ಪ್ರಕೃತಿ ಬಿಂಬ

©ಮೊಹಮ್ಮದ್ ಮನ್ಸೂರ್, ರೀವ ಹಕ್ಕಿ
ರೀವ ಹಕ್ಕಿ (River Tern) ಹೆಸರೇ ಹೇಳುವಂತೆ ನದಿಗಳ ಬಳಿ ಹಾಗು ಸಮುದ್ರದ ಬಳಿ ಕಾಣಸಿಗುವ ಈ ಪಕ್ಷಿಯು ಹೆಚ್ಚಾಗಿ ಮೀನುಗಳು, ಗೊದ್ಡಗಳು ಹಾಗು ಇನ್ನಿತರ ಕೀಟಗಳನ್ನು ಆಯ್ದು ತಿನ್ನುತ್ತವೆ. ತಲೆಯ ಮೇಲೆ ಕಪ್ಪು ಟೋಪಿಯನ್ನು ಹೊಂದಿದ್ದು ಹಳದಿ ಕೊಕ್ಕಿನೊಂದಿಗೆ ಕೆಂಪು ಕಾಲುಗಳನ್ನು ಹೊಂದಿದೆ. ಈ ಜಾತಿಯ ಪಕ್ಷಿಗಳು ಮಾರ್ಚ್ ನಿಂದ ಮೇ ತಿಂಗಳುಗಳಲ್ಲಿ ಹೆಚ್ಚಾಗಿ ಬೇಟೆಗಾರ/ಬೇಟೆಯಾಡುವ ಪ್ರಾಣಿಗಳಿಂದ ಮೊಟ್ಟೆಗಳನ್ನು ಕಾಪಾಡಿಕೊಳ್ಳಲು ದ್ವೀಪದಂತೆ ಇರುವ ಸ್ಥಳದಲ್ಲಿ ಮೊಟ್ಟೆಗಳನ್ನು ಇಡುತ್ತವೆ.

© ಮೊಹಮ್ಮದ್ ಮನ್ಸೂರ್, ಕೆಂಪು ರಾಟವಾಳ
ಗುಬ್ಬಚ್ಚಿ ಗಾತ್ರದ ಪಕ್ಷಿಗಳ ಜಾತಿಯಲ್ಲಿ ಒಂದಾದ ಕೆಂಪು ರಾಟವಾಳ ಅಥವ ಕೆಂಪು ಮುನಿಯ ಎಂದು ಕರೆಯಲ್ಪಡುವ ಈ ಹಕ್ಕಿಯು ತೇವಾಂಶಗಳಿರುವಲ್ಲಿ ಹಾಗು ಹೊಲಗಳಲ್ಲಿ ಗುಂಪು-ಗುಂಪಾಗಿ ಕಾಣಸಿಗುತ್ತವೆ. ಎಲ್ಲಾ ಪಕ್ಷಿಗಳ ಹಾಗೆ ಹೆಣ್ಣು ಪಕ್ಷಿಗಿಂತ ಗಂಡು ಪಕ್ಷಿಯು ನೋಡಲು ಬಲು ಸುಂದರ. ಮೊದಲ ಅರ್ಧ ಭಾಗ ಕೆಂಪಾಗಿದ್ದು, ರೆಕ್ಕೆ ಹಾಗು ಬಾಲದಲ್ಲಿ ಬಿಳಿ ಚುಕ್ಕೆಗಳೊಂದಿಗೆ ಸ್ವಲ್ಪ ಕಂದು ಬಣ್ಣವಿರುತ್ತದೆ. ಹೆಣ್ಣು ಪಕ್ಷಿಯು ಕೆಂಪಾದ ಕೊಕ್ಕನ್ನು ಹೊರತುಪಡಿಸಿ ಉಳಿದೆಲ್ಲಾ ಭಾಗವು ಕಂದು ಬಣ್ಣದಿಂದ ಕೂಡಿರುತ್ತದೆ. ಗುಂಪು-ಗುಂಪಾಗಿ “ಪ್ಲೀಪ್ ಪ್ಲೀಪ್” ಎಂದು ಕೂಗುತ್ತಾ ಹಾರಾಡುತ್ತಿರುತ್ತವೆ.

© ಮೊಹಮ್ಮದ್ ಮನ್ಸೂರ್, ಕಂದಲೆ ಗಿಳಿ
ಪಕ್ಷಿಗಳೆಂದರೆ ಯಾರಿಗಿಷ್ಟವಿಲ್ಲ ಹೇಳಿ, ಅದರಲ್ಲು ಗಿಳಿಗಳೆಂದರೆ ಎಲ್ಲರಿಗು ಇಷ್ಟ. ಈ ಗಿಳಿಗಳು ತಮ್ಮ ಬಣ್ಣ, ಶೈಲಿ ಹಾಗು ಕೂಗಿನಿಂದ ಎಲ್ಲರಿಗೂ ಚಿರಪರಿಚಿತ. ಇವುಗಳಲ್ಲೊಂದಾದ ಗಿಳಿಯೆಂದರೆ ಈ ಕಂದಲೆ ಗಿಳಿ. ಇದನ್ನು ಗುರುತಿಸುವುದು ಬಲು ಸುಲಭ, ತಲೆಯು ಗುಲಾಬಿ ಹಾಗು ನೇರಳೆ ಮಿಶ್ರಿತವಾಗಿದ್ದು ಹೆಣ್ಣು ಗಿಳಿಯು ಬೂದುಬಣ್ಣವಿದ್ದು, ಇವುಗಳ ಬಾಲದ ತುದಿಯು ಬಿಳಿ ಬಣ್ಣವಿರುತ್ತದೆ. ಡಿಸೆಂಬರ್ ನಿಂದ ಏಪ್ರಿಲ್ ನಲ್ಲಿ ಸಂತಾನೋತ್ಪತ್ತಿ ಮಾಡುವ ಸಮಯದಲ್ಲಿ ಗಂಡು ಪಕ್ಷಿಯು ಹೆಚ್ಚು ಕೆಂಪಾಗಿ ಕಾಣುತ್ತದೆ. ಮರಗಳ ಪೊಟರೆಗಳಲ್ಲಿ 4 ರಿಂದ 5 ಮೊಟ್ಟೆಗಳನ್ನಿಡುವ ಇವು, ಕಾಳುಗಳು, ಹಣ್ಣುಗಳು ಹಾಗು ಹೂವಿನದಳಗಳನ್ನು ಆಹಾರಕ್ಕಾಗಿ ಅವಲಂಬಿಸಿದೆ.

© ಮೊಹಮ್ಮದ್ ಮನ್ಸೂರ್, ಚೇಕಡಿ ಹಕ್ಕಿ
ಗುಬ್ಬಚ್ಚಿ ಗಾತ್ರದ ಪಕ್ಷಿಗಳಲ್ಲೊಂದಾದ ಚೇಕಡಿ ಹಕ್ಕಿಯ (Great Tit) ಕೆನ್ನೆ ಹಾಗು ಹೊಟ್ಟೆ ಭಾಗವು ಬಿಳಿಯಾಗಿದ್ದು, ತಲೆ, ಬೆನ್ನು ಹಾಗು ರೆಕ್ಕೆಗಳು ಕಪ್ಪಾಗಿದ್ದು ಸುಲಭವಾಗಿ ಪತ್ತೆಹಚ್ಚಬಹುದಾಗಿದೆ. ಹೆಣ್ಣು ಪಕ್ಷಿಗಳಿಗಿಂತ ಗಂಡು ಪಕ್ಷಿಗಳು “ಟಿಂಕ್ ಟಿಂಕ್” “ಸ್ಪಿಕ್ ಸ್ಪಿಕ್” ಅಥವ “ಚಿಟ್ ಚಿಟ್” ಎಂದು ಹಲವು ರೀತಿಯಲ್ಲಿ ಕೂಗುತ್ತವೆ. ದಕ್ಷಿಣ ಭಾರತದಲ್ಲಿ ಇವುಗಳ ಸಂತಾನೋತ್ಪತ್ತಿಯ ಅವಧಿಯು ಫೆಬ್ರವರಿಯಿಂದ ಮೇ ತಿಂಗಳಲ್ಲಿ ಹೆಚ್ಚಾಗಿ ಕುಟುರಗಳು ಹಾಗು ಅಳಿಲುಗಳು ಮಾಡಿ ಬಿಟ್ಟು ಹೋದಂತಹ ಗೂಡುಗಳಲ್ಲಿ 10 ರಿಂದ 12 ಮೊಟ್ಟೆಗಳನ್ನಿಟ್ಟು ಗಂಡು ಹಾಗು ಹೆಣ್ಣು ಪಕ್ಷಿಗಳೆರಡೂ ಕೂಡ ಕಾವುಕೊಡುವುದರಲ್ಲಿ ಸಮಾನ ಪಾತ್ರ ವಹಿಸಿರುತ್ತವೆ.

© ಮೊಹಮ್ಮದ್ ಮನ್ಸೂರ್, ಕೆಂಪು ಗೀಜಗಾರ್ಲು
ಕುರುಚಲು ಕಾಡು ಹಾಗು ಹುಲ್ಲುಗಾವಲುಗಳಲ್ಲಿ ವಾಸಿಸುವ ಈ ಪಕ್ಷಿಯು ಭಾರತದ ಬಹುತೇಕ ಭಾಗದುದ್ದಕ್ಕೂ ಹಬ್ಬಿದೆ. ಬಹುತೇಕ ಸೋಬಾನ ಹಕ್ಕಿಗಳು (Babbler) ವಲಸೆ ಹೋಗುವಂತಹ ಪಕ್ಷಿಗಳಲ್ಲ, ಕಾರಣ ಅವುಗಳ ಚಿಕ್ಕ ರೆಕ್ಕೆಗಳು ಹಾಗು ದುರ್ಬಲ ಹಾರಾಟ. ತನ್ನ ಬಾಲ ಸೇರಿದಂತೆ ಇದರ ಸಂಪೂರ್ಣ ಉದ್ದವು 13-15 ಸೆಂ.ಮೀ. ಇರುತ್ತದೆ. ಬೆನ್ನ ಮೇಲೆ ಕಂದು ಬಣ್ಣ ಹಾಗು ತಲೆಮೇಲೆ ಬೂದು ಬಣ್ಣದ ಕಿರೀಟ ಹೊಂದಿದ್ದು ಗಂಟಲಿನ ಬಳಿ ಬಿಳೀ ಬಣ್ಣವಿರುತ್ತದೆ. ಹೆಚ್ಚಾಗಿ ಪೊದೆಗಳಲ್ಲಿ ಗೂಡು ಮಾಡುವ ಇವು 3-4 ಮೊಟ್ಟೆಗಳನ್ನಿಡುತ್ತವೆ.
ಚಿತ್ರಗಳು: ಮೊಹಮ್ಮದ್ ಮನ್ಸೂರ್,
ವಿವರಣೆ: ಧನರಾಜ್ ಎಂ

© ಪವನ್ ತಾವರೆಕೆರೆ, Orb weaver spider
Arachnura ತಳಿಗೆ ಸೇರಿರುವ ಈ ಜೇಡವನ್ನು orb weaver spider ಎಂದು ಗುರುತಿಸುತ್ತಾರೆ. ಹಳೆ ಇಂಗ್ಲಿಷಿನಲ್ಲಿ orb ಎಂದರೆ ದುಂಡು ಇವುಗಳ ಬಲೆಯು ದುಂಡಗಿರುತ್ತದೆ. ಈ ಜೇಡ ಒಣಗಿದ ಹೂ, ಹಕ್ಕಿಗಳ ಪಿಕ್ಕೆಯಂತೆ ಕಾಣುತ್ತದೆ. ಬಲೆಯ ಮಧ್ಯ ಭಾಗದಲ್ಲಿ ಇರುತ್ತವೆ. ಇವುಗಳಿಗೆ ತೊಂದರೆ ಉಂಟಾದರೆ ಬಾಲವನ್ನು ಚೇಳಿನ ರೀತಿಯೇ ಸುರುಳಿ ಸುತ್ತುತ್ತದೆ.

© ಪವನ್ ತಾವರೆಕೆರೆ, Brettus cingulatus
Brettus cingulatus ಎಂದು ಹೆಸರಿಸುವ ಈ ಹಾರುವ ಜೇಡ ತನ್ನ ಮೊಟ್ಟೆಗಳನ್ನು ಕಾಯುತ್ತಿರುವುದು ಕಾಣಬಹುದು. ಹಾರುವ ಜೇಡಗಳ ನೂರಾರು ತಳಿಗಳು ಏಷ್ಯಾದಲ್ಲಿ ಕಾಣುತ್ತವೆ. ಗ್ರೀಕ್ ಪುರಾಣದ ಹಿರಾಕಲ್ ನ ಮಗ brettus ನ ಹೆಸರನ್ನು ಈ ಜೇಡಕ್ಕೆ ಇಡಲಾಗಿದೆ.

© ಪವನ್ ತಾವರೆಕೆರೆ, Fishing spider
Dolomedes ಜನರಾ ಸೇರಿರುವ ಪಿಸೌರಿಡೆ ತಳಿಯ ಈ ಜೇಡಗಳು ನೀರಿನಮೇಲೆ ಕುಳಿತು ಬೇಟೆಯಾಡುತ್ತವೆ. ನೀರಿನಲ್ಲಿ ಉಂಟಾಗುವ ಅಲೆಗಳ ತುಯ್ದಾಟದಲ್ಲಿ ಬೇಟೆಯ ಇರುವನ್ನು ಗುರುತಿಸಿ ಅವನ್ನು ಮುಂಗಾಲಿನ ಸಹಾಯದಿಂದ ನಿಷ್ಕ್ರಿಯಗೊಳಿಸುತ್ತದೆ ನಂತರ ಇತರ ಜೇಡಗಳಂತೆ ಬೇಟೆಗೆ ತಮ್ಮ ಬಾಯಲ್ಲಿರುವ ವಿಷವನ್ನು ಚುಚ್ಚಿ ಕೊಲ್ಲುತ್ತದೆ. ಪ್ರಮುಖವಾಗಿ ಸಣ್ಣ ಪುಟ್ಟ ಕೀಟಗಳನ್ನು ತಿನ್ನುವ ಈ ಜಾತಿಯ ಜೇಡಗಳು ದೊಡ್ಡವಾದರೆ ಮೀನನ್ನು ಹಿಡಿದು ತಿನ್ನುತ್ತದೆ.
ಚಿತ್ರಗಳು: ಪವನ್ ತಾವರೆಕೆರೆ
ವಿವರಣೆ: ಡಾ.ದೀಪಕ್ ಬಿ., ಮೈಸೂರ್