ಪ್ರಕೃತಿ ಬಿಂಬ
ಬಿಳಿ ಕತ್ತಿನ ರಾಟವಾಳ © ಕಾಂತರಾಜು ಡಿ.
ರಾಜ್ಯದೆಲ್ಲೆಡೆ ಕಂಡುಬರುವ ಗುಬಚ್ಚಿಗಿಂತ ಚಿಕ್ಕದಾದ, ಮಾಸಲು ಕಂದು ಬಣ್ಣವನ್ನು ಹೊಂದಿರುವ ಈ ಬಿಳಿ ಕತ್ತಿನ ರಾಟವಾಳ ಪಕ್ಷಿಯ ಕೆನ್ನೆ, ಕತ್ತು, ಬೆನ್ನು ಹಾಗೂ ತಳಭಾಗ ಬಿಳಿ ಇದ್ದು, ಬಾಲದ ತುದಿ ಕಪ್ಪು ಹಾಗೂ ಕೊಕ್ಕು ಮತ್ತು ಕಾಲುಗಳು ಬೂದಾಗಿರುತ್ತವೆ. ಕುರುಚಲು ಕಾಡು, ಕೃಷಿಭೂಮಿಗಳಲ್ಲಿ ಕಾಣಸಿಗುವ ಇವುಗಳು ಎಸ್ಟ್ರಿಲಿಡೇ (Estrilididae) ಕುಟುಂಬಕ್ಕೆ ಸೇರುತ್ತವೆ. ಈ ಪಕ್ಷಿಗಳನ್ನು ವೈಜ್ಞಾನಿಕವಾಗಿ ಲಾಂಕ್ಯುರಾ ಮಲಬಾರಿಕಾ (Lonchura malabarica) ಎಂದು ಕರೆಯಲಾಗುತ್ತದೆ. ಹುಲ್ಲಿನಿಂದ ಕೂಡಿದ ಚಂಡಿನಾಕಾರದ ಗೂಡನ್ನು ಕಟ್ಟುವುದು ವಿಶೇಷವಾಗಿದೆ.
ನಮ್ಮ ರಾಜ್ಯದೆಲ್ಲೆಡೆ ಕಂಡುಬರುವ ಈ ಗುಬಚ್ಚಿಗಿಂತ ಚಿಕ್ಕದಾದ, ಬಿಳಿ ಕಂದು ಬಣ್ಣದ ಚುಕ್ಕೆ ರಾಟವಾಳ ಪಕ್ಷಿಯು ಕುರುಚಲು ಕಾಡು, ಕೃಷಿ ಭೂಮಿ, ತೋಟ, ಬಯಲು ಪ್ರದೇಶ, ಉದ್ಯಾನವನ, ಜನವಸತಿ ಪ್ರದೇಶಗಳಲ್ಲಿ ಕಾಣಸಿಗುತ್ತದೆ. ಎಸ್ಟ್ರಿಲಿಡೇ (Estrilididae) ಕುಟುಂಬಕ್ಕೆ ಸೇರುವ ಇದನ್ನು ವೈಜ್ಞಾನಿಕವಾಗಿ ಲಾಂಕ್ಯೂರಾ ಪಂಕ್ಟುಲೇಟಾ (Lonchura punctulata) ಎಂದು ಕರೆಯಲಾಗುತ್ತದೆ. ಹುಲ್ಲು, ಹತ್ತಿ ಮತ್ತು ನಾರುಗಳಿಂದ ಕೂಡಿದ ಚೆಂಡಿನಾಕಾರದ ಗೂಡು ಕಟ್ಟಿ ಪಕ್ಕದಿಂದ ಅದಕ್ಕೆ ಒಳದಾರಿಯನ್ನೂ ಮಾಡಿರುತ್ತದೆ. ಇವುಗಳಿಗೆ ಗಟ್ಟಿ ಧಾನ್ಯದ ಬೀಜಗಳನ್ನು ಒಡೆಯಲು ಅನುಕೂಲಕರವಾದಂತಹ ಬಲವಾದ ಕೊಕ್ಕುಗಳಿವೆ.
ಭಾರತಕ್ಕೆ ಸೀಮಿತವಾಗಿರುವ ಈ ಗುಬ್ಬಚ್ಚಿ ಗಾತ್ರದ ಹಕ್ಕಿಗೆ ಎದೆ, ಹೊಟ್ಟೆ ಹಳದಿ ಬಣ್ಣದ್ದಾಗಿದ್ದು, ತಲೆ ಹೊಳೆಯುವ ನೀಲಿ ಬಣ್ಣ ಹಾಗೂ ರೆಕ್ಕೆ ಮತ್ತು ಬಾಲದ ಪುಕ್ಕಗಳು ನೇರಳೆ ಬಣ್ಣದ್ದಾಗಿರುತ್ತವೆ. ಆದರೆ ಹೆಣ್ಣು ಹಕ್ಕಿಗೆ ಈ ಹೊಳೆಯುವ ಬಣ್ಣಗಳಿರುವುದಿಲ್ಲ. ಕುರುಚಲು ಕಾಡು, ಪರ್ಣಪಾತಿ ಕಾಡು ಹಾಗೂ ಹೂದೋಟಗಳಲ್ಲಿ ಕಂಡುಬರುವ ಇವುಗಳು ನೆಕ್ಟರಿನಿಡೇ (Nectariniidae) ಕುಟುಂಬಕ್ಕೆ ಸೇರುತ್ತವೆ. ಇದನ್ನು ವೈಜ್ಞಾನಿಕವಾಗಿ ನೆಕ್ಟರಿನಿಯ ಜೈಲೋನಿಕ (Nectarinia zeylonica) ಎಂದು ಕರೆಯಲಾಗುತ್ತದೆ. ಅತಿ ಹಗುರವಾದ ಹಕ್ಕಿಯಾದ್ದರಿಂದ ಹೂವಿನ ತೊಟ್ಟು, ದಳಗಳ ಮೇಲೆಲ್ಲಾ ರೆಕ್ಕೆ ಬಡಿಯುತ್ತಾ ಕುಳಿತು ಮಕರಂದವನ್ನು ಕುಡಿಯುತ್ತದೆ. ಹುಲ್ಲು, ಜೇಡರ ಬಲೆ, ಎಲೆಗಳಿಂದ ಕೂಡಿದ ನೇತಾಡುವ ಗೂಡಿಗೆ ಒಂದು ಪಕ್ಕದಲ್ಲಿ ಪ್ರವೇಶ ದ್ವಾರವಿರುತ್ತದೆ.
ಭಾರತದಲ್ಲಿ ಸ್ಥಳೀಯವಾಗಿ ಕಂಡುಬರುವ ಈ ಗುಬ್ಬಚ್ಚಿ ಗಾತ್ರದ ಹಕ್ಕಿಯು ಕಂದು ಬಣ್ಣದಲ್ಲಿದ್ದು, ಸಂತಾನೋತ್ಪತ್ತಿಯ ಸಮಯದಲ್ಲಿ ಗಂಡು ಹಕ್ಕಿಯು ನೇರಳೆ ಕಪ್ಪು ಬಣ್ಣವನ್ನು ಹೊಂದಿರುತ್ತದೆ. ಪರ್ಣಪಾತಿ ಕಾಡು, ಕುರುಚಲು ಕಾಡು ಹಾಗೂ ತೋಟಗಳಲ್ಲಿ ಕಂಡುಬರುವ ಇವುಗಳು ನೆಕ್ಟರಿನಿಡೇ (Nectariniidae) ಕುಟುಂಬಕ್ಕೆ ಸೇರುತ್ತವೆ. ಈ ಹಕ್ಕಿಯನ್ನು ವೈಜ್ಞಾನಿಕವಾಗಿ ಸಿನ್ನಿರಿಸ್ ಏಷ್ಯಾಟಿಕಸ್ (Cinnyris asiaticus) ಎಂದು ಕರೆಯಲಾಗುತ್ತದೆ. ಇದರ ಕೊಕ್ಕು ಬಾಳೆ ಹೂವುಗಳಂತಹ ಉದ್ದ ನಳಿಗೆಯಂತಿದ್ದು, ಹೂವುಗಳ ಮಕರಂದವನ್ನು ಹೀರಲು ಅನುಕೂಲಕರವಾಗಿರುತ್ತದೆ. ಜೇಡರ ಬಲೆ ಮತ್ತು ನಾರುಗಳಿಂದ ನೇಯ್ದ ಜೋಳಿಗೆಯಂಥ ಗೂಡನ್ನು ಕೊಂಬೆಗಳ ತುದಿಯಲ್ಲಿ ಕಟ್ಟುತ್ತದೆ.
ಚಿತ್ರಗಳು : ಕಾಂತರಾಜು ಡಿ.
ಲೇಖನ : ದೀಪ್ತಿ ಎನ್.