ಪ್ರಕೃತಿ ಬಿಂಬ

©ಹರೀಶ್ ಗೌಡ .ಎನ್, ಲೆಸ್ಸರ್ ವ್ಹಿಸಲಿಂಗ್ ಡಕ್ಕ್
ನಿಮ್ಮ ನಗರದ ಕೊಳಚೆನೀರು ನಮ್ಮ ಕೆರೆ ಸೇರಿ ಮಲಿನಗೊಂಡಿದೆ. ಕೆರೆಯ ನೀರಿನ ಆಮ್ಲಜನಕ ಪ್ರಮಾಣ ಕುಸಿದು ಜಲಚರಗಳು, ಮೀನುಗಳು ಸತ್ತು ತೇಲುತ್ತಿವೆ. ಇಲ್ಲಿನ ಮೀನುಗಳ ದೇಹದಲ್ಲಿ ಪಾದರಸ, ಸೀಸದಂತಹ ವಿಷಕಾರಿ ಲೋಹಗಳ ಪ್ರಮಾಣ ಹೆಚ್ಚಿದೆ. ವಿಧಿಯಿಲ್ಲದೆ ಈ ಮೀನುಗಳನ್ನು ತಿಂದು ನಮ್ಮ ಆರೋಗ್ಯವೂ ಕ್ಷೀಣಿಸುತ್ತಿದೆ.

©ಹರೀಶ್ ಗೌಡ .ಎನ್, ನೀರುಕಾಗೆ
ನಾನು ಚಿಕ್ಕ ಕೆರೆಗಳ ಬಳಿ ಕಾಣಸಿಗುತ್ತೇನೆ. ಬಿಸಿಲಿಗೆ ರೆಕ್ಕೆಯಗಲಿಸಿ, ಕಲ್ಲಿನ ಮೇಲೆ ಕುಳಿತು ಪುಕ್ಕಗಳನ್ನು ಒಣಗಿಸುತ್ತಾ ಇರುವುದನ್ನು ನೀವು ನೋಡಿರಬಹುದು. ವಿಪರೀತಗೊಂಡಿರುವ ನಗರೀಕರಣದಿಂದ ಕೆರೆಕುಂಟೆಗಳು ಮಾಯವಾಗಿ, ನಮಗೆ ನೆಲೆಯಿಲ್ಲದಾಗಿದೆ. ನಾನು ಗೂಡುಕಟ್ಟಿರುವ ದೊಡ್ಡ ದೊಡ್ಡ ಮರಗಳನ್ನು ಅದೆಷ್ಟು ಸಾರಿ ಬುಡಸಮೇತ ಕಡಿದುರುಳಿಸಿದ್ದಾರೆ. ನಾವು ಈ ಭೂಮಿಯ ಮೇಲಿಂದ ಆತಂಕಕಾರಿ ವೇಗದಲ್ಲಿ ಕಣ್ಮರೆಯಾಗುತ್ತಿದ್ದೇವೆ.

©ಹರೀಶ್ ಗೌಡ. ಎನ್, ಪಟ್ಟೆಹೆಬ್ಬಾತು
ಚಳಿಗಾಲಕ್ಕೆ ಇತ್ತ ವಲಸೆ ಬರುವ ಹಕ್ಕಿಗಳು ನಾವು. ಪ್ರತೀವರ್ಷ ಈ ಕೆರೆಗೆ ಬಂದು ಗೂಡು ಕಟ್ಟಿ ಮರಿ ಮಾಡುತ್ತೇವೆ. ಆದರೆ ನಮ್ಮ ಕೆರೆಗೆ ಈಗ ಕೊಳಚೆನೀರು, ಸೋಪಿನ ನೊರೆ, ರಸಗೊಬ್ಬರ, ಕೀಟನಾಶಕಗಳು ಬಂದು ಸೇರುತ್ತಿವೆ. ಕಲುಷಿತ ನೀರಿನಿಂದ ಇಲ್ಲಿನ ಜಲಚರ ಸಾಯುತ್ತಿವೆ. ಮುಂದಿನ ವರ್ಷದ ವೇಳೆಗೆ ಈ ಕೆರೆಯ ಎಲ್ಲಾ ಜಲಚರಗಳು ಸತ್ತು, ಕೆರೆ ತುಂಬಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ! ಈ ವಿಚಾರ ನಮ್ಮನ್ನು ತೀವ್ರವಾಗಿ ಕಾಡುತ್ತಿದೆ.

©ಹರೀಶ್ ಗೌಡ .ಎನ್, ಗದ್ದೆ ಮಿಂಚುಳ್ಳಿ
ಮಾನವ ವಸತಿಗಳಲ್ಲಿ ನಮಗೆ ಆಹಾರ ಸಿಗುವುದೇ ಅಪರೂಪವಾಗಿ, ನೀವೇ ತಂದು ಸಾಕಿದ ಕ್ಯಾಟ್ ಫಿಶ್ ಕೆರೆಕುಂಟೆಗಳಲ್ಲಿ ಇದ್ದ ಎಲ್ಲಾ ಕಪ್ಪೆ, ಕೀಟ ಇತರ ಜಲಚರಗಳನ್ನು ನುಂಗಿ ನೀರುಕುಡಿದಿದೆ. ನಿನ್ನ ಮುದ್ದಿನ ಸಾಕುಪ್ರಾಣಿ ಬೆಕ್ಕು! ಸಣ್ಣ ಸಣ್ಣ ಸರಿಸೃಪಗಳನ್ನೂ ಬಿಡದೆ, ನಮ್ಮ ಮರಿಗಳನ್ನು ತಿಂದು ತೇಗುತ್ತಿವೆ. ಇನ್ನೆಲ್ಲಿ ನಮಗೆ ಉಳಿಗಾಲ!
ಚಿತ್ರಗಳು: ಹರೀಶ್ ಗೌಡ .ಎನ್
ಮೂಲ ವಿವರಣೆ: ವಿಪಿನ್ ಬಾಳಿಗ
ಅನುವಾದ : ಶಂಕರಪ್ಪ .ಕೆ .ಪಿ