ಮರುಗಿ ಜೀವಬಿಟ್ಟ ಮರ ನಾನು

ಸಾವಿರಾರು ವರುಷಗಳಿಂದ ಬೆಳೆದಿದ್ದೆ
ಹಚ್ಚ ಹಸಿರಿನಿಂದ ತುಂಬಿದ್ದೆ
ಸ್ವಚ್ಛ ಗಾಳಿ ನೀಡುತ್ತಿದ್ದೆ
ಜೀವಸಂಕುಲಕ್ಕೆ ಆಶ್ರಯವಾಗಿದ್ದೆ
ನನ್ನೊಡಲಿಗೆ ಬುಲ್ಡೋಜರ್ ಹಚ್ಯಾರ
ರುಂಡ-ಮುಂಡ ಕತ್ತರಿಸ್ಯಾರ
ಹಸುರು ಕಡೆದು ಉಸಿರು ನಿಲ್ಲಿಸಿ
ರಾತ್ರೋರಾತ್ರಿ ಮಾರಣಹೋಮ ಮಾಡ್ಯಾರ
ಪ್ರಾಣಿ ಪಕ್ಷಿಗಳ ಕಾಪಕ್ಕಲ ಕಂಗೆಡಿಸ್ಯಾರ
ಮ್ಯಾಲ ಅಭಿವೃದ್ಧಿಯ ಹೆಸರು ಕಟ್ಟ್ಯಾರ
ಮನುಷ್ಯರಲ್ರಪ್ಪೋ! ಇವರು
ತಾಯಿ ಕೊಂದು ಮಕ್ಕಳ ಅನಾಥ ಮಾಡಿದ ಹಂತಕರು
ಮಾತು ಬರಲ್ರಪ್ಪೋ!…… ನನಗ
ಮೌನವಾಗಿ ಆಮ್ಲಜನಕ ನೀಡುವ ಮೂಕಿ ನಾನು
ನಿಮ್ಮಲ್ಲರ ಜೀವನ ರಕ್ಷಿಸುವ ವೃಕ್ಷ ನಾನು
ಬುಲ್ಡೋಜರ್ ಹೊಡೆತಕ್ಕ ಮರುಗಿ ಜೀವಬಿಟ್ಟ ಮರ ನಾನು.
– ರಾಮಲಿಂಗ ಮಾಡಗಿರಿ
ರಾಯಚೂರು ಜಿಲ್ಲೆ