ಪ್ರಕೃತಿ ಬಿಂಬ

©ವಿಪಿನ್ ಬಾಳಿಗಾ, ಕಿರು ಮರಗಪ್ಪೆ
ನಾನು ಒಂದು ಮರಗಪ್ಪೆ, ಭಾರತದ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುತ್ತೇನೆ. ದೊಡ್ಡ ಕಣ್ಣುಳ್ಳ ನಾನು ಮರದ ಮೇಲೆ ವಾಸಿಸುತ್ತೇನೆ. ನನ್ನ ಆವಾಸ ಈಗ ಬದಲಾಗುತ್ತಿದೆ. ವ್ಯವಸಾಯಕ್ಕಾಗಿ ನಾನು ವಾಸವಿದ್ದ ಮರಗಳನ್ನು ಧರೆಗುರುಳಿಸುತ್ತಿದ್ದಾರೆ. ಹೆಚ್ಚುತ್ತಿರುವ ಕೀಟನಾಶಕಗಳ ಬಳಕೆಯಿಂದಾಗಿ ನನ್ನ ವಂಶ ಈ ಭೂಮಿಯ ಮೇಲಿಂದಲೇ ಶಾಶ್ವತವಾಗಿ ಕಣ್ಮರೆಯಾಗುವುನೇನೋ ಎಂಬ ಭಯದಲ್ಲೇ ಜೀವಿಸುತ್ತಿದ್ದೇನೆ.

©ಶ್ರೀನಿವಾಸ್ ಕೆ. ಎಸ್, ಬಂಬಲ್ ಬೀ
ಇದು ಬಂಬಲ್ ಬೀ. ನಮಗೆ ತಿಳಿದಂತೆ ಜೇನು ಹುಳುಗಳು ದೊಡ್ಡ ಗುಂಪಿನಲ್ಲಿ ಕುಟುಂಬದಂತೆ ವಾಸಿಸುತ್ತವೆ. ಅಲ್ಲಿ ಕೆಲಸಗಾರ ಹುಳು, ರಾಣಿ ಜೇನು, ಕೆಲವು ಗಂಡು ಹುಳುಗಳು ಇರುತ್ತವೆ. ಜೇನಿನ ಪಂಗಡದಲ್ಲಿ ಇತರೆ ಹಲವು ಜಾತಿಯ ಏಕಾಂಗಿಯಾಗಿ ಜೀವಿಸುವ ಬಂಬಲ್ ಬೀಗಳೂ ಇವೆ. ಇವು ಗುಂಪಿನಲ್ಲಿ ವಾಸಿಸದೆ ಏಕಾಂಗಿಯಾಗಿ ಜೀವಿಸುತ್ತವೆ. ಸಾಮಾನ್ಯವಾಗಿ ನೆಲದಲ್ಲಿ, ಒಣಗಿದ ಕಡ್ಡಿಗಳಲ್ಲಿ, ಒಣಮರದ ರಂದ್ರಗಳಲ್ಲಿ ಗೂಡುಕಟ್ಟಿ ಮೊಟ್ಟೆಇಟ್ಟು ಬದುಕುತ್ತವೆ. ಟೂತ್ ಪೇಸ್ಟಿನಷ್ಟು ಗಟ್ಟಿಯಾದ ಮಕರಂದವನ್ನು ಸಂಗ್ರಹಿಸಿ ಮರಿಗಳಿಗೆ ಒದಗಿಸುತ್ತವೆ.

©ಶ್ರೀನಿವಾಸ್ ಕೆ. ಎಸ್, ಹಸಿರು ಹಾವು
ಬಾಣದಾಕಾರದ ತಲೆ, ಚೂಪಾದ ಮೂಗು, ಕಡ್ಡಿಯಂತಹ ಸಪೂರ ದೇಹ ಹೊಂದಿದೆ. ಈ ಹಾವಿನ ಕಣ್ಣಿನಲ್ಲಿ ಲಂಬವಾದ ಪ್ಯೂಪಿಲ್ ಇದೆ. ಒಂದು ಕೋನದಿಂದ ನೋಡಿದರೆ ಧ್ಯಾನಕ್ಕೆ ಕುಳಿತ ಕಣ್ಣಿನಂತೆ ಕಂಡರೂ, ಕುರುಚಲು ಪೊದೆಗಳ ಮೇಲೆ ಚಲಿಸದೇ ಅಡಗಿ ಕುಳಿತು ಓತಿಕ್ಯಾತ, ಸಣ್ಣಸಣ್ಣ ಪಕ್ಷಿಗಳನ್ನೂ ಹಿಡಿದು ತಿನ್ನುತ್ತದೆ. ಕಪ್ಪೆ, ಇಲಿ, ಇತರೆ ಸಣ್ಣಪುಟ್ಟ ಹಾವುಗಳನ್ನೂ ಹಿಡಿದು ಗುಳುಂ ಮಾಡುತ್ತದೆ. ಮೂಗಿನ ತುದಿಯಿಂದ ಬಾಲದವರೆಗೂ ತಿಳಿಹಸಿರು ಬಣ್ಣದಿಂದ ಕೂಡಿರುವ ಈ ಹಾವು, ಹಸಿರು ಎಲೆಗಳ ನಡುವೆ ಮಲಗಿದ್ದರೆ ಅದನ್ನು ಕಂಡುಹಿಡಿಯುವುದೇ ಕಷ್ಟ. ಮಾರಣಾಂತಿಕ ವಿಷಕಾರಿಯಲ್ಲದ ಈ ಹಾವನ್ನು ವಿಷಕಾರಿ ಎಂದು ಭಾವಿಸಿ ಕಂಡಲ್ಲಿ ಕೊಲ್ಲುತ್ತಾರೆ. ಕಣ್ಮರೆಯಾಗುತ್ತಿರುವ ಕುರುಚಲು ಕಾಡು, ನಗರೀಕರಣದಿಂದಾಗಿ ಇಲ್ಲವಾದ ಕಡಿಮೆ ಎತ್ತರದ ಗಿಡಗಂಟೆ-ಪೊದೆಯ ದೆಸೆಯಿಂದ ಇವುಗಳ ಸಂತತಿ ಕ್ಷೀಣಿಸುತ್ತಿದೆ. ಟಾರು ರಸ್ತೆಗಳಲ್ಲಿ ಚಕ್ರಕ್ಕೆ ಸಿಲುಕಿ ಸತ್ತು ತನ್ನ ಹಸಿರು ಹೊಟ್ಟೆಯನ್ನೆ ಆಕಾಶಕ್ಕೆ ತೋರಿಸುತ್ತಾ ಬಿದ್ದಿರುವ ಈ ಹಾವನ್ನೂ ನೀವು ಕಂಡೇ ಇರುತ್ತಿರ!

©ಅಮಿತ್ ಕೃಷ್ಣ , ಹಾವು ಗಿಡುಗ
ಹಾವುಗಿಡುಗ ಒಂದು ಬೇಟೆಗಾರ ಹಕ್ಕಿ. ಕಾಡು-ಹುಲ್ಲುಗಾವಲಿನಲ್ಲಿ ಎತ್ತರದ ಆಗಸದಲ್ಲಿ ಹಾರುತ್ತಾ ಬೇಟೆಯನ್ನು ಹುಡುಕುತ್ತದೆ. ಭಾರತ ಉಪಖಂಡದ ಎಲ್ಲಾ ಕಡೆ ಕಂಡುಬರುವ ಈ ಬೇಟೆಗಾರ ಹಕ್ಕಿ ಪ್ರಮುಖ ಆಹಾರ ಹಾವುಗಳು. ಕೆಲವೊಮ್ಮೆ ಪಕ್ಷಿ, ಕಪ್ಪೆ, ಸಣ್ಣಸಣ್ಣ ಸಸ್ತನಿಗಳನ್ನು ಹಿಡಿದು ತಿನ್ನುತ್ತದೆ. ಬೇಟೆಯಾಡಿದ ಹಾವನ್ನು ಹಿಡಿದು ಆಕಾಶಕ್ಕೆ ಹಾರಿ ಅಲ್ಲೇ ತಿಂದು ಮುಗಿಸುತ್ತದೆ. ಕಡು ಕಂದು ಬಣ್ಣದ ದೊಡ್ಡ ಸುಂದರ ಹಕ್ಕಿಯ ಮುಖ ಮತ್ತು ಕಾಲುಗಳು ಹಳದಿ ಬಣ್ಣ ಹೊಂದಿದೆ. ತಲೆಯ ಮೇಲೆ ಕಪ್ಪು ಬಿಳುಪಿನ ಪುಕ್ಕದ ತುರಾಯಿ ಇದೆ. ಹೊಟ್ಟೆಯ ಭಾಗದಲ್ಲಿ ಬಿಳಿಚುಕ್ಕೆಗಳಿಂದ ಕೂಡಿದ್ದು ಹಳದಿ ಮಿಶ್ರಿತ ಕಂದು ಬಣ್ಣವಿದೆ. ಬಾಲದ ಪುಕ್ಕದಲ್ಲಿ ಕಪ್ಪು ಬಿಳುಪಿನ ಪಟ್ಟೆಗಳಿವೆ. ಸಾಮಾನ್ಯವಾಗಿ ನೀರಿರುವ ಜಾಗದಲ್ಲಿ ಎತ್ತರದ ಮರದ ಮೇಲೆ ದೊಡ್ಡ ಗೂಡು ಕಟ್ಟಿ ಒಂದು ಅಥವ ಎರಡು ಮೊಟ್ಟೆಗಳನ್ನು ಇಟ್ಟು ಗಂಡು-ಹೆಣ್ಣು ಹಕ್ಕಿ ಎರಡೂ ಪೋಷಿಸುತ್ತವೆ. ಈ ಚಿತ್ರದಲ್ಲಿ ಹಾವುಗಿಡುಗ ಸಣ್ಣ ಆಮೆಯನ್ನು ಬೇಟೆಯಾಡಿ ತಿನ್ನಲು ತವಕಿಸುತ್ತಿದೆ.
ವಿವರಣೆ: : ಶಂಕರಪ್ಪ .ಕೆ .ಪಿ