ಮಣ್ಣಿನ ಗಣಪ – ಮಣ್ಣೇ ಗಣಪ

ಅಚ್ಚರಿಯಿಂದ ಮಗಳು ಹೇಳಿದಳು
“ಅಪ್ಪ ಇಂದು ಹಬ್ಬವಂತೆ!
ಗೌರಿ ಅಮ್ಮ, ಗಣಪ ಅಣ್ಣ,
ಇಬ್ಬರೂ ಮನೆಗೆ ಬರುವರಂತೆ!!
ನಾವೂ ಪುಟ್ಟ ಗಣಪನ ಇಟ್ಟು,
ಮನೆಯಲಿ ಪೂಜೆಯ ಮಾಡೋಣ!
ಕಾಯಿ ಕಡುಬು ಪಾಯಸ ಮಾಡಿಸಿ,
ಸಿಹಿ ಸಿಹಿ ಊಟವ ಸವಿಯೋಣ!!

ನಾನೂ ಅಷ್ಟೇ ಅಚ್ಚರಿಯಿಂದ,
ಮಗಳನು ಕುರಿತು ಹೀಗೆಂದೆ!
ಹಬ್ಬವು ಉಂಟು – ಊಟವು ಉಂಟು,
ಅಮ್ಮನ ಅಡುಗೆ ಬಲು ಸೊಗಸು!!
ಶೆಟ್ಟರ ಅಂಗಡಿ ಕಟ್ಟೆಯ ಮೇಲೆ,
ಮಾರುತಲಿರುವರು ಗಣಪನನು!
ಅಲ್ಲಿಗೇ ಹೋಗಿ ತಂದು ಬಿಡೋಣ,
ನೀನಾರಿಸುವ ಬಣ್ಣವನು!!

ಬಣ್ಣದ ಗಣಪನು ಬೇಡಪ್ಪ,
ಮಣ್ಣಿನ ಗಣಪನೇ ಸಾಕಪ್ಪ!
ಕೆಟ್ಟ ರಸಾಯನ ಬಳಸಿದೆವೆಂದರೆ ತೊಂದರೆ ನಮಗೇ ನೋಡಪ್ಪ!
ವಿಷದ ಬಣ್ಣಗಳ ಬಳಸದೆ ನಾವು,

ಪರಿಸರ ಉಳಿಸಲು ಬೇಕಪ್ಪ
ಜೇಡಿಯ ಮಣ್ಣನು ಹೊತ್ತು ತರುವೆನು,
ಗಣಪನ ನೀನೇ ಮಾಡಪ್ಪ!!

ಆಕಾರದಲ್ಲೇ ಇರಬೇಕೆಂದು,
ಅವನಿಗೆ ನಿಯಮದ ಹಂಗಿಲ್ಲ!
ನೂರು ಹೆಸರುಗಳು, ನೂರು ದಾರಿಗಳು,
ತಲುಪುವ ಗುರಿಯು ಎರಡಲ್ಲ!!

ಹೀಗೆಂದೋಡಿದ ನನ್ನಯ ಪುಟ್ಟಿ,
ಮಣ್ಣನು ತುಂಬಿ ತಂದಳು ಬುಟ್ಟಿ!
ಕಂದನ ಜಾಣ್ಮೆಗೆ ಬೆನ್ನು ತಟ್ಟಿ,
ಮಾಡಿದೆ ಪುಟ್ಟ ಗಣಪನನು!
ಮಣ್ಣಿಂದಲ್ಲ – ಮಣ್ಣೇ ಗಣಪ,
ಎಂಬ ಸತ್ಯದ ಭಿತ್ತಿಯನು!!

ಏನೂ ಅರಿಯದ ಮಕ್ಕಳು ಇವರು,
ಎಲ್ಲವ ಅರಿತ ಹಿರಿಯರು ತಾವು,
ಇಲ್ಲಿಂದಲ್ಲಿಗೆ ಹೋಗುವ ದಾರಿಯ,
ಪಯಣಿಗರೇನೆ ನಾವೆಲ್ಲ!
ಅವನಲೆ ಹುಟ್ಟಿ, ಅವನನೆ ಸೇರುವ,
ಅವನಂಶಗಳೇ ಜಗವೆಲ್ಲ.

ಕೆ. ಎಸ್‌.ಸುಮಂತ್ ಭಾರದ್ವಾಜ್
ರಾಮನಗರ ಜಿಲ್ಲೆ

Spread the love
error: Content is protected.