ಸೂಕ್ಷ್ಮಜೀವಿ ಜಗತ್ತು
ಚಿತ್ರ-೧: ಸೂಕ್ಷ್ಮ ಜೀವಿಗಳ ಗುಂಪುಗಳು.
ಭಾಗ – ೩: ಸೂಕ್ಷ್ಮ ಜೀವ ವೈವಿಧ್ಯತೆ
ಜೀವಿಗಳೆಂದರೆ ಅವು ಉಸಿರಾಡುತ್ತವೆ. ಪೋಷಣೆಗೆ ಆಹಾರವನ್ನು ಪಡೆಯುತ್ತವೆ. ತನ್ನದೇ ಸಂತತಿಯನ್ನು ಉತ್ಪಾದಿಸುತ್ತವೆ ಎಂದೆಲ್ಲಾ ವಿವರಿಸುತ್ತೇವೆ. ಉದಾಹರಣೆಗೆ ಮಾನವ, ಕಪ್ಪೆ, ಹಾವು, ಮೀನು, ತೆಂಗು, ಕಂಗು, ಪಾಚಿಗಳು, ಶಿಲೀಂಧ್ರಗಳು ಇತ್ಯಾದಿ. ನಿರ್ಜೀವ ವಸ್ತುಗಳೆಂದರೆ ಒಂದೇ ಕಡೆ ತಟಸ್ಥವಾಗಿರುತ್ತವೆ, ಉಸಿರಾಡುವುದಿಲ್ಲ, ಆಹಾರ ತೆಗೆದುಕೊಳ್ಳುವುದಿಲ್ಲ, ತನ್ನ ಸಂತತಿಯನ್ನು ಸೃಷ್ಟಿಸುವುದಿಲ್ಲ. ಉದಾಹರಣೆಗೆ ಕಲ್ಲು, ಮಣ್ಣು, ಇಟ್ಟಿಗೆ ಇತ್ಯಾದಿ. ಪ್ರಕೃತಿಯಲ್ಲಿನ ಆಗುಹೋಗುಗಳಿಗೆ ಜೀವಿ ಮತ್ತು ನಿರ್ಜೀವಿಗಳೆರಡೂ ಮುಖ್ಯ. ಕಣ್ಣಿಗೆ ಕಾಣಿಸುವ ಜೀವಿಗಳಲ್ಲಿ ಸಸ್ಯಗಳು ಮತ್ತು ಪ್ರಾಣಿಗಳು ಸೇರಿದ್ದರೆ ಕಣ್ಣಿಗೆ ಕಾಣಿಸದ ಸೂಕ್ಷ್ಮ ಜೀವಿಗಳಲ್ಲಿ ಅನೇಕ ಗುಂಪಿನ ಜೀವಿಗಳಿವೆ. ಜೀವ ವೈವಿಧ್ಯತೆಯಲ್ಲಿ ಸೂಕ್ಷ್ಮ ಜೀವಿಗಳದ್ದೇ ಅಗ್ರಸ್ಥಾನ. ಕೆಲವು ಸೂಕ್ಷ್ಮ ಜೀವಿಗಳು ಸಸ್ಯಗಳ ಗುಣಲಕ್ಷಣಗಳನ್ನು ಹೊಂದಿದ್ದರೆ ಮತ್ತೆ ಕೆಲವು ಪ್ರಾಣಿಗಳ ಗುಣಲಕ್ಷಣಗಳನ್ನು ಹೊಂದಿವೆ. ಉಳಿದಂತೆ ಇತರೆ ಜೀವಿಗಳಿಗೆ ತಮ್ಮದೇ ಆದ ವಿಶೇಷ ಗುಣಲಕ್ಷಣಗಳಿವೆ. ಸೂಕ್ಷ್ಮ ಜೀವಿಗಳಲ್ಲಿ ಹಲವಾರು ಗುಂಪುಗಳಿವೆ (ಚಿತ್ರ-೧).
ವೈರಸ್ಗಳು
ಇವು ಅತೀ ಸಣ್ಣದಾದ, ಸರಳವಾದ, ಯಾವುದೇ ಜೀವಕೋಶಗಳಿಲ್ಲದ, ಪ್ರೊಟಿನ್ ಮತ್ತು ನ್ಯೂಕ್ಲಿಯಿಕ್ ಅಮ್ಲಗಳ ಮಿಶ್ರಣಗಳಾಗಿದ್ದು, ಜೀವಕೋಶವಿರುವಂತಹ ಜೀವಿಗಳಲ್ಲಿ ರೋಗಕಾರಕಗಳಾಗಿವೆ. ಅಂದರೆ ಇವು ಕಡ್ಡಾಯವಾಗಿ ಪರಾವಲಂಬಿಗಳು. ವೈರಸ್ಗಳು ರೋಗಕಾರಕಗಳಾಗಿದ್ದು ಪ್ರಾಣಿಗಳು, ಸಸ್ಯಗಳು, ಪಾಚಿಗಳು, ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳಲ್ಲೂ ರೋಗವನ್ನುಂಟು ಮಾಡುತ್ತವೆ. ಸಂಪೂರ್ಣವಾಗಿ ತಯಾರಾಗಿರುವ ಪ್ರಬುದ್ಧ ವೈರಸ್ ಕಣಗಳನ್ನು ವಿರಿಯಾನ್ (Virion) ಎನ್ನುತ್ತಾರೆ. ಇವುಗಳಲ್ಲಿ ಡಿಆಕ್ಸಿರೈಬೋ ನ್ಯೂಕ್ಲಿಯಿಕ್ ಅಮ್ಲ (ಡಿಎನ್ಎ, Deoxyribonucleic acid, DNA) ಅಥವಾ ರೈಬೋನ್ಯೂಕ್ಲಿಯಿಕ್ ಆಮ್ಲವನ್ನು (ಆರ್ಎನ್ಎ, Ribonucleic acid, RNA) ವಂಶವಾಹಿಯಾಗಿಟ್ಟುಕೊಂಡು ಅದರ ಸುತ್ತ ಪ್ರೋಟಿನ್ ರಕ್ಷಣ ಕವಚವನ್ನು ಹೊಂದಿವೆ. ಇದನ್ನು ನ್ಯೂಕ್ಲಿಯೊ-ಕ್ಯಾಪ್ಸಡ್ (Nucleocapsid) ಎನ್ನುವರು.
ವೈರಸ್ಗಳು ಅತಿಥೇಯ ಜೀವಕೋಶಗಳ ಹೊರಗೆ ನಿರ್ಜೀವ ವಸ್ತುವಿನಂತಿದ್ದು, ಸೂಕ್ತ ಅತಿಥೇಯ ಜೀವಕೋಶಗಳು ಸಿಕ್ಕಾಗ ಅವುಗಳ ಒಳಹೊಕ್ಕು ತನ್ನದೇ ಸಂತತಿಯನ್ನು ಸೃಷ್ಠಿಸುತ್ತವೆ. ಇವು ಅತಿ ಸಣ್ಣ ಕಣಗಳಾಗಿದ್ದು ನ್ಯಾನೊಮೀಟರ್ ಗಳಲ್ಲಿ ಅಳೆಯುತ್ತಾರೆ. ಸಸ್ಯಗಳಲ್ಲಿ ರೋಗವುನ್ನುಂಟು ಮಾಡುವ ವೈರಸ್ಗಳೆಂದರೆ ತಂಬಾಕಿನ ಎಲೆ ಹಳದಿ ಮಚ್ಚೆಯ ರೋಗದ ವೈರಸ್ (Tobacco mosaic virus) (ಚಿತ್ರ-೨), ಗೋದಿ ಮಚ್ಚೆ ವೈರಸ್ (Wheat mosaic virus), ಬಾರ್ಲಿ ಪಟ್ಟೆ ಮಚ್ಚೆ ವೈರಸ್ (Barley stripe mosaic virus) ಮುಂತಾದವುಗಳು. ಅದೇ ರೀತಿ ಮಾನವನಲ್ಲಿ ರೋಗವುನ್ನುಂಟು ಮಾಡುವ ವೈರಸ್ಗಳೆಂದರೆ ಶೀತ ತರುವ ವೈರಸ್ (Rhino virus) ದಡಾರ ವೈರಸ್ (Measles), ಕೊರೊನ ವೈರಸ್ (Covid) ಮುಂತಾದವುಗಳು. ಹಾಗೆಯೇ ಇತರೆ ಪ್ರಾಣಿಗಳಲ್ಲಿ ನಾಯಿಗಳ ರೇಬಿಸ್ (Rabies), ಕುರಿಗಳ ಕಾಲು-ಬಾಯಿ ರೋಗ ವೈರಸ್ (Foot and mouth disease), ಕೋಳಿ ಜ್ವರ (Bird flu) ಮುಂತಾದವುಗಳು.
ದಂಡಾಣುಗಳು (Bacteria)
ಇವು ಏಕಕೋಶ ಜೀವಿಗಳು. ಬಹು ಪ್ರಾಚೀನ ಜೀವಿಗಳಾಗಿದ್ದು, ಪ್ರೊಕ್ಯಾರಿಯೋಟಾ ಗುಂಪಿಗೆ ಸೇರಿವೆ. ನಿರ್ದಿಷ್ಟ ಕೋಶಕೇಂದ್ರವಿಲ್ಲದಿದ್ದರೂ ವಂಶವಾಹಿನಿಯಾಗಿ ವೃತ್ತಾಕಾರದ ಡಿಎನ್ಎ ಯನ್ನು ಹೊಂದಿವೆ. ಜೀವಕೋಶದ ಗಾತ್ರ ಕೆಲವೇ ಮೈಕ್ರೋಮೀಟರ್ಗಳಲ್ಲಿರುತ್ತದೆ. ಜೀವಕೋಶದ ಆಕಾರದಲ್ಲಿ ಅಪಾರ ವೈವಿಧ್ಯವನ್ನು ಕಾಣಬಹುದು. ಸೂಕ್ಷ್ಮದರ್ಶಕ ಯಂತ್ರದಿಂದ ಮಾತ್ರ ಇವುಗಳ ಆಕಾರಗಳನ್ನು ನೋಡಲು ಸಾಧ್ಯ. ಕೆಲವು ಪ್ರಭೇದಗಳಲ್ಲಿ ವೃತ್ತಾಕಾರದ ಜೀವಕೋಶಗಳಿದ್ದರೆ ಮತ್ತೆ ಕೆಲವು ದಂಡಾಕಾರದ ಜೀವಕೋಶವನ್ನು ಹೊಂದಿವೆ (ಚಿತ್ರ-೩). ಅಲ್ಲದೆ ಸುರುಳಿಯಾಕಾರದ, ಚೌಕಾಕಾರದ, ನಕ್ಷತ್ರಾಕಾರದ, ತಂತಿಯಂತಹ ಜೀವಕೋಶಗಳನ್ನು ಹೊಂದಿರುವ ದಂಡಾಣುಗಳಿವೆ.
ಏಕಕೋಶ ಜೀವಿಗಳಾಗಿದ್ದರೂ ಕೆಲವು ಪ್ರಭೇದಗಳಲ್ಲಿ ಹಲವಾರು ಜೀವಕೋಶಗಳು ನಿರ್ದಿಷ್ಟ ಮಾದರಿಯಲ್ಲಿ ಜೋಡಿಸಲ್ಪಟ್ಟಿರುತ್ತವೆ. ಸ್ಟೆರ್ಪಟೋಕಾಕಸ್ ಎಂಬ ದಂಡಾಣುವಿನಲ್ಲಿ ವೃತ್ತಾಕಾರದ ಜೀವಕೋಶಗಳು ಒಂದಕ್ಕೊಂದು ಸಾಲಾಗಿ ಅಂಟಿಕೊಂಡಿದ್ದರೆ ಸ್ಟೈಫೈಲೊಕಾಕಸ್ ಎಂಬ ಪ್ರಭೇದದಲ್ಲಿ ವೃತ್ತಾಕಾರದ ಜೀವಕೋಶಗಳು ಒಂದಕ್ಕೊಂದು ಅಡ್ಡಾದಿಡ್ಡಿಯಾಗಿ ಅಂಟಿಕೊಂಡು ದ್ರಾಕ್ಷಿ ಗೊಂಚಲಿನಂತೆ ಕಾಣುವುವು. ಕೆಲವು ದಂಡಾಣು ಜೀವಕೋಶಗಳು ಅಂಟಿಕೊಂಡಿರುವಾಗ ರೈಲಿನ ಬೋಗಿಗಳಂತೆ ಕಾಣಿಸುತ್ತವೆ. ಕೆಲವು ಪ್ರಭೇದಗಳು ಕಶಾಂಗ (Flagella) ಗಳ ಸಹಾಯದಿಂದ ಓಡಾಡಬಲ್ಲವು. ಉಳಿದವು ನಿಶ್ಚಲವಾಗಿದ್ದು ಗಾಳಿ, ನೀರು ಮತ್ತು ಇತರೆ ವಾಹಕಗಳ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲ್ಪಡುತ್ತವೆ. ಅಲೈಂಗಿಕ ವಿಧಾನದ ಸಂತಾನೋತ್ಪತ್ತಿಗಾಗಿ ವಿಧಳನ (Binary fission) ಕ್ರಿಯೆಯ ಮೂಲಕ ಒಂದು ಜೀವಕೋಶವು ಎರಡಾಗಿ ಸೀಳಿ ಹೊಸ ಜೀವಕೋಶಗಳು ಉತ್ಪಾದಿಸಲ್ಪಡುತ್ತವೆ. ಕೆಲವು ಪ್ರಭೇದಗಳು ಪ್ರತಿಕೂಲ ಪರಿಸರದಲ್ಲಿ ಬೀಜಕಣ (Endospore)ಗಳನ್ನು ಉತ್ಪಾದಿಸುತ್ತವೆ. ಹೆಚ್ಚಿನ ದಂಡಾಣುಗಳು ಪೂತಿಜೀವಿಗಳಾಗಿ (Saprophytes) ಭೂಮಿಯಲ್ಲಿನ ಸಾವಯವ ಪದಾರ್ಥಗಳನ್ನು ಜೀರ್ಣಿಸಿ ಜೈವಿಕಭೂರಸಾಯನ ಚಕ್ರದಲ್ಲಿ ಪೋಷಕಾಂಶಗಳ ಬಳಕೆಗೆ ಸಹಕರಿಸುತ್ತವೆ. ಹಾಲು ಮೊಸರಾಗುವುದಕ್ಕೆ ಲ್ಯಾಕ್ಟೊಬ್ಯಾಸಿಲಸ್ ಎಂಬ ದಂಡಾಣುಗಳೇ ಕಾರಣ. ಮಾನವನಲ್ಲಿನ ದಂಡಾಣು ಸಮೂಹ (Human microbiome) ಅಗತ್ಯವಿರುವ ವಿಟಮಿನ್ ಉತ್ಪಾದನೆ ಸೇರಿದಂತೆ ಹಲವಾರು ಉಪಯುಕ್ತ ಕಾರ್ಯಗಳನ್ನು ಮಾಡುತ್ತವೆ(ಚಿತ್ರ-೪).
ಕೆಲವೇ ದಂಡಾಣು ಪ್ರಭೇದಗಳು ಸಸ್ಯ ಮತ್ತು ಪ್ರಾಣಿಗಳಲ್ಲಿ ರೋಗಕಾರಕಗಳಾಗಿವೆ. ಮಾನವನಲ್ಲಿ ಟೈಫಾಯಿಡ್ (Typhoid), ಕ್ಷಯ ರೋಗ (Tuberculosis), ಗೊನೊರಿಯಾ (Gonorrhea) ಮುಂತಾದ ರೋಗಗಳನ್ನುಂಟು ಮಾಡುತ್ತವೆ. ಸಾಮಾನ್ಯವಾಗಿ ಮಣ್ಣಿನಲ್ಲಿ ವಾಸಿಸುವ ಆಕ್ಟಿನೊಮೈಸಿಟಿಸ್ ಎಂಬ ದಂಡಾಣುಗಳ ಗುಂಪಿನ ಪ್ರಭೇದಗಳು ಪ್ರತಿಜೀವಕಗಳನ್ನು (Antibiotics) ತಯಾರಿಸುತ್ತವೆ. ಇವುಗಳನ್ನು ಪ್ರಯೋಗಶಾಲೆಯಲ್ಲಿ ಬೆಳಸಿ ಪ್ರತಿಜೀವಕಗಳನ್ನು ಉತ್ಪಾದಿಸಿ ಹಲವಾರು ರೋಗಗಳನ್ನು ನಿಯಂತ್ರಿಸಲು ಬಳಸಲಾಗುತ್ತಿದೆ. ಸೈಯನೊಬ್ಯಾಕ್ಟಿರಿಯಾ ಎಂಬ ಗುಂಪಿನ ಸದಸ್ಯರು ಪತ್ರ ಹರಿತ್ತನ್ನು ಹೊಂದಿದ್ದು ಸಸ್ಯಗಳಂತೆ ಆಹಾರ ಉತ್ಪಾದನೆಯಲ್ಲದೆ ಅಮ್ಲಜನಕವನ್ನು ತಯಾರಿಸಿ ವಾತಾವರಣಕ್ಕೆ ಬಿಡುಗಡೆಗೊಳಿಸುತ್ತವೆ.
ಬಾಕ್ಸ್ -೧: ಮಾನವನಲ್ಲಿ ಸೂಕ್ಷ್ಮ ಜೀವಿ ವೈವಿಧ್ಯ
ಮನುಷ್ಯನ ಚರ್ಮದಲ್ಲಿ ದೊಡ್ಡವರಿಗಿಂತ ಮಕ್ಕಳಲ್ಲಿರುವ ಸೂಕ್ಷ್ಮ ಜೀವಿಗಳು ಹೆಚ್ಚು ವೈವಿಧ್ಯ ಪೂರ್ಣವಾಗಿರುತ್ತವೆ. ಮನುಷ್ಯನ ಚರ್ಮದಲ್ಲಿ ಇರಬಹುದಾದ ದಂಡಾಣುಗಳ ಸಂಖ್ಯೆ 100,000 ಪ್ರತಿ ಚದರ ಸೆಂಮೀ. |
ಶಿಲೀಂಧ್ರಗಳು (ಬೂಷ್ಟು, Fungi)
ನಿರ್ದಿಷ್ಟ ಕೋಶಕೇಂದ್ರವಿರುವ ವಿಶಿಷ್ಟ ಜೀವಿಗಳಾಗಿದ್ದು ಯೂಕ್ಯಾರಿಯೋಟಾ ಗುಂಪಿಗೆ ಸೇರಿವೆ. ಈ ಗುಂಪಿನಲ್ಲಿ ಏಕಕೋಶಗಳಾದ ಯಿಸ್ಟ್ (Yeast) ಮತ್ತು ಹತ್ತಿ ಎಳೆಯಂತಹ ದೇಹದ ಕವಕಜಾಲ (Mycelium) ಹೊಂದಿರುವ ಜೀವಿಗಳಿರುತ್ತವೆ. ಅಣಬೆಗಳು ಸಹ ಇದೇ ಗುಂಪಿಗೆ ಸೇರುತ್ತವೆ (ಚಿತ್ರ-೫). ರೂಪ, ಬಣ್ಣ, ಆಕಾರ, ಗಾತ್ರ ಮುಂತಾದವುಗಳಲ್ಲಿ ಅತೀ ಹೆಚ್ಚು ವಿವಿಧತೆಯನ್ನು ಇವುಗಳಲ್ಲಿ ಕಾಣಬಹುದು. ಮೊಗ್ಗು ಉತ್ಪಾದನೆ (Budding), ತಂತುಗಳ ತುಂಡಾಗುವಿಕೆ (Fragmentation), ಬೀಜಕಣಗಳು (Spore) ಉತ್ಪಾದನೆಯ ಮೂಲಕ ಸಂತಾನಾಭಿವೃದ್ಧಿ ಮಾಡುತ್ತವೆ. ಅಲೈಂಗಿಕ ಮತ್ತು ಲೈಂಗಿಕ ವಿಧಾನದ ಸಂತಾನೋತ್ಪತ್ತಿ ಈ ಜೀವಿಗಳಲ್ಲಿದೆ. ಮಣ್ಣಿನಲ್ಲಿ ಅಥವಾ ಮರಮುಟ್ಟುಗಳಲ್ಲಿ ಎಳೆಯಂತಹ ತಂತುಗಳನ್ನು ಹರಡಿಕೊಂಡು ಪೋಷಾಕಾಂಶಗಳನ್ನು ಹೀರುತ್ತವೆ. ಸಾವಯವ ಪದಾರ್ಥಗಳನ್ನು ಜೀರ್ಣಿಸುವ ಕಿಣ್ವಗಳನ್ನು ಉತ್ಪಾದಿಸಿ ಜೈವಿಕ ಭೂ ರಸಾಯನ ಚಕ್ರದ ಪೋಷಾಕಾಂಶಗಳ ಮರುಪೂರಣೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಮಾನವನಿಗೆ ಸಹಕಾರಿಯಾದ ಪ್ರತಿಜೀವಕಗಳನ್ನು ಮತ್ತು ಕಿಣ್ವಗಳನ್ನು ಉತ್ಪಾದಿಸುತ್ತವೆ. ಅಣಬೆ ಕೃಷಿಯಲ್ಲಿ ಉಪಯುಕ್ತ ಅಣಬೆಗಳನ್ನು ಬೆಳೆಸಿ ಪ್ರೊಟಿನ್ಯುಕ್ತ ಆಹಾರವನ್ನಾಗಿ ಬಳಸಲಾಗುತ್ತಿದೆ.
ಶೈವಲಗಳು (ಪಾಚಿಗಳು, Algae)
ನೀರು ಮತ್ತು ತೇವಾಂಶವಿರುವ ಮಣ್ಣಿನಲ್ಲಿ ಬೆಳೆಯುವಂತಹ ಜೀವಿಗಳಿವು. ಸಸ್ಯಗಳ ಗುಂಪಿಗೆ ಸೇರಿದ್ದು, ಕೆರೆಯ ಸಿಹಿನೀರು ಮತ್ತು ಸಮುದ್ರದ ಉಪ್ಪು ನೀರಿನಲ್ಲಿಯೂ ಜೀವಿಸುತ್ತವೆ. ಇವು ಸಹ ಜೀವಕೋಶದಲ್ಲಿ ನಿಜ ಕೋಶಕೇಂದ್ರವನ್ನು ಹೊಂದಿರುವುದರಿಂದ ಯೂಕ್ಯಾರಿಯೋಟಾ ಗುಂಪಿಗೆ ಸೇರಿವೆ. ಹಸಿರು ಬಣ್ಣದ ಜೀವಿಗಳಾಗಿದ್ದು, ತಮ್ಮ ನಿರ್ನಾಳ ಸಸ್ಯಕಾಂಡದಲ್ಲಿ ವೈವಿಧ್ಯಮಯವಾಗಿವೆ (ಚಿತ್ರ-೬). ವಿವಿಧ ಆಕಾರಗಳಲ್ಲಿದ್ದು ಹಲವಾರು ವರ್ಣ ದ್ರವ್ಯಗಳನ್ನು ಹೊಂದಿವೆ. ಎಲೆಗಳಂತಹ ಹಲವಾರು ಆಕಾರಗಳನ್ನು ಹೊಂದಿದ್ದು, ಇನ್ನೂ ಸರಿಯಾಗಿ ವಿಕಾಸ ಹೊಂದಿರದ ಕಾಂಡ ಮತ್ತು ಬೇರುಗಳನ್ನು ಸಹ ಪಡೆದಿವೆ. ಎಲೆಗಳ ಹಸಿರು ಬಣ್ಣಕ್ಕೆ ಕಾರಣವಾದ ಪತ್ರಹರಿತ್ತು (Chlorophyll) ಈ ಜೀವಿಗಳ ಜೀವಕೋಶದಲ್ಲಿಯೂ ಇದ್ದು, ದ್ಯುತಿಸಂಶ್ಲೇಷಣೆ (Photosynthesis) ಮೂಲಕ ತಮ್ಮ ಆಹಾರವನ್ನು ಉತ್ಪಾದಿಸುತ್ತವೆ. ಅಲೈಂಗಿಕ ಮತ್ತು ಲೈಂಗಿಕ ವಿಧಾನಗಳಿಂದ ಸಂತಾನಾಭಿವೃದ್ಧಿ ಮಾಡುತ್ತವೆ. ಕೆರೆ, ಸರೋವರ, ನದಿ ಮತ್ತು ಸಮುದ್ರಗಳಲ್ಲಿ ವಾಸಿಸುತ್ತವೆ. ಯಥೇಚ್ಛವಾಗಿ ಆಮ್ಲಜನಕವನ್ನು ಉತ್ಪಾದಿಸುತ್ತವೆ. ಜೈವಿಕ ಭೂರಸಾಯನ ಚಕ್ರದಲ್ಲಿ ಉತ್ಪಾದಕರ (Producers) ಸ್ಥಾನ ನಿರ್ವಹಿಸುತ್ತವೆ. ಹೆಚ್ಚಿನ ಶೈವಲಗಳು ಜಲಚರಗಳು ಮತ್ತು ಜಲಪಕ್ಷಿಗಳಿಗೆ ಆಹಾರವಾಗುತ್ತವೆ. ಕೆಲವು ಪಾಚಿಗಳಲ್ಲಿ ವಿಷವಸ್ತು ಉತ್ಪಾದನೆಯಾಗಿ ನೀರಿನಲ್ಲಿ ಮೀನುಗಳ ಸಾವಿಗೆ ಕಾರಣವಾಗಬಹುದು. ಡಯಾಟಮ್, ಕಂದು ಪಾಚಿ, ಕೆಂಪು ಪಾಚಿ, ಡೈನೋಫ್ಲಾಜಿಲೇಟ್ಸ್ ಮುಂತಾದವುಗಳು ಈ ಗುಂಪಿನ ಸದಸ್ಯರು.
ಅಧಿಮಜೀವಿಗಳು (ಪ್ರೊಟೊಜೋವಾ, Protozoa)
ಅಕಶೇರುಕಗಳ ಗುಂಪಿಗೆ ಸೇರಿದ ಸೂಕ್ಷ್ಮ ಜೀವಿಗಳಿವು. ಅಸಂಘಟಿತ ಕೋಶಗಳುಳ್ಳ ಜೀವಿಗಳಾಗಿದ್ದು, ನಿಜ ಕೋಶಕೇಂದ್ರವನ್ನು ಹೊಂದಿರುತ್ತವೆ. ಹಾಗಾಗಿ ಯೂಕ್ಯಾರಿಯೊಟಾ ಗುಂಪಿಗೆ ಸೇರಿದ್ದು, ನೀರು ಮತ್ತು ಸಾವಯವ ಪದಾರ್ಥಗಳಿರುವಲ್ಲಿ ಜೀವಿಸುತ್ತವೆ. ಯಾವುದೇ ಆಕಾರವಿಲ್ಲದ ಅಮಿಬಾದಂತಹ ಜೀವಿಗಳಲ್ಲದೆ ನಿರ್ದಿಷ್ಟ ಆಕಾರವಿರುವ ಪ್ಯಾರಮೀಸಿಯಂಗಳು ಈ ಗುಂಪಿನ ಸದಸ್ಯರು. ವಿವಿಧ ಆಕಾರ ಮತ್ತು ಗಾತ್ರಗಳಲ್ಲಿದ್ದು ಹೆಚ್ಚಿನವು ಇತರೆ ಜೀವಿಗಳನ್ನು (ಸಸ್ಯ ತೇಲುಜೀವಿ, Phytoplankton) ತಿಂದು ಬದುಕುತ್ತವೆ. ಈ ಗುಂಪಿನ ಹೆಚ್ಚಿನ ಸದಸ್ಯರು ನೀರಿನಲ್ಲಿ ತೇಲುತ್ತಾ ಬದುಕುವುದರಿಂದ ತೇಲುಪ್ರಾಣಿ (Zooplankton) ಎಂದು ಕರೆಯುವರು. ಜೈವಿಕ ಭೂರಸಾಯನ ಚಕ್ರದಲ್ಲಿ ಪ್ರಾಥಮಿಕ ಭಕ್ಷಕ (Primary consumers) ಗಳ ಗುಂಪಿಗೆ ಸೇರುತ್ತವೆ. ಕೆಲವು ಪ್ರಭೇದಗಳು ಪರಾವಲಂಬಿಗಳಾಗಿ ಮಲೇರಿಯಾದಂತಹ ರೋಗ ತರುತ್ತವೆ. ಉದಾಹರಣೆಗೆ ಅಮಿಬಾ (ಚಿತ್ರ-೭), ಪ್ಲಾಸ್ಮೋಡಿಯಂ, ವೊರ್ಟಿಸೆಲ್ಲಾ ಮುಂತಾದವುಗಳು.
ಕಲ್ಲುಹೂಗಳು (Lichens)
ಇವು ಶೈವಲ ಮತ್ತು ಶಿಲೀಂಧ್ರಗಳ ಸಹಜೀವನ (Symbiosis) ವಿರುವ ವಿಶಿಷ್ಟ ಜೀವಿಗಳು. ಕಲ್ಲು ಬಂಡೆಗಳ ಮೇಲೆ ಅಥವಾ ಮಣ್ಣಿನಲ್ಲಿ ಹರಡಿಕೊಂಡಂತೆ ಬೆಳೆಯುವ ಇವು ತಮ್ಮದೆ ವಿಶೇಷ ಗುಣಗಳನ್ನು ಹೊಂದಿವೆ (ಚಿತ್ರ-೮). ಇಲ್ಲಿರುವ ಶಿಲೀಂಧ್ರಗಳು ಪೋಷಕಾಂಶ ಮತ್ತು ನೀರನ್ನು ಹೀರಿಕೊಂಡು ಶೈವಲಗಳಿಗೆ ತಲುಪಿಸುತ್ತವೆ. ಶೈವಲಗಳು ತಮ್ಮಲ್ಲಿರುವ ಪತ್ರಹರಿತ್ತನ್ನು ಉಪಯೋಗಿಸಿಕೊಂಡು ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಆಹಾರವನ್ನು ಉತ್ಪಾದಿಸಿ ಶಿಲೀಂಧ್ರಗಳೊಂದಿಗೆ ಹಂಚಿಕೊಳ್ಳುತ್ತವೆ. ಪ್ರಕೃತಿಯ ಮೂಸೆಯಲ್ಲಿ ಮೂಡಿಬಂದ ಆಶ್ಚರ್ಯಕರವಾದ ಸಹಜೀವನವಿದು. ಕಲ್ಲು ಹೂಗಳು ಬಂಡೆಗಳನ್ನು ನಿಧಾನವಾಗಿ ಜೀರ್ಣಿಸುತ್ತಾ ಮಣ್ಣಾಗಿ ಮಾಡುತ್ತವೆ. ಕಲ್ಲು ಹೂಗಳು ತಾವು ಬೆಳೆಯುವ ಜಾಗದ ಪರಿಸರದ ಆರೋಗ್ಯವನ್ನು ಸೂಚಿಸುವ ಜೀವಿಗಳಾಗಿವೆ. ಮಾನವ ಇವುಗಳನ್ನು ಸಾಂಬಾರು ಪದಾರ್ಥವಾಗಿ ಉಪಯೋಗಿಸುತ್ತಾರೆ. ಅಲೈಂಗಿಕ ಮತ್ತು ಲೈಂಗಿಕ ವಿಧಾನಗಳ ಮೂಲಕ ವಂಶಾಭಿವೃದ್ಧಿ ಮಾಡುತ್ತವೆ.
ಹುಳುಗಳು (Helminths): ವಿವಿಧ ರೀತಿಯ ಅಕಶೇರುಕ ಗುಂಪಿನ ಸಣ್ಣ ಹುಳುಗಳನ್ನು ಸಹ ಸೂಕ್ಷ್ಮ ಜೀವಿಗಳೆಂದು ಪರಿಗಣಿಸಲಾಗಿದೆ (ಚಿತ್ರ-೯). ಜಂತುಹುಳು, ಲಾಡಿಹುಳು ಮುಂತಾದವುಗಳು ಈ ಗುಂಪಿಗೆ ಸೇರುತ್ತವೆ. ಕೆಲವು ಸಸ್ಯಗಳಲ್ಲಿ ಮತ್ತು ಪ್ರಾಣಿಗಳಲ್ಲಿ ರೋಗವನ್ನುಂಟು ಮಾಡುತ್ತವೆ.
ಈ ರೀತಿ ಸೂಕ್ಷ್ಮ ಜೀವಿಗಳು ವಿಶಿಷ್ಟ ಗುಂಪುಗಳಾಗಿ ಜೀವಗೋಳದಲ್ಲಿವೆ. ಇವುಗಳ ವೈವಿಧ್ಯ ಅಗಾಧ. ಭೂಮಿಯಲ್ಲಿನ ಜೀವರಾಶಿಗಳ ಅಧ್ಯಯನದಿಂದ ಎಷ್ಟು ಸೂಕ್ಷ್ಮ ಜೀವಿಗಳಿರಬಹುದೆಂದು ಅಂದಾಜಿಸಲಾಗಿದೆ. ಈ ಮಾಹಿತಿಯನ್ನು ಪರಿಗಣಿಸಿದರೆ ನಾವು ಕಂಡುಹಿಡಿದು ಅಧ್ಯಯನ ಮಾಡಿರುವ ಸೂಕ್ಷ್ಮ ಜೀವಿಗಳು ಬಹಳಾ ಕಡಿಮೆ (ಕೋಷ್ಟಕ-೧). ಹಲವು ಲಕ್ಷಗಳಷ್ಟು ಸೂಕ್ಷ್ಮ ಜೀವಿಗಳನ್ನು ಇನ್ನೂ ಕಂಡುಹಿಡಿಯಬೇಕಿದೆ. ಇವುಗಳು ನಿಸರ್ಗದ ಮೂಸೆಯಲ್ಲಿ ಮೂಡಿಬಂದ ಅದ್ಭುತ ಜೀವಿಗಳು. ಭೂಮಿಯಲ್ಲಿ ಸೂಕ್ಷ್ಮ ಜೀವಿ ವೈವಿಧ್ಯಕ್ಕೆ ಅಗ್ರಸ್ಥಾನವಿದೆ.
ಕೋಷ್ಟಕ-೧: ಭೂಮಿಯಲ್ಲಿರಬಹುದಾದ ಸೂಕ್ಷ್ಮ ಜೀವಿಗಳ ಅಂದಾಜು ಸಂಖ್ಯೆ
ಗುಂಪು | ಅಂದಾಜು ಒಟ್ಟು ಪ್ರಭೇದಗಳು | ಗುರುತಿಸಿರುವ ಪ್ರಭೇದಗಳು | ಶೇಕಡ (%) |
ವೈರಸ್ಗಳು Viruses | 500,000 | 5,000 | 1 |
ದಂಡಾಣುಗಳು Bacteria | 30 ಲಕ್ಷ | 4,000 | 0.1 |
ಶೈವಲಗಳು Algae | 350,000 | 40,000 | 11 |
ಶಿಲಿಂಧ್ರಗಳು Fungi | 15 ಲಕ್ಷ | 70,000 | 5 |
ಲೇಖನ: ಡಾ. ಎಸ್. ಶಿಶುಪಾಲ
ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ ಜಿಲ್ಲೆ
ಪ್ರಾಧ್ಯಾಪಕರು
ಸೂಕ್ಷ್ಮಜೀವಿಶಾಸ್ತ್ರ ವಿಭಾಗ
ದಾವಣಗೆರೆ ವಿಶ್ವವಿದ್ಯಾನಿಲಯ
ಶಿವಗಂಗೋತ್ರಿ, ದಾವಣಗೆರೆ