ಕಾಳಿಂಗ ಸರ್ಪದ ಜಾಡಿನಲ್ಲಿ

© ಅಶ್ವಥ ಕೆ ಎನ್
ಆಗುಂಬೆಯ ನಿತ್ಯಹರಿದ್ವರ್ಣವನ ಸಂಶೋಧನಾ ಕೇಂದ್ರ ಆರಂಭವಾದಾಗಿನಿಂದ ಕಾಳಿಂಗ ಸರ್ಪ ಹಾಗೂ ಮಾನವನ ನಡುವೆ ತಿಕ್ಕಾಟ ನಡೆಯುವುದನ್ನು ನೋಡುತ್ತಿದ್ದೇವೆ ಹಾಗೂ ಜನ ಕಾಳಿಂಗ ಸರ್ಪಗಳನ್ನು ಮನುಷ್ಯವಾಸಮಾಡುವ ಸ್ಥಳದಿಂದ ದೂರಕ್ಕೆ ಹಾವನ್ನು ಎತ್ತಂಗಡಿ ಮಾಡಬೇಕೆಂದು ಹಾತೊರೆಯುತ್ತಾರೆ. ಈ ಕೂಗು ಕಾಳಿಂಗ ಸರ್ಪಗಳ ಸಂತಾನಾಭಿವೃದ್ಧಿಯ ಕಾಲವಾದ ಮಾರ್ಚಿಯಿಂದ ಜೂನ್ ವರೆಗೂ ಹೆಚ್ಚಾಗಿಯೇ ಇರುತ್ತದೆ. ಗಂಡು ಕಾಳಿಂಗ ಸರ್ಪವು ಹೆಣ್ಣು ಉಳಿಸಿಹೋಗಿರುವ ಫರ್ ಮೋನ್ ಜಾಡಿನಲ್ಲಿ ಹೆಣ್ಣುಸರ್ಪವನ್ನು ಹುಡುಕಿಕೊಂಡು ಹೊರಡುತ್ತದೆ. ದಾರಿಯುದ್ದಕ್ಕೂ ಪ್ರಾಬಲ್ಯದಿಂದ ತಮ್ಮ ಸಂತಾನಾಭಿವೃದ್ಧಿಯ ಪ್ರದೇಶ ಗುರುತಿಸುತ್ತದೆ.
27 ಮಾರ್ಚ್ 2012 ರಂದು ಆಗುಂಬೆಯ ನಿತ್ಯಹರಿದ್ವರ್ಣ ಕಾಡಿನಲ್ಲಿ ಸಂಶೋಧನಾ ಕೇಂದ್ರದಿಂದ ಸುಮಾರು 25ಕಿ.ಮೀ ದೂರವಿರುವ ಕಮ್ಮರಡಿ ಎಂಬ ಹಳ್ಳಿಯಿಂದ ಮೂರು ಕಾಳಿಂಗ ಸರ್ಪಗಳು ಕಂಡವೆಂದು ಕರೆ ಬಂತು. ಭತ್ತದ ಗದ್ದೆಯಲ್ಲಿ ಕಂಡ ಹಾವು ಕಣ್ಮರೆಯಾಗಿತ್ತು. ಇನ್ನೆರಡು ಹಾವುಗಳು ಶಾಲೆ ಬಳಿಯ ಮನೆಗಳ ಸಂಕೀರ್ಣದ ಬಳಿ ಇರುವ ಬಿಲದಲ್ಲಿ ಅಡಗಿದ್ದವು. ಅವುಗಳ ಜಾಡನ್ನು ನೋಡಿದಾಗ ಒಂದು ಗಂಡು ಇನ್ನೊಂದು ಹೆಣ್ಣು ಕಾಳಿಂಗ ಸರ್ಪ ಎಂದು ತಿಳಿಯಿತು.

ಅಲ್ಲಿ ವಾಸಿಸುವ ಜನರೊಂದಿಗೆ ಮಾತನಾಡಿದಾಗ ಸಂತಾನಾಭಿವೃದ್ಧಿಯ ಸಮಯದಲ್ಲಿ ಕಾಳಿಂಗ ಸರ್ಪಗಳನ್ನು ಅವರು ಹಲವಾರು ವರ್ಷಗಳಿಂದ ಅಲ್ಲಿ ಕಂಡಿದ್ದು ತಿಳಿಯಿತು. ಸಾಮಾನ್ಯವಾಗಿ ಹಾವುಗಳು ಕಾಡಿನ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗಲು ರಸ್ತೆ ದಾಟುವಾಗ ಕಂಡು ಬರುತ್ತವೆ. ಈ ಬಾರಿ ಹಳ್ಳಿಗೆ ಬಂದಿವೆ. ಅಲ್ಲಿರುವ ಜನರೊಂದಿಗೆ ಮಾತನಾಡಿ ಹಾವಿನ ಇರುವಿಕೆಗೆ ಅವರ ಪ್ರತಿಕ್ರಿಯೆ ಏನು ಎಂದು ತಿಳಿದುಕೊಂಡೆ. ಅಲ್ಲಿ ವಾಸಿಸುವವರಿಗೆ ಕಾಳಿಂಗ ಸರ್ಪಗಳ ಪರಿಸರ ಹಾಗೂ ಅದರ ಸಂತಾನಾಭಿವೃದ್ಧಿಯ ಪ್ರಾಮುಖ್ಯತೆ ಬಗ್ಗೆ ತಿಳಿಸಿ ಹಾವುಗಳನ್ನು ಹಿಡಿಯುವುದು ಅಥವಾ ಅವುಗಳಿಗೆ ಯಾವುದೇ ಬಗೆಯ ತೊಂದರೆ ಮಾಡುವುದು ಬೇಡ ಎಂದು ತಿಳಿಹೇಳಿದೆ. ಹನ್ನೆರಡು ಅಡಿ ಹಾವು ಹೊಸ್ತಿಲಲ್ಲಿದೆ ಎಂದಾಗ ಯಾರಿಗೂ ನಿದ್ರೆ ಬರುವುದಿಲ್ಲ ಹಾಗಾಗಿ, ಅವರಿಗೆ ತಿಳಿಸಿ ಹೇಳುವುದು ಕಷ್ಟಸಾಧ್ಯ ಕೆಲಸ ಹಾಗೂ ಕಾಳಿಂಗ ಸರ್ಪಗಳ ಉಳಿವಿಗೆ ಮುಖ್ಯವೂ ಹೌದು.
ಕಮ್ಮರಡಿ ತಲುಪಿದ ಒಂದು ಘಂಟೆಯಲ್ಲಿ ಹೆಣ್ಣು ಸರ್ಪ ಅಲ್ಲಿಂದ ನುಸುಳಿ ಹರಿದು ಹೋಯಿತು, ಗಂಡು ಸರ್ಪ ಹೆಣ್ಣು ವಾಸನೆ ಹಿಡಿದು ಹೋಗದಂತೆ ನಾಯಿಗಳು ಮುತ್ತಿಗೆ ಹಾಕಿದವು. ಹಾವು ಬಿಲದಲ್ಲಿದ್ದುದರಿಂದ ನಾನು ಹೋದ ರಾತ್ರಿ ಹಾಗೂ ಮುಂದಿನ ಎರಡು ದಿನ ಅಲ್ಲೇ ಉಳಿದೆ. ಆ ಸಮಯದಲ್ಲಿ ಕಾಳಿಂಗಸರ್ಪಗಳ ವೀಡಿಯೋ, ಛಾಯಾಚಿತ್ರಗಳು, ಅದರ ಬಗ್ಗೆ ಇದ್ದ ವರದಿಗಳು, ಕಾಳಿಂಗಸರ್ಪಗಳ ಜೀವನ ಕ್ರಮ, ಸಂತಾನಾಭಿವೃದ್ಧಿ, ಕಾಳಿಂಗಸರ್ಪಗಳ ಪ್ರಾಮುಖ್ಯತೆಗಳನ್ನು ವಿವರಿಸಿದೆ. ಕಾಳಿಂಗ ಸರ್ಪಗಳು ಕಂಡು ಬಂದಲ್ಲಿ ಏನೂ ಮಾಡದೆ ಸುರಕ್ಷಿತ ದೂರದಿಂದ ಅವುಗಳ ಮೇಲೆ ಕಣ್ಣಿಡಬೇಕು, ಸಾಮಾನ್ಯವಾಗಿ ಅವು ಹೊರಟು ಹೋಗುತ್ತವೆ. ತೀವ್ರ ತೊಂದರೆಯ ಪರಿಸ್ಥಿತಿ ಉಂಟಾದಾಗ ಮಾತ್ರ ಅರಣ್ಯ ಇಲಾಖೆಯ ಅನುಮತಿ ಪಡೆದು, ನಂತರ ನುರಿತ ತಜ್ಞರು ಮಾತ್ರ ಅವುಗಳನ್ನು ಹಿಡಿದು ಪುನರ್ವಸತಿ ಕಲ್ಪಿಸಬೇಕು ಎಂದು ಹೇಳಿದೆ.

ಮೂರು ದಿನಗಳಾದರೂ ಹಾವು ಹೊರ ಬಾರದ್ದನ್ನು ಕಂಡ ಅರಣ್ಯ ಇಲಾಖೆ ಸಿಬ್ಬಂದಿ ಚಿಂತಾಕ್ರಾಂತರಾದರು. ಅದಕ್ಕೆ ನಾನು ಆ ಗಂಡು ಸರ್ಪವನ್ನು ಹಿಡಿದು 3೦೦ ಮೀಟರ್ ಅಂತರದಲ್ಲಿ ಹೆಣ್ಣು ಸರ್ಪ ಹರಿದುಹೋಗಿದ್ದ ಸ್ಥಳದಲ್ಲಿ ಬಿಡಲು ನಿರ್ಧರಿಸಿದ್ದೆ. ಎಲ್ಲ ಹಳ್ಳಿಗರು ನನ್ನ ನಿರ್ಧಾರವನ್ನು ಒಪ್ಪಿದ ನಂತರ ನಾನು ಕಾಳಿಂಗ ಸರ್ಪವನ್ನು ಹಿಡಿದೆ. ಅದೇ ಸಮಯಕ್ಕೆ ಸುತ್ತಲಿದ್ದವರು ಸ್ವಲ್ಪ ದೂರದಲ್ಲಿದ್ದ ಇನ್ನೊಂದು ಕಾಳಿಂಗ ಸರ್ಪವನ್ನು ಕಂಡು ಚಡಪಡಿಸಿದರು. ಅದೂ ಕೂಡ ಹೆಣ್ಣು ಸರ್ಪದ ವಾಸನೆ ಹಿಡಿದು ರಸ್ತೆ ದಾಟಿ ಇತ್ತ ಹರಿದಿತ್ತು. ನಾಯಿಗಳು ಈ ಹಾವನ್ನು ಕೂಡ ಅಟ್ಟಿಸಿಕೊಂಡು ಹೋದಾಗ, ಅದು ಹತ್ತಿರದಲ್ಲಿದ್ದ ಕೊಟ್ಟಿಗೆಯಲ್ಲಿ ಮಾಯವಾಯಿತು.

ಎಲ್ಲರ ಒಪ್ಪಿಗೆ ಪಡೆದು ಎರಡನೇ ಹಾವನ್ನು ಹಿಡಿದು ಮೊದಲನೇ ಹಾವಿನೊಂದಿಗೆ ಇದ್ದ ಎರಡನೇ ಖಾನೆಯಲ್ಲಿ ಇರಿಸಿದೆ. ಎರಡು ಖಾನೆಗೂ ಒಂದೇ ಬಾಯಿ ಇತ್ತು. ಬಾಯನ್ನು ಹೆಣ್ಣುಸರ್ಪ ಹರಿದು ಹೋಗಿರುವ ದಿಕ್ಕಿನಲ್ಲಿ ಇರಿಸಿದೆ. ನನ್ನ ಉದ್ದೇಶ ಹಾವುಗಳು ಹೊರಬಂದು ಹೆಣ್ಣು ಹಾವಿನ ವಾಸನೆ ಹಿಡಿದು ಹೊರಡುತ್ತವೆ ಅಥವಾ ತಾವಿಬ್ಬರು ಇರುವುದನ್ನು ನೋಡಿ ಅವುಗಳ ನೈಜ ಕಾಳಗ ನಡೆದು ಸಂಭವಿಸಬೇಕಾದದ್ದು ಸಂಭವಿಸುತ್ತದೆ (ಅವಶ್ಯ ಸಂಭವಂ ಸಂಭವಾಮಿ), ಹಾಗೂ ನನ್ನ ಕೈವಾಡ ಏನೂ ಇರುವುದಿಲ್ಲ.
ಹಳ್ಳಿಗರಿಗೂ ಅರಣ್ಯ ಇಲಾಖೆಯವರಿಗೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕರಿಸಿದ್ದಕ್ಕೆ ಧನ್ಯವಾದ ಹೇಳಿ ಸಂಶೋಧನಾ ಕೇಂದ್ರಕ್ಕೆ ಹಿಂತಿರುಗಿದೆ.

ಹಿಂತಿರುಗಿದ ಎಂಟು ದಿನಗಳ ನಂತರ ಅದೇ ಹಳ್ಳಿಯ ಅದೇ ಮನೆಯಿರುವ ಸ್ಥಳದಿಂದ ಮತ್ತೆ ಕರೆ ಬಂತು. ಇದು ನಾವು ಮೊದಲು ಹಿಡಿದ ಎರಡು ಕಾಳಿಂಗ ಸರ್ಪಗಳಲ್ಲ ಬದಲಾಗಿ ಹೆಣ್ಣು ಸರ್ಪದ ವಾಸನೆ ಹಿಡಿದು ಸ್ವಲ್ಪ ತಡವಾಗಿ ಬಂದಿರುವ ಉರಗ. ವಿಶೇಷವೇನೆಂದರೆ ನನಗೆ ಕರೆಮಾಡಿದ ಹಳ್ಳಿಗರು ನಮಗೆ ಹೆದರಿಕೆ ಇಲ್ಲ, ನಾವು ಹಾವಿಗೆ ತೊಂದರೆ ನೀಡುತ್ತಿಲ್ಲ, ನಾವು ಸುರಕ್ಷಿತ ದೂರದಿಂದ ಹಾವನ್ನು ಗಮನಿಸುತ್ತಿದ್ದೇವೆ, ಅದನ್ನು ಸ್ಥಳಾಂತರಿಸುವ ಅವಶ್ಯಕತೆ ಇಲ್ಲ ಎಂದರು. ಹೀಗೆ ಸುತ್ತಲಿನ ಹಳ್ಳಿಗಳಲ್ಲು ಕೂಡ ಜನ ಹೀಗೆ ಹೇಳಿದರು ಹಾಗೂ ಕಾಳಿಂಗ ಸರ್ಪಗಳ ಬಗ್ಗೆ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳನ್ನರ್ಪಿಸಿದರು. ಸಾರ್ವಜನಿಕರು ಪ್ರಕೃತಿನಿಯಮಗಳೊಂದಿಗೆ ಸಹಕರಿಸುವುದನ್ನು ನೋಡಿದಾಗ ಹೃದಯ ತುಂಬಿ ಬಂತು. ಈಗ ಜನರಿಗೆ ಪ್ರಕೃತಿಯ ಅರಿವು ಮೂಡಿಸಿ ಪ್ರಕೃತಿಯನ್ನು ಕಾಪಾಡುವ ಬಗ್ಗೆ ತಿಳುವಳಿಕೆ ನೀಡಲು ಶ್ರಮಿಸುತ್ತಿದ್ದೇವೆ.
ಬರಹಗಾರರನ್ನು ಕುರಿತು

ಅಜಯ್ ಗಿರಿಯವರು ಆಗುಂಬೆ ನಿತ್ಯಹರಿದ್ವರ್ಣವನದ ಸಂಶೋಧನಾ ಕೇಂದ್ರದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಸಣ್ಣವಯಸ್ಸಿನಿಂದಲೇ ಅವರಿಗೆ ಹಾವುಗಳ ಬಗ್ಗೆ ಆಸಕ್ತಿ ಇದೆ. ಕಾಳಿಂಗಸರ್ಪಗಳ ಅಧ್ಯಯನದಲ್ಲಿ ಸಹಾಯಕ ಸಂಶೋಧಕರಾಗಿ ಕೆಲಸಮಾಡಿ ಪದವಿಯನ್ನು ಪಡೆದು ನಿತ್ಯಹರಿದ್ವರ್ಣವನದ ಸಂಶೋಧನಾ ಕೇಂದ್ರದಲ್ಲಿ ಶಿಕ್ಷಕರಾಗಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದಾರೆ.

ಮೂಲ ಲೇಖನ: ಅಜಯ್ ಗಿರಿ, ARRS, ಆಗೊಂಬೆ.
ಕನ್ನಡಕ್ಕೆ ಅನುವಾದ: ಡಾ. ದೀಪಕ್ ಭದ್ರಶೆಟ್ಟಿ

ಮೈಸೂರಿನ ನಿವಾಸಿ, ವೃತ್ತಿಯಲ್ಲಿ ದಂತವೈದ್ಯ ಹವ್ಯಾಸಿ ಬರಹಗಾರ ಹವ್ಯಾಸಿ ಛಾಯಾಚಿತ್ರಗಾರ