ಕಾನನದ ಆರ್ತನಾದ
© ಹೂರ್ ಬಾನು
ನನ್ನೊಡಲೊಳಗೆ ಕಗ್ಗತ್ತಲು ಕವಿದಿದೆ
ಜೀವ ಜಂತುಗಳು ಮೆರೆದಾಡುತ್ತಿವೆ
ಅಷ್ಟೋ ಇಷ್ಟೋ ಎಷ್ಟೋ ಸಾಧ್ಯವಾದಷ್ಟು
ಸಿಕ್ಕಿದ್ದು ಸವಿದು ಮಲಗುತ್ತವೆ
ಆದರೆ ಈಗ ನಾನು ನಾನಾಗಿಲ್ಲ
ಪಚ್ಚೆ ಸೀರೆ ಕದ್ದು ಹರಿದು ಬೆತ್ತಲೆಗೊಳಿಸಿಹರು
ಅಭಿವೃದ್ಧಿಯ ನಾಮ ಕಟ್ಟಿ ಅತ್ಯಾಚಾರವೆಸಗುತಿಹರು
ಬೋಳಿಸಿ ಬರಿಗೈ ಮಾಡಿ ವಿಕೃತಿ ಮೆರೆವರು
ಮನಬಿಚ್ಚಿ ಅರಳುವ ಕುಸುಮ ಕಣ್ಮರೆಯಾಗುತ್ತಿವೆ
ನಲಿದಾಡಿ ಬರುವ ಪತಂಗ ನಶಿಸುತ್ತಿವೆ
ನಳನಳಿಸುವ ಝರಿಯ ನರ್ತನ ಕುಸಿದಿದೆ
ಚಿಲಿಪಿಲಿ ಕಲರವ ಮಾಯವಾಗುತ್ತಿದೆ
ಆನೆ-ಸಾರಂಗ ಹುಲಿ-ಸಿಂಹ ಕಂಗೆಟ್ಟು ನಾಡಿಗೆ ನುಗ್ಗಿವೆ
ಕಾವು ಏರುತ್ತಿದೆ ವಿಕಿರಣ ಸೂಸುತ್ತಿದೆ
ತುಂಬಿದ್ದ ಸಂಪತ್ತು ಬಟಾಬಯಲಾಗುತ್ತಿದೆ
ಬಂಜೆಮಾಡಿ ಬಡಿವಾರ ಮಾಡುತಿಹರು
ಅಲ್ಲಲ್ಲಿ ಎದೆಮೇಲೆ ಬರೆ ಎಳೆಯುತಿಹರು
ಹೊಟ್ಟೆಯೊಳಗೆ ಸಿಡಿಮದ್ದು ಸಿಡಿಸುತಿಹರು
ಸೆರಗಂಚಿಗೆ ಬೆಂಕಿ ಹಚ್ಚಿ ಮನೆ ಕಟ್ಟುತಿಹರು
ಇದೋ! ನನ್ನ ಆರ್ತನಾದ, ಇನ್ನಾದರೂ ಉಳಿಸಿ ಬೆಳೆಸಿ ರಕ್ಷಿಸಿ
– ರಾಮಲಿಂಗ ಮಾಡಗಿರಿ
ರಾಯಚೂರು ಜಿಲ್ಲೆ