ಪ್ರಕೃತಿ ಬಿಂಬ

©ವಿನೋದ್ ಕುಮಾರ್ ವಿ. ಕೆ, ಬಿಳಿಗರುಡ
ಸಾಮಾನ್ಯವಾಗಿ ಹೆಚ್ಚುಕಾಲ ಆಕಾಶದಲ್ಲೇ ಕಾಲಕಳೆಯುವ ಹದ್ದುಗಳಲ್ಲಿ ಒಂದಾದ ಈ ಗರುಡದ ರೆಕ್ಕೆಯು ಬಿಳಿ- ಕೆಂಪು ಬಣ್ಣದ ಗರಿಗಳನ್ನು ಹೊಂದಿದ್ದು, ತಲೆ ಮತ್ತು ಎದೆ ಭಾಗವು ಬಿಳಿಬಣ್ಣದಿಂದ ಕೂಡಿದೆ. ಅಳಿವಿನಂಚಿನಲ್ಲಿರುವ ಪಕ್ಷಿಯೇ ಈ ಬಿಳಿಗರುಡ. ಮೀನು, ಏಡಿ ಹಾಗೂ ಕೊಳೆತ ಮಾಂಸವನ್ನು ಹೆಚ್ಚಾಗಿ ತಿನ್ನುವ ಈ ಪಕ್ಷಿಯು ಹೆಚ್ಚಾಗಿ ಕೆರೆ, ನದಿ ಹಾಗೂ ಸಮುದ್ರಗಳ ದಡದಲ್ಲಿ ಕಾಣಸಿಗುತ್ತವೆ. ನಮ್ಮ ಭಾರತದಲ್ಲಿ ಇದನ್ನು ವಿಷ್ಣುವಿನ ವಾಹನವಾದ ಗರುಡ ಪಕ್ಷಿಯ ಪ್ರತಿ ರೂಪವೆಂದು ನಂಬಲಾಗಿದೆ. ಇದು ಗೂಡನ್ನು ಸಾಮಾನ್ಯವಾಗಿ ಒಣರಂಬೆಗಳು, ಕಡ್ಡಿಗಳಿಂದ ಜೋಡಿಸಿ ಒಂದು ವೃತ್ತಾಕಾರದಲ್ಲಿ ಹೆಣೆದಿರುವಂತೆ ಕಟ್ಟುತ್ತದೆ. ಮೊಟ್ಟೆಗಳಿಗೆ ಕಾವುಕೊಡುವುದರಲ್ಲಿ ಹೆಣ್ಣು ಪಕ್ಷಿಯು ಮುಖ್ಯ ಪಾತ್ರವಹಿಸಿದ್ದು 25 -27 ದಿನಗಳ ಕಾಲ ಕಾವುಕೊಡುತ್ತದೆ.

© ವಿನೋದ್ ಕುಮಾರ್ ವಿ. ಕೆ, ಕಂಬಳಿಹುಳು
ಕಂಬಳಿ ಹುಳು ಎಂದಾಕ್ಷಣ ಭಯಪಡುವವರೆ ಹೆಚ್ಚು , ನೋಡಲು ವಕ್ರ ವಕ್ರವಾಗಿದ್ದರು ತನ್ನ ವಕ್ರತೆಯಿಂದಲೇ ಸುಂದರ ಚಿಟ್ಟೆ ಹಾಗೂ ಪತಂಗಗಳಾಗುವವು ಎಂಬುದು ಬಹಳ ಜನರಿಗೆ ತಿಳಿದಿಲ್ಲ. ಈ ಕಂಬಳಿಹುಳುವು Owlet mothನ ಪೂರ್ವಜ ಎಂದೇ ಹೇಳಬಹುದು , ಏಕೆಂದರೆ ಇದೇ ಹುಳು Owlet moth ಆಗುತ್ತದೆ. ಪತಂಗಗಳು ಚಿಟ್ಟೆಗಳ ಹಾಗೆ ಹಗಲಲ್ಲಿ ಹೆಚ್ಚಾಗಿ ಚಟುವಟಿಕೆಯಿಂದ ಇರುವುದಿಲ್ಲ. ಇವು ರಾತ್ರಿಯಲ್ಲಿ ಹೆಚ್ಚು ಚಟುವಟಿಕೆಯಿಂದ ಕೂಡಿದ್ದು ಬೆಳಕಿಗೆ ಆಕರ್ಷಿತವಾಗುತ್ತದೆ. ಇದೆ ಜಾತಿಯಲ್ಲಿ ಬರುವ ಎಷ್ಟೋ Owlet mothನ ಹುಳುಗಳು ಬೆಳೆನಾಶಕ ಕೂಡ ಆಗಿದೆ, ಬೆಳೆದ ಬೆಳೆಗಳನ್ನು ಹುಳುಗಳು ಹೆಚ್ಚುನಾಶ ಮಾಡುವುವು.

© ವಿನೋದ್ ಕುಮಾರ್ ವಿ. ಕೆ, ಗಾರ್ಡನ್ ಲಿಜಾರ್ಡ್
ಹೆಚ್ಚಾಗಿ ನಮ್ಮ ತೋಟದ ಸುತ್ತಮುತ್ತಲು ಹೊಲಗಳ ಬೇಲಿಗಳ ಮೇಲೆ ಹೆಚ್ಚಾಗಿ ಕಾಣಸಿಗುವ ಸರೀಸೃಪದ ಗುಂಪಿಗೆ ಸೇರಿದ ಪ್ರಾಣಿಯೇ Clotes Versicolor. ಹಿತ್ತಲಲ್ಲಿ ಸಿಗುವ ಸಣ್ಣಪುಟ್ಟ ಕೀಟಗಳನ್ನು ಹೊಟ್ಟೆತುಂಬ ತಿನ್ನುವ ಇದರ ಮೈಮೇಲೆ ಹುರುಪೆಗಳು ಒಂದರಮೇಲೆ ಒಂದರಂತೆ ಮನೆಯ ಛಾವಣಿಗೆ ಹೆಂಚು ಜೋಡಿಸಿದಂತೆ ಜೋಡಿಸಲ್ಪಟ್ಟಿದೆ. ಈ ಜಾತಿಯ ಓತಿಗಳು ಮಣ್ಣಿನಲ್ಲಿ ಸಣ್ಣ ರಂಧ್ರ ಮಾಡಿ ಹತ್ತಾರು ಮೊಟ್ಟೆಗಳನ್ನಿಟ್ಟು ಬೇಟೆಗಾರರಿಂದ ಮೊಟ್ಟೆಯನ್ನು ಉಳಿಸಲು ಮಣ್ಣು ಮುಚ್ಚುತ್ತವೆ.

© ವಿನೋದ್ ಕುಮಾರ್ ವಿ. ಕೆ, ಏರೋಪ್ಲೇನ್ಚಿಟ್ಟೆ
ಏರೋಪ್ಲೇನ್ ಚಿಟ್ಟೆ (Dragonfly) ಇವು ಎಲ್ಲಾ ಚಿಟ್ಟೆಗಳ ಹಾಗೆ ಕಂಬಳಿ ಹುಳುವಿನಿಂದ ಕ್ರಮೇಣ ಚಿಟ್ಟೆಯಾಗುತ್ತದೆಂದು ಎಲ್ಲರಂತೆ ನಾನು ತಿಳಿದಿದ್ದೆ. ಆದರೆ ಇದು ಚಿಟ್ಟೆಗಳಿಗಿಂತ ಬಾರಿ ವಿಭಿನ್ನವಾದುದು. ಇವು ನೀರಿನಲ್ಲಿ ಮೊಟ್ಟೆಯನ್ನಿಟ್ಟು ಅಲ್ಲೇ ಮರಿಯು ಬೆಳೆದು ಹೊರಬರುತ್ತದೆ. ಇದೇ ಜಾತಿಗೆ ಸೇರಿದ ಒಂದು ಏರೋಪ್ಲೇನ್ ಚಿಟ್ಟೆಯೇ Crimson marsh glider. ಈ ಏರೋಪ್ಲೇನ್ ಚಿಟ್ಟೆ ಸಾಮಾನ್ಯವಾಗಿ ಸಣ್ಣ ಸಣ್ಣ ಹೊಂಡಗಳಲ್ಲಿ, ಕೆರೆಗಳಲ್ಲಿ ಹಾಗೂ ಮಂದಗತಿಯಲ್ಲಿ ಹರಿಯುವ ಝರಿಗಳ ಸಮೀಪದಲ್ಲೇ ಯಥೇಚ್ಛವಾಗಿ ಕಾಣಸಿಗುತ್ತವೆ.
ಚಿತ್ರಗಳು: ವಿನೋದ್ ಕುಮಾರ್ ವಿ. ಕೆ.
ವಿವರಣೆ: ಧನರಾಜ್ ಎಂ