ಮಾಸ ವಿಶೇಷ – ಗೋಣಿ ಮರ
© ನಾಗೇಶ್ ಓ. ಎಸ್., ಗೋಣಿ ಮರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
ಸಾಮಾನ್ಯ ಹೆಸರು: Mysore Fig
ವೈಜ್ಞಾನಿಕ ಹೆಸರು : Ficus drupacea
ಗೋಣಿಮರ ಅಥವಾ ಮೈಸೂರು ಫಿಗ್ ಎಂದು ಕರೆಯಲ್ಪಡುವ ಈ ಮರವು ಆಗ್ನೇಯ ಏಷ್ಯಾ ಮತ್ತು ಈಶಾನ್ಯ ಆಸ್ಟ್ರೇಲಿಯಾಕ್ಕೆ ಸ್ಥಳೀಯವಾದ ಉಷ್ಣವಲಯದ ಮರವಾಗಿದೆ. ಈ ಮರದ ವಿಶೇಷತೆಯೇನೆಂದರೆ ಬೆಳೆಯುವ ಹಂತದಲ್ಲಿ ಪರಾವಲಂಬಿಯಾಗಿ ದೊಡ್ಡ ದೊಡ್ಡ ಮರಗಳ ಮೇಲೆ ಬೆಳೆಯಲು ಪ್ರಾರಂಭಿಸಿ ತದನಂತರ ತನ್ನ ಬೇರುಗಳನ್ನು ಭೂಮಿಯತ್ತ ಕಳಿಸಿ, ಭೂಮಿಯೊಂದಿಗೆ ಸಂಪರ್ಕ ಹೊಂದಿದ ಮೇಲೆ ಸ್ವತಂತ್ರ ಮರವಾಗಿ ಬೆಳೆಯುತ್ತದೆ. ಮರದ ತೊಗಟೆಯು ಹಳದಿ ಮಿಶ್ರಿತ ಕಂದು ಬಣ್ಣದಿಂದ ಕೂಡಿದ್ದು, ಸರಳ ಎಲೆ ವಿನ್ಯಾಸ ಹೊಂದಿರುತ್ತದೆ. ಎಲೆಗಳ ಮೇಲೆ ಹಳದಿ ಮಿಶ್ರಿತ ಬೂದು ಬಣ್ಣದ ಕೂದಲುಗಳನ್ನು ಕಾಣಬಹುದು. ಮರದ ಹಣ್ಣುಗಳು ಹಳದಿ ಅಥವಾ ಕೆಂಪು ಬಣ್ಣದಲ್ಲಿರುತ್ತವೆ. ವಿಶೇಷವಾಗಿ ಬಹುತೇಕ ಫಿಗ್ ಪ್ರಭೇದದ ಮರಗಳಲ್ಲಿ ಹೂಗಳು ಹಣ್ಣಿನ ಒಳ ಭಾಗದಲ್ಲಿದ್ದು, ಗಂಡು ಮತ್ತು ಹೆಣ್ಣು ಹೂವುಗಳು ಬೇರೆ ಬೇರೆಯಾಗಿರುತ್ತವೆ. ಫೈಕಾಸ್ ಪ್ರಭೇದದ ಮರಗಳಲ್ಲಿ ಪರಾಗಸ್ಪರ್ಶ ಮತ್ತು ಸಂತಾನೋತ್ಪತ್ತಿಯಲ್ಲಿ ಕಣಜಗಳು ಪ್ರಮುಖ ಪಾತ್ರವಹಿಸುತ್ತವೆ. ಈ ಮರದ ಬೇರನ್ನು ಪುಡಿ ಮಾಡಿ ಗಾಯಗಳಿಗೆ ಹಚ್ಚಲು ಉಪಯೋಗಿಸುತ್ತಾರೆ. ಇದರ ಹಣ್ಣುಗಳನ್ನು ಆಹಾರವಾಗಿ, ಇಂಧನವಾಗಿ ಹಾಗೂ ಮನೆ ನಿರ್ಮಾಣಕ್ಕಾಗಿ ಬಳಸಲಾಗುತ್ತದೆ.