ಡಾ. ಮೂಷಿಕ

ಡಾ. ಮೂಷಿಕ

ಹಳ್ಳಿಯಲ್ಲಿ ಈಗತಾನೆ ಸುಗ್ಗಿ ಮುಗಿದಿದೆ. ಎಲ್ಲಾ ರೈತರು ತಮ್ಮ ತಮ್ಮ ಹೊಲಗಳಲ್ಲಿ ಬೆಳೆದಿದ್ದ ತಮ್ಮ ಫಸಲನ್ನು ಮೂಟೆ ಕಟ್ಟಿ ಮನೆಗಳಿಗೆ ಕೊಂಡೊಯ್ದು ಒಂದರ ಮೇಲೊಂದು ಜೋಡಿಸಿ, ತಮ್ಮ ಮತ್ತು ಮನೆಯವರ ಪರಿಶ್ರಮಕ್ಕೆ ದೊರೆತ ಫಲವನ್ನು ಹಾಗೆ ಒಮ್ಮೆ ಬೀಗುತ್ತ ಕಣ್ಣು ಹಾಯಿಸುತ್ತಾರೆ. ಆ ಕ್ಷಣದಲ್ಲಿ ಅವರ ಈ ವರ್ಷವೆಲ್ಲ ಪಟ್ಟ ಶ್ರಮದ ಅರಿವಾಗದೆ ಆ ಕಣ್ಣಿನಲ್ಲಿನ ಸಂಭ್ರಮವನ್ನು ಮಾತ್ರ ಕಾಣಬಹುದು.
ಆದರೆ ಇಷ್ಟೆಲ್ಲಾ ಕಷ್ಟಪಟ್ಟು ಬೆಳೆದ ಫಸಲನ್ನು ಸರಿಯಾದ ಕ್ರಮದಲ್ಲಿ ಶೇಖರಿಸದೆ ಇಟ್ಟಲ್ಲಿ, ಆ ಫಸಲನ್ನು ಹಳ್ಳಿಯಲ್ಲಿನ ಮನೆಮಾತಾಗಿರುವ ಸಾಮಾನ್ಯ ಶತ್ರುವಾದ ಇಲಿಗಳಿಗೆ ತಟ್ಟೆಯಲ್ಲಿ ಊಟ ಹಾಕಿ ಕೊಟ್ಟಂತೇ ಸರಿ. ಹೌದಲ್ಲವೇ…? ಕೇವಲ ಒಂದೇ ಒಂದು ಇಲಿಯನ್ನು ಮೂಟೆಗಳ ಬಳಿ ನಿಮಗರಿಯದಂತೆ ಗೂಡು ಮಾಡಲು ಬಿಟ್ಟಿರಿ ಎಂದು ತಿಳಿದುಕೊಳ್ಳಿ, ಅಲ್ಲಿಗೆ ಮುಗಿಯಿತು, ಮೂಟೆಗಳಲ್ಲಿನ ಧಾನ್ಯಗಳ ಕಥೆ. ಕೇವಲ ತಿಂಗಳುಗಳಲ್ಲಿ ನೂರಾರು ಸಂಖ್ಯೆಗಳಲ್ಲಿ ತಮ್ಮ ಸಂತತಿ ಬೆಳೆಸಿ, ನಮ್ಮ ವರ್ಷದ ಊಟವನ್ನು ಮಂಗಮಾಯ ಮಾಡಿಬಿಡುತ್ತವೆ. ಅದಕ್ಕೇ ಇರಬೇಕು ಎಷ್ಟೋ ಮನೆಗಳಲ್ಲಿ ಕಂಡಲ್ಲಿ ಗುಂಡು ಕಾಯ್ದೆ ಜಾರಿಗೊಳಿಸಿದ ಹಾಗೆ ಮನೆಯಲ್ಲಿ ಇಲಿ ಕಂಡರೆ ಸಾಕು, ಅದನ್ನು ಪರಲೋಕಕ್ಕೆ ಕಳಿಸುವ ಎಷ್ಟೋ ಸಾಧನಗಳನ್ನು ಹಿಡಿದು ಕಾಯುತ್ತಿರುತ್ತಾರೆ.

ಆದರೆ… ಈ ತಿಂಗಳ ವಿ ವಿ ಅಂಕಣ ಓದಿದ ಬಳಿಕ ನಿಮಗಿರುವ ಇಲಿಗಳ ಈ ಕೋನದ ದೃಷ್ಟಿ ಬದಲಾಗಬಹುದು. ಹಾಗೆಯೇ ನಿಮಗೆ ತಿಳಿದಿರಬಹುದು, ಇದೇ ಇಲಿಗಳನ್ನು ಕೆಲವು ಕಷ್ಟಕರ ಹಾಗು ನಮಗೆ ಎಷ್ಟೋ ಸಹಾಯ ಆಗುವ ಕೆಲಸಗಳಲ್ಲಿ ತೊಡಗಿಸಿದ್ದಾರೆ. ಉದಾಹರಣೆಗೆ, APOPO ಎಂಬ ಸಂಸ್ಥೆ ತಾನ್ಸೇನಿಯಾದ Sokoine University of Agriculture ಜೊತೆಗೂಡಿ ಆಫ್ರಿಕಾದ ಒಂದು ಜಾತಿಯ ಇಲಿಗಳನ್ನು ಭೂ ಸ್ಪೋಟಕ(Land-mine)ಗಳನ್ನುಕಂಡು ಹಿಡಿಯುವಂತೆ 2000ದಿಂದ ಪಳಗಿಸುತ್ತಿದ್ದಾರೆ. ಹಾಗು 2016ರಲ್ಲಿ ಈ ಇಲಿಗಳು ಸುಮಾರು –
20,000 ಭೂ ಸ್ಪೋಟಕಗಳನ್ನು ಆಫ್ರಿಕಾ ಮತ್ತು ಆಗ್ನೇಯ ಏಷ್ಯಾ ಭಾಗಗಳಲ್ಲಿ ಕಂಡುಹಿಡಿದಿವೆಯಂತೆ. ಅವುಗಳಲ್ಲಿನ TNTಗಳನ್ನ ತಮ್ಮ ಮೂಗಿನ ಗ್ರಹಣ ಶಕ್ತಿಯಿಂದ ಗ್ರಹಿಸುವ ಮೂಲಕ ಈ ಮಹತ್ಕಾರ್ಯ ಸಾಧಿಸಿವೆ ಎನ್ನುವುದು ವಾಸ್ತವ. ಈ ವಿಷಯಗಳು ಈ ಮುಂಚೆಯೇ ತಿಳಿದಿರಬಹುದು ಆದರೆ ಈ ತಿಂಗಳ ವಿದ್ಯಾರ್ಥಿಗಾಗಿ ವಿಜ್ಞಾನದ (ವಿ ವಿ) ವಿಷಯ ಇದಲ್ಲ. ಅಸಲು ವಿಷಯ ಮುಂದಿದೆ…

TB ಖಾಯಿಲೆ ಸಾಮಾನ್ಯವಾಗಿ ನಿಮಗೆಲ್ಲ ತಿಳಿದಿರುತ್ತದೆ. ಇದನ್ನು ಕ್ಷಯರೋಗ ಎಂದು ಕನ್ನಡದಲ್ಲಿ ಕರೆಯುತ್ತಾರೆ. ಇದರ ಗುಣಲಕ್ಷಣ ಸಹ ನಿಮಗೆ ತಿಳಿದಿರಬಹುದು. ಈ ರೋಗಕ್ಕೆ ತುತ್ತಾದವರು ತೀವ್ರವಾಗಿ ಕೆಮ್ಮುತ್ತಿರುತ್ತಾರೆ. ಹಾಗು ಕಫವನ್ನು ಸಹ ಹೊಂದಿರುತ್ತಾರೆ ಅಲ್ಲವೇ? ಹೆಚ್ಚು ದಿನಗಳ ಕಾಲದ ಕಫಯುಕ್ತ ಕೆಮ್ಮು ಯಾರಿಗಿದ್ದರೂ ಒಮ್ಮೆ ವೈದ್ಯರಿಗೆ ತೋರಿಸುವುದು ಉತ್ತಮ. ಏಕೆಂದರೆ ಬಹುಶಃ ಅವರಿಗೆ ಈ ಖಾಯಿಲೆ ಇರುವ ಸಾಧ್ಯತೆಗಳಿರುತ್ತವೆ. ‘ಅದು ನಮಗೆ ತಿಳಿಯದೇ?‘ ಎನ್ನುತ್ತೀರಾ, ಕೋಪಿಸಿಕೊಳ್ಳಬೇಡಿ ಅದು ನನ್ನ ಒಂದು ಚಿಕ್ಕ ಸಲಹೆಯಷ್ಟೇ. ಅದಿರಲಿ ಬಿಡಿ ವಿಷಯಕ್ಕೆ ಬರೋಣ… ಆಶ್ಚರ್ಯದ ಸಂಗತಿಯೆಂದರೆ ವೈದ್ಯರು ಹೇಳುವ ಹಾಗೆ ರೋಗಿಯ ಕಫವನ್ನು ಸೂಕ್ಷ್ಮದರ್ಶಕದಲ್ಲಿ ನೋಡಿ ಖಾಯಿಲೆಯನ್ನು ಗುರುತಿಸುತ್ತಾರೆ. ಈ ವಿಧಾನದಲ್ಲಿ ವೈದ್ಯರು ಶೇಖಡ 50ರಷ್ಟು ತಪ್ಪಾಗಿರುತ್ತಾರಂತೆ. ಏಕೆಂದರೆ ಸೂಕ್ಷ್ಮದರ್ಷಕದಲ್ಲಿ ಕಫವನ್ನು ಪರೀಕ್ಷಿಸಿ TB ಇದೆಯೆಂದು ಹೇಳುವುದು  ನಿಖರ ಮಾರ್ಗವಲ್ಲ. ಹಾಗು TB ಕಂಡು ಹಿಡಿಯುವ ಬೇರೆ ಪರೀಕ್ಷೆಗಳು ದುಬಾರಿಯೂ ಕೂಡ ಹೌದು. ಆದರೆ ಇಲಿಗಳಿಗೆ ಈ ಕೆಲಸ ಸುಲಭ ಸಾದ್ಯ.

ವಿಶೇಷವೆಂದರೆ ಈ TB ತರುವ ಬ್ಯಾಕ್ಟೀರಿಯಾಗಳು ಬೇರೆ ಬ್ಯಾಕ್ಟೀರಿಯಾಗಳಂತೆ ಅಲ್ಲದೆ, 13 ಬಗೆಯ ವಾಸನೆಗಳನ್ನು ಹೊರ ಸೂಸುತ್ತವೆಯಂತೆ. ಈ ವಾಸನೆಗಳನ್ನು ಒಂಬತ್ತು ತಿಂಗಳುಗಳು ಸತತವಾಗಿ ಪಳಗಿಸಿದ ಇಲಿಗಳಿಂದ ಸುಲಭವಾಗಿ ಕಂಡು ಹಿಡಿಯಬಹುದು ಎನ್ನುತ್ತಾರೆ ಎಂಗೋಡ್, ಪ್ರಾಣಿಗಳ ರೋಗತಜ್ಞ.

ನಾಲ್ಕು ವಾರದ ವಯಸ್ಸಿನ ಇಲಿಗಳನ್ನು ಸಂಶೋಧಕರು ದಿನಾಲು ಊಟ ಕೊಟ್ಟು ಅವುಗಳಿಗೆ ಒಂದೊಂದು ಹೆಸರಿಟ್ಟು ಸಾಕುತ್ತಾರೆ. ಹಾಗು TB ಹೊಂದಿರಬಹುದಾದ ಕಫದ ಮಾದರಿಗಳನ್ನು ಇಟ್ಟು, ಇಲಿ ಎಲ್ಲದರ ವಾಸನೆ ಗ್ರಹಿಸಿ ಯಾವ ಮಾದರಿಯಲ್ಲಿ TB ಇರುತ್ತದೆಯೋ ಆ ಮಾದರಿ ಬಳಿ ನಿಂತರೆ, ಆ ಇಲಿಗೆ ಬಹುಮಾನ ನೀಡಲಾಗುತ್ತಿತ್ತು. ಹೀಗೆ ಪಳಗಿಸಿದ ಇಲಿಗಳು TB ಇರುವ 100 ಮಾದರಿಗಳನ್ನು ಕೇವಲ 20 ನಿಮಿಷಗಲ್ಲಿ ಅಂದರೆ ಬೇರೆ ಎಲ್ಲಾ ವಿಧಾನಗಳಿಗಿಂತ ವೇಗವಾಗಿ ಕಂಡು ಹಿಡಿದವು. ಅಷ್ಟೇ ಅಲ್ಲ, ಏಪ್ರಿಲ್ 4ರಂದು ನಡೆಸಿದ ಪರೀಕ್ಷೆಯಲ್ಲಿ 55,000 ಕಫದ ಮಾದರಿಗಳಲ್ಲಿ ಸೂಕ್ಷ್ಮದರ್ಶಕದಿಂದ 8,351ರಲ್ಲಿ ಕ್ಷಯರೋಗ ಕಂಡು ಹಿಡಿಯಲಾಯಿತು. ಹಾಗು 2011 ರಿಂದ 2015ರಲ್ಲಿ ಪಳಗಿಸಿದ ಇಲಿಗಳು ಈ ಮೇಲಿನ ಸಂಖ್ಯೆಗಿಂತಲೂ 2,754 ಕ್ಕು ಹೆಚ್ಚು ಕ್ಷಯರೋಗ ಯುಕ್ತ ಕಫವನ್ನು ಕಂಡು ಹಿಡಿಯಲು ಯಶಸ್ವಿಯಾದವು.

 ಹಾಗು ಬ್ಯಾಕ್ಟೀರಿಯಾ ಸಂಖ್ಯೆ ಕಡಿಮೆ ಇರುವ ಮಕ್ಕಳ ಕಫದ ಮಾದರಿಯನ್ನು ಇಲಿಗಳು ಹೆಚ್ಚು ನಿಖರವಾಗಿ ಕಂಡು ಹಿಡಿದವು ಎಂಬುದು ಗಮನಾರ್ಹ. ಇದೇ ಮಾರ್ಗವನ್ನು ಕೆಲವು ದೇಶಗಳು ಉಪಯೋಗಿಸುತ್ತಿವೆಯಾದರೂ, ಇದನ್ನು ಪ್ರಪಂಚಾದ್ಯಂತ ಅಳವಡಿಸಲು WHO (World Health Organization)ನ ಅನುಮತಿ ಬೇಕಿದೆ. ಈ ಮಾರ್ಗವನ್ನು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಂಶೋಧನೆ ಮೂಲಕ ಬಲಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿರುತ್ತೇವೆ ಎನ್ನುತ್ತಾರೆ ಎಂಗೋಡ್.

ಮೂಲ ಲೇಖನ: ScienceNewsforStudents

ಲೇಖನ: ಜೈಕುಮಾರ್ ಆರ್.
ಡಬ್ಲೂ.ಸಿ.ಜಿ, ಬೆಂಗಳೂರು

Print Friendly, PDF & Email
Spread the love
error: Content is protected.