ಮಾಸ ವಿಶೇಷ – ಜಾಲಾರಿ

ಮಾಸ ವಿಶೇಷ – ಜಾಲಾರಿ

©ನಾಗೇಶ್ ಓ ಎಸ್, ಜಾಲಾರಿ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

ಇಂಗ್ಲೀಷ್ ಹೆಸರು : Taloora Lac Tree
ವೈಜ್ಞಾನಿಕ ಹೆಸರು : Shorea roxburghii

ಜಾಲಾರಿ ಮರವನ್ನು ಸಾಮಾನ್ಯವಾಗಿ ಇಂಗ್ಲೀಷಿನಲ್ಲಿ ತಲ್ಲೂರಾ ಲ್ಯಾಕ್ ಟ್ರೀ (Taloora Lac Tree), ವೈಟ್ ಮೆರಂಟಿ (White meranti), ಲ್ಯಾಕ್ ಟ್ರೀ (Lac Tree) ಎಂದು ಕರೆಯುವುದುಂಟು. ನೈಋತ್ಯ ಭಾರತದ ಶುಷ್ಕ ಎಲೆ ಉದುರುವ ಕಾಡುಗಳ ಸ್ಥಳೀಯ ಮರ ಈ ಜಾಲಾರಿ. ಅಂಟು ಬಿಡುವ ಮರಗಳ ಪೈಕಿ ಈ ಮರವು ಬಹು ದೊಡ್ಡ ಮರವಾಗಿದೆ. ಮರವು ಸುಮಾರು 30 ಮೀಟರ್ ಎತ್ತರದವರೆಗೂ ಬೆಳೆಯುತ್ತದೆ. ಶಿವರಾತ್ರಿಯ ವೇಳೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ಹೂಗಳು ಬಿಟ್ಟು ಹೆಚ್ಚು ಆಕರ್ಷಕವಾಗಿರುತ್ತದೆ, ಹಾಲಿನಂತಹ ಬಿಳಿ ಬಣ್ಣದಿಂದ ಕೂಡಿದ ನಕ್ಷತ್ರಾಕಾರವಾಗಿರುವ ಹೂವು ಪರಿಮಳಯುಕ್ತವಾಗಿರುತ್ತದೆ. ಎಲೆಗಳು ಚಿಗುರಿದಾಗ ತಿಳಿ ಹಸಿರು ಬಣ್ಣದಿಂದ ಕೂಡಿದ್ದು ಬರಬರುತ್ತ ಗಾಢ ಹಸಿರು ಬಣ್ಣಕ್ಕೆ ತಿರುಗುತ್ತವೆ. ಎಲೆಗಳು ಎದುರುಬದರಾಗಿ ಪರ್ಯಾಯವಾಗಿ ವ್ಯವಸ್ಥೆಗೊಂಡಿರುತ್ತವೆ. ಇದರ ಕಾಯಿಗಳು ತರಗೆಲೆಯಂತೆ ಇದ್ದು ಇವು ರೆಕ್ಕೆಗಳನೊಳಗೊಂಡಿದ್ದು, ಗಾಳಿಯಲ್ಲಿ ಸರಾಗವಾಗಿ ಹಾರಿಹೋಗಿ ಇದರ ಬೀಜಪ್ರಸಾರವಾಗುತ್ತದೆ.  ಜಾಲಾರಿಮರ ಬೂದು ಮತ್ತು ಕಂದು ಬಣ್ಣದ ತೊಗಟೆ ಹೊಂದಿದ್ದು ಇದರ ಬಿರುಕುಗಳಲ್ಲಿ ಅಂಟನ್ನು ಸ್ರವಿಸುತ್ತದೆ.  ಈ ಅಂಟನ್ನು ಧೂಪವಾಗಿ ಬಳಸುತ್ತಾರೆ. ಜಾಲಾರಿಯನ್ನು ಮರಮುಟ್ಟುಗಳಾಗಿ ಮನೆಯ ಕೆಲಸಗಳಲ್ಲಿ ಹಾಗೂ ಇದರ ತೊಗಟೆಯನ್ನು ಬಣ್ಣಗಳ ತಯಾರಿಕೆಯಲ್ಲಿ ಬಳಸುತ್ತಾರೆ.

Spread the love
error: Content is protected.