ಮಹಾರಾಷ್ಟ್ರದ “ರಾಜ್ಯ ಚಿಟ್ಟೆ”

ಮಹಾರಾಷ್ಟ್ರದ “ರಾಜ್ಯ ಚಿಟ್ಟೆ”

ಮಲೆನಾಡಿನಲ್ಲಿ ಮಳೆಗಾಲದ ಹಾಗೇ ಮಳೆನಿಂತ ಸ್ವಲ್ಪ ದಿನಗಳವರೆಗೆ ದಿನದ ಆರಂಭವು ಕಾಜಾಣ, ಪಿಕಳಾರಗಳ ಕಲರವದಿಂದಾದರೆ, ರಾತ್ರಿ ಜೀರುಂಡೆಯ ಸದ್ದಿನಿಂದ ಅಂತ್ಯವಾಗುತ್ತಾ ಹೋಗುತ್ತದೆ. ಈ ಎರಡರ ಮಧ್ಯೆ ಅದೆಷ್ಟೋ ಹುಳ ಹುಪ್ಪಟೆಗಳು, ಹಾವು, ಹಕ್ಕಿ, ಕಪ್ಪೆ, ಚಿಟ್ಟೆಗಳು ನಮ್ಮ ಮನೆಯ ಸುತ್ತಮುತ್ತಲಿನ ಬ್ಯಾಣದಲ್ಲಿ ಓಡಾಡುತ್ತಾ, ತಮ್ಮದೇ ಆದ ಒಂದು ಅನನ್ಯ ಲೋಕವನ್ನು ಸೃಷ್ಟಿಸಿರುತ್ತದೆ. 

ಅಂದು ಸಂಜೆ ಅಲ್ಲೇ ಜಗುಲಿಯ ಮೇಲೆ ಕೂತು ಪುಸ್ತಕ ಓದುತ್ತಿದ್ದಾಗ ಗಮನವನ್ನೆಲ್ಲಾ ತನ್ನೆಡೆ ಸೆಳೆಯುವಂತೆ ಮಾಡಿದ್ದು ಕಣ್ಣೆದುರಿಗೇ ಹಾರುತ್ತಾ ಹೋದ, ಗಾತ್ರದಲ್ಲಿ ಸುಮಾರು ದೊಡ್ಡದೆನ್ನಬಹುದಾದ ಚಿಟ್ಟೆ. ಹಿಂದೆಯೂ ತುಂಬಾ ಸಲ ಕಂಡಿದ್ದರೂ ಎಂದೂ ಹೂವಿನ ಮೇಲೆಲ್ಲೂ ಕೂರದೆ ಗಡಿಬಿಡಿಯಿಂದ ಕೆಲಸ ಇರುವ ಹಾಗೆ ಹಾರುತ್ತಲೇ ಇದ್ದ ಚಿಟ್ಟೆಯನ್ನು ದೂರದಿಂದಲೇ ಒಮ್ಮೆ ಕಂಡು ಸುಮ್ಮನಾಗೋಣ ಎಂದೆಣಿಸುತ್ತಿದ್ದಂತೇ, ಅದೃಷ್ಟವೇನೋ ಎಂಬಂತೆ ಮಕರಂದ ಹೀರಲು ಹೂವಿನ ಮೇಲೆ ಅಂದು ಕುಳಿತೇ ಬಿಟ್ಟಿತು.

ಆಕರ್ಷಕವಾಗಿ ಕಾಣುವ Blue Mormon ಎಂಬ ಈ ಚಿಟ್ಟೆ, ದಕ್ಷಿಣ ಭಾರತ, ಪಶ್ಚಿಮ ಘಟ್ಟ ಹಾಗೇ ಶ್ರೀಲಂಕದಲ್ಲಿ ಕಾಣಸಿಗುತ್ತದೆ. ಮಾನ್ಸೂನ್ ಬಳಿಕ ಹೆಚ್ಚು ಕಾಣಸಿಗುವ ಇದು, ಜಾಸ್ತಿ ಮಳೆ ಬೀಳುವ ಜಾಗಗಳಲ್ಲಿ ವರ್ಷವಿಡೀ ಕಾಣುತ್ತದೆ. ಸೂರ್ಯನಿಗೆ ಮೈಯೊಡ್ಡಿ, ದಾಸವಾಳ ಕೆಲವೊಂದು ಹೂಗಳೆಡೆ ಮಕರಂದ ಹೀರಲು ಹೋಗುತ್ತಲೇ ಇರುತ್ತದೆ. ಲವಂಗ ಗಿಡದ ಹೂವಿನ ಪರಾಗಸ್ಪರ್ಶ ಕ್ರಿಯೆಯಲ್ಲಿಯೂ ಮುಖ್ಯ ಪಾತ್ರ ವಹಿಸುತ್ತದೆ. 

ಹೆಣ್ಣು-ಗಂಡಿನಲ್ಲಿ ನೋಡಲು ಸಾಕಷ್ಟು ಸಾಮ್ಯತೆ ಇದ್ದು, ಇತರ ಚಿಟ್ಟೆಗಳಂತೆಯೇ ಇದೂ ಸಹ ರೂಪಾಂತರಗೊಳ್ಳುತ್ತದೆ. ಇದರ ಜೀವನದ ಮಹತ್ತರ ಘಟ್ಟಗಳಾದ ಮೊಟ್ಟೆ, ನಂತರದ ಹುಳು ಅಥವಾ ಲಾರ್ವಾ, ನಂತರ ಏನೂ ಚಟುವಟಿಕೆ ಇಲ್ಲದ, ಎಲೆಗಳಿಗೆ ಅಂಟಿಕೊಂಡು ನೇತಾಡುವ ಪ್ಯೂಪ ಅಥವಾ ಕೋಶಾವಸ್ಥೆಯಲ್ಲಿ ತನ್ನ ರೂಪದಲ್ಲಿ ಮಾರ್ಪಾಡಾಗುತ್ತಾ, ಕೊನೆಯಲ್ಲಿ ಹಾರಾಡುವ ಚಿಟ್ಟೆಯಾಗುತ್ತದೆ. ಮೊಟ್ಟೆಯು ತಿಳಿ ಹಸಿರು ಬಣ್ಣದಲ್ಲಿದ್ದು, ಸಮಯ ಕಳೆದಂತೆ ಹಳದಿ ಬಣ್ಣದೆಡೆಗೆ ತಿರುಗುತ್ತದೆ. ಲಾರ್ವಾ ಹಂತದಲ್ಲಿ ತನ್ನ ರಕ್ಷಣೆಗಾಗಿ ಕೆಂಪು ಬಣ್ಣದ ಅಂಗವನ್ನು ಹೊರಹಾಕುತ್ತದೆ. 

ದೇಶದ ಮೊದಲ ‘ರಾಜ್ಯ ಚಿಟ್ಟೆ’ಯಾಗಿ ಆಯ್ಕೆಯಾದ ಹೆಗ್ಗಳಿಕೆಯೂ ಇದಕ್ಕಿದೆ. 2015ರಲ್ಲಿ ಮಹಾರಾಷ್ಟ್ರದ ರಾಜ್ಯ ಚಿಟ್ಟೆಯೆಂದು ಘೋಷಣೆಯಾಗಿ, ತನ್ನತ್ತ ಗಮನ ಸೆಳೆಯುತ್ತಾ, ಜನಸಾಮಾನ್ಯರಲ್ಲೂ ಚಿಟ್ಟೆಯ ಬಗೆಗೆ ಕುತೂಹಲ ತಳೆಯುವಂತೆ ಮಾಡಿದೆ. ಒಟ್ಟಿನಲ್ಲಿ ಇತರೆ ಚಿಕ್ಕ ಪುಟ್ಟ ಚಿಟ್ಟೆಗಳಿಗಿಂತ ಭಿನ್ನವಾಗಿ, ಬಿನ್ನಾಣದಿಂದ ಹಾರುವ ಪಾತರಗಿತ್ತಿ ಇದು ಎಂದರೂ ಉತ್ಪ್ರೇಕ್ಷೆಯಾಗದು!.

ಚಿತ್ರ – ಲೇಖನ: ಸ್ಮಿತಾ ರಾವ್
          ಶಿವಮೊಗ್ಗ ಜಿಲ್ಲೆ.

Print Friendly, PDF & Email
Spread the love
error: Content is protected.