ನನ್ನ ಮೊದಲ ಜೇಡ ಕಾರ್ಯಾಗಾರ

ಅಕ್ಟೋಬರ್ ತಿಂಗಳ ಮೊದಲನೆಯ ವಾರ ನನಗೆ ವಾಟ್ಸ್ಯಾಪ್ ನಲ್ಲಿ ಜೇಡಗಳ ಕಾರ್ಯಾಗಾರವಿದೆ, ಆಸಕ್ತ 30 ಜನರಿಗೆ ಪ್ರವೇಶ ಎಂಬ ಸಂದೇಶ ದೊರಕಿತು. ಕಾರ್ಯಾಗಾರದ ನಿರೂಪಕರ ತಂಡದಲ್ಲಿ ನನ್ನ ಚಾರಣಮಿತ್ರನ ಹೆಸರು ನೋಡುತ್ತಲೇ ಅವರನ್ನು ಸಂದೇಶಿಸಿ ಕಾರ್ಯಗಾರದ ನಂತರ ಮನೆಗೆ ಬರುವಂತೆ ಆಹ್ವಾನಿಸಿದೆ ಹಾಗೂ ಕಾರ್ಯಾಗಾರಕ್ಕೆ ನಾನೂ ಕೂಡ ಬರುವೆ ಎಂದು ತಿಳಿಸಿದೆ. ಜೇಡ ಕಂಡೊಡನೆ ಕೋಲು ತೆಗೆದುಕೊಳ್ಳುವ ನಾನು ಇವರನ್ನು ಭೇಟಿಯಾದ ಮೇಲೆ ಕಡಿಮೆ ಮಾಡಿದೆ. ಈ ಬಾರಿ ಕಾರ್ಯಾಗಾರದಲ್ಲಿ ತಿಳಿಯಲು ಏನೇನಿದೆಯೋ ಎಂದು ಹೊರಟೆ. ಮ್ಯಾಕ್ರೋ (Macro) ಛಾಯಾಚಿತ್ರಣ ಮಾಡಲು ಅಗತ್ಯ ಪರಿಕರಗಳಿರದೆ ನನ್ನಲ್ಲಿರುವುದನ್ನೇ ಹೊತ್ತೊಯ್ದೆ.

ಕಾರ್ಯಾಗಾರದ ಸ್ಥಳ ಇಂದ್ರಪ್ರಸ್ಥ, ಮೈಸೂರಿನ ಬಳಿಯ ಕಳಲವಾಡಿ ಗ್ರಾಮದ ಬಳಿ ಇರುವುದು. ಸಹಜ ಕೃಷಿಯನ್ನು ಮಾಡುತ್ತಿರುವ ಕುಟುಂಬ. ಕುಟುಂಬದ ಹಿರಿಯರು ಇಂಜಿನಿಯರ್, ಅವರ ಪುತ್ರ ವೈದ್ಯರು ಹಾಗೂ ಕಾರ್ಯಾಗಾರದ ಪ್ರಮುಖ ರೂವಾರಿ. ಅವರು ಹಾಗೂ ಅವರ ಗೆಳೆಯರು ‘ಸಾಲಿಗ’ ಎಂಬ ತಂಡ ರಚಿಸಿಕೊಂಡು ಜೇಡಗಳ ವ್ಯವಸ್ಥಿತ ಅಧ್ಯಯನ ಕೈಗೊಂಡಿದ್ದಾರೆ. ವಿವಿಧ ಕಾರಣಗಳಿಗೆ ಬೆಂಗಳೂರು ಸೇರಿರುವ ಇನ್ನಿಬ್ಬರು ಜೇಡಾಸಕ್ತರು (ವಿಜ್ಞಾನಿಗಳು ಎಂದರೆ ಉತ್ಪ್ರೇಕ್ಷೆಯಾಗದು) ಕಾರ್ಯಾಗಾರ ನಡೆಸಿಕೊಡಲು ಬಂದಿದ್ದರು. ಹೋದೊಡನೆ ಸುಮಾರು 14 ಜನ ಆಗಲೇ ಬಂದು ಎಲೆ, ಗಿಡ, ಹೂಕುಂಡಗಳಸಂದಿಯಲ್ಲಿ ಚಿತ್ರಣದಲ್ಲಿ ತೊಡಗಿದ್ದರು.

ಮಧ್ಯಾಹ್ನ ಸುಮಾರು 2.30ಕ್ಕೆ ಎಲ್ಲರೂ ಒಟ್ಟಾಗಿ ಸೇರಿ ಪರಸ್ಪರ ಪರಿಚಯ ಮಾಡಿಕೊಂಡೆವು. ನಂತರ ಜೇಡಗಳ ರಚನೆಯ ಬಗ್ಗೆ ತಿಳಿಸುತ್ತಾ, ಜೇಡಗಳು ಕೀಟಗಳಿಗಿಂತ ಹೇಗೆ ಭಿನ್ನ ಎಂದು ಹೇಳಿದರು. ಕೀಟಗಳಿಗೆ 6 ಕಾಲುಗಳಿದ್ದರೆ, ಜೇಡಗಳಿಗೆ 8 ಕಾಲುಗಳು ಇರುತ್ತವೆ. ಕೀಟಗಳಲ್ಲಿ ತಲೆ, ಎದೆ ಹಾಗೂ ಹೊಟ್ಟೆಯಭಾಗ ಎಂದು ವಿಭಜಿಸಲ್ಪಟ್ಟಿದೆ, ಜೇಡಗಳ ತಲೆ ಹಾಗು ಎದೆಯ ಭಾಗ ಕೂಡಿಕೊಂಡಿರುತ್ತದೆ. ಜೇಡಗಳಿಗೆ ನಾಲ್ಕು ಜೊತೆ ಕಣ್ಣುಗಳು ಇರುತ್ತವೆ. ಕೀಟಗಳಿಗೆ ಒಂದು ಜೊತೆ ಕಣ್ಣುಗಳು. ಹೀಗೆ ಸಾಗಿತ್ತು ಜೇಡಗಳ ವಿವರಣೆ. ನಾನು ನಿದ್ರಾವಶನಾಗುವುದನ್ನು ತಪ್ಪಿಸಿಕೊಳ್ಳಲು ಆಗಾಗ ಜೇಡದಲ್ಲಿರುವ ರಕ್ತ(ಹೀಮೋಸೀಲ್)ಜೀರ್ಣಾಂಗ ಶ್ವಾಸಕೋಶದ ವಿವರಣೆ, ಆಹಾರ ಕ್ರಮ ಹಾಗೂ ವಿಸರ್ಜನಾಂಗಗಳ ಬಗ್ಗೆ ಪ್ರಶ್ನಿಸಿದೆ. ಎಲ್ಲಾ ಪ್ರಕ್ರಿಯೆಗಳು ಜೇಡದಲ್ಲಿದ್ದು ಅದರ ಬಗ್ಗೆ ಇನ್ನೂ ವಿಸ್ತೃತ ಅಧ್ಯಯನ ನಡೆಯಬೇಕು ಎಂದು ಸಂಪನ್ಮೂಲ ವ್ಯಕ್ತಿ ತಿಳಿಸಿದರು.

ನನಗೆ ಎಲ್ಲಾ ಜೇಡಗಳೂ ದುಂಡಗೆ ಬಲೆ ಹೆಣೆಯುತ್ತವೆ ಎಂಬ ನಂಬಿಕೆ ಇತ್ತು. ಕಾರ್ಯಾಗಾರದಲ್ಲಿ orb weaver (ಹಳೆ ಆಂಗ್ಲದಲ್ಲಿ orb ಎಂದರೆ ದುಂಡು ಎಂಬರ್ಥ) ಎಂಬ ಕುಟುಂಬದ ಜೇಡಗಳು ಮಾತ್ರ ದುಂಡಗೆ ಬಲೆ ಹೆಣೆಯುತ್ತವೆ ಮತ್ತು ಹಾರುವ ಜೇಡಗಳು ತಾವು ಹಾರಿದ ಸ್ಥಳದ ಗುರುತಿಗೆ ಒಂದೆಳೆ ನೂಲನ್ನು ಬಿಟ್ಟುಕೊಂಡಿರುತ್ತವೆ. ಎಲ್ಲಾ ಜೇಡಗಳು ಬಲೆ ಹೆಣೆಯಲೇಬೇಕೆಂದಿಲ್ಲ ಎಂದು ತಿಳಿಸಿದರು. ಜೇಡಗಳು ಬುದ್ಧಿವಂತ ಜೀವಿಗಳು. ಅದರಲ್ಲಿಯೂ ಹಾರುವ ಜೇಡ ಬಲು ಬುದ್ಧಿವಂತ, ಜೇಡಗಳನ್ನು ಶರ್ಲಾಕ್ ಹೋಮ್ಸ್ ಎಂದು ಕರೆಯಬಹುದು ಎಂದು ತಿಳಿಸಿದರು. ಆಗ ನಾವೆಲ್ಲ “ಹೋ ಹಾಗಾದರೆ ಲಂಡನ್ನಿನ ಬೇಕರ್ಸ್ಟ್ರೀಟ್ ನಲ್ಲಿರುವ ಜೇಡ ಇದು” ಎಂದು ಲಘು ವಿನೋದದ ಜೊತೆಗೆ ಚಹಾಗೆ ತೆರಳಿದೆವು.
ಮೈಸೂರಿನ ಜಿಲ್ಲಾಧಿಕಾರಿಯವರು ಬಿಡುವು ಮಾಡಿಕೊಂಡು ಕಾರ್ಯಾಗಾರದಲ್ಲಿ ಕೆಲವು ಸಮಯ ಪಾಲ್ಗೊಂಡಿದ್ದರು. ನಂತರ ಸಾಲಿಗ ತಂಡದ ಲಾಂಛನ ಬಿಡುಗಡೆಗೊಳಿಸಿ ಶುಭಕೋರಿ ನಿರ್ಗಮಿಸಿದರು.

ಅರಕ್ನಿಡೇ ಮತ್ತು ಸಾಲ್ಟಿಡೇ ಎಂದು ಎರಡು ತಂಡಗಳಾಗಿ ‘ಇಂದ್ರಪ್ರಸ್ಥ’ದಲ್ಲಿ ಜೇಡ ಎಂಬ ನಿಧಿಯ ಬೇಟೆಗೆ ಹೊರಟೆವು. ‘ಅರಕ್ನಿಡೆ’ ಎಂದರೆ ಗ್ರೀಕ್ ಭಾಷೆಯಲ್ಲಿ ಜೇಡ ಎಂದು, ಸಾಲ್ಟಿಡೇ ಎಂದರೆ ಹಳೆ ಲ್ಯಾಟಿನ್ ಭಾಷೆಯಲ್ಲಿ ನೃತ್ಯ ಎಂದರ್ಥ. ಇದು ಹಾರುವ ಜೇಡಗಳ ಕುಟುಂಬಕ್ಕಿಟ್ಟಿರುವ ಹೆಸರು. ನಾನಿದ್ದಗುಂಪಿನಲ್ಲಿ ಇಬ್ಬರ ಬಳಿಮಾತ್ರ ಮ್ಯಾಕ್ರೋ ಫೋಟೋಗ್ರಫಿಗೆ (macro photography)ಗೆ ಬೇಕಾದ ಪರಿಕರಗಳಿದ್ದವು. ಉಳಿದವರ ಕೈಯಲ್ಲಿ ಟಾರ್ಚ್, ಭೂತಗಾಜು. ತಮಗೆ ಸಿಗುವ species ಗಳನ್ನು ಒಬ್ಬರು ಬರೆದುಕೊಳ್ಳುತ್ತಿದ್ದರು. ಮೊದಲು ನಾವು ನೋಡಿದ ಜೇಡ ಸಂಘಜೇಡ(social Spider). ಗುಂಪಾಗಿ ವಾಸಿಸುವ ಈ ಜೇಡಗಳು ರಾತ್ರಿವೇಳೆ ಬಲೆ ಹೆಣೆಯುತ್ತವೆ. ಹಲವಾರು ವರ್ಷಗಳಿಂದ ಇದ್ದ ಅದು, ನೆಲದಿಂದ ತಾರಸಿವರೆಗೂ ಅಲ್ಲಲ್ಲಿ ಹಬ್ಬಿಕೊಂಡಿತ್ತು.

ನಂತರ ಕಂಡಿದ್ದು ಕಿಡ್ನಿ ಜೇಡ. ಎಲೆ ಮರೆಯಿಂದ ಹೊರಬಂದ ಅದು ಬೇಟೆಯಲ್ಲಿ ತಲ್ಲೀನವಾಗಿತ್ತು. ಅಷ್ಟರಲ್ಲಿ ಮತ್ತೊಂದು ದಿಕ್ಕಿನಿಂದ ಕನ್ನಡಿ ಜೇಡ ಎಂಬ ಉದ್ಗಾರ. ಪಾರದರ್ಶಕವಾಗಿ ತನ್ನ ಉದರದಲ್ಲಿರುವ ಬೇಟೆಯ ಕೆಂಪು ಬಣ್ಣವನ್ನು ಸೂಸುತ್ತಿತ್ತು. ಹೀಗೆ ಸಾಗಿತು ನಮ್ಮ ಜೇಡರಬಲೆ ಪಯಣ. ಸಮಯ 8.30ರ ಆಸುಪಾಸಿರಬೇಕು, ಎರಡೂ ತಂಡದವರು ಊಟಮಾಡುವುದಕ್ಕಾಗಿ ಮೂಲ ಸ್ಥಳಕ್ಕೆ ಬಂದು ಸೇರಿದೆವು. ಮುದ್ದೆ, ಹುರಳಿಸಾರು, ಅನ್ನ, ಗೊಜ್ಜು, ಸಾಂಬಾರು ಮಜ್ಜಿಗೆ, ಪಾಯಸ ತಿನ್ನುವಾಗಿನ ಮಾತು ಪೂರ ಜೇಡಗಳದ್ದೇ. ಇನ್ನೊಂದು ತಂಡದವರು ಉಗ್ರಾಣದ ಬಳಿ ಆಕ್ರಮಣ ಸ್ವಭಾವದ ಪೋರ್ಶಿಯಾ ಜೇಡಗಳನ್ನು ಕಂಡೆವೆಂದು ತಿಳಿಸಿದರು. ಭೋಜನಾನಂತರ ತಂಡಗಳ ದಿಕ್ಕು ಬದಲಾದವು. ನಾವು ಹೊರಡುತ್ತಿದ್ದಂತೆಯೇ ಕೊಟ್ಟಿಗೆಯ ಬಳಿ ಸಹಿಜೇಡಗಳು ಕಂಡವು ಹಾಗೂ ಅಲ್ಲಿ ತುಂಬಾ ಸೊಳ್ಳೆಗಳು ಕೂಡಾ ಇದ್ದವು. ಗಿಡಗಳಿಗೆ ಮುತ್ತುವ ಕೀಟಗಳ ಸಂಖ್ಯೆಯನ್ನು ಜೇಡಗಳು ಗಣನೀಯವಾಗಿ ನಿಯಂತ್ರಿಸುತ್ತವೆ, ಆದುದರಿಂದ ವಿಷಕಾರಿ ಕೀಟನಾಷಕಗಳು ಬೇಕಾಗುವುದೇ ಇಲ್ಲ! ಅಬ್ಬಾ ಎಂಥಾ ಜೈವಿಕ ನಿಯಂತ್ರಣ ಈ ಪ್ರಕೃತಿಯಲ್ಲಿ! ಇದನ್ನರಿತು ತಾಳ್ಮೆಯಿಂದ ನಡೆಯಬೇಕು ನಾವು… ಹೀಗೆ ಯೋಚಿಸುವಾಗ ಇನ್ನೊಬ್ಬರು ಹಾವು ಹಾವು ಎಂದು ಕ್ಯಾಮರಾವನ್ನು ಹಾವಿನೆಡೆಗೆ ತಿರುಗಿಸಿದರು. ಬಾಳೆಮರದ ಸಂದಿಯಲ್ಲಿ ನಿರುಪದ್ರವಿಯಾಗಿ ಸಣ್ಣಹಾವಿನ ಮರಿ ಇತ್ತು. ಹಾವಿದ್ದ ಮೇಲೆ ಆದರ ಆಹಾರವು ಅಲ್ಲೇ ಇರಬೇಕಲ್ಲವೆ. ಸ್ವಲ್ಪ ಅತ್ತಿತ್ತ ನೋಡಿದಾಗ ಭಾರತೀಯ ‘ಸಾಮಾನ್ಯ ಮರಗಪ್ಪೆ’ ಕಂಡಿತು. ನಾನು ಮೊದಲ ಬಾರಿ ಮರಗಪ್ಪೆಯನ್ನು ನೋಡಿದ್ದು ಹೀಗೆ! ಸಾಮಾನ್ಯವಾಗಿ ನಾನು ನೋಡಿರುವ ಕಪ್ಪೆಗಿಂತ ಸುಮಾರು ಮೂರು ಪಟ್ಟು ಚಿಕ್ಕದಾಗಿತ್ತು.ಎಲೆಯ ಮೇಲೆ ಬೆಪ್ಪನಂತೆ ಕುಳಿತಿತ್ತು. ಅದನ್ನು ಹಿಂದೆ ಬಿಟ್ಟು ನಾವೆಲ್ಲ ಮುಂದುವರಿದೆವು. ಮೊದಲ ಸುತ್ತಿನಲ್ಲಿ ನೋಡಿದ್ದ 32 ಜೇಡಗಳ ಸಂಖ್ಯೆ ಯಾಕೋ ಹೆಚ್ಚಾಗಿ ವೃದ್ಧಿಸಲೇ ಇಲ್ಲ.

ಉಗ್ರಾಣಕ್ಕೆ ತೆರಳಿ, ಪೋರ್ಶಿಯಾ ಜೇಡಗಳನ್ನು ಹುಡುಕುವ ನಮಗೆ ಮೊದಲು ಚೇಳು ಎದುರಾಯಿತು, ನಂತರ ಪೋರ್ಶಿಯಾಜೇಡಗಳನ್ನು ಕಂಡು, ಉಗ್ರಾಣದಿಂದ ಹೊರ ಬರುತ್ತಲೇ ನೆಲದಮೇಲೆ ಹಲವು ವುಲ್ಫ್ ಜೇಡ (Wolf Spiders)ಗಳೂ ನಮ್ಮ ಕಣ್ಣಿಗೆ ಬಿದ್ದವು. ಹೀಗೆ ಕೊನೆಗೊಂಡಿತು ನನ್ನ ಮೊದಲ ಜೇಡ ಕಾರ್ಯಾಗಾರ.
ಚಿತ್ರ – ಲೇಖನ: ಡಾ. ದೀಪಕ್ ಭದ್ರಶೆಟ್ಟಿ
ಮೈಸೂರು ಜಿಲ್ಲೆ

ಮೈಸೂರಿನ ನಿವಾಸಿ, ವೃತ್ತಿಯಲ್ಲಿ ದಂತವೈದ್ಯ ಹವ್ಯಾಸಿ ಬರಹಗಾರ ಹವ್ಯಾಸಿ ಛಾಯಾಚಿತ್ರಗಾರ