ಪ್ರಕೃತಿ ಬಿಂಬ
©ಶ್ರೀನಿವಾಸ್ ಕೆ. ಎಸ್, ಡ್ಯಾಂಸಲ್ ಫ಼್ಲೈ
ಏರೋಪ್ಲೇನ್ ಚಿಟ್ಟೆಯಂತೆ ಕಾಣುವ ಕೊಡತಿ ಹುಳು (ಡ್ಯಾಂಸಲ್ ಫ಼್ಲೈಗಳು) ಗಾತ್ರದಲ್ಲಿ ಚಿಕ್ಕವು. ಇವುಗಳ ಸಪೂರ ದೇಹ ಪೊರಕೆಕಡ್ಡಿಯಂತೆ ಇರುತ್ತದೆ. ಸಿಹಿನೀರಿನ ಜೌಗು ತಾಣಗಳಲ್ಲಿ ಕಾಣಸಿಗುವ ಇವು ಮಹಾನ್ ಬೇಟೆಗಾರ ಕೀಟಗಳು. ಹಾರುತ್ತಲೇ ಸಣ್ಣ ಸಣ್ಣ ಕೀಟಗಳನ್ನು ಹಿಡಿದು ಬಾನಿನಲ್ಲೇ ತಿಂದು ಮುಗಿಸುತ್ತವೆ. ಕೊಡತಿ ಹುಳುಗಳು ಕುಳಿತಿರುವಾಗ ತಮ್ಮ ರೆಕ್ಕೆಗಳನ್ನು ಹಿಂದಕ್ಕೆ ಬಾಗಿಸಿರುತ್ತವೆ. ಕಣ್ಮರೆಯಾಗುತ್ತಿರುವ ಜೌಗು ಪ್ರದೇಶದಿಂದ, ನೀರಿನ ಮಾಲಿನ್ಯ ದಿಂದ ಇವುಗಳ ಸಂಖ್ಯೆಯೂ ಕೂಡ ಕ್ಷೀಣಿಸುತ್ತಿವೆ.
©ಶ್ರೀನಿವಾಸ್ ಕೆ. ಎಸ್, ಮಿಡತೆ
ಮುಂಜಾವಿನ ಮಂಜಿನಲಿ ತೊಯ್ದ ಮಿಡತೆ! ಚಳಿಗೋ ಬಿಸಿಗೋ ಹನಿಹನಿ ನೀರಿಗೂ ಕಷ್ಟವಾಗಿರುವ ಈ ಬೇಸಿಗೆ ಕಾಲದಲ್ಲಿ ಕಣ್ಣಿಗೆ ತಂಪೆರಿಯುತ್ತಿದೆ. ವರ್ಷದ ಮೊದಲ ಮಳೆಗಳ ಆರಂಭದ ಈ ಸಂದರ್ಭದಲ್ಲಿ ಹುಲ್ಲಿನ ಹೊಸ ಚಿಗುರಿನ ನಡುವೆ ಮಳೆಯಲ್ಲಿ ನೆನೆಯುವ ಸಂತಸ. ಆದರೆ ಬೇಸಿಗೆಯ ಕಾಡ್ಗಿಚ್ಚು, ವಾತಾವರಣದ ಬದಲಾವಣೆ ಮುಂತಾದ ಸಮಸ್ಯೆಗಳಿಗೆ ಸಿಲುಕಿ, ಇವುಗಳ ವಂಶ ನಿರ್ವಂಶದ ಬಾಗಿಲನ್ನು ತಟ್ಟುತ್ತಿವೆ.
©ಶ್ರೀನಿವಾಸ್ ಕೆ. ಎಸ್, ಸೂರ್ಯನ ಕುದುರೆ
ಕೊಂಬೆಯ ಮೇಲೆ ತನ್ನ ಮುಂದಿನ ಕಾಲುಗಳಲ್ಲಿ ಕೈಮುಗಿದು ಕುಳಿತಿರುವ ಈ ಕೀಟವೇ ಸೂರ್ಯನ ಕುದುರೆ. ನೋಡಲು ಸೌಮ್ಯವಾಗಿ, ಅಮಾಯಕನಂತೆ ಕಂಡರೂ ಮಹಾಬೇಟೆಗಾರ. ದೊಡ್ಡದಾಗಿರುವ ತನ್ನ ಮುಂಗಾಲುಗಳ ಸಹಾಯದಿಂದ ಕೀಟಗಳನ್ನು ಗಬಕ್ಕನೆ ಹಿಡಿದು ತಿನ್ನುತ್ತದೆ. ವಯಸ್ಕ ಸೂರ್ಯಕುದುರೆಯು, ನೊರೆಯಿಂದ ತಯಾರಿಸದ ಗೂಡಿನಲ್ಲಿ, ನೂರಾರು ಮೊಟ್ಟೆಗಳನ್ನು ಇಟ್ಟು ಸಾಯುತ್ತದೆ. ಗೂಡಿನಿಂದ ಹೊರ ಬರುವ ನೂರಾರು ಮರಿಗಳು ತಾವೇ ಬೆಳೆದು ದೊಡ್ಡವಾಗುತ್ತವೆ.
ಚಿತ್ರಗಳು: ಶ್ರೀನಿವಾಸ್ ಕೆ. ಎಸ್
ವಿವರಣೆ: ಶಂಕರಪ್ಪ .ಕೆ .ಪಿ