ಅಲೆಮಾರಿಯ ಅನುಭವಗಳು -0೮
© ಧನರಾಜ್ ಎಂ.
ಇರುಳು ಮಗ್ಗಲು ಬದಲಾಯಿಸಿ ಹೊರಳಿದಾಗ ಭರ್ತಿ ನಸುಕು ಮೈ ಮುರಿದುಕೊಂಡು ಆಕಳಿಸುತ್ತಿತ್ತು. ತಣ್ಣೀರಲ್ಲೇ ಜಳಕ ಮುಗಿಸಿ ಸಣ್ಣಗೆ ಜಿನುಗುವ ಮಳೆಯೊಳಗೆ ಒಂದಷ್ಟು ಹೆಜ್ಜೆ ಕಿತ್ತಿಟ್ಟು ಕೊಲ್ಲೂರು ಮೂಕಾಂಬಿಕಾ ದೇವಿ ದರ್ಶನ ಮಾಡುವಷ್ಟರಲ್ಲಿ ಬೆಳಗಿನ ಜಾವ ಐದಾಗಿತ್ತು. ದೊಡ್ಡ ಬ್ಯಾಗೊಂದನ್ನು ಹೆಗಲಿಗೇರಿಸಿಕೊಂಡು, ಕೊಡಚಾದ್ರಿ ಕಡೆಗೆ ಬೈಕ್ ತಿರುಗಿಸಿ ಘಟ್ಟಗಳ ಪಾದ ಹೊಕ್ಕಾಗ ಪೂರಾ ನಿರ್ಜನ ರಸ್ತೆ ಅನಾಥವಾಗಿ ಮಲಗಿತ್ತು.
ಪಶ್ಚಿಮಘಟ್ಟಗಳ ಜಟಿಲ ಕಾನನದ ಕಗ್ಗತ್ತಲನ್ನು ಸೀಳಿಕೊಂಡು ಮಂದ ಬೆಳಕೊಂದು ನಸುಕಿನ ಜಾವದಲ್ಲಿ ಇಣುಕುವಾಗ ಜಿನುಗುವ ಸೋನೆ ಇನ್ನೂ ತೊಟಗುಟ್ಟುತ್ತಲೆ ಇತ್ತು. ಪ್ರತಿ ತಿರುವಿಗೂ ಒಂದು ಹೊಸ ನೀರ ತೊರೆ. ಭರ್ತಿ ಬೆಳಕು ಮೈ ಮೆತ್ತುವಾಗ ಪಾದದಿಂದ ಬೆಟ್ಟದ ನಡು ಬಂದಾಗಿತ್ತು. ಅಲ್ಲಲ್ಲಿ ತಿರುವುಗಳಿಗೆ ಗಾಡಿಯ ಗೇರು ಬದಲಾಯಿಸಿ ಕ್ರಮಿಸುತ್ತಲೆ ಒಮ್ಮೊಮ್ಮೆ ಬೈಕ್ ನಿಲ್ಲಿಸಿ ಇಡೀ ಪಶ್ಚಿಮಘಟ್ಟವನ್ನು ಆಸ್ವಾದಿಸುತ್ತಲೆ ತಿರುವಿನ ಹೊಕ್ಕಳಲ್ಲಿ ಕಾಡ ಬೇರುಗಳ ಇಕ್ಕೆಲಗಳಿಂದ ಹರಿದು ಬರುವ ತೊರೆಗಳ ತೊಟ್ಟಿಗೆ ಬಾಯಿ ಬಿಚ್ಚಿ ನೀರು ಕುಡಿದು ಘಟ್ಟವನ್ನು ಒಂದು ಹಂತವಾಗಿ ಏರಿದಾಗ ಯಾವುದೋ ಹೋಟೆಲ್ ಒಂದರ ಎದುರು ಬೈಕ್ ನಿಲ್ಲಿಸಿ ಟಿಫಿನ್ ಮಾಡಿಕೊಂಡೆವು. ಅಲ್ಲಿಂದ ಸೀದಾ ಕೊಡಚಾದ್ರಿ ಬೆಟ್ಟದ ಬೇಸ್ ನಲ್ಲಿ ಇರುವಂತಹ ಫಾರೆಸ್ಟ್ ಆಫೀಸ್ ಎದುರು ಬೈಕ್ ನಿಲ್ಲಿಸಿದಾಗ ಒಂದಷ್ಟು ರೋಚಕ ಸಂಗತಿಗಳನ್ನು ಅವರು ಹಂಚಿಕೊಂಡರು.
ತುಂಬಾ ಮಳೆಯಾಗುತ್ತಿರುವ ಕಾರಣ, ಬೈಕ್ ಸ್ಕಿಡ್ ಆಗುತ್ತಿವೆ ಹಾಗಾಗಿ ಬೈಕ್ ರೈಡ್ ನಿಷೇಧಿಸಲಾಗಿದೆ, ಮೇಲೆ ತಲುಪಲು ಚಾರಣ ಮಾಡಿಕೊಂಡು ಹೋಗಬಹುದು, ಅಥವಾ ಇಲ್ಲಿಂದಲೆ ನಿಮಗೆ ಖಾಸಗಿ ಜೀಪ್ ವ್ಯವಸ್ಥೆ ಇದೆ, ಬೆಟ್ಟದ ಮೇಲೆ ತಲುಪಿಸಲು ಒಬ್ಬರಿಗೆ 300 ರೂ., ಇಳಿಯಲೂ ಸಹ 300 ರೂ., ಆಯ್ಕೆ ನಿಮ್ಮದು ಅಂತ ನಿಟ್ಟುಸಿರೊಂದನ್ನು ಬಿಟ್ಟರು. ನಮ್ಮ ಎಲ್ಲಾ ಬ್ಯಾಗು, ಬೈಕು, ಟೆಂಟು ಎಲ್ಲವನ್ನೂ ಫಾರೆಸ್ಟ್ ಆಫೀಸಿನಲ್ಲೆ ಇಟ್ಟು ವಾಪಸ್ ಆದ ಮೇಲೆ ಪಡೆಯುತ್ತೇವೆ ಅಂತ ವಿನಂತಿಸಿಕೊಂಡೆವು. ಅವರೂ ಒಪ್ಪಿದರು. ಕ್ಯಾಮೆರಾ ಬ್ಯಾಗ್ ಅನ್ನು ಹೆಗಲಿಗೇರಿಸಿಕೊಂಡು ತಿಂಡಿ ತಿನಿಸುಗಳ ಸಣ್ಣ ಬ್ಯಾಗನ್ನು ಗೆಳೆಯನ ಹೆಗಲಿಗೆ ಕೊಟ್ಟು ಜೀಪೇರಿದೆವು.
ಕಲ್ಲು ಇಕ್ಕೆಲಗಳ ರಸ್ತೆ. ಜೀಪು ಒಂದು ಕಡೆ ವಾಲಿದರೆ ಬಿದ್ದೆಬಿಡುತ್ತೆ ಎನ್ನುವಷ್ಟು ಕತ್ತಿ ಅಂಚಿನ ಪಯಣ. ಗಾಡಿಯ ಎದೆಯಲ್ಲಿ ಅದೆಷ್ಟು ಉಸಿರಿನ ಬಿಗಿತವೊ ಬಲ್ಲವನೆ ಬಲ್ಲ. ಒಂದೊಂದು ಕಲ್ಲಿಗೂ ಎಡವಿ ಆ ಕಲ್ಲುಗಳ ಮೈ ತಿಕ್ಕಿ ಕೆಸರಲ್ಲಿ ಸಿಕ್ಕು ಮತ್ತೆ ಮೇಲೇಳುತ ಹರಸಾಹಸದ ಎಲ್ಲಾ ಮಜಲುಗಳನ್ನು ಪರಿಚಯಿಸುತ್ತಾ ಒಳಗೆ ಕೂತವರ ಮೈ ಪೂರಾ ನುಜ್ಜು ಮಾಡುತ್ತಲೇ ಇಡೀ ಬೆಟ್ಟದ ಅಷ್ಟೂ ಸಂಕಟವನ್ನು ತಂದು ಒಟ್ಟಿಗೆ ಸುರಿಸಿದರು. ನಮ್ಮನ್ನು ಅಷ್ಟೆ ಜೀವಂತವಾಗಿಯೇ ತನ್ನ ಪರಮಾವಧಿಯ ಎಲ್ಲೆಯನ್ನು ತಲುಪಿಸಿದಾಗ ಮೂಲ ಮೂಕಾಂಬಿಕಾ ದೇವಾಲಯದ ಎದುರಿಗೆ ಈ ಸಡಿಲಗೊಂಡ ಮೈ ಜೀಪಿನಿಂದ ಇಳಿದಿತ್ತು!
ಆ ಇಡೀ ಪಯಣದಲ್ಲಿ ಜೊತೆಯಾಗಿದ್ದವರು ಅದೇ ದೇವಾಲಯದ ಮೂಲ ಅರ್ಚಕರು. ಜೀಪಿಳಿದ ತಕ್ಷಣ ಅವರೇ ಅಲ್ಲಿಗೆ ಒಳಪಟ್ಟ ಕಾಡಲ್ಲಿ ಕಾಪಿಟ್ಟುಕೊಂಡು ಅಡಕವಾಗಿರುವ ವಿಶೇಷ ಅವಶೇಷಗಳ ಕುರಿತು ಮಾಹಿತಿ ಬಿಚ್ಚಿಟ್ಟರು.
ಇಡೀ ಕೊಡಚಾದ್ರಿ ಬೆಟ್ಟ ಒಂದು ಧಾರ್ಮಿಕ ಹಿನ್ನೆಲೆಯ ಇತಿಹಾಸವನ್ನು ಕೆಣಕಿ ನೋಡುವುದಾದರೆ ತುಂಬಾ ರೋಚಕ ಅನ್ನಿಸುತ್ತದೆ. ಇದು ಧಾರ್ಮಿಕ ಹಿನ್ನೆಲೆಯ ಒಂದು ಮಜಲು. ತ್ರೇತಾಯುಗದಲ್ಲಿ ಹನುಮಾನ್ ಸಂಜೀವಿನಿ ತರಲು ಇಡೀ ಬೆಟ್ಟವನ್ನೆ ಹೊತ್ತು ತರುವಾಗ ಕಳಚಿಬಿದ್ದ ಅದರ ಒಂದು ಭಾಗ ಈ ಕೊಡಚಾದ್ರಿ. ಇನ್ನು ಹಿಂದೆ ಏಳನೆ ಶತಮಾನದ ಕಾಲದಲ್ಲಿ ಈ ಬೆಟ್ಟದ ತುತ್ತ ತುದಿಯಲ್ಲಿ ಕುಳಿತು ಶಂಕರಾಚಾರ್ಯರು ದೇವಿಯ ತಪಸ್ಸು ಮಾಡಿ ಒಲಿಸಿಕೊಂಡರಂತೆ. ವರವಾಗಿ ಅವರು ದೇವಿಯನ್ನು ಕೇರಳಕ್ಕೆ ತಮ್ಮ ಜೊತೆ ಬರಬೇಕು ಎಂದು ಕೇಳಿಕೊಂಡರಂತೆ. ದೇವಿಯೂ ಒಪ್ಪಿ ಒಂದು ಷರತ್ತು ಹಾಕಿದಳಂತೆ. ನಾನು ನಿನ್ನನ್ನು ಹಿಂಬಾಲಿಸುತ್ತೇನೆ. ನೀನು ತಿರುಗಿ ನೋಡಬಾರದು. ನೀ ತಿರುಗಿ ಎಲ್ಲಿ ನೋಡುವೆಯೊ ಅಲ್ಲಿಯೆ ನಾನು ನಿಂತುಬಿಡುತ್ತೇನೆ ಎಂದಳಂತೆ. ಶಂಕರರು ಒಪ್ಪಿ ಕರೆದುಕೊಂಡು ಹೋಗುವಾಗ ಗೆಜ್ಜೆ ಸಪ್ಪಳ ಬಾರದೆ ಇದ್ದಾಗ ಹಿಂದೆ ತಿರುಗಿ ನೋಡಿದರಂತೆ. ಷರತ್ತಿನಂತೆ ದೇವಿಯೂ ಕೊಲ್ಲೂರಿನಲ್ಲಿ ನೆಲೆಯೂರಿದಳಂತೆ. ಇನ್ನು ಒಂದು ಕತೆ ಈ ಘಟ್ಟದಲ್ಲಿ ಅಡಕವಾಗಿದ್ದೇನೆಂದರೆ, ಮೂಕಾಸುರ ಎಂಬ ರಕ್ಕಸನು ಬ್ರಹ್ಮ ತಪಸ್ಸು ಮಾಡಿ ಬ್ರಹ್ಮನನ್ನು ಒಲಿಸಿಕೊಂಡಿದ್ದಲ್ಲದೆ ಬ್ರಹ್ಮ ಕಮಂಡಲದಿಂದ ನೀರನ್ನು ಕುಡಿದನಂತೆ. ಹೆಚ್ಚಾದ ನೀರು ಸೌಪರ್ಣಿಕಾ ನದಿಯಾಗಿ ಹರಿಯುತ್ತದೆ. ಮುಂದೊಂದು ದಿನ ಈ ಮೂಕಾಸುರನನ್ನು ವಧಿಸಲು ದೇವಿ ಉಗ್ರ ರೂಪ ತಾಳಿ ಮೂಕಾಸುರನನ್ನು ಕೊಂದು ಮೂಕಾಂಬಿಕೆಯಾಗುತ್ತಾಳೆ. ದೇವಿ ಈ ಅಸುರನನ್ನು ಕೊಲ್ಲಲು ಬಳಸಿದ ಒಂದು ಆಯುಧವು ಸರಿ ಸುಮಾರು 40 ಅಡಿ ಉದ್ದವಿದ್ದು. ಕಬ್ಬಿಣದಿಂದ ಆವೃತಗೊಂಡಿದ್ದು, ಈಗಲೂ ಯಾವುದೇ ರೀತಿಯ ಪಳೆಯುಳಿಕೆ ಅನ್ನಿಸದೆ ಮಳೆಗೂ ಜಂಗು ಹಿಡಿಯದೆ ಸುಸಜ್ಜಿತವಾಗಿರುವುದು ವಿಜ್ಞಾನಕ್ಕೂ ವಿಸ್ಮಯ.
ಈ ಎಲ್ಲಾ ಧಾರ್ಮಿಕ ಆಯಾಮಗಳ ರೋಚಕತೆಯನ್ನು ಮೆಲುಕು ಹಾಕುತ್ತಲೆ ನಾವು, ಶಂಕರಾಚಾರ್ಯರು ತಪಸ್ಸು ಮಾಡಿದ ಜಾಗದ ಕಡೆಗೆ ಹೆಜ್ಜೆ ಹಾಕಿದೆವು. ಕತ್ತಿಯಂಚಿನ ನಡಿಗೆಯೆ ಹೌದು! ಏಕಪಥ ಕಾಲುದಾರಿ. ಎಡಕ್ಕೆ ವಾಲಿದರೆ ಪ್ರಪಾತ, ಬಲಕ್ಕೆ ವಾಲಿದರೆ ಬೆಟ್ಟದ ಹಸಿ ಮೈ. ಪ್ರತಿ ಹೆಜ್ಜೆಯೂ ನಾಜೂಕಾಗಿ ಇಡಬೇಕು. ಆಯ ತಪ್ಪಿದರೆ ಜವರಾಯನ ಕೈಗೆ ಈ ಜೀವ. ಒಂದಷ್ಟು ಹೆಜ್ಜೆ ದಾಟಿದ ನಂತರ ಏರುವ ಬೆಟ್ಟ ಬಟಾಬಯಲಿನ ಎತ್ತರವನ್ನು ಹಾಸಿತು. ಕಣ್ಣು ಹಾಯಿಸಿದಷ್ಟೂ ಬಯಲು ಮಂಜಿನ ಮುಸುಕು. ಅಲ್ಲಲ್ಲಿ ಹಸಿರು ಹಾವುಗಳು. ಒಂದರ ಮೇಲೊಂದು ಪೇರಿಸಿಟ್ಟ ಕಲ್ಲಿನ ಗುಂಪುಗಳು. ವಿಧ ವಿಧವಾದ ಹೂವಿನ ಸಸಿಗಳು. ಕಾಂಡದ ಮೇಲೆ ಬೆಳೆದ ಅವಲಂಬಿತ ಸಸ್ಯ ಸಂಪತ್ತು. ಇವೆಲ್ಲವುಗಳ ಜೊತೆ ಜೊತೆಗೆ ಸಾಕೆನಿಸುವಷ್ಟು ಜಿಗಣೆಗಳ ಕಾಟ. ಒಂದಷ್ಟು ಬೆಟ್ಟದ ಅಂಚು, ಒಂದಷ್ಟು ಬಯಲು, ತಗ್ಗು ಏರಿಳಿತ ಎಲ್ಲವನ್ನು ದಾಟುತ್ತ ಕೊನೆಗೆ ಶಂಕರಾಚಾರ್ಯರು ಸ್ಥಾಪಿಸಿದ ಸರ್ವಜ್ಞ ಪೀಠ ತಲುಪಿದೆವು. ಇಲ್ಲಿಂದ ಕೆಳಗಿಳಿದು ಮುಂದೆ ಹೋದರೆ ಒಂದಷ್ಟು ಗುಹೆಗಳಿವೆ ಅವುಗಳಲ್ಲೊಂದು ಚಿತ್ರಮೂಲ. ಇದು ಸೌಪರ್ಣಿಕ ನದಿಯ ಉಗಮ ಸ್ಥಾನ.
ಎಷ್ಟೊಂದು ಚೆಂದದ ಬೆಳಗಿದು. ಬೆಳಗಿನ ಒಂಬತ್ತಾದರೂ ಸಹ ನಸುಕಿನ ಐದರ ಅಮಲು ಸುತ್ತೆಲ್ಲ. ಬೆಟ್ಟಗಳ ಮೇಲೊಂದು ಬೆಟ್ಟಗಳು ಪೇರಿಸಿಟ್ಟು ಚೆಂದದ ಚಿತ್ರ ಬರೆದಂತಹ ಅದ್ಭುತ ಪ್ರಕೃತಿ ಸೌಂದರ್ಯ ಒಂದು, ಇಡೀ ಕಂಗಳ ಕೌತುಕಕ್ಕೆ ಕಾರಣವಾಯಿತು. ಒಂದರ್ಧ ತಾಸು ಸುಖಾಸುಮ್ಮನೆ ಕಣ್ಮುಚ್ಚಿ ಸರ್ವಜ್ಞ ಪೀಠದ ಪ್ರಾಂಗಣದಲ್ಲಿ ಹಾಸಿದ ತಣ್ಣನೆಯ ಕರಿ ಕಲ್ಲಿನ ಮೇಲೆ ಧ್ಯಾನಸ್ಥ ಸ್ಥಿತಿಯಲ್ಲಿ ಕೂತರೆ, ಆಹಾ! ಇಡೀ ಪ್ರಪಂಚದ ಎಲ್ಲಾ ಗೊಂದಲಗಳಾಚೆ ಒಂದು ಸಮಾಧಾನದ ಸೆಲೆ ಇದ್ದೆ ಇದೆ ಎನ್ನುವಂತಹ ವಿಸ್ಮಯ ಭಾವವೊಂದು ಏಕತಾನತೆಯಲ್ಲಿ ಆವರಿಸಿಬಿಟ್ಟಿತು. ಸ್ವಲ್ಪ ಹೊತ್ತು ಅಲ್ಲಿಯೆ ಕಳೆದು ಅಲ್ಲಿಂದ ಮತ್ತೆ ಇಳಿದು ಸೌಪರ್ಣಿಕಾ ನದಿಯ ನೀರು ಸಂಗ್ರಹವಾಗುವ ಮೂಲ ಮೂಕಾಂಬಿಕಾ ದೇವಸ್ಥಾನದ ಸಮೀಪ ಬಂದೆವು. ನೂರಾರು ತರಹದ ಹೂವಿನ ಸಸಿಗಳು ಮನಸ್ಸಿಗೆ ತುಂಬಾ ಮುದ ನೀಡಿದವು. ನಾವು ಇಲ್ಲಿಂದ ವಾಪಸ್ಸಾಗಲು ಚಾರಣವನ್ನು ಆಯ್ಕೆ ಮಾಡಿಕೊಂಡೆವು.
ಸ್ವಲ್ಪ ತಿಂಡಿ ತಿನಿಸು ತಿಂದು, ಚಳಿಯಲ್ಲಿಯೂ ಬೆವೆತ ಬೆವರನ್ನೊಮ್ಮೆ ಒರೆಸಿಕೊಂಡು ಚಾರಣದ ಹೆಜ್ಜೆಗಳನ್ನು ಕಿತ್ತಿಟ್ಟೆವು. ಈಗ ವಾಪಸ್ಸಾಗಲು ಬಳಸುವ ಮಾರ್ಗ ಬೇರೆಯಾಗಿತ್ತು. ಬೆಟ್ಟದ ತಲೆಯಲ್ಲಿ ಕಾಲಿಟ್ಟು ಬಾಚಿದ ಬೈತಲೆ ದಾರಿಯ ಬೆನ್ನು ತುಳಿದು ಹೊರಟೆವು. ಸಮುದ್ರ ಮಟ್ಟದಿಂದ 1343 ಮೀಟರ್ ಎತ್ತರದಲ್ಲಿ ನಿಂತ ನಮಗೆ ಇಡೀ ಹಸಿರು, ದೂರದ ನದಿ ಕಾಣದ ಊರು ಎಲ್ಲವೂ ರೋಮಾಂಚನ ಅನ್ನಿಸುತ್ತಿತ್ತು. ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಒಳಗಿಳಿವ ಕೌತುಕ ಹೆಚ್ಚಾದಂತೆ ದಣಿವು ಇಂಗತೊಡಗಿತು. ಬಿಸಿಲು ತಣ್ಣಗಾಯಿತು. ಬಯಲು ದಾಟಿ ಬೆಟ್ಟದ ಒಳಗೆ ಇಳಿಯುವಾಗ ಜಟಿಲವಾದ ಕಾನನ ಮೈ ಹಾಸಿತು. ಕಲ್ಲು ಇಕ್ಕೆಲಗಳಲ್ಲಿ ಇಳಿಯುತ್ತ ಯಾರೊ ತುಳಿದ ಹೆಜ್ಜೆಯೂ ಕಾಣದೆ ಇರುವಾಗ ಜಲಪಾತದ ಸದ್ದನ್ನೆ ಅನುಸರಿಸಿಕೊಂಡು ಸಾಗುತ್ತ ದಾರಿ ತಪ್ಪುತ್ತಲೆ ಮತ್ತಿನ್ಯಾವುದೊ ಕಡೆ ಪಾದದ ತಿರುವು ಬದಲಾಯಿಸಿ ಪಶ್ಚಿಮ ಘಟ್ಟದ ಕೆಚ್ಚಲಿನಿಂದ ಬರುವ ನೀರನ್ನೆ ಕುಡಿಯುತ್ತ ದಣಿವೆಲ್ಲವನ್ನು ಘಟ್ಟದ ಮಡಿಲಲಿ ಹಾಕುತ್ತಲೆ ಬಿದ್ದ ಮರದ ಆಸರೆಯಿಂದ ಸಣ್ಣ ಸಣ್ಣ ತಗ್ಗುಗಳನು ದಾಟುತ್ತ ಹಸಿರು ತಪ್ಪಲುಗಳ ದಟ್ಟ ವಾಸನೆಯಲ್ಲಿ ಜಲಪಾತವನ್ನು ಹುಡುಕುತ್ತ ಸಾಗಿದೆವು. ಪಕ್ಷಿಗಳ ಸದ್ದು, ಓಡಾಟ ಹೆಚ್ಚಾದಂತೆ ನನ್ನ ಅಂದಾಜಿನ ಮೇಲೆ ಜಲಪಾತಕ್ಕೆ ಹತ್ತಿರ ಇದ್ದೇವೆ ಎನ್ನುವ ಸಣ್ಣ ಸುಳಿವು ಒಳಗೆ ಸುಳಿದಾಡಿತು. ಅನತಿ ದೂರದಲ್ಲಿ ಜಲಪಾತವಿದೆ ಇಳಿಯಬೇಕೆಂದರೆ ಒಂಟಿಕಾಲಿನ ಪಾದವಿಡುವಷ್ಟೆ ಇಕ್ಕಟ್ಟಾದ ಪಾಚಿಗಟ್ಟಿದ ಕಲ್ಲು ಬೆನ್ನಿನ ದಾರಿ. ಹತ್ತಾರು ಅಡಿ ಆಳದ ಕಂದರ ಬಿದ್ದರೆ ಕೈಕಾಲು ಕ್ಯಾಮೆರಾ ಎಲ್ಲವಕ್ಕೂ ಸಂಕಟ. ತುಂಬಾ ನಾಜೂಕಿನ ಸಮಾಧಾನದ ಹೆಜ್ಜೆಗಳನ್ನು ಇಡುತ್ತಲೆ ಇಳಿದು ಒಂದು ತಿರುವು ಹೊರಳಿದ್ದೆ ಸಾಕು. ಹಿಡ್ಲುಮನೆ ಜಲಪಾತ.!
ಜಲಪಾತದ ಬುಡದಲ್ಲಿ ಬೆವರು ತೊಳೆದು ಹೋಗುವಷ್ಟು ಮಿಂದು. ಇಡೀ ಮೈ ಹಗುರಾಗಿಸಿಕೊಂಡು ಗಡತ್ತಾದ ಮಜ್ಜನ ಮುಗಿಸಿ ಹಸಿ ಬಟ್ಟೆಯಲ್ಲಿಯೆ ಜಲಪಾತ ಹರಿಬಿಟ್ಟ ನೀರನ್ನೆ ಹಿಂಬಾಲಿಸಿ ಇಳಿಯತೊಡಗಿದೆವು. ಆಹಾ! ಎಷ್ಟೊಂದು ನುಣುಪಾದ ಕಲ್ಲುಗಳು. ಜಾರಿ ಬಿದ್ದರೆ ಮೈ ನೆಲಬಿಟ್ಟೇಳುವುದಿಲ್ಲ! ನೀರು ಸ್ವಲ್ಪ ದೂರ ಸಾಗುತ್ತಲೆ ದಟ್ಟ ಕಾನನದ ಪ್ರಪಾತ ಕಂದರ ಒಳಹೊಕ್ಕು ಮುನ್ನುಗ್ಗಿ ಮುಂದೆ ಇಳಿಯುತ್ತಾ ಸಾಗುತ್ತದೆ. ಇಲ್ಲಿ ನೀರಿನೊಟ್ಟಿಗೆ ಸಾಗುವುದು ಆಗುವುದೇ ಇಲ್ಲ ಅಂತ ಗೊತ್ತಾಗಿ ಮತ್ತದೆ ಶೋಲ ಕಾಡುಗಳ ತಪ್ಪಲಿನ ಒಳಹೊಕ್ಕು ಹೊಸಹೊಸ ದಾರಿ ಹುಡುಕಿಕೊಂಡು ಜಲಪಾತದ ನೀರಿನ ಶಬ್ಧವನ್ನೆ ಆಲಿಸುತ್ತಾ ಒಮ್ಮೊಮ್ಮೆ ಇಣುಕುತ್ತ ಹಸಿ ಹಸಿ ಹೆಜ್ಜೆಗಳನು ಕಿತ್ತಿಡುತ್ತಾ ಕೊನೆಗೆ ಮತ್ತದೆ ನೀರಿನ ತೊರೆಯ ಅಂಚಿಗೆ ತಲುಪಿದೆವು.
ಇಡೀ ನೀರು ಮೈ ಸಡಲಿಸಿಕೊಂಡು ಬಯಲು ಕಲ್ಲಿನ ತಲೆಯ ಮೇಲೆ ಜಾರಿಕೊಂಡು ಸರ್ರನೆ ಜಾರಿ ಕೊನೆಯಲ್ಲಿ ದುಬುದುಬು ಅಂತ ಬಿದ್ದು, ಮತ್ತೆ ಅಲ್ಲಿಂದ ಸರಿಸೃಪದಂತೆ ಮೈ ತೆವಳಿಕೊಂಡು ಸಾಗುತ್ತದೆ. ಇಲ್ಲಿಯ ಕಲ್ಲು ತುಂಬಾ ನುಣುಪು. ಸೂಕ್ಷ್ಮ ಜಾಗ್ರತೆಯ ಹೆಜ್ಜೆ ಇಟ್ಟು ಒಂದು ಕಡೆಯಿಂದ ಇನ್ನೊಂದು ಅಂಚಿಗೆ ಸಾಗಿ ಜಲಪಾತದ ನೀರು ದಾಟಬೇಕು. ಅಲ್ಲಿಂದ ಅನತಿ ದೂರದಲ್ಲಿ ದೊಡ್ಡ ಗದ್ದೆಯ ಮಟ್ಟಸ ಭೂಮಿ. ಅಲ್ಲೊಂದು ಮನೆ. ಅದು ಹಿತ್ಲುಮನೆ! ಅದರಿಂದಾಗಿಯೆ ಮೇಲಿಳಿದು ಬರುವ ಜಲಪಾತಕ್ಕೆ ಹಿತ್ಲುಮನೆ ಜಲಪಾತ ಅಥವಾ ಹಿಡ್ಲುಮನೆ ಜಲಪಾತ ಅಂತ ಹೆಸರು! ಇಲ್ಲಿ ಒಂದಷ್ಟು ತಿಂಡಿ ತಿನಿಸುಗಳು ಸಿಗುತ್ತವೆ. ಗೂಡಂಗಡಿಯೊಂದು ಕಾಡು ಮಧ್ಯೆ ಸಿಕ್ಕಾಗ ದಣಿವಾರಿಸಿಕೊಳ್ಳಲು ಒಂದು ಸಣ್ಣ ನೆಪ!.
ಅವರಲ್ಲಿಯೆ ಕೆಳಗಿಳಿಯಲು ದಾರಿ ಕೇಳಿ, ಅಲ್ಲಿಂದ ಹೊರಟೆವು.
ನಿತ್ಯ ಹರಿದ್ವರ್ಣದ ಕಾಡು ಸೂಸುವ ತಣ್ಣನೆ ಗಾಳಿ ಹಿತವಾದ ನಡಿಗೆಗೆ ಜೊತೆಯಾಯಿತು. ಈಗ ಸಣ್ಣ ಸಣ್ಣ ತೊರೆಗಳು ಎದುರಾದವು. ಹಾದಿ ತಪ್ಪುವಂತಹ ನಾಲ್ಕಾರು ದಾರಿಗಳು ಒಟ್ಟಿಗೆ ಸಿಕ್ಕವು. ಮತ್ತೆ ಮಳೆ ಶುರುವಾಯಿತು. ಕೈಯಲ್ಲಿ ಒಂದು ಕೋಲು ಹಿಡಿದು ಏರಿಳಿತದ ಚಾರಣವನ್ನು ಸಾಗುಹಾಕಿದೆವು. ಈಗ ಯಾವ ಕಡೆಗೆ ನೋಡಿದರೂ ಭಯಂಕರ ನಿರ್ಜನ ಕಾಡು. ಎಲೆಗೆಲೆ ತಾಕಿ ಹೊರಟ ಸದ್ದು ಎದೆಯಲ್ಲೊಂದು ಸಣ್ಣ ಭಯ ಹುಟ್ಟಿಸುವಂತಹ ಕಾಡು ನಮ್ಮ ಧೈರ್ಯವನ್ನು ಸೋಲಿಸುತ್ತಿತ್ತು. ತಲೆ ಎತ್ತಿದರೆ ಆಕಾಶ ಕಾಣದಷ್ಟು ಮರಗಳ ಮೇಲಾವರಣ. ಎಲೆಗಳೆದೆಗೆ ತಾಕಿ ಬೀಳುವ ಮಳೆಯ ಹುಚ್ಚಾಟ. ಏನೋ ಒಂದು ಸಣ್ಣ ಸಮಾಧಾನ ನಮ್ಮನ್ನು ನಾವು ಪ್ರಕೃತಿಗೆ ಒಪ್ಪಿಸಿ ಕಳೆದು ಹೋಗುವ ಉಮೇದಿನಲ್ಲಿ ತಲ್ಲೀನತೆಯನ್ನು ಅನುಭವಿಸುವ ಸುಂದರ ಸುಖದ ಸೌಮ್ಯ ಘಳಿಗೆ!
ಇಡೀ ಕಾಡುಂಡ ಹಸಿ ಮೈ ಕಾಡಂಚಿನ ತುದಿಗೆ ಬಂದಾಗ ಒಂದು ಮನೆ ಎದುರಾಯಿತು. ಅಲ್ಲಿದ್ದ ವಾಸಿಗರನ್ನು ಈ ಅಲೆಮಾರಿ ಹೃದಯ ಹಾದಿ ಕೇಳಿ ಫಾರೆಸ್ಟ್ ಆಫೀಸ್ ನ ಕಡೆ ಹೆಜ್ಜೆ ಹಾಕಿತು. ಪೂರಾ ಕಾಡು ದಾಟಿ ಹೊರ ಬಂದಾಗ ಸಣ್ಣ ತೊರೆಯ ಸೇತುವೆ ಕೆಳಗೆ ಇಳಿದೆವು. ನೀರು ಕುಡಿದು, ಕಾಲಿನ ಶೂ ಬಿಚ್ಚಿದಾಗ ಬಿಳಿಕಾಲು ಕೆನ್ನೀರು ತುಂಬಿಕೊಂಡ ಬೂಟಿನಿಂದ ಹೊರಬಂತು. ಸುಮಾರು ಮೂವತ್ತಕ್ಕೂ ಹೆಚ್ಚು ಜಿಗಣೆಗಳು ಪಾದದ ರಕ್ತವನ್ನು ಬಸಿದು ಕುಡಿದು ಪಾದದ ತುಳಿತಕ್ಕೆ ಬೂಟಿನೊಳಗೆ ಜೀವಬಿಟ್ಟು ರಕ್ತಸಿಕ್ತವನ್ನಾಗಿ ಮಾಡಿ ಸಣ್ಣ ಕ್ರೌರ್ಯಕ್ಕೆ ಕಾರಣವಾಗಿದ್ದವು. ಶೂ ವಾಪಸ್ಸು ಹಾಕುವ ಮನಸ್ಸೆ ಆಗಲಿಲ್ಲ. ಎಷ್ಟೊಂದು ಜೀವ ಕೊಂದುಬಿಟ್ಟ ಗಿಲ್ಟು ಆವರಿಸಿಟ್ಟಿತು. ರಕ್ತಸಿಕ್ತ ಕಾಲು ತೊಳೆದು ಬರಿಗಾಲಿನಿಂದ ಫಾರೆಸ್ಟ್ ಆಫೀಸಿನ ಹತ್ತಿರಕ್ಕೆ ಬಂದು ನಮ್ಮ ಟೆಂಟು ಬ್ಯಾಗು ಹೆಗಲಿಗೇರಿಸಿಕೊಂಡು ಬೈಕ್ ತಿರುವಿಸಿಕೊಂಡು ಇಳಿ ಸಂಜೆಗೆ ನಮ್ಮ ಮುಂದಿನ ಗುರಿ ಕಡೆಗೆ ಗಾಡಿಯ ಗಾಲಿ ತಿರುಗಿಸಿದೆವು!
ಲೇಖನ: ಮೌನೇಶ ಕನಸುಗಾರ
ಕಲ್ಬುರ್ಗಿ ಜಿಲ್ಲೆ.