ಕರಡಿ ಸಂರಕ್ಷಣೆಯ ಸವಾಲುಗಳು

ಕರಡಿ ಸಂರಕ್ಷಣೆಯ ಸವಾಲುಗಳು

ಅದು 80 ಮಕ್ಕಳಿರುವ ಒಂದು ದೊಡ್ಡ ಕುಟುಂಬ. ಅಲ್ಲಿರುವ ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಪ್ರೀತಿ , ಒಂದೇ ರೀತಿಯ ಆರೈಕೆ, ಸಮಯಕ್ಕೆ ಸರಿಯಾಗಿ ಊಟ, ಶುಶ್ರೂಷೆ
ಎಲ್ಲವೂ ತಮ್ಮ ಪೋಷಕರಿಂದ ದೊರೆಯುತ್ತದೆ. ಆ ಪೋಷಕರಿಗೆ ಪ್ರತಿ ಮಗುವಿನ ಇಷ್ಟ-ಕಷ್ಟಗಳು, ನೋವು- ನಲಿವುಗಳುಎಲ್ಲವೂ ತಿಳಿಯುತ್ತದೆ ಅಷ್ಟು ಮಕ್ಕಳಿದ್ದರೂ 10-15 ಮಂದಿಯೊನ್ನೊಳಗೊಂಡಿರುವ ಪೋಷಕರಿಗೆ ಈ ಮಕ್ಕಳ ಶುಶ್ರೂಷೆ ಎಂದು ಹೊರೆ ಎನಿಸಿಲ್ಲ. ಏಕೆಂದರೆ ಪೋಷಕರಿಗೆ ಮಕ್ಕಳೆಂದರೆ ಅಷ್ಟು ಪ್ರೀತಿ ಎಷ್ಟೇ ಆಗಲಿ ಮಕ್ಕಳಲ್ಲವೇ? ಕಾನನ ಸಾಂಸಾರಿಕ ಕಥೆಗಳನ್ನು ಪ್ರಕಟಿಸಲು ಶುರುಮಾಡಿತೇ? ಎಂದು ನಿಮ್ಮಲ್ಲಿ ಪ್ರಶ್ನೆ ಉದ್ಬವಿಸಿದ್ದರೆ ಅದು ಅಕ್ಷರಶಃ ತಪ್ಪು. ನಾನು ಹೇಳುತ್ತಿರುವ ಕುಟುಂಬದ ಹೆಸರು ವೈಲ್ಡ್ ಲೈಫ್ SOS ಹಾಗೂ ಆ 80 ಮಕ್ಕಳೇ ವೈಲ್ಡ್ ಲೈಫ್ SOS ರವರು ಕಲಂದಾರ್ ಜನಾಂಗದಿಂದ ಸಂರಕ್ಷಿಸಿ ತಂದು ಹೊಸ ಜೀವನವನ್ನು ನೀಡಿರುವ 80ಕರಡಿಗಳು. ಪ್ರಪಂಚದಲ್ಲಿರುವ 8 ಜಾತಿಯ ಕರಡಿಗಳಲ್ಲಿ ಭಾರತವು 4 ಜಾತಿಯ ಕರಡಿಗಳಿಗೆ ನೆಲೆ ನೀಡಿದೆ. ಅದರಲ್ಲಿ ಸ್ಲಾಥ್ ಕರಡಿಯೂ ಸಹ ಒಂದು. ಈ ಕರಡಿಯ ಸಂಖ್ಯೆ ಕೆಲವು ವರ್ಷಗಳಿಂದ ಗಣನೀಯವಾಗಿ ಕ್ಷೀಣಿಸುತ್ತಾ ಬಂದಿದೆ. ಇದಕ್ಕೆ ಕಾಡುಗಳ ನಾಶವು ಮುಖ್ಯ ಕಾರಣವಾದರೂ , ಇವುಗಳನ್ನು ಚಿಕ್ಕ ಮರಿಗಳಲ್ಲಿಯೇ ಸೆರೆಹಿಡಿದು ಕುಣಿತಕ್ಕಾಗಿ ಬಳಸುತ್ತಿರುವುದೂ ಒಂದು ಕಾರಣವಾಗಿದೆ. ಕರಡಿಕುಣಿತವನ್ನು ಸಂಪೂರ್ಣವಾಗಿ ನಿಲ್ಲಿಸಿಬೇಕು ಎಂದು ನಿಶ್ಚಯಿಸಿ ಹುಟ್ಟಿದ ವೈಲ್ಡ್ ಲೈಫ್ SOS ಸಂಸ್ಥೆಯು ಇದನ್ನು ತಡೆಯುವಲ್ಲಿ ಯಶಸ್ಸು ಕಂಡಿದೆ.

ಕರಡಿಗಳ ಬಗ್ಗೆ ಸಾಮಾನ್ಯ ಜನರಿಗೆ ಮಾಹಿತಿ ಒದಗಿಸಬೇಕು  ಹಾಗು ಮಾನವ – ವನ್ಯಜೀವಿ ಸಂಘರ್ಷವನ್ನು ಕಡಿಮೆಗೊಳಿಸುವಲ್ಲಿ ಸಾಮಾನ್ಯ ಜನರ ಪಾತ್ರವೇನು ಎಂಬುದನ್ನು ತಿಳಿಸಬೇಕೆಂಬ  ಉದ್ದೇಶದಿಂದ ‘ಕರಡಿಗಳ ಸಂರಕ್ಷಣಾ ಸವಾಲುಗಳು’ ಎಂಬ ಶೀರ್ಷಿಕೆಯಡಿಯಲ್ಲಿ WCG ಯು ಅಡವಿ ಫೀಲ್ಡ್ ಸ್ಟೇಷನ್ ನಲ್ಲಿ ಒಂದು ದಿನದ ಕಾರ್ಯಕ್ರಮವನ್ನು 21 ನೇ ಏಪ್ರಿಲ್ 2019 ರಂದು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದ  ಸಂಪನ್ಮೂಲ ವ್ಯಕ್ತಿ ವೈಲ್ಡ್ ಲೈಫ್  SOS ಸಂಸ್ಥೆಯ ನಿರ್ದೇಶಕರಾದ ಡಾ ಅರುಣ್ ಎ ಶಾ ರವರು.

 ಬೆಳಗ್ಗೆ 11 ಘಂಟೆಗೆ ಕಾರ್ಯಕ್ರಮವು ಶುರುವಾಯಿತು. ಮೊದಲು ಕರಡಿಯ ಬಗೆಗಿನ ಮಾಹಿತಿಯನ್ನು ಅಂದರೆ ಪ್ರಪಂಚದಲ್ಲಿನ ಕರಡಿಗಳ ಪ್ರಭೇದಗಳು, ಅವುಗಳ ವಾಸಮಾಡುತ್ತಿರುವ ಪ್ರಾಂತ್ಯ, ಅವುಗಳ ನಡವಳಿಕೆ,  ಆಹಾರ, ಪರಿಸರ ಸಮತೋಲನದಲ್ಲಿನ ಕರಡಿಗಳ ಪಾತ್ರ, ನಮ್ಮ ದೇಶದಲ್ಲಿರುವ ಕರಡಿಗಳ ಸಂಖ್ಯೆ ಮುಂತಾದವುಗಳನ್ನು ಸವಿವರವಾಗಿ ತಿಳಿಸಿಕೊಟ್ಟರು. ಹಾಗೆಯೇ ಮುಂದುವರಿಸುತ್ತಾ ಮಾನವ- ವನ್ಯಜೀವಿ ಸಂಘರ್ಷಗಳ ಕೆಲವು ವೀಡಿಯೋ ತುಣುಕುಗಳನ್ನು ತೋರಿಸುತ್ತಾ ಸಾಮಾನ್ಯ ಜನರು ಈ ಸಮಯದಲ್ಲಿ ಯಾವ ರೀತಿ ವರ್ತಿಸಬೇಕು, ವೈಜ್ಞಾನಿಕವಾಗಿ ಹೇಗೆ ಈ ಸಂಘರ್ಷವನ್ನು ಕಡಿಮೆ ಮಾಡಬಹುದು ಎಂಬುದನ್ನು ತಿಳಿಸಿಕೊಟ್ಟರು.

ಸುಮಾರು 2 ಗಂಟೆಗಳ ಕಾಲ ನಡೆದ ಈ ಕರಡಿಗಳ ಬಗೆಗಿನ ಮಾಹಿತಿ ಹಂಚಿಕೆ ಕಾರ್ಯಕ್ರಮದಲ್ಲಿ 30 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಮಧ್ಯಾಹ್ನದ ಊಟದ ನಂತರ ಸಂಪನ್ಮೂಲ ವ್ಯಕ್ತಿಯ ಜೊತೆ ಚರ್ಚೆಯನ್ನು ಹಮ್ಮಿಕೊಳ್ಳಲಾಗಿತ್ತು ನಂತರ ವೈಲ್ಡ್ಲೈಫ್  SOS ರವರ ಕರಡಿಯ ಬಗೆಗಿನ ಕಿಟ್ ಗಳನ್ನೂ ಮಕ್ಕಳಿಗೆ ವಿತರಿಸಿ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಯಿತು .

ನಮ್ಮ ಸುತ್ತಲಿನ ಜೀವ ವೈವಿಧ್ಯವನ್ನು ಎಲ್ಲರಿಗೂ ತಿಳಿಸಿಕೊಡಬೇಕೆಂಬ ಉದ್ದೇಶದಿಂದ ಪ್ರತಿ ತಿಂಗಳು ಅಡವಿ ಫಿಲ್ಡ್ ಸ್ಟೇಷನ್ ನಲ್ಲಿ WCG ಯು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಆಸಕ್ತರು ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ www.indiawcg.org ಗೆ ಭೇಟಿ ನೀಡಿ ಅಥವಾ
ಸಂಪರ್ಕಿಸಿ:
+919740919832 (ಅಶ್ವಥ ಕೆ ಎನ್)
+919008261066(ನಾಗೇಶ್ ಓ ಎಸ್)

– ನಾಗೇಶ್ ಓ ಎಸ್
ಡಬ್ಲ್ಯೂ ಸಿ ಜಿ ., ಬೆಂಗಳೂರು

Print Friendly, PDF & Email
Spread the love
error: Content is protected.