ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

 ಸಣ್ಣ ಸೂರಕ್ಕಿ                                                                                       ©  ಅರವಿಂದ ಕೂಡ್ಲ

ಭಾರತದ ಪಶ್ಚಿಮ ಘಟ್ಟಗಳಿಗೆ ಸ್ಥಳೀಯವಾಗಿರುವ ಈ ಸೂರಕ್ಕಿ ಕಾಡುಗಳಲ್ಲಿ ಮತ್ತು ಕಾಡಿನ ಅಂಚಿನಲ್ಲಿರುವ ತೋಟಗಳಲ್ಲಿ ಕಂಡುಬರುತ್ತದೆ. ನೆಕ್ಟರಿನಿಡೇ (Nectariniidae) ಕುಟುಂಬಕ್ಕೆ ಸೇರಿದ ಇದನ್ನು ವೈಜ್ಞಾನಿಕವಾಗಿ ಲೆಪ್ಟೋಕೋಮಾ ಮಿನಿಮಾ (Leptocoma minima) ಎಂದು ಕರೆಯಲಾಗುತ್ತದೆ. ಈ ಹಕ್ಕಿ ಕೇವಲ 8 ಸೆಂ. ಮೀ ಉದ್ದವಿದ್ದು, ಗಂಡು ಹಕ್ಕಿ ಕಡುಗೆಂಪು ಬಣ್ಣದ ಬೆನ್ನು ಮತ್ತು ಹಸಿರು ಗರಿಗಳನ್ನು ಹೊಂದಿರುತ್ತದೆ, ಆದರೆ ಹೆಣ್ಣು ಹಕ್ಕಿ ಆಲಿವ್-ಹಸಿರು ಮೇಲ್ಭಾಗ ಮತ್ತು ಹಳದಿ ಬಣ್ಣದ ಕೆಳಭಾಗವನ್ನು ಹೊಂದಿರುತ್ತದೆ. ಮಧ್ಯಮ ಗಾತ್ರದ ಉದ್ದಗಿನ ತೆಳುವಾದ ಕೆಳಗೆ ಬಾಗಿದ ಕೊಕ್ಕುಗಳು ಮತ್ತು ಕುಂಚದಂತಹ ತುದಿಯನ್ನು ಹೊಂದಿರುವ ಕೊಳವೆಯಾಕಾರದ ನಾಲಿಗೆಗಳನ್ನು ಹೊಂದಿರುತ್ತವೆ, ಇವೆರಡೂ ಹೂಗಳಿಂದ ತನ್ನ ಆಹಾರವಾದ ಮಕರಂದವನ್ನು ಹೀರಲು ಸಹಕಾರಿಯಾಗಿದೆ. ಮಕರಂದವನ್ನು ಹೀರುವ ಮೂಲಕ ಹೂಗಳ ಪರಾಗಸ್ಪರ್ಶದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.  ಮರ, ಜರೀಗಿಡದ ಎಲೆಗಳು, ಪೊದೆಗಳಲ್ಲಿ ಅಥವಾ ಕೊಂಬೆಯ ಮೇಲೆ ನೇತಾಡುವ ಗೂಡನ್ನು ಕಟ್ಟಿ ಎರಡು ಮೊಟ್ಟೆಗಳನ್ನು ಇಟ್ಟು ಮರಿಮಾಡುತ್ತವೆ.

  ಅಡವಿ ಹರಟೆಮಲ್ಲ                                                                                                                                         ©  ಅರವಿಂದ ಕೂಡ್ಲ

ಭಾರತೀಯ ಉಪಖಂಡದ ನಗರಗಳು, ಉದ್ಯಾನಗಳು ಹಾಗೂ ಅರಣ್ಯ ಪ್ರದೇಶಗಳಲ್ಲಿ ಗುಂಪುಗಳಲ್ಲಿ ಕಂಡುಬರುವ ಈ ಅಡವಿ ಹರಟೆಮಲ್ಲ ಹಕ್ಕಿಯು ಲಿಯೋಥ್ರಿಚಿಡೆ (Leiothrichidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಅರ್ಗ್ಯ ಸ್ಟ್ರೈಟಾ (Argya striata) ಎಂದು ಕರೆಯಲಾಗುತ್ತದೆ. ದೇಹವು ಕಂದು ಮಿಶ್ರಿತ ಬೂದು ಬಣ್ಣದಲ್ಲಿದ್ದು ಹಳದಿ ಕೊಕ್ಕನ್ನು ಹೊಂದಿರುತ್ತದೆ. ಗಂಟಲು ಮತ್ತು ಎದೆಯ ಮೇಲೆ ಕೆಲವು ಮಚ್ಚೆಗಳಿರುತ್ತವೆ‌‌. ಕೀಟಗಳು, ‌ಧಾನ್ಯಗಳು, ಮಕರಂದ ಮತ್ತು ಹಣ್ಣುಗಳು ಇವುಗಳ ಆಹಾರವಾಗಿವೆ. ಆಹಾರ ಹುಡುಕುವಾಗ, ಕೆಲವು ಪಕ್ಷಿಗಳು ಎತ್ತರದ ಸ್ಥಳದಿಂದ ಕಾವಲುಗಾರರಾಗಿ ಕಾರ್ಯನಿರ್ವಹಿಸುತ್ತವೆ. ಅವು ಹಾವುಗಳಂತಹ ಪರಭಕ್ಷಕಗಳನ್ನು ಒಗ್ಗಟ್ಟಿನಿಂದ ಗುಂಪುಗೂಡಿ ತಮ್ಮನ್ನು ರಕ್ಷಿಸಿಕೊಳ್ಳುತ್ತವೆ. ಗೂಡನ್ನು ಮರದ ಮಧ್ಯದಲ್ಲಿ ನಿರ್ಮಿಸಿ, ದಟ್ಟವಾದ ಎಲೆಗಳ ರಾಶಿಯಲ್ಲಿ ಮರೆಮಾಡಲಾಗುತ್ತದೆ. ಸಾಮಾನ್ಯವಾಗಿ ಮೂರರಿಂದ ನಾಲ್ಕು ಹಸಿರು ನೀಲಿ ಬಣ್ಣದ ಮೊಟ್ಟೆಗಳನ್ನು ಇಟ್ಟು ಮರಿಮಾಡುತ್ತವೆ.

ಹಳದಿ ಟಿಟ್ಟಿಭ                                                                                     ©  ಅರವಿಂದ ಕೂಡ್ಲ

ಭಾರತೀಯ ಉಪಖಂಡಕ್ಕೆ ಸ್ಥಳೀಯವಾಗಿರುವ ಈ ಹಳದಿ ಟಿಟ್ಟಿಭ ಹಕ್ಕಿಯು ಪರ್ಯಾಯ ದ್ವೀಪದ ಒಣ ಬಯಲು ಪ್ರದೇಶಗಳಲ್ಲಿ ಕಂಡುಬರುತ್ತದೆ. ಚರಾಡ್ರಿಡೆ (Charadriidae) ಕುಟುಂಬಕ್ಕೆ ಸೇರುವ ಇದನ್ನು ವೈಜ್ಞಾನಿಕವಾಗಿ ವೆನೆಲ್ಲಸ್ ಮಲಬಾರಿಕಸ್ (Vanellus malabaricus) ಎಂದು ಕರೆಯಲಾಗುತ್ತದೆ. ಮಧ್ಯಮ ಗಾತ್ರದ ಈ ಹಕ್ಕಿಗಳು ಮಸುಕಾದ ಕಂದು ಬಣ್ಣದಲ್ಲಿದ್ದು, ಕಪ್ಪು ಕಿರೀಟವನ್ನು ಹೊಂದಿವೆ. ಗಲ್ಲ ಮತ್ತು ಗಂಟಲು ಕಪ್ಪು ಬಣ್ಣದ್ದಾಗಿದ್ದು, ಕಂದು ಕುತ್ತಿಗೆ ಮತ್ತು ಬಿಳಿ ಹೊಟ್ಟೆಯನ್ನು ಹೊಂದಿದೆ. ಕಪ್ಪು ಕೊಕ್ಕಿನ ಬುಡದಲ್ಲಿ ಹಳದಿ ಬಣ್ಣವಿರುತ್ತದೆ. ರೆಕ್ಕೆಯ ಒಳಭಾಗದಲ್ಲಿ ಬಿಳಿ ರೆಕ್ಕೆಪಟ್ಟಿ ಇರುತ್ತದೆ. ಇವುಗಳು ಕೀಟಗಳು, ನೆಲದ ಮೇಲೆ ಕಂಡುಬರುವ ಇತರ ಅಕಶೇರುಕಗಳು, ಜೀರುಂಡೆಗಳು, ಗೆದ್ದಲುಗಳು, ಮಿಡತೆಗಳು ಮತ್ತು ಮೃದ್ವಂಗಿಗಳನ್ನು ತಿನ್ನುತ್ತವೆ. ಹೊಲಗಳು, ಆಟದ ಮೈದಾನಗಳು ಮತ್ತು ನದಿ ದಂಡೆಗಳಂತಹ ತೆರೆದ ಪ್ರದೇಶಗಳಲ್ಲಿ ನೆಲದ ಮೇಲೆ ಗೂಡು ಮಾಡಿ, ನಾಲ್ಕು ಮೊಟ್ಟೆಗಳನ್ನು ಇಟ್ಟು ಮರಿಮಾಡುತ್ತವೆ. ಮೊಟ್ಟೆಗಳನ್ನು ಮರೆಮಾಚಲು ಬೆಣಚುಕಲ್ಲುಗಳು ಅಥವಾ ಮಣ್ಣಿನ ಉಂಡೆಗಳಿಂದ ಮುಚ್ಚುತ್ತವೆ.

ಕೆಂಗಂದು ಹರಟೆಮಲ್ಲ                                                                                                           ©  ಅರವಿಂದ ಕೂಡ್ಲ

ಪಶ್ಚಿಮ ಘಟ್ಟಗಳ ತೆರೆದ ಕಾಡು, ಪೊದೆಗಳು ಅಥವಾ ಹುಲ್ಲಿನ ಬೆಟ್ಟಗಳ ಇಳಿಜಾರುಗಳಿಗೆ ಸ್ಥಳೀಯವಾಗಿರುವ ಈ ಕೆಂಗಂದು ಹರಟೆಮಲ್ಲ ಹಕ್ಕಿಯು ಲಿಯೋಥ್ರಿಚಿಡೆ (Leiothrichidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಅರ್ಗ್ಯ ಸುಭೃಫ (Argya subrufa) ಎಂದು ಕರೆಯಲಾಗುತ್ತದೆ. ರೆಕ್ಕೆಯ ಗರಿಗಳು ಕೆಂಗಂದು ಬಣ್ಣದಲ್ಲಿದ್ದು, ಬೂದು ಬಣ್ಣದ ಹಣೆಯನ್ನು ಮತ್ತು ಉದ್ದನೆಯ ಬಾಲವನ್ನು ಹೊಂದಿರುತ್ತದೆ ಮತ್ತು ಹಣೆಯ ಮೇಲೆ ಕಪ್ಪು ಬಣ್ಣದ ಚುಕ್ಕೆಗಳನ್ನು ಹೊಂದಿರುತ್ತದೆ. ಕೆಳಭಾಗವು ಪ್ರಕಾಶಮಾನವಾದ ಕೆಂಗಂದು ಬಣ್ಣದ್ದಾಗಿರುತ್ತದೆ ಮತ್ತು ಗಂಟಲು ಮತ್ತು ಹೊಟ್ಟೆಯ ಮಧ್ಯಭಾಗವು ಮಸುಕಾಗಿರುತ್ತದೆ. ಗುಂಪುಗಳಲ್ಲಿ ಹರಟೆ ಹೊಡೆಯುವಂತೆ ಶಬ್ದ ಮಾಡುತ್ತಾ ತಮ್ಮ ಆಹಾರವಾದ ಕೀಟಗಳು, ಬೀಜಗಳು ಮತ್ತು ಹಣ್ಣುಗಳನ್ನು ಹುಡುಕುತ್ತವೆ. ಇದು ಹುಲ್ಲು ಮತ್ತು ಎಲೆಗಳನ್ನು ಬಳಸಿ ಸಣ್ಣ ಮರ ಅಥವಾ ಪೊದೆಗಳಲ್ಲಿ ಬಟ್ಟಲಿನಾಕಾರದ ಗೂಡುಗಳನ್ನು ನಿರ್ಮಿಸುತ್ತದೆ. ನೀಲಿ ಬಣ್ಣದ ಮೂರರಿಂದ ನಾಲ್ಕು ಮೊಟ್ಟೆಗಳನ್ನು ಇಟ್ಟು ಮರಿಮಾಡುತ್ತವೆ.

ಚಿತ್ರ : ಅರವಿಂದ ಕೂಡ್ಲ
ಲೇಖನ: ದೀಪ್ತಿ ಎನ್.

Spread the love
error: Content is protected.