ಹಾವುಗಳೇ ನನ್ನ ಪ್ರಪಂಚ
ಹಾವುಗಳನ್ನು ಕಂಡಾಗ ನಾನದನ್ನು ಶ್ಲಾಘಿಸುತ್ತಾ ಕೂರುತ್ತೇನೆ, ನನ್ನ ಸುತ್ತ ಇರುವವರು ಅಯ್ಯೋ ಹಾವು, ಅಯ್ಯೋ ದೇವ್ರೆ, ವಿಷಕಾರಿ ಅದು, ಅದನ್ನು ಕೊಲ್ಲಿ ಎಂದೆಲ್ಲ ಉದ್ಗರಿಸುತ್ತಾರೆ.
ಶಾಲೆಯಲ್ಲಿ ನಾನು “C. O. B. R. A” ಎಂದು ಬರೆಯಲು ಕಲಿತಸಮಯದಿಂದಲೂ ನಾನು ಅಪ್ಪಟ ಉರಗ ಪ್ರೇಮಿ. ನನ್ನಮ್ಮನಿಗೆ ಅದೇ ಚಿಂತೆ ಕೂಡ ಹೌದು. ‘ಮೋಗ್ಲಿ’ ಧಾರವಾಹಿಯಲ್ಲಿನ ‘ಕಾ’ ನನ್ನ ಉರಗಪ್ರೇಮವನ್ನು ಹೆಚ್ಚಿಸಿತು. ನಾಗರಾಜನ ಆಶೀರ್ವಾದ ಪಡೆಯಲು ನನ್ನಮ್ಮ ನಾಗರಪಂಚಮಿಯಂದು ಹುತ್ತದ ಬಳಿಗೆ ನನ್ನನ್ನು ಎಳೆದೊಯ್ಯುತ್ತಿದ್ದಳು, ಆಗೆಲ್ಲ ಹಾವುಗಳು ಸೌಮ್ಯ ಹಾಗೂ ನಿಗೂಢ ಎಂದುಕೊಂಡಿದ್ದೆ. ಇಂಥ ಘಟನೆಗಳು ನನ್ನ ಉರಗಪ್ರೇಮವನ್ನು ಹೆಚ್ಚಿಸಿದವು. ಆಗ “ನಾಗರಾಜ” ನನ್ನನ್ನು ಹರಸಿರಬೇಕು, ಅದಕ್ಕೋ ಏನೊ ಸರೀಸೃಪ ವಿಜ್ಞಾನಿಗಳಾದ ರೊಮುಲಸ್ ವಿಟೇಕರ್, ಗೆರ್ರಿ ಮಾರ್ಟಿನ್, ನಿರ್ಮಲ್ ಕುಲಕರ್ಣಿಯವರೊಂದಿಗೆ ನಾನು ಉರಗಗಳ ಬಗ್ಗೆ ಕಲಿಯುವ ಅವಕಾಶ ದೊರಕಿತು.
ಮನೆಯಲ್ಲಿ ಬೇಸರ ಕಳೆಯಲು ನನ್ನಕೋಣೆಯ ಗೋಡೆಗಳಲ್ಲಿ ಬ್ರಾಅಡ್ಲಿ ಕೂಪರ್, ಜಾನಿ ಡೆಪ್ ರುಜು ಮಾಡಿರುವ ಹಾವಿನ ಭಿತ್ತಿಪತ್ರಗಳಿವೆ. ನನ್ನಮ್ಮ ಅದಕ್ಕೇ ನನ್ನ ಕೋಣೆಗೆ ಬರಲು ಹೆದರುತ್ತಾರೆ, ಸಣ್ಣವಳಿದ್ದಾಗ ನನಗೆ ಈ ಉಪಾಯ ಹೊಳೆಯಲಿಲ್ಲವಲ್ಲಾ ಎಂದು ಒಮ್ಮೊಮ್ಮೆ ಬೇಜಾರಾಗುತ್ತದೆ, ನಗು ಬರುತ್ತದೆ! ಲವಲವಿಕೆಯಿಂದ ಬದುಕಲು ನಾನು ಹಾವುಗಳನ್ನು ನೋಡುತ್ತಿರಬೇಕು. ಕಾಳಿಂಗಸರ್ಪ ನೋಡಲು (Ophiophagus hannahs) ಸಿಗಬಹುದೆಂದು ಒಮ್ಮೆ ಆಗುಂಬೆಗೆ ಹೋದೆ.
ನನ್ನಂತೆ ನಿಮಗೂ ಕೂಡ ಜಿಟಿಜಿಟಿಮಳೆ, ಸಣ್ಣಪುಟ್ಟ ಗಿಡಪೊದೆ, ಎತ್ತರದ ಮರಗಳು, 24 ಘಂಟೆ ಝುಯ್ ಗುಡುವ ಝೀರುಂಡೆಗಳು, ಜಿಗಣೆಗಳು, (ನನ್ನ ಮೈಮೇಲಲ್ಲ!, ಜಿಗಣೆಗಳು ದಟ್ಟಕಾರಣ್ಯದ ಸೂಚಕ) ಭುಸುಗುಡುವ ಕಾಳಿಂಗ ಸರ್ಪ, ಶಿಲಾಸದೃಶ ಮಂಡಲದ ಹಾವುಗಳು, ಎಲ್ಲೆಡೆ ಕಪ್ಪೆಗಳು ಇರುವಂಥ ಸ್ಥಳ ಇಷ್ಟವಾಗುತ್ತದೆ ಎಂದರೆ ಆಗುಂಬೆ ನಿಮಗಾಗಿ ಮಾಡಿಸಿಟ್ಟಿರುವ ಸ್ಥಳ.
ನಾವು ಆಗುಂಬೆಯಿಂದ ಸರ್ಪಗಳನ್ನು ನೋಡದೇ ಹಿಂತಿರುಗುವ ಸಾಧ್ಯತೆಗಳು ಇಲ್ಲವೇ ಇಲ್ಲ. ಆಗುಂಬೆಯ ಖ್ಯಾತಿಯಂತೆ ಮೊದಲಿಗೆ ನಾವು ಹಸಿರು ಮಂಡಲದ ಹಾವನ್ನು ನೋಡಿದಾಗ, ನಮ್ಮ ಆನಂದಕ್ಕೆ ಪಾರವೇ ಇರಲಿಲ್ಲ. ಏನು ಬೇಕಾದರು ಮಾಡಿಕೋ ಹೋಗು ಎಂದು ಬಿದ್ದುಕೊಂಡಿದ್ದ ಹಾವಿನ ಸುಮಾರು 100 ಚಿತ್ರಗಳನ್ನು ತೆಗೆದೆವು. ಫೇಸ್ ಬುಕ್ಕಿನಲ್ಲಿ ಅದರ ಫೋಟೋ ಹಾಕುವೆವು ಎಂದು ಹಾವು ತಿಳಿದರೆ ಸ್ವಲ್ಪವಾದರೂ ತನ್ನ ನಿರ್ಭಾವುಕ ಸ್ಥಿತಿಯನ್ನು ಬದಲಾಯಿಸುತ್ತಿತ್ತೇನೋ ಪಾಪ!, ಈ ಪ್ರವಾಸದಲ್ಲಿ ಮತ್ತೊಮ್ಮೆ ಮಂಡಲಹಾವನ್ನು ನೋಡುವ ಅವಕಾಶ ಸಿಗದು ಎಂದುಕೊಂಡೆ. ಕೆಲ ಘಂಟೆಗಳ ನಂತರ ಮತ್ತೆ ಕಂದು ಮಂಡಲಹಾವನ್ನು ನೋಡಿದೆವು. ಆಗ ಹಸಿರು ಈಗ ಕಂದು ನಮಗಾದ ಆನಂದದಿಂದ ಹುಚ್ಚು ಹಿಡಿಯುವುದೆಂದು ಬಾಕಿ! ಈಮಂಡಲವೂ ಕೂಡ ಏನು ಬೇಕಾದರೂ ಮಾಡಿಕೋ ಹೋಗು ಎನ್ನುವಂತೆ ಬಿದ್ದಿತ್ತು, ಅದರ ಛಾಯಾಚಿತ್ರಗಳನ್ನು ಸಾಕಷ್ಟು ತೆಗೆದೆವು. ಇನ್ಯಾವ ಹಾವುಗಳು ನೋಡಲು ಸಿಗುವುದಿಲ್ಲ ಎಂದುಕೊಳ್ಳುತ್ತಿರುವಾಗಲೆ ಮುಗ್ಧವಾಗಿ ಬಳ್ಳಿಹಾವೊಂದು ನಮಗೆ ಕಂಡಿತ್ತು. ಸುಮಾರು ಒಂದುವರೆ ದಿನದಲ್ಲಿ ಮೂರು ಹಾವುಗಳನ್ನು ನೋಡಿದ ಸಂಗತಿ ನನಗೆ ಬಹಳ ಖುಷಿಯನ್ನು ನೀಡಿತ್ತು. ನಮ್ಮೆಲ್ಲರಿಗೂ ಸರ್ಪಾರ್ಶನ ಮಾಡಿಸುತ್ತಿದ ಉರಗ ತಜ್ಞ ಪ್ರಶಾಂತ್ ಗೆ ಕಾಳಿಂಗ ಸರ್ಪವನ್ನು ಸಂರಕ್ಷಿಸಿರಿ ಎಂದು ಕರೆ ಬಂದಿತು. ಕಾಳಿಂಗಸರ್ಪ ಎಂದೊಡನೆ ಚುರುಕಾದ ನಾವೆಲ್ಲ ಪ್ರಶಾಂತ್ ಜೊತೆಗೆ ಕಾಳಿಂಗ ಸರ್ಪದ ರಕ್ಷಣೆಗೆ ಹೋದೆವು.
ಕಾಳಿಂಗಸರ್ಪವು ಸೋಮೇಶ್ವರಹಳ್ಳಿಯಲ್ಲಿ ಮನೆಯೊಂದರ ಹಿತ್ತಲಿನಲ್ಲಿತ್ತು. ಮೂರು ದಿನಗಳಿಂದ ಅಲ್ಲೇ ಬಿದ್ದಿದ್ದ ಹಾವನ್ನು ನೋಡಿ ಜನ ಅರಣ್ಯ ಇಲಾಖೆಗೆ ಕರೆಮಾಡಿದ್ದರು. ಪ್ರಶಾಂತ್ ತನ್ನ ಹಾವಿನ ಕೋಲು, ಕೊಕ್ಕೆ, ಚೀಲಗಳನ್ನು ತೆಗೆದುಕೊಂಡು ಹೊರಟಾಗ ರ್ಯಾಂಬೋ ರೀತಿ ಕಂಡರು. ಅನಾರೋಗ್ಯದಿಂದಲೋ ಏನೋ ಪೊದೆಗಳ ನಡುವೆ ಸಿಲುಕಿಕೊಂಡಿದ್ದ ಕಾಳಿಂಗ ಸರ್ಪವನ್ನು ಪ್ರಶಾಂತ್ ಸೂಕ್ಷ್ಮವಾಗಿ ಬಿಡಿಸಿದರು. ನಾನದನ್ನು ಚೆಲದೊಳಗೆ ಹಾಕಿದೆ. ಹತ್ತಿರದ ಮೈದಾನದಲ್ಲಿ ಕಾಳಿಂಗ ಸರ್ಪ ಹಾನಿಯಾಗದೆ ಉಳಿಯಲಿ ಎಂಬ ಪ್ರಾರ್ಥನೆಗಳೊಂದಿಗೆ ಚೀಲದಿಂದ ಹೊರಬಿಟ್ಟೆವು. ಕಾಳಿಂಗಸರ್ಪದ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಅದರ ರಾಜಗಾಂಭೀರ್ಯದ ಅರಿವಾಗುತ್ತದೆ. ನನ್ನ ಮಟ್ಟಿಗೆ ಭೂಮಿಯ ಮೇಲಿರುವ ಅತಿ ಸುಂದರ ಜೀವಿಗಳ ಪಟ್ಟಿಯಲ್ಲಿ ಕಾಳಿಂಗ ಸರ್ಪಕ್ಕೆ ಮೊದಲ ಸ್ಥಾನ ನೀಡುವೆ.
ತನ್ನ ಕಣ್ಣಿನಿಂದ ಏನೋ ಸಂದೇಶವನ್ನು ಕಳುಹಿಸಿ ನನ್ನಾತ್ಮಕ್ಕೆ ಶಾಂತಿಯನ್ನು ನೀಡುತ್ತಿದೆ ಎಂದೆಲ್ಲ ಎನಿಸುವುದು ನನಗೆ. ಹಾವನ್ನು ಸಂರಕ್ಷಿಸಿದ ನಂತರ ಕೆಲವು ದಿನ ನಾನು ಕಾಳಿಂಗ ಸರ್ಪದ ಗುಂಗಲ್ಲೇ ಸಮ್ಮೋಹಿತಳಾಗಿದ್ದೆ. ನನ್ನ ಮಟ್ಟಿಗೆ ಹಾವುಗಳಿಲ್ಲದ ಜೀವನ ಉಹಿಸಲಿಕ್ಕೂ ಸಾಧ್ಯವಿಲ್ಲ.
ಲೇಖಕರ ಪರಿಚಯ: ಮೂಲ ಹೈದರಾಬಾದಿನವಳಾದ ನಾನು. ಬೆಂಗಳೂರಿನಲ್ಲಿ ಟೆಕ್ಕಿಯಾಗಿ ಕೆಲಸಮಾಡುತ್ತಿರುವೆ. ಬಿಡುವಿನಲ್ಲಿ ಒಂದು ಕ್ಯಾಮೆರಾವನ್ನು ನೇತುಹಾಕಿಕೊಂಡು ಕುದುರೆ ಮತ್ತು ಹಾವುಗಳ ಸುತ್ತ ಇರುತ್ತೇನೆ. ವನ್ಯಮೃಗಗಳೆಂದರೆ ನನಗೆ ಪ್ರಾಣ. ಅವುಗಳಿಗೋಸ್ಕರ ಏನುಬೇಕಾದರೂ ಮಾಡುತ್ತೇನೆ. ಚಾರಣ ಪ್ರವಾಸಗಳು ನನ್ನ ಹವ್ಯಾಸ. ಹಿಮಾಲಯ ಪರ್ವತ ಶ್ರೇಣಿಗಳು ನನಗೆ ಪ್ರಪಂಚದಲ್ಲೇ ತುಂಬಾ ಇಷ್ಟವಾದ ಸ್ಥಳ. ನನ್ನ ಅನುಭವಗಳನ್ನು ಛಾಯಾಚಿತ್ರಗಳಲ್ಲಿ ಸೆರೆಹಿಡಿದು ಟಿಪ್ಪಣಿಗಳನ್ನು ಬರೆಯುತ್ತಾ ಎಲ್ಲ ನನ್ನ ಕೊಠಡಿ ಸಹವಾಸಿಗಳ ಜೊತೆ ಹಂಚಿಕೊಳ್ಳುತ್ತೇನೆ.
ಮೂಲ ಲೇಖನ: ಮಮ್ತಾ ನಾಯ್ಡು
ಕನ್ನಡಕ್ಕೆ ಅನುವಾದ: ಡಾ. ದೀಪಕ್ ಭದ್ರಶೆಟ್ಟಿ
ಮೈಸೂರಿನ ನಿವಾಸಿ, ವೃತ್ತಿಯಲ್ಲಿ ದಂತವೈದ್ಯ ಹವ್ಯಾಸಿ ಬರಹಗಾರ ಹವ್ಯಾಸಿ ಛಾಯಾಚಿತ್ರಗಾರ