿಶೇಷವೆಂದರೆ ಈ ಪ್ರಯೋಗದ ಸಲುವಾಗಿ ಯಾವುದೇ ಪ್ರಾಣಿಯನ್ನು ಇದೇ ಉದ್ದೇಶಕ್ಕೆಂದು ಕೊಲ್ಲಲಾಗಿಲ್ಲ. ಬದಲಿಗೆ ಹಂದಿಗಳ ಮಾಂಸ ಮಾರಾಟ ಮಾಡುವ ಜಾಗದಿಂದ ತಂದದ್ದು. ಇದಕ್ಕಾಗಿ ಸುಮಾರು 300 ಸತ್ತ ಹಂದಿಗಳ ತಲೆಗಳನ್ನು ತಂದು, 4 ಘಂಟೆಗಳ ಕಾಲ ಪೋಸ್ಟ್ ಮಾರ್ಟಮ್ ಮಾಡಿ ಮೆದುಳನ್ನು ಹೊರ ತೆಗೆಯಲಾಯಿತು. ಇವುಗಳಲ್ಲಿ 32ನ್ನು ವಿಜ್ಞಾನಿಗಳೇ ತಯಾರಿಸಿದ ಬ್ರೇನ್ ಎಕ್ಸ್(Brain Ex) ಎಂಬ ದ್ರಾವಣದಲ್ಲಿ ಇರಿಸಲಾಯಿತು. ಈ ದ್ರಾವಣದಲ್ಲಿ ಮೆದುಳಿನ ನರ ಜೀವಕೋಶಗಳು ಬದುಕಲು ಬೇಕಾದ ಆಮ್ಲಜನಕ ಮತ್ತು ಆಹಾರವನ್ನು ಕಳುಹಿಸಿ ಇಂಗಾಲದ ಡೈ-ಆಕ್ಸೈಡ್ ಅನ್ನು ಪಡೆಯಲಾಗುತ್ತಿತ್ತು. ಇದರಿಂದಾಗಿ ಆ ಹಂದಿಯ ಮೆದುಳು 6 ಘಂಟೆಗಳ ಕಾಲ ಬದುಕಿತ್ತು. ಅಂದರೆ ಒಟ್ಟು 10 ಘಟೆಗಳ ಕಾಲ ಮೆದುಳು (ಮೆದುಳಿನ ಜೀವಕೋಶಗಳು) ಬದುಕಿತ್ತು. ಅಚ್ಚರಿ ಎಂದರೆ ನಮ್ಮ ಎಷ್ಟೋ ಕ್ಲಿಷ್ಟ ಲೆಕ್ಕಾಚಾರಗಳನ್ನು ನಿರ್ವಹಿಸುವ ಮೆದುಳಿನ ಹಿಪ್ಪೊಕ್ಯಾಂಪಸ್ ಮತ್ತು ಪ್ರಿ-ಫ್ರಂಟಲ್ ಕಾರ್ಟೆಕ್ಸ್ ಎಂಬ ಎರಡು ಭಾಗಗಳು ಆರೋಗ್ಯವಾಗಿದ್ದವು.
ಇವುಗಳೆಲ್ಲವ ನೋಡಿದರೆ ಮುಂದೆ ಲಕ್ವ ಮತ್ತು ಇತರ ಕೆಲವು ಮೆದುಳಿಗೆ ಸಂಬಂಧಿಸಿದ ತೊಂದರೆಗಳನ್ನು ಗುಣಪಡಿಸುವ ವಿಧಾನಗಳು ಬರುವುದರಲ್ಲಿ ಹೆಚ್ಚಿನ ಸಂಶಯವಿಲ್ಲ. ಹಾಗೆಂದ ಮಾತ್ರಕ್ಕೆ ಇವೆಲ್ಲವೂ ನಾಳೆಯೇ ನಿಜವಾಗುವುದೂ ಇಲ್ಲ. ಮನುಷ್ಯನ ಮೆದುಳಿಗೆ ಕೈ ಹಾಕಿ ಪ್ರಯೋಗಾಲಯಗಳಲ್ಲಿ ಪರೀಕ್ಷಿಸುವುದು ಅಷ್ಟು ಸುಲಭವಲ್ಲ. ಈ ಸಂಶೋಧನೆ ಒಂದು ಹಂತಕ್ಕೆ ಏರಲು ಇನ್ನೂ ಎಷ್ಟೋ ಮೆಟ್ಟಿಲುಗಳ ಏರಬೇಕು.
ಮೂಲ ಲೇಖನ : ScienceNewsforStudents
ಲೇಖನ: ಜೈಕುಮಾರ್ ಆರ್.
ಡಬ್ಲ್ಯೂ.ಸಿ.ಜಿ, ಬೆಂಗಳೂರು
ನನ್ನ ಇಂಜಿನಿಯರಿಂಗ್ ಅನ್ನು ಮೆಕಾನಿಕಲ್ ಆಗಿ ಮುಗಿಸಿ, ಈಗ ರಾಮಕೃಷ್ಣ ಮಿಷನ್ ಶಿವನಹಳ್ಳಿಯ ವಿವಿಧ ಯೋಜನೆಗಳಲ್ಲಿ ಭಾಗಹಿಸುತ್ತಾ, ನನ್ನ ಪ್ರಕೃತಿಯ ಬಗೆಗಿನ ಒಲವನ್ನು ಅನುಭವಿಸಲು ಡಬ್ಲ್ಯೂ . ಸಿ .ಜಿ. ಮತ್ತು ಕಾನನದ ಬೆನ್ನೇರಿದ್ದೇನೆ.