ಪ್ರಕೃತಿ ಬಿಂಬ

ಪ್ರಕೃತಿ ಬಿಂಬ

            ಬಿಳಿ ಕತ್ತಿನ ಮಿಂಚುಳ್ಳಿ                                                                                ©  ರಾಘವೇಂದ್ರ

ಏಷ್ಯಾ, ಆಫ್ರಿಕಾ ಮತ್ತು ಕೆಲವು ಖಂಡಗಳ ಕರಾವಳಿ ಪ್ರದೇಶ, ವಿಶೇಷವಾಗಿ ಮ್ಯಾಂಗ್ರೋವ್ ಜೌಗು ಪ್ರದೇಶ, ಕೃಷಿಭೂಮಿ, ತೆರೆದ ಕಾಡುಪ್ರದೇಶ, ಹುಲ್ಲುಗಾವಲು ಮತ್ತು ಉದ್ಯಾನಗಳಲ್ಲಿ ಕಂಡುಬರುವ ಈ ಮಧ್ಯಮ ಗಾತ್ರದ ಬಿಳಿ ಕತ್ತಿನ ಮಿಂಚುಳ್ಳಿಯು ಅಲ್ಸೆಡಿನಿಡೆ (Alcedinidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಟೋಡಿರಾಮ್ಫಸ್ ಕ್ಲೋರಿಸ್ (Todiramphus chloris) ಎಂದು ಕರೆಯಲಾಗುತ್ತದೆ. ದೇಹದ ಮೇಲ್ಭಾಗವು ಹಸಿರು ಮಿಶ್ರಿತ ನೀಲಿ ಬಣ್ಣವಿದ್ದು, ತಳಭಾಗವು ಬಿಳಿಯಾಗಿರುತ್ತದೆ. ಇದು ಕತ್ತಿನ ಸುತ್ತಲೂ ಬಿಳಿಯ ಬಣ್ಣವನ್ನು ಹಾಗೂ ಕಪ್ಪಾದ ಕೊಕ್ಕನ್ನು ಹೊಂದಿದ್ದು, ಕಣ್ಣಿನ ಹತ್ತಿರ ಕಪ್ಪು ಪಟ್ಟಿಯಿರುತ್ತದೆ. ಮರದ ರಂಧ್ರಗಳು, ಬೇರೆ ಪಕ್ಷಿಗಳು ಮಾಡಿ ಹೋದ ಪೊಟರೆಗಳನ್ನು ಆಕ್ರಮಿಸಿ ಅಥವಾ ದಂಡೆಯಲ್ಲಿ ತಾವೇ ಮಾಡಿದ ಬಿಲಗಳಲ್ಲಿ ಗೂಡು ಕಟ್ಟುತ್ತದೆ. ಕರಾವಳಿ ಪ್ರದೇಶದಲ್ಲಿ ಸಿಗುವ ಸಣ್ಣ ಏಡಿಗಳು ಮತ್ತು ಸೀಗಡಿಗಳು ಇದರ ನೆಚ್ಚಿನ ಆಹಾರವಾಗಿವೆ. ಕೀಟಗಳು, ಜೇಡಗಳು, ಎರೆಹುಳುಗಳು, ಕಪ್ಪೆಗಳು, ಸಣ್ಣ ಹಲ್ಲಿಗಳು ಸೇರಿದಂತೆ ವಿವಿಧ ರೀತಿಯ ಜೀವಿಗಳನ್ನೂ ಸಹ ತಿನ್ನುತ್ತದೆ.

                                    ಮೂರುಬೆರಳಿನ ಮಿಂಚುಳ್ಳಿ                                                                                         ©  ರಾಘವೇಂದ್ರ                              

ದಕ್ಷಿಣ ಏಷ್ಯಾದ ಅರಣ್ಯ ಪ್ರದೇಶಗಳಲ್ಲಿನ ತೊರೆ ಮತ್ತು ಕೆರೆಗಳ ಬಳಿ ಕಾಣಸಿಗುವ ಈ ಮಿಂಚುಳ್ಳಿಯು ಅಲ್ಸೆಡಿನಿಡೆ (Alcedinidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಸೀಕ್ಸ್ ಎರಿಥಾಕಾ (Ceyx erithaca) ಎಂದು ಕರೆಯಲಾಗುತ್ತದೆ. ಗಾಢ ನೀಲಿ ಬಣ್ಣದ ಬೆನ್ನು, ರೆಕ್ಕೆಗಳು ಹಾಗೂ ತೆಳು ಕಿತ್ತಳೆ ಬಣ್ಣದ ಕೆಳಭಾಗವನ್ನು ಹೊಂದಿದ್ದು, ಹಣೆಯ ಮೇಲೆ ಕಪ್ಪು ಚುಕ್ಕೆಯನ್ನು ಕಾಣಬಹುದಾಗಿದೆ. ತಲೆಯ ಮೇಲ್ಭಾಗವು ಕೆಂಪು ಬಣ್ಣದಲ್ಲಿದ್ದು, ಗಲ್ಲ ಮತ್ತು ಗಂಟಲು ಬಿಳಿಯ ಬಣ್ಣದ್ದಾಗಿದೆ. ಕಠಾರಿಯಂತಹ ಉದ್ದನೆಯ ಕೆಂಪು ಕೊಕ್ಕನ್ನು ಈ ಹಕ್ಕಿಯು ಹೊಂದಿದೆ. ವಿವಿಧ ಬಗೆಯ ಕೀಟಗಳು, ಏಡಿ, ಮೀನು, ಕಪ್ಪೆ ಮತ್ತು ಹಲ್ಲಿಗಳು ಇದರ ಆಹಾರವಾಗಿವೆ.

                                   ಜುಟ್ಟಿನ ಮಿಂಚುಳ್ಳಿ                                                             ©  ರಾಘವೇಂದ್ರ

ದಕ್ಷಿಣ ಏಷ್ಯಾದ ಬೆಟ್ಟಗಳ ತಪ್ಪಲಿನಲ್ಲಿ ಹಾಗೂ ನದಿಗಳ ಸಮೀಪದಲ್ಲಿ ಕಾಣಸಿಗುವ ಈ ಮಿಂಚುಳ್ಳಿಯು ಅಲ್ಸೆಡಿನಿಡೆ (Alcedinidae) ಕುಟುಂಬಕ್ಕೆ ಸೇರುತ್ತದೆ‌. ಇದನ್ನು ವೈಜ್ಞಾನಿಕವಾಗಿ ಮೆಗಾಸೆರಿಲ್ ಲುಗುಬ್ರಿಸ್ (Megaceryle lugubris) ಎಂದು ಕರೆಯಲಾಗುತ್ತದೆ. ಇದರ ದೇಹವು ಕಪ್ಪು ಮತ್ತು ಬಿಳಿ ಬಣ್ಣದಲ್ಲಿದ್ದು ತಲೆಯ ಮೇಲೆ ಜುಟ್ಟನ್ನು ಹಾಗೂ ಎದೆಯ ಮೇಲೆ ಕಪ್ಪು ಮಚ್ಚೆಗಳನ್ನು ಹೊಂದಿರುತ್ತದೆ. ನದಿಗಳಲ್ಲಿ ಸಿಗುವ ಮೀನು, ಏಡಿ ಮತ್ತು ಕಪ್ಪೆಗಳಂತಹ ಪ್ರಾಣಿಗಳು ಇವುಗಳ ಆಹಾರವಾಗಿವೆ.

  ಕರಿತಲೆ ಮಿಂಚುಳ್ಳಿ                                                                                    ©  ರಾಘವೇಂದ್ರ

ಏಷ್ಯಾ ಖಂಡದ ಭಾರತ, ಚೀನಾ, ಕೊರಿಯಾ ಮತ್ತು ಇತರೆ ದೇಶಗಳ ಕರಾವಳಿ ಪ್ರದೇಶ, ಮ್ಯಾಂಗ್ರೋವ್, ನದಿಗಳಲ್ಲಿ ವಾಸಿಸುವ ಈ ಕರಿತಲೆ ಮಿಂಚುಳ್ಳಿಯು ಅಲ್ಸೆಡಿನಿಡೆ (Alcedinidae) ಕುಟುಂಬಕ್ಕೆ ಸೇರುತ್ತದೆ. ಇದನ್ನು ವೈಜ್ಞಾನಿಕವಾಗಿ ಹಾಲ್ಸಿಯಾನ್ ಪಿಲೇಟಾ (Halcyon pileata) ಎಂದು ಕರೆಯಲಾಗುತ್ತದೆ. ದೇಹದ ಮೇಲ್ಭಾಗವು ನೇರಳೆ ಮಿಶ್ರಿತ ನೀಲಿ ಬಣ್ಣವಿದ್ದು, ತಳಭಾಗವು ತೆಳು ಕಿತ್ತಳೆ ಬಣ್ಣದ್ದಾಗಿರುತ್ತದೆ. ಕಪ್ಪು ತಲೆ, ಕೆಂಪು ಬಣ್ಣದ ಕೊಕ್ಕು ಹಾಗೂ ಬಿಳಿಯ ಗಂಟಲನ್ನು ಹೊಂದಿದೆ. ಹಾರಾಡುವಾಗ ರೆಕ್ಕೆಯ ಮೇಲಿನ ಬಿಳಿಯ ಪಟ್ಟೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ನೀರಿನ ಸಮೀಪದ ದಂಡೆಯ ಮಣ್ಣಿನಲ್ಲಿ ಸುರಂಗದಂತಹ ಪೊಟರೆಗಳನ್ನು ಮಾಡಿ ಮೊಟ್ಟೆ ಇಡುತ್ತದೆ. ಮೀನು, ದೊಡ್ಡ ಕೀಟಗಳು, ಏಡಿಗಳು, ಸೀಗಡಿ ಮತ್ತು ಹಲ್ಲಿಗಳು ಇದರ ಆಹಾರವಾಗಿವೆ.  

ಚಿತ್ರಗಳು : ರಾಘವೇಂದ್ರ
        ಲೇಖನ : ದೀಪ್ತಿ ಎನ್.

Spread the love
error: Content is protected.